PLEASE LOGIN TO KANNADANET.COM FOR REGULAR NEWS-UPDATES



ಗ್ರಾಮ ಪಂಚಾಯತಿಗಳಲ್ಲಿ ನಡೆಸಲಾಗುವ ಜಮಾಬಂದಿ ಕಾರ್ಯಕ್ರಮವನ್ನು ಕಡ್ಡಾಯವಾಗಿ ವಿಡಿಯೋ ಚಿತ್ರೀಕರಣ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯಾಗಿರುವ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ (ವೈದ್ಯಕೀಯ ಶಿಕ್ಷಣ) ಇಲಾಖೆ ಕಾರ್ಯದರ್ಶಿ ವಿ. ರಶ್ಮಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
  ಕೊಪ್ಪಳ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಲಾಗಿದ್ದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರ ಮಾತನಾಡಿದರು.
  ಗ್ರಾಮ ಪಂಚಾಯತಿಗಳಲ್ಲಿ ಜಮಾಬಂದಿ ನಡೆಸಲು ತಾಲೂಕು ಮಟ್ಟದ ಅಧಿಕಾರಿಗಳನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗಿದೆ.  ಆದರೆ ಜಿಲ್ಲೆಯ ೧೩೪ ಗ್ರಾಮ ಪಂಚಾಯತಿಗಳ ಪೈಕಿ ಇದುವರೆಗೂ ೯೯ ಗ್ರಾಮ ಪಂಚಾಯತಿಗಳಲ್ಲಿ ಮಾತ್ರ ಜಮಾಬಂದಿ ಮಾಡಲಾಗಿದೆ.  ಜಮಾಬಂದಿ ಕಾರ್ಯದ ವಿಡಿಯೋ ಚಿತ್ರೀಕರಣ ಮಾಡುವುದು ಕಡ್ಡಾಯವಾಗಿದ್ದು, ಈ ಕುರಿತಂತೆ ಈಗಾಗಲೆ ಸುತ್ತೋಲೆ ಹೊರಡಿಸಲಾಗಿದೆ.  ಅಕ್ಟೋಬರ್ ಮಾಸಾಂತ್ಯದ ವೇಳೆಗೆ ಜಿಲ್ಲೆಯ ಎಲ್ಲ ೧೩೪ ಗ್ರಾಮ ಪಂಚಾಯತಿಗಳಲ್ಲೂ ಜಮಾಬಂದಿ ಕಾರ್ಯ ಪೂರ್ಣಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು.  ಗ್ರಾಮ ಪಂಚಾಯತಿಗಳು ಇದುವರೆಗೂ ತೆರಿಗೆ ದರಗಳನ್ನು ಪರಿಷ್ಕರಿಸಿಲ್ಲ.  ಕರ ವಸೂಲಿ ನಿಗದಿತ ಪ್ರಮಾಣದಲ್ಲಿ ಆಗುತ್ತಿಲ್ಲ.  ಶೌಚಾಲಯ ನಿರ್ಮಾಣದ ಗುರಿಯನ್ನು ಸಾಧಿಸಿಲ್ಲ.  ಇದೇ ರೀತಿಯ ಕಾರ್ಯ ವೈಖರಿ ಮುಂದುವರೆಯುವುದು ಸಮಂಜಸವಲ್ಲ.  ಈ ನಿಟ್ಟಿನಲ್ಲಿ ಕೂಡಲೆ ಸೂಕ್ತ ಕ್ರಮ ಕೈಗೊಳ್ಳಬೇಕು  ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ ಅವರಿಗೆ ಕಾರ್ಯದರ್ಶಿ ವಿ. ರಶ್ಮಿ ಅವರು ಸೂಚನೆ ನೀಡಿದರು.
ವಸತಿ ಯೋಜನೆಗಳನ್ನು ತ್ವರಿತಗೊಳಿಸಿ : ಬಡವರಿಗೆ ಸೂರು ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಾರಿಗೊಳಿಸಿರುವ ಅಂಬೇಡ್ಕರ್, ಬಸವ ವಸತಿ, ನಗರ ಆಶ್ರಯ, ವಾಜಪೇಯಿ ವಸತಿ, ಇಂದಿರಾ ಆವಾಸ್ ಸೇರಿದಂತೆ ವಿವಿಧ ವಸತಿ ಯೋಜನೆಗಳ ಅನುಷ್ಠಾನ ಬಹಳಷ್ಟು ವಿಳಂಬವಾಗುತ್ತಿದೆ.  ಗಂಗಾವತಿ ತಾಲೂಕಿನಲ್ಲಿ ಬಸವ ವಸತಿ ಯೋಜನೆಯಡಿ ೪೮೯೩ ಮನೆಗಳ ಪೈಕಿ ೨೭೦೮ ಪೂರ್ಣಗೊಂಡಿವೆ.  ಇಂದಿರಾ ಆವಾಸ್ ಯೋಜನೆಯಡಿ ೨೦೦೯ ರಿಂದ ಈವರೆಗೆ ೧೦೦೧೯ ಮನೆಗಳ ಪೈಕಿ ೭೪೯೩ ಮನೆ ಪೂರ್ಣಗೊಂಡಿವೆ.  ಕೊಪ್ಪಳ ತಾಲೂಕಿನಲ್ಲಿ ಬಸವ ವಸತಿ ಯೋಜನೆಯಲ್ಲಿ ೫೧೧೫ ರ ಪೈಕಿ ೧೬೪೦.  ಇಂದಿರಾ ಆವಾಸ್‌ನಡಿ ೯೭೭೨ ಪೈಕಿ ೬೬೫೦. ಕುಷ್ಟಗಿಯಲ್ಲಿ ಬಸವ ವಸತಿ ಯೋಜನೆಯಡಿ ೩೧೮೩ ರ ಪೈಕಿ ೧೦೭೪. ಇಂದಿರಾ ಆವಾಸ್‌ನಡಿ ೯೦೩೧ ರ ಪೈಕಿ ೫೩೮೫ ಮನೆ ಪೂರ್ಣಗೊಂಡಿವೆ.  ಯಲಬುರ್ಗಾ ತಾಲೂಕಿನಲ್ಲಿ ಬಸವ ವಸತಿ ಯೋಜನೆಯಡಿ ೩೧೮೭ ರ ಪೈಕಿ ೧೩೩೦.  ಇಂದಿರಾ ಆವಾಸ್‌ನಡಿ ೯೦೯೭ ರ ಪೈಕಿ ೬೨೦೦ಮನೆಗಳು ಪೂರ್ಣಗೊಂಡಿವೆ.  ಈ ವಿಳಂಬವನ್ನು ತಪ್ಪಿಸಿ, ತ್ವರಿತ ಗತಿಯಲ್ಲಿ ವಸತಿ ಯೋಜನೆಗಳನ್ನು ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಕಾರ್ಯದರ್ಶಿಗಳು ಸೂಚನೆ ನೀಡಿದರು.
ಕಳಪೆ ಬಿತ್ತನೆ ಬೀಜ ಪ್ರಕರಣ : ಜಿಲ್ಲೆಯಲ್ಲಿ ಕೆಲವೆಡೆ ಕಳಪೆ ಬಿತ್ತನೆ ಬೀಜ ಪೂರೈಕೆಯಿಂದ ರೈತರಿಗೆ ತೊಂದರೆಯಾಗಿರುವ ಬಗ್ಗೆ ವರದಿ ಬಂದಿದ್ದು, ಈ ಕುರಿತಂತೆ ಕೈಗೊಂಡ ಕ್ರಮದ ಬಗ್ಗೆ ವಿವರಣೆ ನೀಡುವಂತೆ ಕಾರ್ಯದರ್ಶಿಗಳು ಸೂಚಿಸಿದ್ದಕ್ಕೆ, ಉತ್ತರಿಸಿದ ಜಂಟಿಕೃಷಿ ನಿರ್ದೇಶಕ ಪದ್ಮಯ್ಯ ನಾಯಕ್ ಅವರು, ಜಿಲ್ಲೆಯ ಕಾಂಚನಗಂಗಾ, ಗಂಗಾ ಕಾವೇರಿ ಮತ್ತು ಶಕ್ತಿ ಸೀಡ್ಸ್ ಕಂಪನಿಗಳು ವಿತರಿಸಿದ ಮುಸುಕಿನ ಜೋಳ ಬಿತ್ತನೆ ಬೀಜದ ಮೊಳಕೆ ಪ್ರಮಾಣ ಕಡಿಮೆ ಇರುವ ಬಗ್ಗೆ ಕಂಡುಬಂದಿದ್ದು, ಈ ಕಂಪನಿಗಳ ಒಟ್ಟು ೩೪. ೨೫ ಕ್ವಿಂಟಾಲ್‌ನಷ್ಟು ಕಳಪೆ ಬಿತ್ತನೆ ಬೀಜ ಮಾರಾಟವಾಗಿತ್ತು.  ಈ ಕುರಿತಂತೆ ಕಂಪನಿಗಳ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಾಗಿದೆ.  ನಷ್ಟ ಅನುಭವಿಸಿದ ೧೫೩ ರೈತರಿಗೆ ಪರಿಹಾರ ನೀಡಲು ಕಂಪನಿಗಳು ಒಪ್ಪಿಗೆ ಸೂಚಿಸಿವೆ.  ಈ ರೀತಿಯ ಪ್ರಕರಣ ಮರುಕಳಿಸಿದಲ್ಲಿ, ನಿಯಮಗಳಂತೆ ಅಂತಹ ಕಂಪನಿಗಳು ಕಪ್ಪುಪಟ್ಟಿಗೆ ಸೇರ್ಪಡೆಯಾಗುತ್ತವೆ ಎಂದು ವಿವರಣೆ ನೀಡಿದರು.
ಮಹಿಳಾ ಕೇಂದ್ರಿತ ಯೋಜನೆಗಳಿಗೆ ಆದ್ಯತೆ ನೀಡಿ : ೪೦ ವರ್ಷ ಮೇಲ್ಪಟ್ಟ ವಿಧವೆ ಮತ್ತು ಬಡತನ ರೇಖೆಗಿಂತ ಕೆಳಗಿರುವ ವಿವಾಹ ವಿಚ್ಛೇದಿತ ಮಹಿಳೆಯರಿಗೆ ಮಾಸಿಕ ೫೦೦ ರೂ. ಗಳ ಮಾಸಾಶನ ನೀಡುವಂತಹ ’ಮನಸ್ವಿನಿ’ ಯೋಜನೆ, ಅಲ್ಲದೆ ಲಿಂಗ ಅಲ್ಪಸಂಖ್ಯಾತರಿಗೆ ಮಾಸಿಕ ೫೦೦ ರೂ. ಗಳ ಮಾಸಾಶನ ನೀಡುವಂತಹ ’ಮೈತ್ರಿ’ ಯೋಜನೆಯನ್ನು ಸರ್ಕಾರ ಜಾರಿಗೊಳಿಸಿದೆ.  ಈ ರೀತಿಯ ಮಹಿಳಾ ಕೇಂದ್ರಿತ ಸರ್ಕಾರದ ಯೋಜನೆಗಳ ಬಗ್ಗೆ ಗ್ರಾಮಸ್ಥರಲ್ಲಿ ಅರಿವು ಮೂಡಿಸಲು ಹಾಗೂ ಅರ್ಹ ಫಲಾನುಭವಿಗಳಿಗೆ ಯೋಜನೆ ಸವಲತ್ತು ದೊರಕಿಸಲು ಎಲ್ಲ ಗ್ರಾಮ ಪಂಚಾಯತಿಗಳು ಶ್ರಮಿಸುವ ಅಗತ್ಯವಿದೆ.  ಯೋಜನೆಗಳ ಬಗ್ಗೆ ಗ್ರಾಮ ಪಂಚಾಯತಿಗಳಲ್ಲಿ ಮಾಹಿತಿ ಫಲಕವನ್ನು ಹಾಕಿಸಬೇಕು.  ಅದೇ ರೀತಿ ಎಲ್ಲ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಯಶಸ್ವಿನಿ, ವಾಜಪೇಯಿ ಆರೋಗ್ಯ ಶ್ರೀ ಮುಂತಾದ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿತ ಯೋಜನೆಗಳ ಬಗ್ಗೆ ಫಲಕಗಳನ್ನು ಹಾಕಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. 
  ಸಭೆಯಲ್ಲಿ ಜಿಲ್ಲಾಧಿಕಾರಿ ಕೆ.ಪಿ. ಮೋಹನ್ ರಾಜ್, ಅಪರ ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ್, ಜಿ.ಪಂ. ಉಪಕಾರ್ಯದರ್ಶಿ ರವಿ ಬಸರಿಹಳ್ಳಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲೂಕುಗಳ ತಹಸಿಲ್ದಾರರು, ತಾ.ಪಂ. ಕಾರ್ಯ ನಿರ್ವಾಹಕ ಅಧಿಕಾರಿಗಳು, ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಭಾಗವಹಿಸಿದ್ದರು. 

Advertisement

0 comments:

Post a Comment

 
Top