PLEASE LOGIN TO KANNADANET.COM FOR REGULAR NEWS-UPDATES

  ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷಾ ಕಾರ್ಯ ಜಿಲ್ಲೆಯಲ್ಲಿ ಪ್ರಾರಂಭವಾಗಿದ್ದು, ನ. ೧೭ ರವರೆಗೂ ಜರುಗಲಿದೆ.  ಈ ಸಮೀಕ್ಷೆಗಾಗಿ ಬರುವ ಪ್ರತಿನಿಧಿಗಳಿಗೆ ಸಾರ್ವಜನಿಕರು ನೈಜ ಮಾಹಿತಿ ನೀಡಿ ಸಮೀಕ್ಷಾ ಕಾರ್ಯ ಯಶಸ್ವಿಗೊಳಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಿ.ಹೆಚ್. ವೀರಣ್ಣ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ್ ಪೂಜಾರ್ ಅವರು ಮನವಿ ಮಾಡಿಕೊಂಡಿದ್ದಾರೆ.
  ಸಂವಿಧಾನದ ೪೫ನೇಯ ವಿಧಿ ಹಾಗೂ ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ಕಾಯ್ದೆ ೨೦೦೯ ರ ಸೆಕ್ಷನ್ ೮ ಮತ್ತು ೯ ಪ್ರಕಾರ ಯಾವುದೇ ರೀತಿಯ ತಾರತಮ್ಯ ತೋರದೆ ೬ ರಿಂದ ೧೪ ವಯೋಮಾನದ ಎಲ್ಲಾ ಮಕ್ಕಳಿಗೂ ಉಚಿತ, ಕಡ್ಡಾಯ ಹಾಗೂ ಸಾರ್ವತ್ರಿಕವಾಗಿ ೮ ವರ್ಷಗಳ ಪ್ರಾಥಮಿಕ ಶಿಕ್ಷಣ ಪೂರೈಸುವವರೆಗೂ ಸೌಲಭ್ಯಗಳನ್ನು ಒದಗಿಸಿ ಶಿಕ್ಷಣ ನೀಡುವುದು, ಈ ನಿಟ್ಟಿನಲ್ಲಿ ಎಲ್ಲಾ ಮಕ್ಕಳು ಶಿಕ್ಷಣವನ್ನು ಪಡೆಯುತ್ತಿದ್ದಾರೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳುವುದು ಸರ್ಕಾರದ ಮತ್ತು ಸ್ಥಳೀಯ ಪ್ರಾಧಿಕಾರದ ಆದ್ಯ ಕರ್ತವ್ಯವಾಗಿದ್ದು, ಈ ದಿಸೆಯಲ್ಲಿ ಪ್ರಸಕ್ತ ಸಾಲಿನ ೬-೧೬ ವಯೋಮಾನದ ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆಯು ಹೊಸ ರೀತಿಯಲ್ಲಿ ಹೊಸ ವಿಧಾನವನ್ನು ವಿವಿಧ ಉದ್ದೇಶಗಳೊಂದಿಗೆ, ಸಮೀಕ್ಷೆಯ ಕಾರ್ಯವನ್ನು ನ.೧೩ ರಿಂದ ೧೭ ರವರೆಗೆ ಗ್ರಾಮಾಂತರ ಹಾಗೂ ನಗರ ಪ್ರದೇಶಗಳಲ್ಲಿ ಹಮ್ಮಿಕೊಳ್ಳಲಾಗಿದ್ದು, ಮಕ್ಕಳ ಸಮೀಕ್ಷೆಗಾಗಿ ಆಗಮಿಸುವ ಶಿಕ್ಷಕರಿಗೆ ನೈಜ ಮಾಹಿತಿಯನ್ನು ನೀಡಿ ಸಹಕರಿಸಬೇಕಿದೆ.
ಸಮೀಕ್ಷೆಯ ಉದ್ದೇಶಗಳು : ೬ ರಿಂದ ೧೬ ವಯೋಮಾನದ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸುವುದು, ಶಾಲಾ ಮಟ್ಟದಲ್ಲಿ ೨೦೧೦-೧೧ನೇಯ ಸಾಲಿನಲ್ಲಿ ೧ ರಿಂದ ೯ನೇ ತರಗತಿಯಲ್ಲಿದ್ದ ಮಕ್ಕಳು, ೨೦೧೩-೧೪ನೇ ಯ ಸಾಲಿನಲ್ಲಿ ಶಾಲೆಯಲ್ಲಿ ಶಿಕ್ಷಣ ಮುಂದುವರಿಸುತ್ತಿರುವ ಮಾಹಿತಿ ಆಧಾರದ ಮೇಲೆ, ಈ ಎರಡು ವರ್ಷಗಳ ನಡುವಿನ ಅವಧಿಗಳಲ್ಲಿ ಶಾಲೆ ಬಿಟ್ಟ ಮಕ್ಕಳ (ಮಿಸ್ಸಿಂಗ್ ಚೈಲ್ಡ್) ಮಾಹಿತಿ ಸಂಗ್ರಹಿಸಿ, ಪಟ್ಟಿ ಮಾಡುವುದು, ಈ ಪಟ್ಟಿಯಲ್ಲಿನ ಮಕ್ಕಳ ಜಾಡನ್ನು ಕಂಡುಹಿಡಿಯುವುದಕ್ಕಾಗಿ ಕುಟುಂಬ ಸಮೀಕ್ಷೆಯನ್ನು ಕೈಗೊಳ್ಳುವುದು, ಜನವಸತಿ ಪ್ರದೇಶಗಳಲ್ಲಿ ಕುಟುಂಬ ಸಮೀಕ್ಷೆ ನಡೆಸುವ ಸಂದರ್ಭದಲ್ಲಿ ಹಿಂದೆಂದೂ ಶಾಲೆಗೆ ಸೇರದೆ ಇರುವ (ನೆವೆರ್ ಎನ್ರೋಲ್ಡ್) ೬ ರಿಂದ ೧೬ ವಯೋಮಾನದ ಮಕ್ಕಳಿದ್ದರೆ ಅವರ ಬಗ್ಗೆ ಮಾಹಿತಿ ಸಂಗ್ರಹಿಸುವುದು, ಶಾಲೆಗೆ ಸೇರದ/ಶಾಲೆ ಬಿಟ್ಟ ಮಕ್ಕಳ ಸಾಮಾಜಿಕ ಹಿನ್ನಲೆಯ ಬಗ್ಗೆ ತಿಳಿಯುವುದು, ಮಕ್ಕಳು ಶಾಲೆ ಬಿಟ್ಟಿರುವುದಕ್ಕೆ ಇರುವ ಕಾರಣಗಳು ತಿಳಿದುಕೊಳ್ಳುವುದು, ಸಮೀಕ್ಷೆಯಲ್ಲಿ ದೊರಕುವ ಅಂಕಿ-ಅಂಶಗಳೊಂದಿಗೆ ಹೋಲಿಸಿ ವಿಶ್ಲೇಷಿಸುವುದು, ಶಾಲೆಯಿಂದ ಹಿಡಿದು ಕ್ಲಸ್ಟರ್/ಬ್ಲಾಕ್/ಜಿಲ್ಲಾವಾರು ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷಾ ವರದಿ ಸಿದ್ದಪಡಿಸುವುದು, ಇದರ ಆಧಾರದ ಮೇಲೆ ಶಾಲೆಯಿಂದ ಹೊರಗಿರುವ ಮಕ್ಕಳನ್ನು ಶಾಲಾ ಮುಖ್ಯವಾಹಿನಿಗೆ ತರಲು ನವೀನ ರೀತಿಯ ಸಮಗ್ರ ಕ್ರಿಯಾ ಯೋಜನೆಯನ್ನು ತಯಾರಿಸುವುದು.
ನಗರ ಪ್ರದೇಶಗಳಲ್ಲಿ : ಕೊಳಗೇರಿ, ಸಂರ್ಕೀಣ ಕಟ್ಟಡಗಳು ನಿರ್ಮಾಣಗೊಳ್ಳುತ್ತಿರುವ ಪ್ರದೇಶಗಳು, ಬಸ್ ಮತ್ತು ರೈಲ್ವೆ ನಿಲ್ದಾಣಗಳು, ಹೋಟೆಲ್ ಮತ್ತು ಇದೇ ರೀತಿಯ ವ್ಯವಸ್ಥೆಯ ಸ್ಥಳಗಳು, ಗಣಿಗಾರಿಕೆ ಮತ್ತು ಬಂಡೆಗಾರಿಕೆ ಪ್ರದೇಶಗಳು, ಹೆದ್ದಾರಿ ಅಕ್ಕ ಪಕ್ಕದ ಪ್ರದೇಶಗಳು.
ಗ್ರಾಮಾಂತರ ಪ್ರದೇಶದಲ್ಲಿ : ಕಾಡು ಪ್ರದೇಶ (ವಿಶೇಷವಾಗಿ ಉಡ್ಡಗಾಡು/ಬುಡಕಟ್ಟು ಜನಾಂಗಗಳಿರುವ), ಕುಗ್ರಾಮಗಳು, ಪ್ರವಾಹಪೀಡಿತ, ಬರಪೀಡಿತ ಪ್ರದೇಶಗಳು, ವಲಸೆ ಕುಟುಂಬಗಳಿರುವ ಸ್ಥಳಗಳು, ನೀರಾವರಿ, ತೋಟಗಾರಿಕೆ ಪ್ರದೇಶಗಳು ವಲ್ನರಬಲ್ ಪ್ರದೇಶಗಳೆಂದು ಗುರುತಿಸಲಾಗಿದೆ. 
ನ. ೧೭ ರವರೆಗೆ ನಡೆಯುವ ಶಾಲೆಯಿಂದ ಹೊರಗುಳಿದ ಮಕ್ಕಳ ಈ ಸಮೀಕ್ಷೆಯು ಅತ್ಯಂತ ಪ್ರಾಮುಖ್ಯತೆ ಹೊಂದಿದ್ದು, ಅತ್ಯಂತ ಕಾಳಜಿಯಿಂದ ಯಾವುದೇ ಲೋಪ-ದೋಷವಾಗದಂತೆ, ಎಚ್ಚರಿಕೆ ವಹಿಸಿ ನೈಜ ಮಾಹಿತಿಯನ್ನು ಪಡೆಯಬೇಕಾಗಿದೆ. ಆದ್ದರಿಂದ ಸಮೀಕ್ಷೆಯಲ್ಲಿ ಪ್ರಾಥಮಿಕ ಶಾಲಾ ಇಬ್ಬರು ಶಿಕ್ಷಕರು, ಅಂಗನವಾಡಿ/ಆರೋಗ್ಯ ಕಾರ್ಯಕರ್ತೆಯರು ಹಾಗೂ ವಿವಿಧ ಸರ್ಕಾರೇತರ ಸಂಘ-ಸಂಸ್ಥೆಯ ಒಬ್ಬ ಪ್ರತಿನಿಧಿಗಳನ್ನೊಳಗೊಂಡ ನಾಲ್ಕು ಸದಸ್ಯರ ತಂಡ ತಮ್ಮ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಎಲ್ಲಾ ರೀತಿಯ ಸಹಕಾರದೊಂದಿಗೆ ನೈಜ ಮಾಹಿತಿಯನ್ನು ನೀಡಿ, ಸಮೀಕ್ಷಾ ಕಾರ್ಯ ಯಶಸ್ವಿಗೊಳಿಸುವಂತೆ ಮನವಿ ಮಾಡಲಾಗಿದೆ. 

Advertisement

0 comments:

Post a Comment

 
Top