ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಸಿದ್ಧತೆ ಕುರಿತಂತೆ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಬುಧವಾರದಂದು ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಈ ಬಾರಿ ಒಟ್ಟು ೯೭೩೫ ವಿದ್ಯಾರ್ಥಿಗಳು ಪಿಯುಸಿ ಪರೀಕ್ಷೆಗೆ ಹಾಜರಾಗಲಿದ್ದು, ಇದಕ್ಕಾಗಿ ಒಟ್ಟು ೧೪ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಪರೀಕ್ಷೆಯು ಸಮರ್ಪಕವಾಗಿ ನಡೆಸಲು ಈಗಿನಿಂದಲೇ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಬೇಕು. ರಾಜ್ಯದ ವಿವಿಧೆಡೆ ಪ್ರಶ್ನೆಪತ್ರಿಕೆಗಳ ಬಹಿರಂಗದ ಬಗ್ಗೆ ಇತ್ತೀಚೆಗೆ ಹಲವಾರು ಅಕ್ರಮಗಳು ನಡೆಯುತ್ತಿರುವ ಬಗ್ಗೆ ವರದಿಗಳು ಕೇಳಿಬರುತ್ತಿದ್ದು, ಪ್ರಶ್ನೆಪತ್ರಿಕೆಗಳ ಸುರಕ್ಷತೆ ಬಗ್ಗೆ ಅಧಿಕಾರಿಗಳು ಇಲಾಖೆಯ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಸೂಕ್ತ ಆಸನ, ಗಾಳಿ, ಬೆಳಕು ಹಾಗೂ ಕುಡಿಯುವ ನೀರಿನ ಸಮರ್ಪಕ ವ್ಯವಸ್ಥೆ ಇರಬೇಕು ಅಲ್ಲದೆ ಆಸನ ವ್ಯವಸ್ಥೆಯಲ್ಲಿ ನಿಯಮದಂತೆ ಸಮರ್ಪಕ ಅಂತರ ಕಾಯ್ದುಕೊಳ್ಳಬೇಕು. ಪರೀಕ್ಷಾ ಕೊಠಡಿಯಲ್ಲಿ ಮೇಲ್ವಿಚಾರಕರು, ಪರೀಕ್ಷೆ ಕುರಿತಂತೆ ವಿದ್ಯಾರ್ಥಿಗಳಿಗೆ ಸೂಕ್ತ ತಿಳುವಳಿಕೆ ಹಾಗೂ ಜಾಗೃತಿ ಮೂಡಿಸುವ ಮೂಲಕ ಪರೀಕ್ಷಾಭಯ ಹೋಗಲಾಡಿಸಬೇಕು. ಪರೀಕ್ಷೆ ಸಂದರ್ಭದಲ್ಲಿ ಆಯಾ ವಿಷಯದ ಉಪನ್ಯಾಸಕರನ್ನು ಅಥವಾ ಶಿಕ್ಷಕರನ್ನು ಮೇಲ್ವಿಚಾರಕರನ್ನಾಗಿ ನೇಮಿಸಬಾರದು. ಪರೀಕ್ಷೆ ಸಂದರ್ಭದಲ್ಲಿ ಮಾಧ್ಯಮದವರು ಚಿತ್ರೀಕರಣ ಅಥವಾ ಫೋಟೋ ಪಡಯಲು ಅವಕಾಶ ನೀಡಿದಲ್ಲಿ, ವಿದ್ಯಾರ್ಥಿಗಳ ಏಕಾಗ್ರತೆಗೆ ಭಂಗ ಉಂಟಾಗುವ ಸಾಧ್ಯತೆ ಇರುವುದರಿಂದ, ಮಾಧ್ಯಮದವರು ಪರೀಕ್ಷೆ ಪ್ರಾರಂಭಕ್ಕೂ ಮೊದಲು ಅಲ್ಲಿನ ವ್ಯವಸ್ಥೆಯ ಬಗ್ಗೆ ವಿಡಿಯೋ ಅಥವಾ ಫೋಟೋ ಪಡೆಯಲು ಮಾತ್ರ ಅವಕಾಶ ನೀಡಬಹುದು. ಪರೀಕ್ಷೆ ಪ್ರಾರಂಭದ ನಂತರ ಮಾಧ್ಯಮದವರ ಪ್ರವೇಶಕ್ಕೆ ಅವಕಾಶವಿಲ್ಲ. ಪರೀಕ್ಷೆಯನ್ನು ಸುಗಮವಾಗಿ ನಡೆಸಲು, ಪರೀಕ್ಷಾ ಕೇಂದ್ರದ ಸುತ್ತ ೨೦೦ ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳ್ಳಲಿದೆ. ಅಲ್ಲದೆ ಸೂಕ್ತ ಪೊಲೀಸ್ ಬಂದೋಬಸ್ತ್‌ಗೆ ಕ್ರಮ ಕೈಗೊಳ್ಳಲಾಗುವುದು. ಪರೀಕ್ಷೆಯಲ್ಲಿ ಯಾವುದೇ ಅಕ್ರಮ ಅಥವಾ ನಕಲಿಗೆ ಅವಕಾಶ ನೀಡದಂತೆ ಮುಕ್ತ ಹಾಗೂ ನ್ಯಾಯಸಮ್ಮತವಾಗಿ ಪರೀಕ್ಷೆ ನಡೆಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಎಸ್. ಶಿಂಧಾ ಅವರು ಪರೀಕ್ಷೆಯ ಕುರಿತು ಸಭೆಗೆ ವಿವರಣೆ ನೀಡಿ, ಈ ವರ್ಷ ಒಟ್ಟು ೬೬೬೯ ರೆಗ್ಯುಲರ್ ವಿದ್ಯಾರ್ಥಿಗಳು, ೧೯೫೧ ಪುನರಾವರ್ತಿತ ವಿದ್ಯಾರ್ಥಿಗಳು ಹಾಗೂ ೧೧೧೫ ಖಾಸಗಿ ಅಭ್ಯರ್ಥಿಗಳು ಹೀಗೆ ಒಟ್ಟಾರೆ ೯೭೩೫ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆಗೆ ಹಾಜರಾಗಲಿದ್ದಾರೆ. ಕೊಪ್ಪಳದ ಗವಿಸಿದ್ದೇಶ್ವರ ಪ.ಪೂ. ಕಾಲೇಜು, ಬಾಲಕರ ಸ.ಪ.ಪೂ. ಕಾಲೇಜು, ಬಾಲಕಿಯರ ಸ.ಪ.ಪೂ. ಕಾಲೇಜು, ಬಿ.ಎನ್.ಆರ್.ಕೆ. ಪ.ಪೂ. ಕಾಲೇಜು. ಯಲಬುರ್ಗಾದ ಸರ್ಕಾರಿ ಪ.ಪೂ. ಕಾಲೇಜು, ಕುಕನೂರಿನ ವಿದ್ಯಾನಂದ ಗುರುಕುಲ ಪ.ಪೂ. ಕಾಲೇಜು, ಕುಷ್ಟಗಿಯ ಬಾಲಕರ ಹಾಗೂ ಬಾಲಕಿಯರ ಸ.ಪ.ಪೂ.ಕಾಲೇಜು, ತಾವರಗೇರಾದ ಬಾಲಕಿಯರ ಸ.ಪ.ಪೂ. ಕಾಲೇಜು. ಗಂಗಾವತಿಯ ಬಾಲಕರ ಸ.ಪ.ಪೂ. ಕಾಲೇಜು. ಹೆಚ್.ಆರ್.ಸರೋಜಮ್ಮ ಪ.ಪೂ.ಕಾಲೇಜು, ಎಸ್‌ಎಂಎನ್‌ಎಮ್ ಬಾಲಕಿಯರ ಸ.ಪ.ಪೂ. ಕಾಲೇಜು. ಕಾರಟಗಿಯ ಸರ್ಕಾರಿ ಪ.ಪೂ. ಕಾಲೇಜು ಮತ್ತು ಶ್ರೀರಾಮನಗರದ ಎ.ಕೆ.ಆರ್.ಡಿ ಪ.ಪೂ. ಕಾಲೇಜು ಸೇರಿ ಒಟ್ಟು ೧೪ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಪರೀಕ್ಷಾ ನಕಲು ತಡೆಗೆ ರಾಜ್ಯ ಮಟ್ಟದಿಂದ ಜಾಗೃತ ದಳ ಆಗಮಿಸಲಿವೆ ಎಂದರು.
ಸಭೆಯಲ್ಲಿ ಡಿಡಿಪಿಐ ಎ. ಶ್ಯಾಮಸುಂದರ್, ಖಜಾನಾಧಿಕಾರಿ ಕಳ್ಳೇರ್, ಸೇರಿದಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕಾಲೇಜುಗಳ ಪ್ರಾಚಾರ್ಯರು ಭಾಗವಹಿಸಿದ್ದರು.
0 comments:
Post a Comment