PLEASE LOGIN TO KANNADANET.COM FOR REGULAR NEWS-UPDATES


  ಜಿಲ್ಲೆಯಲ್ಲಿ ಉದ್ಯೋಗ ಅರಸಿ, ಗುಳೆ ಹೋಗುವುದನ್ನು ತಡೆಗಟ್ಟಬೇಕು.  ಇದಕ್ಕೆ ಪೂರಕವಾಗಿ, ಉದ್ಯೋಗಖಾತ್ರಿ ಯೋಜನೆಯನ್ನು ಸಮರ್ಪಕವಾಗಿ ಅನುಷ್ಟಾನಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಜಿಲ್ಲಾ ಉಸ್ತುವಾರಿ ಹಾಗೂ ಸಣ್ಣ ನೀರಾವರಿ ಸಚಿವ ಶಿವರಾಜ ಎಸ್ ತಂಗಡಗಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
     ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ಕೆ.ಡಿ.ಪಿ. ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
      ಜಿಲ್ಲೆಯಲ್ಲಿ ಈ ವರ್ಷ ಉದ್ಯೋಗಖಾತ್ರಿ ಯೋಜನೆಯಡಿ, ಕೂಲಿ ಕೆಲಸ ಬಯಸಿ ೪೪೮೬೬ ಜನ ಅರ್ಜಿ ಸಲ್ಲಿಸಿದ್ದಾರೆ.  ಆದರೆ ಈ ಪೈಕಿ ಕೇವಲ ೨೪೪೫೩ ಜನ ಮಾತ್ರ ಉದ್ಯೋಗಕ್ಕೆ ಹಾಜರಾಗಿ, ಕೂಲಿ ಕೆಲಸ ಪಡೆದಿದ್ದಾರೆ.  ಸುಮಾರು ೨೦ ಸಾವಿರಕ್ಕೂ ಹೆಚು ಜನ ಉದ್ಯೋಗ ಪಡೆಯಲು ಬಾರದಿರುವುದು, ಯೋಜನೆ ಸಮರ್ಪಕವಾಗಿ ಅನುಷ್ಠಾನವಾಗುತ್ತಿಲ್ಲ ಎಂಬುದಕ್ಕೆ ನಿದರ್ಶನವಾಗಿದೆ.  ಕೂಲಿ ಹಣ ಪಾವತಿಯಲ್ಲಿ ಆಗುತ್ತಿರುವ ವಿಳಂಬವೇ ಇದಕ್ಕೆ ಪ್ರಮುಖ ಕಾರಣವೆಂಬುದಾಗಿ ದೂರುಗಳು ಬರುತ್ತಿವೆ.  ಸ್ಥಳೀಯವಾಗಿ ಉದ್ಯೋಗ ನೀಡಿ, ನಿಗದಿತ ಕಾಲಮಿತಿಯೊಳಗೆ ಕೂಲಿ ಹಣ ಪಾವತಿಸುವ ಮೂಲಕ ಉದ್ಯೋಗಖಾತ್ರಿ ಯೋಜನೆಯನ್ನು ಸಮರ್ಪಕವಾಗಿ ಅನುಷ್ಟಾನಗೊಳಿಸಿದಲ್ಲಿ, ಗುಳೇ ಹೋಗುವುದನ್ನು ನಿಯಂತ್ರಿಸಬಹುದು.  ಆದರೆ ಜಿಲ್ಲೆಯಲ್ಲಿ ಕೂಲಿಕಾರರು, ಕೂಲಿ ಹಣ ಪಡೆಯಲು ಗ್ರಾಮ ಪಂಚಾಯತಿ ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ಇದೆ.  ಇದನ್ನು ತಡೆಗಟ್ಟಿ, ಸರಿಯಾಗಿ ಕೂಲಿ ಹಣ ಪಾವತಿಸಿದಲ್ಲಿ, ಗುಳೇ ಹೋಗುವ ಪ್ರಮಾಣ ಕಡಿಮೆಯಾಗಲಿದೆ.  ಈ ನಿಟ್ಟಿನಲ್ಲಿ ಅಧಿಕಾರಿಗಳು ಪ್ರತಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ಜನರಲ್ಲಿ ಮನವರಿಕೆ ಮಾಡಿಕೊಡುವ ಕಾರ್ಯಕ್ರಮ ಹಾಕಿಕೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲಾ ಪಂಚಾಯತಿ, ತಾಲೂಕಾ ಪಂಚಾಯತಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅರ್ಜಿ ವಿಲೇವಾರಿ ವಿಳಂಬಕ್ಕೆ ಅಸಮಾಧಾನ : ಕಳೆದ ತಿಂಗಳು ಜಿಲ್ಲಾ ಕೇಂದ್ರದಲ್ಲಿ ಏರ್ಪಡಿಸಲಾದ ಜನತಾದರ್ಶನ ಕಾರ್ಯಕ್ರಮದಲ್ಲಿ ಒಟ್ಟು ೯೭ ಅರ್ಜಿಗಳು ಸ್ವೀಕೃತವಾಗಿದ್ದವು.  ಈ ಪೈಕಿ ೬೭ ಅರ್ಜಿಗಳು ವಿಲೇವಾರಿಯಾಗಿವೆ.  ಇನ್ನೂ ೩೦ ಅರ್ಜಿದಾರರಿಗೆ ಯಾವುದೇ ಮಾಹಿತಿ ನೀಡದಿರುವ ಬಗ್ಗೆ ಮಾಹಿತಿ ಪಡೆದ ಸಚಿವರು ಅಧಿಕಾರಿಗಳ ಧೋರಣೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಸಮಾಜಕಲ್ಯಾಣ, ಕಂದಾಯ, ಗಂಗಾವತಿ ನಗರಸಭೆ ಹೀಗೆ ನಾನಾ ಇಲಾಖೆಗಳ ಅಧಿಕಾರಿಗಳು ಅರ್ಜಿಗಳ ವಿಲೇವಾರಿಯಲ್ಲಿ ನಿರ್ಲಕ್ಷ್ಯ ತೋರಿರುವುದು ಸಮಂಜಸವಲ್ಲ.  ಇದೇ ನ. ೧೫ ರಂದು ಕೊಪ್ಪಳದಲ್ಲಿ ಎರಡನೆ ಜನತಾ ದೆರ್ಶನ ನಡೆಸಲಾಗುತ್ತಿದ್ದು, ಇಷ್ಟರೊಳಗೆ ಎಲ್ಲ ಅರ್ಜಿದಾರರಿಗೆ ಸಮರ್ಪಕ ಮಾಹಿತಿ ನೀಡಬೇಕು.  ಅಲ್ಲದೆ ಮುಂದೆ ಈ ರೀತಿಯ ವಿಳಂಬಕ್ಕೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಅಮಾನತು : ತ್ರೈಮಾಸಿಕ ಕೆ.ಡಿಪಿ ಪ್ರಗತಿ ಪರಿಶೀಲಾ ಸಭಯಲ್ಲಿ ಗಂಭೀರ ಚರ್ಚ ನಡೆಯುತ್ತಿರುವಾಗ ಸಭಾಂಗಣದಲ್ಲಿ ಮೊಬೈಲ್ ಬಳಸಿ ಮಾತನಾಡುತ್ತಿದ್ದ ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯ ಸಹಾಯಕ ಇಂಜಿನಿಯರ್ ಕಮಾಲುದ್ದೀನ್ ಅವರನ್ನು ಕೂಡಲೆ ಅಮಾನತುಗೊಳಿಸುವಂತೆ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಅಪರ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.  ಮಹತ್ವದ ಸಭೆ ನಡೆಯುವಾಗ ಅಧಿಕಾರಿಗಳು ತಮ್ಮ ಕರ್ತವ್ಯ ಮರೆತು, ಮೊಬೈಲ್ ನಲ್ಲಿ ಹರಟುವ ಪ್ರವೃತ್ತಿಯನ್ನು ಸಹಿಸುವುದಿಲ್ಲ.  ಹಿಂದಿನ ಸಭೆಗಳಲ್ಲಿ ಅನೇಕ ಬಾರಿ ಈ ಕುರಿತು ಎಚ್ಚರಿಕೆ ನೀಡಿದ್ದರೂ, ಅಧಿಕಾರಿಗಳು ತಮ್ಮ ಚಾಳಿಯನ್ನು ಬಿಟ್ಟಿಲ್ಲ ಎಂದು ಸಚಿವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಗುತ್ತಿಗೆದಾರರು ಕಪ್ಪು ಪಟ್ಟಿಗೆ : ಗಂಗಾವತಿ ನಗರದಲ್ಲಿ ನಡೆಯುತ್ತಿರುವ ೨೪*೭ ಕುಡಿಯುವ ನೀರು ಸರಬರಾಜು ಯೋಜನೆ ಕಾಮಗಾರಿಗಾಗಿ ಬೃಹತ್ ಪೈಪ್‌ಲೈನ್ ಗಳನ್ನು ಅಳವಡಿಸಲು ನಡೆಯುತ್ತಿದ್ದ ಕಾಮಗಾರಿ ಕಳೆದೆರಡು ತಿಂಗಳಿನಿಂದ ಸಂಪೂರ್ಣ ಸ್ಥಗಿತಗೊಂಡಿದೆ.  ಇದರಿಂದಾಗಿ ಅಂಗಡಿ ವ್ಯಾಪಾರಸ್ಥರು, ಸಾರ್ವಜನಿಕರು, ತೀವ್ರ ತೊಂದರೆ ಅನುಭವಿಸುವಂತಾಗಿದ್ದು, ವಿನಾಕಾರಣ ಕಾಮಗಾರಿ ಸ್ಥಗಿತಗೊಳಿಸಿ, ತೊಂದರೆಗೆ ಕಾರಣರಾದ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಬೇಕು ಎಂದು ಗಂಗಾವತಿ ಶಾಸಕ ಇಕ್ಬಾಲ್ ಅನ್ಸಾರಿ ಅವರು ಸಚಿವರನ್ನು ಕೋರಿದರು.  ಇದಕ್ಕೆ ಸ್ಪಂದಿಸಿದ ಜಿಲ್ಲಾ ಉಸ್ತುವಾರಿ ಸಚಿವರು, ಸಂಬಂಧಪಟ್ಟ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಲು ಸಭೆಯ ನಡಾವಳಿ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕುಡಿಯುವ ನೀರಿಗೆ ಶೀಘ್ರ ವಿದ್ಯುತ್ : ಕುಡಿಯುವ ನೀರಿನ ತೀವ್ರ ತೊಂದರೆ ಎದುರಿಸುತ್ತಿರುವ   ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಸರ್ಕಾರ ಕೊಳವೆಬಾವಿ ಕೊರೆಯಿಸಿ, ಪೈಪ್ ಲೈನ್ ಮೂಲಕ ನೀರು ಪೂರೈಕೆ ಮಾಡುವ ಅನೇಕ ಯೋಜನೆಗಳನ್ನು ಅನುಷ್ಟಾನಗೊಳಿಸಲಾಗುತ್ತಿದೆ.  ಆದರೆ ಕೆಲವೆಡೆ ಇಂತಹ ಕುಡಿಯುವ ನೀರಿನ ಘಟಕಗಳಿಗೆ ವಿದ್ಯುತ್ ಸಂಪರ್ಕ ನೀಡಲು ಜೆಸ್ಕಾಂ ನವರು ಸತಾಯಿಸುತ್ತಿದ್ದಾರೆ ಎಂಬ ದೂರುಗಳು ಕೇಳಿಬರುತ್ತಿವೆ.  ಇನ್ನು ಮುಂದೆ ಕುಡಿಯುವ ನೀರಿನ ವಿಷಯಕ್ಕೆ ಸಂಬಂಧಿಸಿದಂತೆ, ಜೆಸ್ಕಾಂ ನವರು ತಕ್ಷಣ ವಿದ್ಯುತ್ ಸಂಪರ್ಕ ಕಲ್ಪಿಸಬೇಕು.  ಅನುಮೋದನೆ, ಇತ್ಯಾದಿಗಳನ್ನು ಘಟನೋತ್ತರವಾಗಿ ಪಡೆದುಕೊಳ್ಳಬೇಕು.  ವಿದ್ಯುತ್ ಸಂಪರ್ಕದ ತೊಂದರೆಯಿಂದ ಕುಡಿಯುವ ನೀರಿನ ತೊಂದರೆ ಆಗುವಂತಹ ಯಾವುದೇ ಪ್ರಕರಣ ಕಂಡುಬಂದಲ್ಲಿ, ಜೆಸ್ಕಾಂ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಜೆಸ್ಕಾಂ ಕಾರ್ಯಪಾಲಕ ಇಂಜಿನಿಯರ್ ಅವರಿಗೆ ಕಟ್ಟಿನಿಟ್ಟಿನ ಸೂಚನೆ ನೀಡಿದರು.
  ಸಭೆಯಲ್ಲಿ ಸಂಸದ ಸಂಗಣ್ಣ ಕರಡಿ, ಜಿ.ಪಂ. ಅಧ್ಯಕ್ಷ ಅಮರೇಶ್ ಕುಳಗಿ, ಉಪಾಧ್ಯಕ್ಷ ವಿನಯಕುಮಾರ ಮೇಲಿನಮನಿ, ಶಾಸಕರುಗಳಾದ ಕೆ. ರಾಘವೇಂದ್ರ ಹಿಟ್ನಾಳ್, ಇಕ್ಬಾಲ್ ಅನ್ಸಾರಿ, ಹಾಲಪ್ಪ ಆಚಾರ್, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಟಿ.ಡಿ. ಪವಾರ್, ಅಪರ ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ್, ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

Advertisement

0 comments:

Post a Comment

 
Top