PLEASE LOGIN TO KANNADANET.COM FOR REGULAR NEWS-UPDATES

ಕಾಮಿಡಿ ಎಕ್ಸಪ್ರೆಸ್‌ನಲ್ಲಿ ಖಾಲಿ ಕ್ವಾಟರ್‌ನ ಜೋರು ಸೌಂಡು, ಶರಣ್ ಗೆಲುವಿನ ಸೆಕೆಂಡ್ ರೌಂಡು


        ನಗುವಿನ ನೆರಳಿನಲ್ಲಿಯೇ ಶುರುವಾಗುವ ಪ್ರೀತಿ, ಮದುವೆಯ ಮಾತುಕತೆ, ಸಣ್ಣ ಸಂದೇಹದಿಂದಾಗಿ ಉಂಟಾಗುವ ಗಂಡ-ಹೆಂಡತಿಯ ಮುನಿಸು, ಮೊದಲರ್ಧಕ್ಕೆ ಸೀಮಿತವಾದರೆ ಎರಡನೇ ಆರ್ಧಭಾಗದಲ್ಲಿ ಕಥೆಗಿಂತ ಕಾಮಿಡಿಗೆ ಹೆಚ್ಚು ಒತ್ತು ಕೊಟ್ಟು ಹೊತ್ತು ಕಳೆಯೋದು ಗೊತ್ತಾಗದಂತೆ ಸಿನಿಮಾ ಮುಗಿಯುತ್ತದೆ. ನಂದ್‌ಕಿಶೋರ್‌ಗೆ ಇದು ಮೊದಲ ನಿರ್ದೇಶನವಾದರೂ ಭರವಸೆ ಮೂಡಿಸಿದ್ದಾರೆ, ಜೊತೆಗೆ ಕಾಮಿಡಿ ಟಚ್‌ಲ್ಲಿಯೇ ಮೇಲೋಡಿ ಹಾಡು ಕೊಟ್ಟು ಪ್ರೇಕ್ಷಕರನ್ನು ಸೆಳೆದಿರುವುದು ಚಿತ್ರದ ಮತ್ತೊಂದು ಹೆಗ್ಗಳಿಕೆ.
         ಕುತೂಹಲ ತಣಿಯಲಾರದೇ ಚಿತ್ರಮಂದಿರದೊಳಗೆ ಕಾಲಿಟ್ಟ ಪ್ರೇಕ್ಷಕ, ಸಿನಿಮಾ ಮುಗಿಸಿ ಹೊರಬಂದಾಗ ಒಂದೊಳ್ಳೇ ಸಿನಿಮಾ ನೋಡಿದೆ ಎನ್ನುವ ಫೀಲ್ ಕಾಣುವಂತೆ ಚಿತ್ರ ಮೂಡಿಬಂದಿದೆ. ಈಚೆಗೆ ಬಂದ ಗೂಗ್ಲಿ ಚಿತ್ರ ಕೂಡಾ ಇದೇ ಖುಷಿ ಕೊಟ್ಟಿತ್ತು. ಆದರ ಬೆನ್ನಲ್ಲೇ ಬಂದ ಟೋನಿ ಚಿತ್ರ ಉತ್ತಮವಾಗಿದ್ದರೂ ಜನರನ್ನು ಸೆಳೆಯುವಲ್ಲಿ ವಿಫಲವಾಯಿತು. 
          ವಿಕ್ಟರಿ ಮೊದಲಿನಿಂದಲೂ ಸೌಂಡು ಮಾಡಿದ್ದು ಖಾಲಿ ಕ್ವಾಟರ್ ಹಾಡಿನಿಂದ. ಹಾಡಿಗೋಸ್ಕರ ಚಿತ್ರ ನೋಡಲು ಬಂದವರೇ ಜಾಸ್ತಿಯಾಗಿದ್ದರೂ ಸಿನಿಮಾ ಬಂದವರನ್ನು ಕೂರಿಸುವಂಥ ಕಥೆ ಹೊಂದಿದೆ. ಎಣಿಸಲು ಕೊಂಚ ಕಷ್ಟ ಎನ್ನುವಷ್ಟು ಪಾತ್ರಗಳು ಚಿತ್ರದಲ್ಲಿದ್ದರೂ ಆ ಎಲ್ಲಾ ಪಾತ್ರಗಳಿಗೂ ತೂಕ ಕೊಟ್ಟಿದ್ದು ಭಾರಿ ತೂಕದ ನಂದ್‌ಕಿಶೋರ್.
         ನವರಸ ನಾಯಕ ಜಗ್ಗೇಶ್ ಹಿನ್ನಲೆ ಧ್ವನಿಯ ಮೂಲಕವೇ ಚಿತ್ರವನ್ನು ಪ್ರಾರಂಭಿಸುತ್ತಾರಾದಾರೂ ಚಿತ್ರದಲ್ಲಿ ಆವರನ್ನು ನೋಡುವ ಭಾಗ್ಯ ಕರುಣಿಸಿಲ್ಲ ನಂದ್‌ಕಿಶೋರ್. ನಾಯಕ ಚಂದ್ರು ನಡುರಾತ್ರಿಲಿ ಭಯದಿಂದ ಓಡಿಬಂದು ಮನೆ ಸೇರುತ್ತಾನೆ. ಭಯದ ಬಗ್ಗೆ ಒಂಚೂರು ಫಿಲಾಸಫಿ ಹೇಳಿ ನಾಯಕನ ಭಯಕ್ಕೆ ಇರುವ ಕಾರಣವನ್ನೇ ಕಥೆಯನ್ನಾಗಿ ತೋರಿಸಿದ್ದು ಬೋರ್ ಎನಿಸುವುದಿಲ್ಲ. 
        ಚಿತ್ರದ ಮೊದಲರ್ಧವೇ ಸಿನಿಮಾ ಮುಗಿಯಿತೇನೋ ಎಂದು ಭಾಸವಾಗುತ್ತಿದ್ದಂತೆ ಮುಂಬೈನಲ್ಲಿರುವ ಮುನ್ನಾ ಎನ್ನುವ ಮತ್ತೊಬ್ಬ ತದ್ರೂಪಿ ಶರಣ್‌ನನ್ನು ತೋರಿಸುವ ಮೂಲಕ ಆರೇ ಮತ್ತೇನಿದು ಹೊಸ ಕಥೆ ಎನ್ನುವ ಕ್ಯೂರಿಯಾಸಿಟಿ ಉಳಿಸಿಬಿಡುತ್ತಾರೆ. ಖಾಲಿ ಕ್ವಾಟರ್ ಹಾಡು ಕೇಳಿ, ನೋಡಿ ಮನೆಗೆ ಹೋಗಬೇಕು ಎನ್ನುವವವರೂ ಮತ್ತೇ ಥೇಟರ್ ಒಳಬರುವಂತೆ ಮಾಡುತ್ತದೆ. ಇಂಟರ್‌ವೆಲ್.
         ಇಲ್ಲಿಂದ ಮತ್ತೊಂದು ಆಯಾಮದ ಕಥೆ ತೆರೆದುಕೊಳ್ಳುತ್ತಾ ಹೋಗುತ್ತದೆ. ಇಲ್ಲಿ ನಗಿಸುವುದನ್ನು ಬಿಟ್ಟರೆ ಮತ್ತಿನ್ಯಾವ ಉದ್ದೇಶವೂ, ಸಂದೇಶವೂ ಕಾಣಿಸುವುದಿಲ್ಲ. ೩೫ ನಿಮಿಷದ ಕ್ಲೈಮ್ಯಾಕ್ಸ್‌ನಲ್ಲಿ ಒಂದು ಹಾಡು, ಒಂದಿಷ್ಟು ಫನ್ನಿ ಡೈಲಾಗ್, ಒಂದು ಕಾಮಿಡಿ ಫೈಟ್‌ನೊಂದಿಗೆ ಚಿತ್ರ ಮುಗಿಯುತ್ತದೆ. ಚಿತ್ರದ ಕೊನೆಗೆ ಖಾಲಿ ಕ್ವಾಟರ್ ಹಾಡಿನ ಸಕ್ಸಸ್ ಬಗ್ಗೆ ಸುದೀಪ್, ದರ್ಶನ್, ಪುನೀತ್, ಪ್ರೇಮ್, ಗುರುಕಿರಣ್, ವಿಜಯಪ್ರಕಾಶ ಮಾತನಾಡಿದ ಕ್ಲಿಪ್ ತೋರಿಸುವುದನ್ನೂ ಕೂಡ ಪ್ರೇಕ್ಷಕರು ನಿಂತು ನೋಡುವಂತೆ ಮಾಡಿರುವುದು ನಂದ್‌ಕಿಶೋರ್ ಜಾಣ್ಮೆಯನ್ನು ತೋರಿಸುತ್ತದೆ.
         ಚಿತ್ರದ ಟೈಟಲ್ ಸಾಂಗೇ ಡಿಫರೆಂಟ್ ಆಗಿ ಮೂಡಿಬಂದಿದೆ. ಡ್ಯಾನ್ಸ ಮಾಡಲು ಕಾಲುಗಳು ಮುಖ್ಯ. ಅದರೆ ಕೈ ಬೆರಳುಗಳನ್ನೇ ಕಾಲುಗಳಂತೆ ಚಿತ್ರಿಸಿ ನೃತ್ಯ ಸಂಯೋಜಿಸಿದ್ದು ಹೊಸತನದ ಆನುಭವ ತರುತ್ತದೆ. ಶರಣ್ ನಾಯಕನಾಗಿರುವ ಎರಡನೇ ಚಿತ್ರಕ್ಕೆ ಸ್ಟಾರಿಂಗ್ ಬಿರುದು ಗಳಿಸಿ ಎರಡನೇ ರೌಂಡಿನಲ್ಲೂ ರ್‍ಯಾಂಬೋನಂತೆ ಸಾಕಷ್ಟು ಗೆಟಪ್‌ಗಳಲ್ಲಿ ಕಾಣಿಸಿಕೊಂಡು ಭಾರಿ ಸೌಂಡು ಮಾಡಿದ್ದಾರೆ. ನಾಯಕಿ ಅಸ್ಮಿತಾ ಸೌದ್ ನೋಡಲು ಮುದ್ದಾಗಿದ್ದಾರೆ. ರಾಗಿಣಿ ಹಾಡೊಂದರಲ್ಲಿ ಸೊಂಟ ಬಳುಕಿಸಿ ಪಡ್ಡೆಗಳ ಶಿಳ್ಳೆ ಗಿಟ್ಟಿಸುತ್ತಾರೆ. ಬಹಳ ದಿನಗಳ ನಂತರ ಕೀರ್ತಿರಾಜ್ ಬ್ಯಾಡ್ ವಿಲನ್ ಆಗಿ ನಟಿಸಿ ತಮ್ಮ ಹಳೇಯ ಖದರ್ ತೋರಿಸಿದ್ದಾರೆ. ರವಿಶಂಕರ್ ಅರಂಭದಲ್ಲಿ ಭಯ ಮೂಡಿಸುವ ವಿಲನ್‌ನಂತೆ ಕಂಡರೂ ಕ್ರಮೇಣ ಆವರೂ ಕೂಡಾ ಕಾಮಿಡಿ ಮಾಡುತ್ತಾರೆ. ಶರಣ್‌ನಷ್ಟೇ ಪ್ರಾಮುಖ್ಯತೆಯನ್ನು ಈ ಪಾತ್ರಕ್ಕೆ ಕೊಟ್ಟಿದ್ದು ರವಿಶಂಕರ್ ನ್ಯಾಯ ಸಲ್ಲಿಸಿದ್ದಾರೆ. ಗಿರಿಜಾ ಲೋಕೇಶ್ ಮಾಡರ್ನ್ ಅಜ್ಜಿಯಾಗಿ ಗಮನ ಸೆಳೆಯುತ್ತಾರೆ. ಕಿವುಡನಾಗಿ ಕಿತಾಪತಿ ಮಾಡುವ ತಬಲಾ ನಾಣಿ ಒಂದು ಶೇಡ್‌ನಲ್ಲಿ ರಂಗಾಯಣ ರಘುವನ್ನು ನೆನಪಿಸುತ್ತಾರೆ. ಸಾಧುಕೋಕಿಲ ಇನ್ಸಪೆಕ್ಟರ್ ಸಾಧುಗೌಡನಾಗಿ ರಂಜಿಸಿದ್ದಾರೆ. ಮಿಕ್ಕಂತೆ ಕುರಿ ಪ್ರತಾಪ, ಆವಿನಾಶ್, ರಮೇಶ್‌ಭಟ್, ಮಿಮಿಕ್ರಿ ದಯಾನಂದ, ಮನ್‌ದೀಪ್‌ರಾಯ್ ಪಾತ್ರಕ್ಕೆ ನ್ಯಾಯ ಸಲ್ಲಿಸುವುದಷ್ಟೇ ಅಲ್ಲ, ಜೀವ ತುಂಬಿದ್ದಾರೆ.
        "ಗಂಡು ಸ್ಟೀಲ್ ತಟ್ಟೆ ಇದ್ದಂಗೆ, ಹೆಣ್ಣು ಬಾಳೆ ಎಲೆ ಇದ್ದಂಗೆ ಸ್ಟೀಲ್ ತಟ್ಟೆನಾ ತೊಳೆದು ಮತ್ತೇ ಬಳಸಬಹುದು. ಅದರೆ ಬಾಳೆ ಎಲೇನಾ ಹಾಗೆ ಮಾಡೋಕಾಗಲ್ಲ", "ಕರೆಂಟ್ ಇಲ್ದಿರೋ ಟ್ರಾನ್ಸಫಾರ್ಮರನಾ, ಗಂಡ ಬಿಟ್ಟಿರೋ ಹೆಂಡ್ತಿನಾ ಯಾರಾದ್ರೂ ಮುಟ್ತಾರೆ", "ಗಂಡು ಕೆಟ್ರೆ ಟೈಂ ಸರಿ ಇಲ್ಲ ಅಂತಾರೆ, ಹೆಣ್ಣು ಕೆಟ್ರೆ ಆವಳೇ ಸರಿ ಇಲ್ಲ ಅಂತಾರೆ"' ಎನ್ನುವಂಥ ತೂಕದ ಸಂಭಾಷಣೆಗಳು ಚಿತ್ರದುದ್ದಕ್ಕೂ ಕಚಗುಳಿ ಇಡುತ್ತವೆ. ಸಂಭಾಷಣೆ ಬರೆದ ಪ್ರಶಾಂತ್ ಮೆಚ್ಚುಗೆ ಗಳಿಸುತ್ತಾರೆ. ಶ್ರೀನಾಥ್ ಕಥೆ, ಚಿತ್ರಕಥೆ ಚೆನ್ನಾಗಿದೆ. ಶೇಖರ್ ಚಂದ್ರ ಕ್ಯಾಮರಾ ಕಣ್ಣು ಸಿನಿಮಾ ತುಂಬಾ ರಿಚ್ ಆಗಿ ಕಾಣುವಂತೆ ಮಾಡಿದೆ. ಅರ್ಜುನ್ ಜನ್ಯ ಸಂಗೀತ ಚಿತ್ರದ ಪ್ರಮುಖ ಪ್ಲಸ್ ಪಾಯಿಂಟ್. 
         ಫ್ರೆಂಡ್ಸ ಚಿತ್ರದಲ್ಲಿ ಗೆಲುವು ಪಡೆದಿದ್ದ ನಿರ್ಮಾಪಕ ಮೋಹನ್ ರೌಡಿ ಆಳಿಯದಲ್ಲಿ ಸೋಲುಂಡಿದ್ದರು. ಮೂರನೇ ಚಿತ್ರವಾದ ವಿಕ್ಟರಿಯಲ್ಲಿ ಹೆಸರಿಗೆ ತಕ್ಕಂತೆ ಆವರು ಮತ್ತೊಮ್ಮೆ ಗೆಲುವನ್ನೇ ಪಡೆದಿದ್ದಾರೆ ಎಂಬುದರಲ್ಲಿ ಎರಡು ಮಾತಿಲ್ಲ. ಹಾಸ್ಯನಟನೊಬ್ಬ ನಾಯಕನಾಗಿರುವ ಚಿತ್ರದ ಮೊದಲ ದಿನದ ಮೊದಲ ಪ್ರದರ್ಶನ ಹೌಸ್ ಫುಲ್ ಬೋರ್ಡ ಕಂಡರೆ ಆದು ವಿಕ್ಟರಿಯಲ್ಲದೇ ಬೇರೇನಲ್ಲ.       
           
-ಚಿತ್ರಪ್ರಿಯ ಸಂಭ್ರಮ್.
ಪ್ರದರ್ಶನ : ಸ್ಟಾರ್ ಚಿತ್ರಮಂದಿರ, ಕೊಪ್ಪಳ.

Advertisement

0 comments:

Post a Comment

 
Top