ರಾಜ್ಯದ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಕೃಷಿ ಶಿಕ್ಷಣದ ಸ್ಥಿತಿಗತಿ ಕುರಿತು ಮಾಧ್ಯಮ ಸಂಶೋಧನೆ ನಡೆಸಲು ಪತ್ರಕರ್ತರಿಗೆ ಸುಕೃತ ಫೆಲೋಶಿಪ್ ನೀಡಲು ಸುಕೋ ಬ್ಯಾಂಕ್ ಕೃಷಿ ಪ್ರಶಸ್ತಿ ಸಂಚಾಲನಾ ಸಮಿತಿ ನಿರ್ಧರಿಸಿದೆ. ಮಕ್ಕಳಲ್ಲಿ ಅನ್ನದ ಅರಿವನ್ನು ಜಾಗೃತಗೊಳಿಸುವ ಪ್ರಯತ್ನಗಳನ್ನು ಗುರುತಿಸಿ ಉತ್ತಮ ಶೈಕ್ಷಣಿಕ ಮಾದರಿಗಳನ್ನು ಬೆಳಕಿಗೆ ತರುವದು ಮುಖ್ಯ ಉದ್ದೇಶವಾಗಿದೆ. ಶಾಲೆಯ ಪಠ್ಯ ಕ್ರಮದಲ್ಲಿ ಕೃಷಿ ಪಾಠಗಳು, ಮಕ್ಕಳ ಕೃಷಿ ಆಸಕ್ತಿಯ ಸ್ಥಿತಿಗತಿಗಳ ಅಧ್ಯಯನ ನಡೆಸುವದು. ರಾಜ್ಯದ ಉತ್ತಮ ಕೃಷಿ ಶಿಕ್ಷಣ ಮಾದರಿಗಳನ್ನು ಗುರುತಿಸುವದು, ಭವಿಷ್ಯದ ಶಿಕ್ಷಣ ಯೋಜನೆಗೆ ದಿಕ್ಸೂಚಿಯಾಗಬಲ್ಲ ವಿಚಾರಗಳ ಸಂಗ್ರಹಣೆ ಸಂಶೋಧನೆಯ ಮುಖ್ಯ ಆಶಯವಾಗಿದೆ. ಫೆಲೋಶಿಪ್ ಮೊತ್ತ ಒಂದು ಲಕ್ಷ ರೂಪಾಯಿಗಳು. ಕಾರ್ಯನಿರತ ಪತ್ರಕರ್ತರು, ಹವ್ಯಾಸಿ ಪತ್ರಕರ್ತರು, ಬರಹಗಾರರು ಅರ್ಜಿಸಲ್ಲಿಸಬಹುದು. ೨೦೧೪ ಅಗಸ್ಟ್ ೩೧ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.
ಮಾಧ್ಯಮ ಕ್ಷೇತ್ರದ ಅನುಭವ, ಸಂಪರ್ಕ ವಿವರಗಳೊಂದಿಗೆ ಅರ್ಜಿ ಸಲ್ಲಿಸಬಹುದು. ’ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಕೃಷಿ ಶಿಕ್ಷಣ’ ವಿಷಯ ಕುರಿತ ಅಧ್ಯಯನದ ಯೋಜನೆ ಬಗೆಗೆ ೧,೦೦೦ಪದಗಳ ಮಿತಿಯಲ್ಲಿ ಸಾರಾಂಶ ಲೇಖನ ಬರೆದು ಅರ್ಜಿಯ ಜೊತೆ ಕಳಿಸಬೇಕು. ಫೆಲೋಶಿಪ್ ಅಧ್ಯಯನ ಯೋಜನೆಯ ಸಾರಾಂಶಗಳ ಆಧಾರದಲ್ಲಿ ಪ್ರಥಮ ಹಂತದಲ್ಲಿ ಗರಿಷ್ಠ ೧೨ ಪತ್ರಕರ್ತರನ್ನು ಆಯ್ಕೆ ಮಾಡಲಾಗುವದು. ಕೃಷಿ ಶಿಕ್ಷಣ ಕುರಿತು ಎರಡು ದಿನಗಳ ಅಧ್ಯಯನ ಶಿಬಿರ ನಡೆಸಲಾಗುವದು. ಸಾರಾಂಶ ಲೇಖನ, ವಿವರ ಸಂದರ್ಶನ, ಮಾಧ್ಯಮ ಅನುಭವ, ಕೃಷಿ ಶಿಕ್ಷಣ ಕ್ಷೇತ್ರದ ಆಸಕ್ತಿ ಗಮನಿಸಿ ಅಂತಿಮವಾಗಿ ಒಬ್ಬರಿಗೆ ಸುಕೃತ ಕೃಷಿ ಮಾಧ್ಯಮ ಫೆಲೋಶಿಪ್ ನೀಡಲಾಗುವದು. ಇದಲ್ಲದೇ ಅಧ್ಯಯನ, ಕ್ಷೇತ್ರಭೇಟಿ ಹಾಗೂ ವಿಡಿಯೊ/ಛಾಯಾಚಿತ್ರ ದಾಖಲಾತಿ ವೆಚ್ಚಗಳಿಗೆ ಪ್ರತ್ಯೇಕವಾಗಿ ೫೦.೦೦೦ರೂಪಾಯಿ ನೀಡಲಾಗುವದು. ಫೆಲೋಶಿಪ್ಗೆ ಆಯ್ಕೆಯಾದವರು ವಿಷಯ ತಜ್ಞರ ಮಾರ್ಗದರ್ಶನದಲ್ಲಿ ನಿಗದಿತ ಸಮಯದಲ್ಲಿ ಅಧ್ಯಯನ ನಡೆಸಿ ೧೦.೦೦೦ ಪದಗಳ ಮಿತಿಯಲ್ಲಿ ಮಾಧ್ಯಮ ಸಂಶೋಧನಾ ವರದಿ ನೀಡಬೇಕಾಗುತ್ತದೆ. ಈ ಕುರಿತ ವಿಚಾರಗಳನ್ನು ರಾಜ್ಯದ ಪತ್ರಿಕೆ/ಟಿವಿ/ರೇಡಿಯೊ/ಮಲ್ಟಿಮೀಡಿಯಾದಂಥ ಯಾವುದಾದರೊಂದು ಮಾಧ್ಯಮದಲ್ಲಿ ಪ್ರಕಟಿಸಬೇಕಾಗುತ್ತದೆ. ಹೆಚ್ಚಿನ ವಿವರಗಳಿಗೆ ಸಮಿತಿ ಸಂಚಾಲಕರಾದ ಶಿವಾನಂದ ಕಳವೆಯವರನ್ನು ೯೪೪೮೦೨೩೭೧೫, ಇಮೇಲ್ suಞಡಿiಣಚಿಚಿತಿಚಿಡಿಜ@gmಚಿiಟ.ಛಿom
ಸಂಪಕಿಸಬಹುದು.
ಕೃಷಿ ಶಿಕ್ಷಣ ಫೆಲೋಶಿಪ್ ಏಕೆ?
ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳು ಮಕ್ಕಳ ಜ್ಞಾನ ಸಂಪಾದನೆಯ ಪ್ರಮುಖ ಹಂತವಾಗಿವೆ. ನಾಡಿಗೆ ಅನ್ನ ನೀಡುವ ಕೃಷಿಯ ಕುರಿತು ಇಲ್ಲಿ ನೆಲಮೂಲದ ಕೃಷಿ ದರ್ಶನದ ಅಗತ್ಯವಿದೆ. ಹೊಟ್ಟು,ಕಾಳು,ದಂಟು,ಕಡ್ಡಿ,ತೆನೆ,ಚುಂಗು,ಅಕ್ಕಡಿ,ಒಳಗಟ್ಟಿ, ದಿನ್ನೆ ಹೀಗೆ ರೈತರ ಪದಗಳು ಹೊಲದ ಬದುವಿನಲ್ಲಿ ನಡೆದಾಡುವ ಮಕ್ಕಳಿಗೆ ಅಪರಿಚಿತವಾಗುತ್ತಿವೆ. ಒಂದು ತೆಂಗಿನ ಮರ ತೋರಿಸಿ ಅಕ್ಷರ ಓದದ ಅಜ್ಜ ಬೇರು,ಕಾಂಡ,ಗಣ್ಣು,ಮಿಳ್ಳೆ,ಗರಿ,ಎಳೆನೀರು,ಗಂಜಿ,ತೆಂಗು,ನಾರು, ಹೊರಬಲು, ಸರಬಲು,ಕಟಾರಿ,ಸುಳಿ ಹೀಗೆ ೨೫-೩೦ ಭಾಗಗಳನ್ನು ಪದಗಳಲ್ಲಿ ಪರಿಚಯಿಸಬಹುದು. ಉಳುಮೆ ಎತ್ತು,ನೇಗಿಲು,ಕುಂಟೆ,ರಂಟೆ,ಚಕ್ಕಡಿ,ಸಲಕೆ ಹೀಗೆ ಯಾವುದನ್ನೂ ಎದುರು ಹಿಡಿದರೂ ಬಿಡಿ ಬಿಡಿಯಾಗಿ ವಿವರಿಸಬಹುದು. ಹಾಳ್ಮಣ್ಣು, ಮಸಾರಿ, ಎರೆಹೊಲ,ಬಿಳ್ಮಣ್ಣು,ಕಾಗದಾಳಿ ಹೀಗೆ ಮಣ್ಣಿನ ಶಕ್ತಿ ವಿಶೇಷಗಳನ್ನು ಪರಿಚಯಿಸಬಹುದು. ಪ್ರಶ್ನೆ ಪರೀಕ್ಷೆಗಳ ಕಾರಣದಿಂದ ಇಂದು ಮಕ್ಕಳಿಗೆ ವಿಶ್ವದ ಗೋಧಿ ಉತ್ಪಾದನೆ ಗೊತ್ತಿದೆ. ಆದರೆ ಶಾಲೆಯ ಪಕ್ಕದ ಹೊಲದ ನಮ್ಮ ಜವೆಗೋದಿಯ ಸ್ವಾರಸ್ಯ ತಿಳಿದಿಲ್ಲ. ದ್ರಾಕ್ಷಿಯ ಸಿಹಿಯ ಅರಿವಿದೆ, ಬಳ್ಳಿ ಕಸಿಗೆ ಬಳಿಸಿದ ಕಾಡು ದ್ರಾಕ್ಷಿ(ಆog -ಡಿiಜge)ಯ ಬೇರು ಬೆರಗು ಗೊತ್ತಿಲ್ಲ. ಮಂಡ್ಯದ ಕಬ್ಬು, ಗುಲ್ಬುರ್ಗಾದ ತೊಗರಿ, ಕೊಪ್ಪಳದ ದಾಳಿಂಬೆ,ನಂಜನಗೂಡಿನ ರಸಬಾಳೆ,ಕಮಲಾಪುರದ ಕೆಂಬಾಳೆ,ದೇವನಹಳ್ಳಿಯ ಚಕ್ಕೋತ,ಹಡಗಲಿಯ ಮಲ್ಲಿಗೆ,ಉಡುಪಿಯ ಬದನೆ ಹೀಗೆ ರಾಜ್ಯದ ಎಲ್ಲೆಡೆ ಕೃಷಿ ಸಂಸ್ಕೃತಿ ಕಟ್ಟಿ ಬೆಳೆಸಿದ ತಳಿ ಬೆರಗುಗಳಿವೆ,ತಳಿ ವೈವಿಧ್ಯ ಖಜಾನೆಯಿದೆ.
ಶಿಕ್ಷಣ ಕಣ್ತೆರೆಸುವ ಕಾರ್ಯ, ಮಣ್ಣಿನ ವಿಷಯದಲ್ಲಿ ಹೇಳಬಹುದಾದ ಮಹತ್ವದ ಸಂಗತಿಗಳನ್ನು ಮರೆತಿದೆ. ಅಕ್ಕರೆಯ ಬಿಸಿಯೂಟದ ಮಧ್ಯೆ ಕೃಷಿ ನೋಡದ ಕಾರಣಕ್ಕೆ ಮಕ್ಕಳೆದುರು ಕ್ಲಿಷ್ಟ ಪ್ರಶ್ನೆಗಳು ಜನಿಸಿವೆ. ಹಿರಿಯರ ಕೃಷಿ ಕೌಶಲ್ಯ ನಮ್ಮ ತಟ್ಟೆಗೆ ರುಚಿ ರುಚಿ ಅಡುಗೆ ನೀಡಿದೆ. ಹಲವು ಶತಮಾನಗಳಿಂದ ಉದ್ಯೋಗ ನೀಡಿದೆ. ಈಗ ನಾಲ್ಕು ದಶಕಗಳಲ್ಲಿ ಕೃಷಿ ನೆಲೆಯಲ್ಲಿ ಪರಿವರ್ತನೆಯಾಗಿದೆ. ಕೃಷಿಯ ಬಗೆಗೆ ಅಭಿಮಾನ ಮೂಡಿಸದ ಶಿಕ್ಷಣದ ದೋಷವನ್ನು ಎಲ್ಲರೂ ಎತ್ತಿ ಹೇಳುತ್ತಾರೆ. ಪದವಿ ಪ್ರಮಾಣ ಪತ್ರಗಳು ಕೃಷಿಯ ಮರಣ ಪತ್ರಗಳಾಗುತ್ತಿವೆಯೆಂಬ ನೋವು ಕಾಡುತ್ತಿದೆ. ಶಿಕ್ಷಣದ ದಾರಿಯನ್ನು ಮರು ಅವಲೋಕಿಸುವ ಸಂಕ್ರಮಣ ಕಾಲ ಬಂದಿದೆ. ಪರಿಣಾಮಕಾರಿ ಕೃಷಿ ಶಿಕ್ಷಣದ ದಾರಿಯ ಹುಡುಕಾಟ ನಡೆಸಬೇಕಾಗಿದೆ. ಈ ಹಿನ್ನಲೆಯಲ್ಲಿ ಕೃಷಿ ಶಿಕ್ಷಣ ಅಧ್ಯಯನಕ್ಕೆ ಫೆಲೋಶಿಪ್ ನೀಡಲಾಗುತ್ತಿದೆ.
ಫೆಲೋಶಿಪ್ ಹಿನ್ನಲೆ
ಕೃಷಿಯ ಉತ್ತಮ ಮಾದರಿಗಳನ್ನು ಪ್ರೋತ್ಸಾಹಿಸುವ ಮೂಲಕ ಕೃಷಿ ರಂಗದಲ್ಲಿ ಗುಣಾತ್ಮಕ ಬದಲಾವಣೆ ತರುವ ಆಶಯದಿಂದ ರಾಜ್ಯ ಮಟ್ಟದಲ್ಲಿ ಸುಕೃತ ಕೃಷಿ ಪ್ರಶಸ್ತಿಗಳನ್ನು ನೀಡುವ ಕಾರ್ಯ ಕಳೆದ ವರ್ಷದಿಂದ ಆರಂಭವಾಗಿದೆ. ಕೃಷಿ ಸಾಧಕರಿಗೆ ಸುಕೃತ (SUಏಖIಖಿಂ) ಕೃಷಿ ಪ್ರಶಸ್ತಿ, ತಂತ್ರಜ್ಞಾನ ಕ್ಷೇತ್ರದ ಸಾಧನೆಗೆ ಸುಕೃತ ಕೃಷಿ ತಂತ್ರಜ್ಞಾನ ಪ್ರಶಸ್ತಿ ಹಾಗೂ ಕೃಷಿ ಮಾಧ್ಯಮ ಸಂಶೋಧನೆಗೆ ಸುಕೃತ ಕೃಷಿ ಮಾಧ್ಯಮ ಫೆಲೋಶಿಪ್ ನೀಡಲಾಗುತ್ತಿದೆ. ಕೃಷಿಯಲ್ಲಿ ಯುವಶಕ್ತಿ ಉಳಿಸಿಕೊಳ್ಳುವದು ಹೇಗೆ ? ವಿಷಯದ ಕುರಿತು ಕಳೆದ ವರ್ಷ ಫೆಲೋಶಿಪ್ ನೀಡಲಾಗಿದೆ. ರಾಮನಗರ ಜಿಲ್ಲೆ ಕನಕಪುರದ ಚಿಕ್ಕಸಾಧೇನಹಳ್ಳಿಯಲ್ಲಿ ಕೃಷಿಕ, ಕೃಷಿ ಬರಹಗಾರ ಗಣಪತಿ ಭಟ್ ಹಾರೋಹಳ್ಳಿ ಇದಕ್ಕೆ ಆಯ್ಕೆಯಾಗಿದ್ದರು. ಈಗ ಅಧ್ಯಯನ ವರದಿ ನೀಡಿದ್ದು ಪುಸ್ತಕವಾಗಿ ಪ್ರಕಟವಾಗುತ್ತಿದೆ.
ಹಿರಿಯ ಪತ್ರಕರ್ತರಾದ ನಾಗೇಶ ಹೆಗಡೆ, ರಾಯಚೂರು ಕೃಷಿ ವಿಶ್ವವಿದ್ಯಾಲಯದ ನಿವೃತ್ತ ಉಪಕುಲಪತಿ ಡಾ.ಬಿ.ವಿ.ಪಾಟೀಲ್, ಹಿರಿಯ ಪತ್ರಕರ್ತ ಅರುಣ್ ಶಿವಮೊಗ್ಗ, ಮೈಸೂರು ವಿಶ್ವವಿದ್ಯಾನಿಲಯದ ಸಾಮರ್ಥ್ಯ ಅಭಿವೃದ್ಧಿ ಕೇಂದ್ರದ ನಿರ್ದೇಶಕ ಡಾ.ನಿರಂಜನ ವಾನಳ್ಳಿ, ಕೃಷಿ ಸಾಧಕರಾದ ಬಿಜಾಪುರದ ವಿಠ್ಠಲ ಗೌಡ ಬಿರಾದಾರ್, ಎಮ್.ಕೆ.ಕೈಲಾಸಮೂರ್ತಿ ಮೈಸೂರು, ವಾರಣಾಶಿ ಕೃಷಿ ಸಂಶೋಧನಾ ಪ್ರತಿಷ್ಠಾನದ ಶ್ರೀಮತಿ ಅಶ್ವಿನಿ ಕೃಷ್ಣಮೂರ್ತಿ, ಧಾರವಾಡ ಕೃಷಿ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಶ್ರೀಮತಿ ವಿನೂತಾ ಮುಕ್ತಾಮಠ, ಬರಹಗಾರ ಡಾ.ನರೇಂದ್ರ ರೈ ದೇರ್ಲ, ಪೂರ್ಣಪ್ರಜ್ಞ ಬೇಳೂರು ಸುಕೋ ಬ್ಯಾಂಕ್ ಕೃಷಿ ಪ್ರಶಸ್ತಿ ಸಂಚಾಲನಾ ಸಮಿತಿ ಸದಸ್ಯರಾಗಿದ್ದಾರೆ. ವಾರ್ಷಿಕ ಕೃಷಿ ಮಾಧ್ಯಮ ಫೆಲೋಶಿಪ್ನ್ನು ಸುಕೋ ಬ್ಯಾಂಕ್ ಪ್ರಾಯೋಜಿಸುತ್ತಿದೆ. ಸುಕೋ ಬ್ಯಾಂಕ್ ಅಧ್ಯಕ್ಷರಾದ ಮನೋಹರ್ ಮಸ್ಕಿ ಸಮಿತಿಯ ಗೌರವ ಆಹ್ವಾನಿತರು. ಕೃಷಿ ಪರಿಸರ ಬರಹಗಾರ ಶಿವಾನಂದ ಕಳವೆ ಸಮಿತಿಯ ಸಂಚಾಲಕರಾಗಿದ್ದಾರೆ.
0 comments:
Post a Comment