PLEASE LOGIN TO KANNADANET.COM FOR REGULAR NEWS-UPDATES


ಈ ಇಳೆಯ ಸಿರಿಮೈಗೆ
ಶ್ರಾವಣದ ಸಿಂಗಾರ
ಹೊಸ ಮಾಸದಲಿ
ಅಮಿತ ಸಂಭ್ರಮೋತ್ಸಾಹ
ಆಷಾಡದಲಿ ಮಿಂದು
ಬಸವಳಿದ ದೇಹಕ್ಕೆ
ಶ್ರಾವಣದ ಎಳೆಬಿಸಿಲು ಚೇತನೋಲ್ಲಾಸ !

ಮರಗಿಡಗಳೆಡೆಯಿಂದ  ಬೀಸಿಬರುವ ಸುಳಿಗಾಳಿಗೆ
ಭರ್ರೆ ಂದು ಉದುರುವವು 
ಶ್ರಾವಣದ  ಹೂವುಗಳು
ಬಣ್ಣ ಬಣ್ಣಗಳದ್ದೇ  ಕಣ್ಣುಮುಚ್ಚಾಲೆ
ಬಾನಂಗಳದ ನೆರಳು ಬೆಳಕುಗಳ
ಮೋಡಿಯಲಿ ಮುಗಿಲಾಯ್ತು 
ದಿನಮಣಿಯ ತೂಗುಯ್ಯಾಲೆ !

ಬೇಲಿಯಂಚಿನ ಗಿಡದಲ್ಲಿ
ಘಮ್ಮೆಂದು ಅರಳುವ 
ಪಾರಿಜಾತಕ್ಕೆ ಬಣ್ಣದುಂಬುವವು
ಮೃಗಪಕ್ಷಿ ಸಂಕುಲದ
ಹರ್ಷ ದನಿ ಸಡಗರವು
ಬಳುಕಿ ಹರಿಯುವ ಝರಿಯ ಸೊಗಸು
ಮೆಲುಗಾಳಿಯಲಿ ತೊನೆವ
ತರುಲತೆಯ ಸೊಬಗು

ಕರ್ಮುಗಿಲ ಮರೆಯಿಂದ
ರಾಶಿ ರಾಶಿ ಉದುರುವವು
ಶ್ರಾವಣದ ಹೂವುಗಳು
ಎಲೆ ಎಲೆಯ ಎದೆಯಲ್ಲಿ
ತುಂಬಿಹುದು ಒಲವು
ಬಯಲುಗಳಿಗೆಲ್ಲಾ ಸಿಹಿಮುತ್ತ ನೀಡುತ್ತ
ಹೊಸ ಕಳೆಯ ತುಂಬುವವು !

ಈ ಬೆಡಗು , ಆ ಬಣ್ಣ ಸೊಗಸುಗಳ ಮಿಲನ
ಪ್ರಕೃತಿಯಾಗಿದೆ ನಲಿವ ಚೆಲುವಿನುದ್ಯಾನ
ಶ್ರಾವಣ ಸ್ವಾಗತಿಸಿ ಮುದಗೊಂಡ ತನುಮನ
ಅರಳುವವು ಬಾನಿನಲ್ಲಿ
ಶ್ರಾವಣದ ಹೂವುಗಳು !





-***
 ಪ್ರಭಾಕರ ತಾಮ್ರಗೌರಿ
ಪಾರ್ವತಿ ದೇವಸ್ಥಾನದ ಹತ್ತಿರ
ಪೋಸ್ಟ್- ಗೋಕರ್ಣ - 581326
ಉತ್ತರ ಕನ್ನಡph : 08386-256749
cell : 9449500376

Advertisement

0 comments:

Post a Comment

 
Top