PLEASE LOGIN TO KANNADANET.COM FOR REGULAR NEWS-UPDATES


ಪ್ರೀತಿಯ ಕಿಚ್ಚಿನಲ್ಲಿ ವ್ಯವಸ್ಥೆಯ ಪಡಿಯಚ್ಚು

        ಮೂಗು ಇದ್ದ ಮೇಲೆ ನೆಗಡಿ ಇದ್ದಿದ್ದೇ. ಹಂಗೆ ಹುಡ್ಗಾ ಅಂದ್ಮೇಲೆ ಹುಡ್ಗಿ ಇರಲೇಬೇಕಲ್ಲ ಎನ್ನುವ ಡೈಲಾಗ್ ರಂಗಾಯಣ ರಘು ಅವರಿಂದ ಬರುತ್ತದೆ. ಆದರಂತೆ ಸಿನಿಮಾ ಅಂದ ಮೇಲೆ ಪ್ರೀತಿ ಪ್ರೇಮ ಇರಲೇಬೇಕಲ್ಲ ಎನ್ನುವ ಮಾತನ್ನೂ ಸೇರಿಸಿಕೊಂಡರೆ ಕೇಸ್ ನಂಬರ್ ೧೮/೯ ನ್ನು ಅರ್ಥ ಮಾಡಿಕೊಳ್ಳಬಹುದು. ಮುರುಳಿ ಮೀಟ್ಸ್ ಮೀರಾ ಎಂಬ ಪ್ರೇಮಕಥೆಯ ಚಿತ್ರ ಕೊಟ್ಟಿದ್ದ ನಿರ್ದೇಶಕ ಮಹೇಶರಾವ್ ಈ ಬಾರಿ ಒಂದು ಇಂಟರೆಸ್ಟಿಂಗ್ ಕೇಸ್ ಹೊತ್ತು ತಂದಿದ್ದಾರೆ. ತಮಿಳಿನಲ್ಲಿ ಜನಮನ್ನಣೆ ಗಳಿಸಿದ್ದ "ಒಳಕ್ಕು ಎನ್ ೧೮/೯" ಕಥೆಯನ್ನ ಪ್ರವೀಣರಾವ್ ಕನ್ನಡಕ್ಕೆ ತಂದಿದ್ದಾರೆ.
         ವಿರಾಮದ ನಂತರ ಕಥೆಯನ್ನು ಒಂಚೂರು ಟ್ರೀಮ್ ಮಾಡಿದ್ದರೆ ಸಿನಿಮಾ ಅಂದ ಇನ್ನೂ ಹೆಚ್ಚುತ್ತಿತ್ತು. ಎರಡು ಆಯಾಮಗಳಲ್ಲಿ ಕಥೆ ತೆರೆದುಕೊಳ್ಳುತ್ತಾ ಹೋಗುವುದು ನೋಡುವಂತೆ ಮಾಡುವ ಗುಣ ಹೊಂದಿದೆ. ಮೊದಲ ಅರ್ಧ ಕಥೆ ಬಡಕುಟುಂಬವೊಂದು ಸಾಲದ ಶೂಲದಲ್ಲಿ ಸಿಲುಕಿ ಪಡುವ ಪಾಡು, ಅಪ್ಪನ ಸಾಲ ತೀರಿಸಲು ಶಾಲೆ ಬಿಟ್ಟು ಪುಣೆಗೆ ದುಡಿಯಲು ಹೋಗುವ ಮಗ, ೧೫ ವರ್ಷಗಳಾದರೂ ತೀರದ ಸಾಲ, ಪುಣೆಯಲ್ಲಿ ಮಾಲಕರ ಶೋಷಣೆ, ಹೆತ್ತವರು ಸತ್ತಿದ್ದನ್ನು ತಿಳಿಸಿದೇ ದುಡಿಸಿಕೊಳ್ಳುವ ಕಠೋರತನ, ಮತ್ತೆ ಬೆಂಗಳೂರಿಗೆ ಬರುವ ನಾಯಕನಿಗೆ ಗೊತ್ತು ಗುರಿ ಇಲ್ಲದ ಬದುಕು. ವೇಶ್ಯೆಯೊಬ್ಬಳ ಕರುಣೆಯಿಂದ ತುತ್ತು ಅನ್ನ, ಫುಟ್‌ಪಾತ್ ಮೇಲಿನ ಟೀ ಆಂಗಡಿಯಲ್ಲಿ ದುಡಿಯಲು ಸಣ್ಣ ಕೆಲಸ ಪಡೆಯುವ ಮಹಾದೇವನಿಗೆ ಅಲ್ಲೇ ಓಡಾಡುವ ಲಕ್ಷ್ಮಿ ಮೇಲೆ ಮನಸು. ಇವಿಷ್ಟನ್ನು ಹೇಳುವ ಹೊತ್ತಿಗೆ ಸಿನಿಮಾ ಅರ್ಧ ಮುಂಗಿಯುತ್ತದೆ. 
         ಮಧ್ಯಂತರದ ನಂತರ ಕಥೆ ಶ್ರೀಮಂತಿಕೆಯ ಮಗ್ಗುಲು ಪಡೆದುಕೊಳ್ಳುತ್ತದೆ. ಹರೆಯದ ಹುಡುಗ, ಅದೇ ಅಪಾರ್ಟಮೆಂಟ್‌ನಲ್ಲಿರುವ ಶಾಲೆಯ ಬಾಲಕಿ ನಡುವೆ ಲವ್ವು. ಸೈಬರ್ ಕ್ರೈಂನ ವಿವಿಧ ಮುಖಗಳ ಪರಿಚಯ. ಹುಡುಗನ ಲಾಲಸೆ ಅರಿತ ಹುಡುಗಿ ಅವನನ್ನು ತಿರಸ್ಕರಿಸಿದಾಗ ಸೇಡು ತೀರಿಸಿಕೊಳ್ಳುವ ಹುಡುಗನ ಪ್ಲ್ಯಾನ್‌ಗಳು, ಕೊನೆಗೆ ಪ್ರೀತಿ ನಿರಾಕರಿಸಿದ ಬಾಲಕಿಗೆ ಆಸೀಡ್ ಹಾಕಲು ಹೋದಾಗ ಅಕಸ್ಮಿಕವಾಗಿ ಮನೆ ಕೆಲಸ ಮಾಡುವ ಲಕ್ಷ್ಮಿ ಮೇಲೆ ಬಿದ್ದು ಪ್ರಕರಣ ಪೋಲಿಸ್ ಠಾಣೆಯಲ್ಲಿ ದಾಖಲಾಗುತ್ತದೆ. 
        ಇಲ್ಲಿಂದ ವ್ಯವಸ್ಥೆಯ ನಿಜವಾದ ಮುಖವನ್ನು ನಿರ್ದೇಶಕ ಮಹೇಶ್‌ರಾವ್ ಜಾಣ್ಮೆಯಿಂದ ತೋರಿಸಿದ್ದಾರೆ. ಮೊದಲು ಸಭ್ಯ  ಅಧಿಕಾರಿ ಎನಿಸಿಕೊಳ್ಳುವ ಇನ್ಸಪೆಕ್ಟರ್, ನಂತರ ಕೇಸ್ ಮುಚ್ಚಿ ಹಾಕಲು ಲಂಚ ಪಡೆದು ವಿಚಾರಣೆಗೆ ಬಂದಿದ್ದ ಅಮಾಯಕ ಹಾಗೂ ಅನಾಥನನ್ನು ಕೇಸ್‌ನಲ್ಲಿ ಫಿಟ್ ಮಾಡಿ ಮೋಸ ಮಾಡುವ ರೀತಿಯನ್ನು ನೋಡಿದರೆ ಇದು ನಮ್ಮ ನಡುವಿನ ಕಥೆ ಎನಿಸದೇ ಇರಲಾರದು. ಕೊನೆಗೆ ಆಸೀಡ್ ದಾಳಿಗೆ ಒಳಗಾದ ಲಕ್ಷ್ಮಿಗೆ ತನ್ನನ್ನು ಪ್ರೀತಿಸುತ್ತಿದ್ದ ಹುಡುಗ ತನ್ನ ಮುಖ ಸರಿಪಡಿಸುವ ಪೊಲೀಸರ ಸುಳ್ಳು ಭರವಸೆ ನಂಬಿ ಜೈಲಿಗೆ ಹೋಗಿದ್ದು ಗೊತ್ತಾಗಿ, ಕೋರ್ಟ ಆವರಣದಲ್ಲಿಯೇ ಪೋಲೀಸ್ ಆಧಿಕಾರಿ ಮೇಲೆ ಅಕೆಯಿಂದಲೇ ಆಸೀಡ್ ದಾಳಿ ನಡೆದು ಇಡೀ ಪ್ರಕರಣ ಬೆಳಕಿಗೆ ಬರುತ್ತದೆ. ಜೈಲಿನಲ್ಲಿದ್ದ ನಾಯಕ ಹೊರಗೆ ಬರುತ್ತಾನೆ, ಹೊರಗಿದ್ದ ನಾಯಕಿ ಜೈಲಿಗೆ ಹೋಗುತ್ತಾಳೆ, ಕೊನೆಗೆ ಪ್ರೀತಿ ಶಾಶ್ವತ ಎನ್ನುವ ಸಂದೇಶ.
         ಜಾಲಿಡೇಸ್‌ನಲ್ಲಿ ನಾಲ್ವರಲ್ಲಿ ಒಬ್ಬರಾಗಿದ್ದ ನಿರಂಜನ್ ಶೆಟ್ಟಿ ಈ ಸಿನಿಮಾದಲ್ಲಿ ಪೂರ್ಣಪ್ರಮಾಣದ ನಾಯಕ. ಸಿಂಧೂ ಲೋಕನಾಥ ಪಾತ್ರವೂ ತೂಕ ಹೊಂದಿದ್ದು ಸಿಂಧೂ ಇಷ್ಟವಾಗುತ್ತಾರೆ. ಇವರಿಬ್ಬರಷ್ಟೇ ಪ್ರಮುಖವಾಗಿರುವ ಪಾತ್ರಗಳಲ್ಲಿ ಅಭಿಷೇಕ ಹಾಗೂ ಶ್ವೇತಾ ಪಂಡಿತ್ ತಮ್ಮ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ. ಚಿತ್ರದಲ್ಲಿ ಎಲ್ಲೂ ಹೀರೋಸಂ ಕಾಣಿಸಲ್ಲ. ನೈಜತೆಗೆ ಹೆಚ್ಚು ಒತ್ತು ನೀಡಿರುವುದು ಮತ್ತೊಂದು ದುನಿಯಾವನ್ನು ನೆನಪಿಸುತ್ತದೆ. ಅಚ್ಯುತ್, ಮರೀನಾ ತಾರಾ, ರಂಗಾಯಣ ರಘು, ಕರಿಸುಬ್ಬು ಹೊಸ ಹುಡುಗ ಸುಬ್ರಮಣಿ ಇಷ್ಟವಾಗುತ್ತಾರೆ. ಅರ್ಜುನ್ ಜನ್ಯ ಆವರ ಬತ್ತಳಿಕೆಯಲ್ಲಿನ ಎರಡು ಹಾಡುಗಳು ಗುನುಗುವಂತಿವೆ. ಸಭಾಕುಮಾರ್ ಅವರ ಕ್ಯಾಮರಾ ವರ್ಕ್ ಕಥೆಗೆ ತಕ್ಕಂತಿದ್ದು, ಹಾಡುಗಳಲ್ಲಿ ರಿಚ್ ಎನಿಸುತ್ತದೆ. ಸಂಕಲನಕಾರ ದೀಪು ಕುಮಾರ್ ಅಲ್ಲಲ್ಲಿ ಕತ್ತರಿ ಪ್ರಯೋಗ ಮಾಡಿದ್ದರೆ ಇನ್ನಷ್ಟು ಭವಿಷ್ಯ ಚಿತ್ರಕ್ಕೆ ದಕ್ಕುತ್ತಿತ್ತು. ಪ್ರವೀಣಶೆಟ್ಟಿ ಹಾಗೂ ಇತರ ಮೂವರು ನಿರ್ಮಾಪಕರು ಒಂದೊಳ್ಳೆ ಸಿನಿಮಾ ಕೊಟ್ಟ ಖುಷಿ ಪಡಬಹುದು. ಹೊಸಬರೇ ತುಂಬಿರುವುದರಿಂದ ಕಥೆ ಚೆನ್ನಾಗಿದ್ದರೂ ಜನ ಥೇಟರ್ ಕಡೆ ಸುಳಿಯುವುದು ಕೊಂಚ ಅನುಮಾನ. ಹಾಗಾಗಿ ಉಪಗ್ರಹ ಹಕ್ಕಿನಿಂದ ಬಂಡವಾಳ ವಾಪಸ್ ಪಡೆಯುವತ್ತ ನಿರ್ಮಾಪಕರು ಯೋಚಿಸುವುದು ಒಳಿತು. ಯಾಕಂದ್ರೆ ಸತ್ಯ ಕಹಿಯಾಗಿರುತ್ತದೆ. ಸಮಾಜದಲ್ಲಿ ನಡೆಯುವುದನ್ನೆಲ್ಲ ಫಿಲ್ಟರ್ ಇಲ್ದಂಗೆ ಪ್ರವೀಣರಾವ್ ತೋರಿಸಿದ್ದಾರೆ. ಆದಕ್ಕೊಂದು ಹ್ಯಾಟ್ಸಾಫ್ ಹೇಳ್ಲೇಬೇಕು.         

-ಚಿತ್ರಪ್ರಿಯ ಸಂಭ್ರಮ್.
ಪ್ರದರ್ಶನ : ಸ್ಟಾರ್ ಚಿತ್ರಮಂದಿರ, ಕೊಪ್ಪಳ.

Advertisement

0 comments:

Post a Comment

 
Top