PLEASE LOGIN TO KANNADANET.COM FOR REGULAR NEWS-UPDATES

ಛಟಾರನೇ ಏಟು ಬಿದ್ದಾಗ ಈಡೀ ಶಾಲೆಯಲ್ಲಿ ಇದೊಂದೇ ಶಬ್ದ ಕೇಳಿ ಬಂತು. ಉಳಿದ ಕೋಲಿಯ ಹುಡುಗರೂ, ಮಾಸ್ತರರೂ ಬೆಚ್ಚಿ ಬಿದ್ರು. ಮಗ್ಗುಲ ಕೋಲಿಯ ಮಾಸ್ತರರು ಕೂಡ ಒಮ್ಮೆ ಏನಾತು? ಅಂತ ಹಣಿಕಿಹಾಕಿ ನೋಡಿ ಸುಮ್ಮನೆ ಹೋದ್ರು. ಶಾಂತಯ್ಯ ಮಾಸ್ತರರ ಉಗ್ರಾವತಾರ ಅವರೆಲ್ರಿಗೂ ಹೊಸ್ತೇನಲ್ಲ. ಆದರೆ ಈ ಬಾರಿ ಮತ್ತೆ ಹೊಡ್ತ ಬಿದ್ದಿದ್ದ್ದು ಅದೇ ಪರಮ ಉಡಾಳ, ಶತದಡ್ಡ ಮಹಾದೇವಯ್ಯ ಅಥವಾ ಊರವರೆಲ್ಲರಿಂದ ಬೈಸಿಕೊಳ್ಳೊ 'ಮಾದೇವ'. 'ಎದಿ ಸೀಳಿದ್ರ ಎರಡಕ್ಷರ ಬಾರ್ದ ದಡ್ಡ ಬಡ್ಡಿ ಮಗ, ದೇವ್ರಾಣಿ, ಇಂವ ತನ್ನ ಹೆಸ್ರು ತಪ್ಪಿಲ್ದ ತಾನ ಬರದ್ನಂದ್ರ ಅವತ್ತ ನನ್ನ ಸಾವೈತಿ, ದಡ್ಡ ಮುಂಡಿಮಗ್ಗ' ಎಂದು ಭುಸುಗುಡ್ತ ಛಡಿ ಏಟನ್ನು ಬೀಸಿದವ್ರು ಶಾಂತಯ್ಯ ಮಾಷ್ಟ್ರು. 
ಶಾಂತಯ್ಯ: ಶಾಂತಯ್ಯ ಕಳೆದ ೩೨ ವರ್ಷಗಳಿಂದ ಹೊಳೆನೂರ ಸರಕಾರಿ ಶಾಲೆಯಲ್ಲಿ ಕೆಲ್ಸ ಮಾಡ್ತಿರೋ ಇನ್ನೂ ಕೇವಲ ೦೬ ತಿಂಗಳು ಸರ್ವೀಸು ಬಾಕಿ ಇರೋ ಶಿಸ್ತಿನ, ಶಿಸ್ತಿಗಿಂತ ಒಂದು ಪಟ್ಟು ಹೆಚ್ಚೇ ಸಿಟ್ಟಿನ ಮೇಷ್ಟ್ರು. ಮದ್ವಿಗಿದ್ವಿ ಯಾವ್ದೂ ಆಗಿಲ್ಲ. ಸಾಲಿಮಕ್ಕಳಿಗೆ ಚೊಲೋ ಕಲಿಸ್ಬೇಕು ಹಾಗೂ ಮಕ್ಳನ್ನ ಸತ್ಯವಂತರನ್ನಾಗಿ ಮಾಡ್ಬೇಕು ಅನ್ನೋದು ಬಿಟ್ರೆ ಬೇರೆ ಯಾವ ವಿಶೇಷ ಅಭಿರುಚಿಗಳಿರದ ಮನುಷ್ಯಮಾತ್ರ. ಸರ್ಕಾರಿ ಸಂಬಳದಾಗ ಬೇಕಾದಷ್ಟು ಮಾತ್ರ ಖರ್ಚು ಮಾಡಿ ಉಳಿದದ್ದೆಲ್ಲ ಸಾಲೀಗೇ ಖರ್ಚು ಮಾಡೋದೇ ಇವ್ರಿಗೆ ಖುಷಿಕೊಡೋ ವಿಷ್ಯ. ಹೆಸರಿಗೆ ತದ್ವಿರುದ್ಧವಾದ ವ್ಯಕ್ತಿತ್ವ. ಹುಂಭ, ಮೊಂಡ.  ಒಟ್ಟಿನ್ಯಾಗ ಹಪಹಪಿ ಇಲ್ದೇಇರೋ ಸೀದಾ ಸಾದಾ ಮನುಷ್ಯ, ಸಿಟ್ಟೊಂದನ್ನ ಬಿಟ್ಟು. ಅಚ್ಚುಕಟ್ಟಾಗಿ ಶಾಲೆಯನ್ನು ನೋಡಿಕೊಂಡು ಹೋಗುತ್ತಿದ್ದರಿಂದ, ಸುತ್ತಮುತ್ತಲ ಊರಿನ ಶಾಲೆಗೆ ಪದೇ ಪದೇ ವರ್ಗವಾಗುತ್ತಿದ್ದರೂ ಊರ ಜನ, ಪಂಚಾಯ್ತಿ ಮೆಂಬರುಗಳು, ರಾಜಕಾರಣಿಗಳನ್ನು ಓಲೈಸಿ ಮತ್ತೆ ತಮ್ಮೂರಿಗೆ ವರ್ಗ ಮಾಡಿಸಿಕೊಂಡು ಬಂದುಬಿಡೋರು. ಊರ ಜೊತೆಗಿನ ಒಡನಾಟ ಅವ್ರೂನ್ನೂ ಊರು ಬಿಟ್ಟು ಹೋಗುವಂತೆ ಮಾಡುತ್ತಿರಲಿಲ್ಲ. ಸಂಬಳದ ಬಹುಭಾಗವನ್ನು ಶಾಲೆಗೆ ವಿನಿಯೋಗಿಸುತ್ತಿದ್ದರಿಂದ ಊರವರೇ ಶಾಂತಯ್ಯನವರಿಗೆ ಬಾಡಿಗೆ ಮನೆಯಲ್ಲಿರುವದಕ್ಕೆ ಬೈದು, ಶಾಲೆಯ ಪಕ್ಕದಲ್ಲೇ ಚಿಕ್ಕ ಮನೆಯೊಂದನ್ನು ಕಟ್ಟಿಕೊಳ್ಳಲು ಪ್ರೇರೆಪಿಸಿ ಯಶಸ್ವಿಯಾಗಿದ್ದರು. ಅಲ್ಲೇ ಶಾಂತಯ್ಯರ ವಾಸ. ತಮ್ಮ ಅಡುಗಿ ತಾವೇ ಮಾಡಿಕೊಂಡು ತಮ್ಮ ಪಾಡಿಗೆ ತಾವು ಮತ್ತು ಶಾಲೆ ಎಂಬಂತಿರ್ತಿದ್ರು. ಇತ್ತೀಚೀಗೆ ಮಾತ್ರ ಸಣ್ಣಗ ಸಕ್ಕರೆ ಖಾಯಿಲೆಯೊಂದು ಅವ್ರಿಗೆ ಜೋಡಾಗಿತ್ತು.     
ಮಾದೇವ: ಇಂವ ತಂದೆ ತಾಯಿ ಇಲ್ಲದ ಆದ್ರೆ ಅಜ್ಜಿಯೊಂದಿಗೆ ಅವಳ ದೇಖರೇಕಿ ನೋಡಿಕೊಂಡಿರುವ ಶಾಂತಯ್ಯ ಮೇಷ್ಟ್ರ ಶಾಲೆಗೆ ದಿನ ತಪ್ಪಿಸಿ ದಿನ, ಕೆಲವೊಮ್ಮೆ ಮಾತ್ರ ದಿನಾಲೂ ಹೋಗೋ, ಶಾಂತಯ್ಯರ ಸಿಟ್ಟಿಗೆ ಪದೇ ಪದೇ ಆಹುತಿಯಾಗೋ, ಊರವ್ರನ್ನೆಲ್ಲ ಗೋಳು ಹೊಯ್ದುಕೊಳ್ಳೋ ಸುಳ್ಳು ಹೇಳಿ ಸಿಕ್ಕಿ ಹಾಕ್ಕೊಂಡಾಗ ಒದಿ ತಿನ್ನೋ, ಬರೀ ತನ್ನಜ್ಜಿ ಮಾತು ಮಾತ್ರ ಕೇಳೋ ಪರಮ ಒರಟ. ೮ನೇ ಇಯತ್ತೆಗೆ ಕುಂಟುತ್ತಾ ಕುಂಟುತ್ತಾ ಸಾಗಿ ಬಂದ ಹುಡುಗ. ಸರಿಯಾಗಿ ಪಾಸಾಗಿದ್ದಲ್ಲಿ ಪಿಯುಸಿ ಇರಬೇಕಾಗಿತ್ತೇನೋ?. ಇವನ ರಗಳೆ, ತಂಟೆಗಳಿಗೆ ಶಾಂತಯ್ಯನವರ ದೂರ್ವಾಸಾವತಾರವೂ ಯಾವ ಪರಿಣಾಮವನ್ನುಂಟುಮಾಡಿದ್ದಿಲ್ಲ!. ತಿಂಗಳುಗಟ್ಟಲೇ ಶಿಕ್ಷೆ ರೂಪದಲ್ಲಿ ಶಾಲೆಯಿಂದ ಹೊರಹಾಕಿದ್ರೂ ಮಾದೇವನ ಅಜ್ಜಿಯ ಪರಿಪರಿ ವಿನಂತಿಯೆಂಬ ಕಾಟಕ್ಕೆ ಶಾಂತಯ್ಯನವರಿಗೆ ಅವನನ್ನ ಮತ್ತೆ ಶಾಲೆಗೆ ಸೇರಿಸಿಕೊಳ್ಳುವುದು ಸಾಮಾನ್ಯವಾಗಿ ಹೋಗಿತ್ತು.
ಹೊಳೇನೂರು: ಸಣ್ಣ ಹಳ್ಳಿ. ಕೃಷಿಯೇ ಬಹುಜನರ ಜೀವನಾದಾಯದ ಮೂಲ. ಬಹುಪಾಲು ಹೊಲಗದ್ದೆಗಳು ಊರ ಗೌಡ್ರವೇ. ಎಲ್ರೂ ಸಾಮರಸ್ಯದಿಂದಿರೋ ಚಿಕ್ಕ, ಚೊಕ್ಕ ಊರು. ಊರಿಗೊಂದು ಶಾಲೆ, ಆಸ್ಪತ್ರೆಗೆ ಹತ್ತಿರದ ಪಡಗಾನೂರೇ ಗತಿ. ದಿನಕ್ಕೆರಡು ಬಸ್ಸುಗಳು ಪಡಗಾನೂರಿನಿಂದ ಬಂದು ಹೋಗುತ್ತಿದ್ದವು.  
ಊರ ಗೌಡ್ರು: ಸುತ್ತು ೭ ಹಳ್ಳ್ಯಾಗ ಶಿವನಗೌಡ್ರಷ್ಟು ಒಳ್ಳೇ ಫಲವತ್ತಾದ ಭೂಮಿ ಯಾರದ್ದೂ ಇಲ್ಲ. ಆದ್ರೆ ಏನ್ಮಾಡೋದು?, ಭೂಮಿ ಮಾತ್ರ ಒಳ್ಳೇದು, ಮನುಷ್ಯ ಭೂಮಿಯಷ್ಟು ಒಳ್ಳೇದಾಗಕಾಗುತ್ತಾ?. ಊರಲ್ಲಿ ತನಗೆ ಸಿಕ್ಕಷ್ಟು ಗೌರವ ಬೇರಾರಿಗೂ ಸಿಕ್ಕರೆ ಗೌಡ್ರಿಗಾಗಕ್ಕಿಲ್ಲ. ಆದ್ರೆ ಮಕ್ಕಳ ವಿಷ್ಯದಲ್ಲಿ ಪುಣ್ಯವಂತ. ಇಬ್ಬರೂ ಮಕ್ಕಳು ಫಾರಿನ್ನಿನಲ್ಲಿ ಕೆಲ್ಸ ಮಾಡ್ತಿದಾರೆ. ಮನೇಲಿರೋದು ತಾವು ಮತ್ತು ಗೌಡಸಾನಿ. ಮಕ್ಳು ವರ್ಷಕ್ಕೊಮ್ಮೆ ಮಾತ್ರ ಬಂದು ಹೋಗ್ತಾರೆ. ಶಾಂತಯ್ಯ ಮೇಷ್ಟ್ರ ಮೇಲೆ ವಿನಾ ಕಾರಣದ ಸಿಟ್ಟು, ಯಾಕಂದ್ರೆ ಊರ ಜನ ತನಗಿಂತ ಒಂದು ಕೈ ಮೇಲೆ ಶಾಂತಯ್ಯರನ್ನು ಗೌರವಿಸ್ತಾರೆ, ಆದರಿಸ್ತಾರೆ ಅಂತ. ಆದ್ದರಿಂದ ಶಾಂತಯ್ಯರೊಟ್ಟಿಗೆ ಮಾತಿಲ್ಲ. ವಿನಾ ಕಾರಣ ಚಿಕ್ಕ ಪುಟ್ಟ ಒಳಜಗಳ ಮತ್ತು ಹೊರಜಗಳ. ಬಾಕಿ ವಿಷಯದಾಗ ಗೌಡ್ರು ನಿರ್ಲಿಪ್ತ.   
ಊರಲ್ಲಿ ಗಣೇಶನ ಹಬ್ಬದ ದಿನ ಸಂಜೆ: ಆ ದಿನ ಶಾಂತಯ್ಯನವರು ತಮ್ಮ ಹಳೆ ಶಿಷ್ಯಂದಿರ ಒತ್ತಾಯಕ್ಕೆ ಮಣಿದು ಅವರ ಮನೆಯಲ್ಲಿ ಹಬ್ಬದ ಸಿಹಿಯೂಟ ಮಾಡಿದ್ದರು. ತಮ್ಮ ಸಕ್ಕರೆ ಖಾಯಿಲೆಗೆ ಸೇವಿಸುತ್ತಿದ್ದ ಮಾತ್ರೆಗಳು ತೀರಿ ೩ ದಿನ ವಾಗಿದ್ದರೂ ಹೋಗಿ ತರುವುದಕ್ಕೆ ಅಥವಾ ಯಾರಿಂದಲೋ ತರಿಸಲು ನೆನಪಾಗಿದ್ದಿಲ್ಲ. ಮೊದಲಾದ್ರೆ ಊರಲ್ಲಿರೋ ಡಾಕ್ಟರಜ್ಜ ಪಡಗಾನೂರಿಂದ ಯಾವಾಗ್ಲೂ ಮಾತ್ರೆ ತಂದುಕೋಡೋನು, ಆದ್ರೆ ಅತೀಯಾದ ಕುಡ್ತ ಅವ್ರನ್ನ ಬಲಿ ತಗೊಂಬಿಡ್ತು. ಊರಲ್ಲಿ ಬೇರೆ ಯಾವ ಡಾಕ್ಟರೂ ಇರ್ಲಿಲ್ಲ. ಅದಾದಮೇಲೆ ತಾವೇ ಹೋಗಿ ಮಾತ್ರೆ ಔಷಧ ತರೋದಾಯ್ತು. ಆ ಸಂಜೆ ೫ರ ಕೊನೆ ಬಸ್ಸಿಗೆ ಹೋಗಿ ತರೋಣ ಎಂದುಕೊಂಡಿದ್ದರೂ ಯಾಕೋ ಸುಸ್ತೆನಿಸಿ ನಾಳೆ ತಂದರಾಯಿತು ಎಂದುಕೊಂಡು ಸುಮ್ಮನಾಗಿದ್ದರು. ಊರಿಗೆ ಊರೇ ಹಬ್ಬದ ಸಡಗರದಲ್ಲಿತ್ತು. ಹತ್ತಿರದ ಕೆರೆಗೆ ಎಲ್ಲರೂ ಗಣಪ್ಪನನ್ನು ವಿಸರ್ಜನೆ ಮಾಡುವಲ್ಲಿ ತೊಡಗಿಸಿಕೊಂಡಿದ್ದರು. ಶಾಂತಯ್ಯನವರ ಸ್ಥಿತಿ ಬಿಗಡಾಯಿಸಲು ಪ್ರಾರಂಭಿಸಿತು. ದೇಹದಲ್ಲಿ ಸಕ್ಕರೆ ಅಂಶ ಹೆಚ್ಚಿದ್ದರಿಂದ ಅತೀವ ಸುಸ್ತಿನಿಂದ ಬೆವೆಯತೊಡಗಿದರು. ಯಾರನ್ನಾದರೂ ಕರೆಯೋಣವೆಂದರೆ ಊರಿಂದ ಇವರ ಶಾಲೆ ಮತ್ತು ಮನೆ ತುಸು ದೂರವೇ ಇದ್ದರಿಂದ ಅಂದು ಅಷ್ಟೊತ್ತಿನವರೆಗೂ  ಯಾರೂ ಅತ್ತಕಡೆ ಸುಳಿಯಲಿಲ್ಲ. ಯಾಕೋ ಎದೆಯ ಬಡಿತ ಹೆಚ್ಚುತ್ತಾ, ಬೆವರು ಅತೀಯಾಗ್ತಾ ಹೋತು. ಅಲ್ಲೇ ತಮ್ಮ ಕೋಲಿಯ ಹತ್ತಿರ ಮಂಚಕ್ಕೆ ಎರಗಿಕೊಂಡರು. ಅಷ್ಟರಲ್ಲಿ ಮಾದೇವ ತನ್ನಜ್ಜಿಯ ಎಮ್ಮೆಗಳನ್ನು ಶಾಲೆ ಆವರಣದಿಂದ ಮನೆ ಕಡೆಗೆ ಹೊಡೆದುಕೊಂಡು ಹೊರಟಿದ್ದ. ಶಾಂತಯ್ಯರ ಕಣ್ಣಿಗೆ ಬಿದ್ದರೆ ಮತ್ತೆ ಬೈಸಿಕೊಳ್ಳಬಹುದೆಂಬ ಭಯದಿಂದ ಅವಸರ ಅವಸರವಾಗಿ ಅವರ ಮನೆ ದಾಟುತ್ತಿದ್ದ. ಅಷ್ಟರಲ್ಲಿ ಶಾಂತಯ್ಯ ನರಳುತ್ತಿದ್ದದ್ದು ಕೇಳಿ ಎಮ್ಮೆಗಳನ್ನು ಅಲ್ಲೇ ಹತ್ತಿರದ ಮರಕ್ಕೆ ಕಟ್ಟಿಹಾಕಿ ಓಡೋಡಿ ಬಂದ. ಶಾಂತಯ್ಯನವರು ಪೂರ್ತಿಯಾಗಿ ಬೆವರಿನಿಂದ ತೋದು ಹೋಗಿದ್ರು. ಮಾತು ಬರದಾಗಿದ್ವು. ಕೂಡಲೇ ಆಸ್ಪತ್ರೆಗೆ ಕರೆದೊಯ್ಯಬೇಕಾಗಿತ್ತು. ಮಾದೇವ ತಡಮಾಡಲಿಲ್ಲ. ಊರಲ್ಲಿರೋ ಡಾಕ್ಟರಜ್ಜ ತೀರಿ ೦೧ ವಾರ ಆಗಿತ್ತು. ಬೇರೆ ಡಾಕ್ಟರು ಬೇರೆ ಇರಲಿಲ್ಲ. ಪಡಗಾನೂರಿಗೆ ಊರಲ್ಲಿ ಮೋಟಾರುಗಾಡಿ ಅಂತ ಇರೋದು ಗೌಡ್ರ ಹತ್ರ. ಆದ್ರೆ ಅವರು ಶಾಂತಯ್ಯರ ವಿಷ್ಯಕ್ಕೆ ಕೇಳಿದ್ರೆ ಸುತಾರಾಂ ಕೊಡಲ್ಲ. ಆದ್ರೆ ಅದೇ ಮೋಟಾರುಗಾಡಿಯಲ್ಲಿ ಶಾಂತಯ್ಯನವರನ್ನು ಪಡಗಾನೂರ ಆಸ್ಪತ್ರೆಗೆ ಕರೆದುಕೊಂಡು ಹೋಗೋದೇ ಸೂಕ್ತ ಎನಿಸಿ ಏನಾರ ಆಗ್ಲಿ ಗೌಡ್ರನ್ನ ಕೇಳೇ ಬಿಡಾಣ ಎಂದು ಮನಸ್ನ್ಯಾಗ ವಿಚಾರ ಮಾಡಿ ಗೌಡ್ರ ಮನೆಗೆ ಒಡೋಡಿ ಬಂದ. ಆದ್ರೆ ಗೌಡರು ಗೌಡಸಾನಿ ಜೊತೆ ಬಳಗದವರ ಮನಿಗೆ ಹಕ್ಕೆ ಬೇರೆ ಊರಿಗೆ ಹೋಗ್ಬಿಟ್ಟಿದ್ರು. ಮನೆಗೆ ದೊಡ್ಡ ಬೀಗ. ಇದ್ದ ಇಬ್ಬ್ರು ಆಳ್ಮಕ್ಕಳಲ್ಲಿ ಒಬ್ಬರೂ ಇರ್ಲಿಲ್ಲ. ಮನೆ ಸುತ್ತ ಎರಡ್ಕೂಗು ಹಾಕಿದ್ರೂ ಯಾರೂ ಉತ್ತರಿಸಲಿಲ್ಲ. ಮನೆಯ ಮುಂದೆ ನಿಂತಿದ್ದ ಗಾಡಿಗೆ ಕೀಲಿ ಹಾಕಿತ್ತು, ಆದ್ರ ಕೀಲಿ ಕೈ ಗೌಡ್ರ ಮನಿ ಛಾವಣಿಯಲ್ಲಿ ಗೋಡೆಗೆ ನೇತಾಡ್ತಾನೇ ಇತ್ತು. ಇನ್ನೂ  ಯಾವದನ್ನೂ ವಿಚಾರ ಮಾಡ್ದೇ ಕೂಡ್ಲೇ ಕೀಲಿ ತಗೊಂಡು ಗಾಡಿ ಹೊಡ್ಕೊಂಡು ಶಾಂತಯ್ಯನವರ ಮನೆಗೆ ಬಂದ. ಶಾಂತಯ್ಯ ನವರು ಗೌಡ್ರ ಮೋಟಾರುಬೈಕು ಅಂತ ಗೊತ್ತಾದ್ರೆ  ನಿರಾಕರಿಸ್ಬಹುದು ಅಂತ ತಿಳ್ದು ಅವ್ರಿಗೆ ಗೌಡ್ರೇ ಗಾಡಿ ಕೊಟ್ಟು ಕಳಿಸಿದ್ರು ಅಂತ ಹೇಳಿಬಿಟ್ಟ. ಆಮೇಲೆ ನಿಧಾನವಾಗಿ ಶಾಂತಯ್ಯರಿಗೆ ಈ ಬಗ್ಗೆ ಹೇಳಿದ್ರಾಯ್ತು ಅಂತ ಅನ್ಕೊಂಡ. ಶಾಂತಯ್ಯನವರಿಗೆ ವಿಚಿತ್ರ ಅನ್ಸಿದ್ರೂ ಆ ಕ್ಷಣದಲ್ಲಿ ಅವರು ಇದರ ಬಗ್ಗೆ ವಿಚಾರ ಮಾಡೋ ಸ್ಥಿತಿಯಲ್ಲಿರಲಿಲ್ಲ. ಮೆಲ್ಲಗೆ ಗಾಡಿ ಹತ್ತಿ ಕೂತು ಮಾದೇವನನ್ನೇ ಗಟ್ಟಿಯಾಗಿ ಹಿಡುಕೊಂಡು ಕೂತರು. ಹತ್ತು ಮೈಲಿ ದೂರದ ಪಡಗಾನೂರಿಗೆ ಹೊರಟುಬಿಟ್ಟ. ಶಾಂತಯ್ಯನವರ ಮನೆಯೇ ಶಾಲೆಗೆ ಹತ್ತಿಕೊಂಡು ಊರ ಕೊನೆಯಲ್ಲಿದ್ದರಿಂದ ಊರವರಾರೂ ಅಲ್ಲಿ ಎದುರಾಗಲೇ ಇಲ್ಲ. ಅಂತೂ ಇಂತೂ ಸರಹೊತ್ತಿನಲ್ಲಿ ಆಸ್ಪತ್ರೆಗೆ ಬಂದು ಅಲ್ಲೇ ಕ್ವಾರ್ಟ್ರಸ್ಸಿನಲ್ಲಿದ್ದ ಡಾಕ್ಟರರನ್ನು ಕರೆಯಿಸಿದ. ಡಾಕ್ಟರರು ಶಾಂತಯ್ಯನವರನ್ನು ಪರೀಕ್ಷಿಸಿ, ಹೆಚ್ಚಾದ ಸಕ್ಕರೆ ಅಂಶದಿಂದಾದ್ದನ್ನು ಗಮನಿಸಿ ಸರಿಯಾಗಿ ಚಿಕಿತ್ಸಿಸಿ ಅಂದು ರಾತ್ರಿ ಅಲ್ಲೇ ಇರುವಂತೆ ತಿಳಿಸಿ ಉಪಚರಿಸಿದರು. ಮರುದಿನ ಮುಂಜಾನೆ ಶಾಂತಯ್ಯನವರು ಸ್ವಲ್ಪ ಚೇತರಿಸಿದವರಂತೆ ಕಂಡುಬಂದರು. ಅವರೆದುರಿಗೆ ಮಾದೇವ ಕಣ್ಣುಬಿಟ್ಟು ಕುಳಿತಿದ್ದ. ಅವರು ಒಮ್ಮಿದೊಂಮ್ಮೆಲೇ ತಾವೇಗೆ ಇಲ್ಲಿಗೆ ಬಂದೆವು ಎಂಬುದನ್ನು ಮಾದೇಶ ತಿಳಿಸಿದ. ಗೌಡ್ರಮನೆಗೆ ಗಾಡಿ ಬಿಟ್ಟುಬರುತ್ತೇನೆಂದು ಹಾಗೂ ತಾವು ಸಂಜೆ ನಿಧಾನವಾಗಿ ಬಸ್ಸಿಗೆ ಬರಬೇಕೆಂದು ಹೇಳಿಹೋದ. ಶಾಂತಯ್ಯನವರಿಗೆ ಮನೆಯಲ್ಲಿ ಸುಸ್ತಾಗಿ ಮಲಗಿದ್ದೊಂದು ಬಿಟ್ಟರೆ ಮತ್ತೇನೂ ನೆನಪಿನಲ್ಲುಳಿದಿರಲಿಲ್ಲ.     

ಇಬ್ಬರು ಆಳ್ಮಕ್ಕಳು ರಾತ್ರಿ ತಮ್ಮ ಊಟ ಮುಗಿಸಿ ಗೌಡ್ರ ಮನೆಗೆ ಬರೋವಾಗ ಕತ್ತಲದಾಗ ಮಾದೇವ ಗಾಡಿ ಹೊಡ್ಕೊಂಡು ಹೋಗಿದ್ದನ್ನ ನೋಡಿ ಮುಂಜಾನೆ ಗೌಡ್ರು ಬಂದ ಕೂಡ್ಲೇ ಹೇಳಿದ್ರು. 'ಮನಿ ಕಾಯಾಕ ಹೇಳಿ ಹೋದ್ರ ಕತ್ತಿ ಕಾಯಕತಿದ್ರೇನ್ರೋ ಬಡ್ದಿಮಕ್ಳ, ಯಾರೋ ಬಂದು ಗಾಡಿ ಹೊಡ್ಕೊಂಡು ಹೋಗಮಟ ಸುಮ್ಮನಿದ್ದು ಈಗ ಅದರ ಬಗ್ಗೆ ಪಿರಾದಿ ಒಪ್ಪಿಸ್ತಿರಾ? ಅಂತ ಬಾಯಿಗೆ ಬಂದಂಗ ಬೈದು ಸರಿಯಾಗೇ ಏಟು ಕೊಟ್ಟಿದ್ದ. ಇತ್ತ ಊರಲ್ಲಿ ಹೇಳ್ದೇ ಕೇಳ್ದೇ ರಾತ್ರೋರಾತ್ರಿ ಮೋಟಾರು ಗಾಡಿಯನ್ನು ಕದ್ದೊಯ್ದು ಮುಂಜಾನೆ ಕೊಡೋಕೆ ಬಂದ ಮಾದೇವನನ್ನ ಆಗ ತಾನೇ ಬೇರೆ ಊರಿಗೆ ಹೋಗಿ ಬಂದಿದ್ದ ಗೌಡ್ರು ತರಾಟೆಗೆ ತಗೊಂಡಿದ್ರು. ಬಂದಿದ್ದ ಮಾದೇವಂಗೆ ಎರಡು ಬಾರಿಸಿ ಕೇಳಿದ್ರು. ಶಾಂತಯ್ಯರ ಸಲುವಾಗಿ ಅಂತಂದ್ರೆ ಎಲ್ಲಿ ಗೌಡ್ರು, ಶಾಂತಯ್ಯ ಬಂದ ಮೇಲೆ ಅವ್ರ ಜೊತೆ ಇದೇ ವಿಷ್ಯ ಇಟ್‌ಕೊಂಡು ಕಾದಾಡುತ್ತಾನೋ ಎಂದು ತಿಳಿದ ಮಾದೇವ ತಾನೇ ರಾತ್ರಿ ನಾಟಕ ನೋಡಲು ತಮಗೆ ಹೇಳ್ದೇ ಗಾಡಿ ಒಯ್ದುಬಿಟ್ಟೆ ತಪ್ಪಾಯ್ತು ಎಂದುಬಿಟ್ಟ!  ' ಎಷ್ಟಲೇ ಧೈರ್ಯ ಈ ಭಂಡ್ ಸೂ ಮಗ್ಗ..' ಅಂತ ಸರಿಯಾಗಿ ಬಾರಿಸಿದ್ರು. ಅವನನ್ನ ಅಜ್ಜಿ ಬಂದು ಬಿಡಿಸ್ಕೊಂಡು ಹೋಗ್ಬೇಕಾಯ್ತು. ಅಜ್ಜಿಗೂ ನಾಟಕ ನೋಡೋಕೇ ಹೋಗಿದ್ದೆ ಅಂತಾನೇ ಹೇಳ್ದ, ಯಾಕಂದ್ರೆ ನಿಜ ಹೇಳಿದ್ರೆ ಅಜ್ಜಿ ಊರವರೆಲ್ಲರ ಮುಂದೆನೂ ಹೇಳ್ಬಿಡಬಹುದೆಂದು.
ಶಾಂತಯ್ಯನವರು ಸಂಜೆ ಬಸ್ಸಿಗೆ ಊರು ತಲುಪಿದ್ರು. ಮೊದ್ಲು ಅವರಿಗೆ ಗೌಡ್ರು ನೆನಪಾಗಿ ಕೂಡಲೇ ಹೋಗಿ ಗೌಡ್ರಿಗೆ ಧನ್ಯವಾದಗಳನ್ನು ಹೇಳ್ಬಿಡ್ಬೇಕು ಎನ್ನೋದು ಇವರ ಮನಸ್ಸಿಗೆ ಬಂದು ಅವ್ರ ಮನೆಗೆ ಹೋದ್ರು. ಗೌಡ್ರು ಹೊಲದ ಕಡೆ ಹೋಗಿದ್ರು. ವಾಪಸಾಗಿ ಬಂದು ನಾಳೆ ಶಾಲೆ ಮುಗಿದ್ಮೇಲೆ ಸಂಜೆ ಹೋದ್ರಾಯ್ತು ಅಂದೊಂಡ್ಕು ಮಲಗಿದ್ರು. ಮರುದಿನ ಮುಂಜಾನೆ ಶಾಲೆಗೆ ಯಥಾಪ್ರಕಾರ ಹೋದ್ರು. ಗೌಡ್ರಿಗೆ ಶಾಂತಯ್ಯ ಮೇಷ್ಟ್ರು ಮನೆಗೆ ಬಂದುಹೋಗಿದ್ದು ಗೊತ್ತಾಗಿ ಎಲ್ಲಿ ಮಾದೇವನ್ನ ಹೊಡಿದಿದ್ದಕ್ಕೆ ಜಗಳಾಡೋಕೇ ಬಂದಾರೆನೋ ಅನ್ಕೊಂಡು ಮತ್ತಷ್ಟು ಸಿಟ್ಟಾದ್ರು. ತಡೆಯೋಕಾಗ್ದೇ ತi ಮನೆ ಆಳೊಬ್ಬನ ಜೊತೆ ಶಾಲೇಗೆ ಬಂದು ಶಾಂತಯ್ಯೋರು ಪಾಠ ಮಾಡ್ತಿದ್ದ ಕೋಲಿಕಡೆ ಬಂದು ನಿಂತ್ರು. ಶಾಂತಯ್ಯರು ಯಥಾಪ್ರಕಾರ ಪಾಠದಲ್ಲಿ ಮಗ್ನರಾಗಿದ್ದರು. 'ಅದೇನ್ ಪಾಠ ಮಾಡಿ ಈ ಪಾಟಿ ಮಕ್ಕಳ್ನ ಉದ್ಧಾರ ಮಾಡ್ತಾರೋ ಈ ಮೇಷ್ಟ್ರು ನಾ ಕಾಣೆ. ಅಷ್ಟ್ ಚಂದಾಗೇ ಮಕ್ಕಳಿಗೆ ಬುದ್ಧಿ  ಹೇಳಿದ್ದ್ರೇ ಈ ಮಾಕ್ಕಳ್ಯಾಕೇ ಊರೂರು ಸುತ್ತಿ ನಾಟ್ಕ ನೋಡೋಕೆ ಕಂಡೋರ ಮನೆ ಗಾಡಿ ಕದ್ದೊಯ್ತಿದ್ರಲಾ? ಕಲ್ಸೋರು ವಿದ್ಯಾ ಬುದ್ಧಿ ಜತೆ ಒಳ್ಳೇ ಗುಣಗಳನ್ನೂ ಕಲಿಸ್ಬೇಕು' ಅಂತ ಬೇಕಂತಲೇ ತಮ್ಮ ಆಳ್ಮಗನಿಗೆ ಎಲ್ಲರಿಗೂ ಕೇಳ್ಸೋ ರೀತಿ ಅಂದು ಸರ್ರನೇ ಹೊರಟ್ಬಿಟ್ರು. ಶಾಂತಯ್ಯರಿಗೆ ಎಲ್ಲಿಲ್ಲದ ಸಿಟ್ಟು ಬಂದು ಮೈಯೆಲ್ಲ ಕೆಂಡವಾದ್ರು. ಮಾದೇವನ ಕಡೆ ಸಿಟ್ಟಾಗಿ ನೋಡಿದ್ರು. ಮಾದೇವಂದು ಯಥಾ ಪ್ರಕಾರ ನಿರ್ಲಿಪ್ತ ನೋಟ. ಅವನ ಕಡೆ ಮೇಜಿನ ಮೇಲಿದ್ದ ಛಡಿ ತಗೊಂಡು ಭರ್ರನೇ ಹೋಗಿ 'ನಿನ್ನ ಬುದ್ಧಿ ಎಲ್ಲಿ ಬಿಡ್ತಿಯಾ? ಮತ್ತೆ ಕದಿಯೋದ್ ಮಾಡ್ತಿಯಾ?'  ಅಂತ ಅನ್ನುತ್ತಾ ಜೋರಾಗಿ ಆಗಲೇ ಕೈಚಾಚಿದ್ದ ಮಾದೇವಂಗೆ ಛಟ್ ಛಟ್ ಅಂತ ಹೊಡೆಯೋಕ್  ಶುರುಮಾಡಿದ್ರು. ಉಳಿದ ಹುಡ್ಗುರಲ್ಲಿ ಕೆಲವ್ರು ಹೆದರಿ ಓಡಿಹೋದ್ರು. ಉಳಿದವರು ಗಪ್ಚುಪ್. ಮಾದೇವನ್ನ ಮತ್ತೊಮ್ಮೆ ದಿಟ್ಟಿಸಿ ನೋಡಿದ್ರು. ಅದೇ ಅಮಾಯಕ ನೋಟ. ಛಡಿಯನ್ನು ಬಿಸಾಕಿ ಕೋಲಿ ಹೊರಗಡೆ ಬಂದು ಛಾವಣಿಯ ಕಂಬಕ್ಕೆ ಆನ್ಕೊಂಡು ನಿಂತ್ರು. ಆದ್ರೆ ಅವರ ಕಣ್ಣಲ್ಲಿ ನೀರು ಮಾತ್ರ ನಿಂತಿರಲಿಲ್ಲ.

ಡಾ.ಅಶೋಕ ಪಾಟೀಲ, 
ಸಹ ಪ್ರಾಧ್ಯಾಪಕರು, ಡಿ ಜಿ ಎಂ.ಆಯುರ್ವೇದ ಮಹಾವಿದ್ಯಾಲಯ, ಗದಗ 
೯೯೭೨೫೮೩೯೫೪
       

Advertisement

0 comments:

Post a Comment

 
Top