ಹೊಸಪೇಟೆ: ನಗರ ವಂಚಿತ ಸಮುದಾಯದ ಮಹಿಳೆಯರು ಯಾವುದೇ ಸೌಲಭ್ಯವಿಲ್ಲದೇ ನಗರದಿಂದ ವಂಚಿತರಾದವರು ಎಂದೇ ಅರ್ಥ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಮಹಿಳಾ ಅಧ್ಯಯನ ಕೇಂದ್ರದ ನಿರ್ದೇಶಕಿ ಶೋಭಾದೇವಿ ಎಂ.ಜಿ. ಹೇಳಿದರು.
ನಗರದಲ್ಲಿ ಬುಧವಾರ ಸ್ಲಂ ಜನಾಂದೋಲನ-ಕರ್ನಾಟಕ, ಸಾವಿತ್ರಿಬಾಯಿ ಪುಲೆ ಮಹಿಳಾ ಸಂಘಟನೆ ಹಾಗೂ ರೋಟರಿಕ್ಲಬ್, ಇನ್ನರ್‌ವೀಲ್ ಸಂಯುಕ್ತವಾಗಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ನಗರ ವಂಚಿತ ಸಮುದಾಯದ ಮಹಿಳೆಯರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೆಲವು ಕುಟುಂಬಗಳಲ್ಲಿ ಹಲವಾರು ಸಮಸ್ಯೆಗಳಿಂದ ಮಹಿಳೆಯರು ವೇಶ್ಯಾವಾಟಿಕೆಯಲ್ಲಿ ತೊಡಗಿದ್ದಾರೆ. ವರದಕ್ಷಿಣೆ ಕಿರುಕುಳದಿಂದ ಸಾವನ್ನಪ್ಪುತಿದ್ದಾರೆ. ದೇವದಾಸಿ ಪದ್ಧತಿ, ಬಾಲ್ಯವಿವಾಹ ಇನ್ನೂ ನಡೆಯುತ್ತಿದೆ. ಹೆಣ್ಣು ಗಂಡಿನಷ್ಟೇ ಸರಿ ಸಮಾನವಾಗಿ ಕೆಲಸ ಮಾಡಿದರೂ ಕೂಲಿಯಲ್ಲಿ ಸಮಾನತೆ ಇಲ್ಲ. ಈ ಎಲ್ಲವನ್ನೂ ಹೋಗಲಾಡಿಸಲು ಮಹಿಳೆಯರು ಒಗ್ಗೂಡಬೇಕು. ಅವರ ಹಕ್ಕು ಸೌಲಭ್ಯಗಳನ್ನು ಪಡೆಯಬೇಕು ಎಂದರು. ಮುಖ್ಯ ಅತಿಥಿ ಪುಷ್ಪಲತಾ ಮಾತನಾಡಿ, ಒಬ್ಬೊಬ್ಬರಾಗಿ ಯಾವುದೇ ಕೆಲಸವನ್ನು ಮಾಡಲು ಸಾಧ್ಯವಿಲ್ಲ. ಸಂಘಟನೆ, ಹೋರಾಟದ ಮೂಲಕ ಅಭಿವೃದ್ಧಿ ಕಾಣಲು ಸಾಧ್ಯ. ನಮ್ಮ ಸಮುದಾಯದ ಸಮಸ್ಯೆಗಳಿಗೆ ಮಹಿಳೆಯರು ಮುಂದಾಗಿ ಕೆಲಸ ಮಾಡಬೇಕು ಎಂದರು. ರೋಟರಿಕ್ಲಬ್‌ನ ಅಧ್ಯಕ್ಷ ವಿಜಯ ಎಮ್.ಸಿಂಧಗಿ ಮಾತನಾಡಿ, ಮೊದಲು ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಬೇಕು. ಅದಕ್ಕೆ ಬೇಕಾದಂತ ನೆರವು ರೋಟರಿಕ್ಲಬ್ ನೀಡುವುದು ಎಂದರು. ಈ ಸಂದರ್ಭದಲ್ಲಿ ಶ್ರಮಿಕ ಮಹಿಳೆಯರಿಗೆ ಸನ್ಮಾನ ಮಾಡಲಾಯಿತು. ಮೂಜಿಕಲ್ ಚೈರ್ಸ್ ಸ್ಪರ್ಧೆ ಮಾಡಿ, ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ದೇವಿಕಮ್ಮ ವಹಿಸಿದ್ದರು. ಪ್ರಾಸ್ತಾವಿಕವಾಗಿ ಸಂಯೋಜಕಿ ಎನ್.ಹುಲಿಗೆಮ್ಮ, ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಇನ್ನರ್ ವೀಲ್ ಅಧ್ಯಕ್ಷೆ ಶ್ರೀಮತಿ ವಿದ್ಯಾ ಸಿಂಧಗಿ, ರಾಜ್ಯ ಕಾರ್ಯದರ್ಶಿ ರಾಜ್ಮ, ಮಹಿಳಾ ಘಟಕದ ತಿಮ್ಮಕ್ಕ ಭಾಗವಹಿಸಿದ್ದರು.

0 comments:
Post a Comment