ಮಕ್ಕಳ ಜೊತೆ ಅಸಭ್ಯ ವರ್ತನೆ ಹಾಗೂ ಕರ್ತವ್ಯಲೋಪ ಆರೋಪದ ಮೇಲೆ ಕೊಪ್ಪಳ ತಾಲೂಕಿನ ಚಿಲಿಮುಖಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ದೈಹಿಕ ಶಿಕ್ಷಕ ವೆಂಕೋಬಪ್ಪ ಇಲ್ಲೂರು ಅವರನ್ನು ಹಾಗೂ ಮಕ್ಕಳಿಂದ ಕೆಲಸ ಮಾಡಿಸಿದ ಆರೋಪಕ್ಕಾಗಿ ಶಾಲೆಯ ಪರಿಚಾರಕ ರಾಮಪ್ಪ ಅವರನ್ನು ಅಮಾನತುಗೊಳಿಸಿ ಡಿಡಿಪಿಐ ಶ್ಯಾಮಸುಂದರ್ ಆದೇಶ ಹೊರಡಿಸಿದ್ದಾರೆ.
ಚಿಲಕಮುಖಿ ಶಾಲೆಯಲ್ಲಿ ಶಿಕ್ಷಕರ ಕೊರತೆ ಹಾಗೂ ಅವ್ಯವಸ್ಥೆ ಕುರಿತು ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರ ದೂರಿನ ಹಿನ್ನೆಲೆಯಲ್ಲಿ, ಪರಿಶೀಲಿಸಿ ವರದಿ ಸಲ್ಲಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಡಿಡಿಪಿಐ ಅವರು ಸೂಚನೆ ನೀಡಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ, ಶಾಲೆಗೆ ಭೇಟಿ ನೀಡಿ, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರೊಂದಿಗೆ ಸಮಾಲೋಚನೆ ನಡೆಸಿ, ವರದಿ ಸಲ್ಲಿಸಿದ ಹಿನ್ನೆಲೆಯಲ್ಲಿ, ಡಿಡಿಪಿಐ ಶ್ಯಾಮಸುಂದರ್ ಅವರು ಶಾಲೆಗೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇಲ್ಲಿನ ದೈಹಿಕ ಶಿಕ್ಷಕ ವೆಂಕೋಬಪ್ಪ ಇಲ್ಲೂರ ಅವರು ಶಾಲೆಗೆ ಸರಿಯಾಗಿ ಬಾರದಿರುವುದು, ಆಟೋಪಕರಣಗಳ ಸಾಮಗ್ರಿಗಳನ್ನು ಮಕ್ಕಳಿಗೆ ಒದಗಿಸದಿರುವುದು ಅಲ್ಲದೆ ಶಾಲೆಯ ಮಕ್ಕಳ ಜೊತೆ ಅಸಭ್ಯವಾಗಿ ವರ್ತಿಸಿರುವುದು ಮೇಲ್ನೋಟಕ್ಕೆ ಕಂಡು ಬಂದ ಹಿನ್ನೆಲೆಯಲ್ಲಿ ವೆಂಕೋಬಪ್ಪ ಇಲ್ಲೂರ ಅವರನ್ನು ಅಮಾನತುಗೊಳಿಸಲಾಗಿದೆ. ಅದೇ ರೀತಿ ಇಲ್ಲಿನ ಪರಿಚಾರಕ ರಾಮಪ್ಪ, ತರಗತಿಗಳ ಕಸಗುಡಿಸುವುದು, ಕಿಟಕಿ ಹಾಕುವುದು, ಗಂಟೆ ಬಾರಿಸುವುದು ಸೇರಿದಂತೆ ಎಲ್ಲ ಕೆಲಸಗಳನ್ನು ವಿದ್ಯಾರ್ಥಿಗಳಿಂದ ಮಾಡಿಸಿ, ಕರ್ತವ್ಯಲೋಪವೆಸಗಿರುವುದು ಮೇಲ್ನೋಟಕ್ಕೆ ಕಂಡುಬಂದಿರುವ ಪ್ರಯುಕ್ತ ಪರಿಚಾರಕ ರಾಮಪ್ಪ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎ. ಶ್ಯಾಮಸುಂದರ್ ಅವರು ಆದೇಶದಲ್ಲಿ ತಿಳಿಸಿದ್ದಾರೆ.
0 comments:
Post a Comment