PLEASE LOGIN TO KANNADANET.COM FOR REGULAR NEWS-UPDATES


 : ಚುನಾವಣೆಯ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆಯ ಬಗ್ಗೆ ಮತದಾರರಲ್ಲಿ ಭದ್ರತೆಯ ವಿಶ್ವಾಸ ಮೂಡಿಸುವ ಕಾರ್ಯವನ್ನು ಪೊಲೀಸ್ ಇಲಾಖೆ ನಿರ್ವಹಿಸಲಿದೆ ಎಂದು ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ಮಂಜುನಾಥ ಅಣ್ಣಿಗೇರಿ ಅವರು ಹೇಳಿದರು.
  ಚುನಾವಣೆ ಸಂಬಂಧಿಸಿದಂತೆ ಜಿಲ್ಲಾ ಆಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಏರ್ಪಡಿಸಲಾಗಿದ್ದ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
  ಚುನಾವಣೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ಜರುಗದಂತೆ, ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆ ಸನ್ನದ್ಧವಾಗಿರಬೇಕಾಗುತ್ತದೆ.  ಈ ನಿಟ್ಟಿನಲ್ಲಿ ಮತದಾರರಲ್ಲಿ ಭದ್ರತೆ ಹಾಗೂ ರಕ್ಷಣೆಯ ಭಾವನೆ ಮೂಡಿಸುವಂತಾಗಲು ಪೊಲೀಸ್ ಇಲಾಖೆ ಎಲ್ಲ ಅಗತ್ಯ ಕ್ರಮ ಕೈಗೊಳ್ಳಲಿದೆ.  ಚುನಾವಣೆಯ ಇತಿಹಾಸದಲ್ಲಿಯೇ ಇದೇ ಪ್ರಥಮ ಬಾರಿಗೆ ಚುನಾವಣೆಗೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಯ ಕಾರ್ಯವೈಖರಿ ಪರಿಶೀಲನೆಗೆ ಚುನಾವಣಾ ಪೊಲೀಸ್ ವೀಕ್ಷಕರನ್ನು ಚುನಾವಣಾ ಆಯೋಗ ನೇಮಕ ಮಾಡುತ್ತಿದ್ದು, ಇವರು ಬೇರೆ ರಾಜ್ಯದ ಐಪಿಎಸ್ ಶ್ರೇಣಿಯ ಅಧಿಕಾರಿಯಾಗಿರುತ್ತಾರೆ.  ಆದ್ದರಿಂದ ಪೊಲೀಸ್ ಇಲಾಖೆಗೆ ಸಂಬಂಧಪಟ್ಟಂತೆ ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆಗೆ ಪೊಲೀಸ್ ಇಲಾಖೆ ಎಚ್ಚರಿಕೆಯಿಂದ ಕಾರ್ಯನಿರ್ವಹಿಸುವುದು ಸೂಕ್ತ.  ಚುನಾವಣೆಗಾಗಿಯೇ ರಾಜ್ಯಕ್ಕೆ ಸುಮಾರು ೫೭೦ ಪ್ಯಾರಾ ಮಿಲಿಟರಿ ಪಡೆಯನ್ನು ಆಯೋಗ ನಿಯೋಜಿಸಿದ್ದು, ಏಪ್ರಿಲ್ ೧೮ ರ ಒಳಗಾಗಿ ಕೊಪ್ಪಳ ಜಿಲ್ಲೆಗೂ ಪ್ಯಾರಾ ಮಿಲಿಟರಿ ಪಡೆ ಆಗಮಿಸಲಿದೆ.  ಇದರ ಜೊತೆಗೆ ಕೆ.ಎಸ್.ಆರ್.ಪಿ. ತುಕಡಿ, ಮೀಸಲು ಪಡೆ, ಗೃಹರಕ್ಷಕದಳ ಹಾಗೂ ಪೊಲೀಸ್ ಸಿಬ್ಬಂದಿಗಳನ್ನು ಸಹ ನಿಯೋಜಿಸಲಾಗುವುದು.  ಮತದಾರರಲ್ಲಿ ಧೃಡವಿಶ್ವಾಸ ಮೂಡಿಸಲು, ಅಗತ್ಯವಿರುವಡೆ ಪ್ಯಾರಾ ಮಿಲಿಟರಿ ಪಡೆ ಹಾಗೂ ಸ್ಥಳೀಯ ಪೊಲೀಸ್ ರನ್ನು ಒಳಗೊಂಡಂತೆ ಪಥಸಂಚಲನ ನಡೆಸಲಾಗುವುದು.  ಚುನಾವಣೆ ಸಂದರ್ಭದಲ್ಲಿ ಪೊಲೀಸ್ ಇಲಾಖೆಯ ಅಧಿಕಾರಿಗಳು ಕಟ್ಟೆಚ್ಚರ ವಹಿಸುವುದು ಅಗತ್ಯವಾಗಿದ್ದು, ಚುನಾವಣೆ ಸಂದರ್ಭದಲ್ಲಿ ಅಹಿತಕರ ಘಟನೆ ನಡೆಸುವಂತಹ, ದೊಂಬಿ, ಗಲಾಟೆ ಹಾಗೂ ದಬ್ಬಾಳಿಕೆ ನಡೆಸಬಹುದಾದಂತಹ ವ್ಯಕ್ತಿಗಳನ್ನು ಮೊದಲೇ ಗುರುತಿಸಿಕೊಂಡು, ಅಂತಹ ವ್ಯಕ್ತಿಗಳ ಚಲನವಲನದ ಬಗ್ಗೆ ನಿಗಾ ವಹಿಸಬೇಕು.  ಈ ಕುರಿತಂತೆ ಸಂಬಂಧಪಟ್ಟ ಕ್ಷೇತ್ರದ ಚುನಾವಣಾಧಿಕಾರಿಗಳು, ಸೆಕ್ಟರ್ ಅಧಿಕಾರಿಗಳೊಂದಿಗೆ ಸಮನ್ವಯತೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಂಜುನಾಥ ಅಣ್ಣಿಗೇರಿ ಅವರು ತಿಳಿಸಿದರು.
  ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಉಪವಿಭಾಗಾಧಿಕಾರಿ ಮಂಜುನಾಥ್, ತಹಸಿಲ್ದಾರರುಗಳಾದ ದಿನೇಶ್‌ಕುಮಾರ್, ವೀರೇಶ್ ಬಿರಾದಾರ್, ಜಿಲ್ಲೆಯ ೦೫ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಗಳು, ಡಿವೈಎಸ್‌ಪಿ ಗಳಾದ ಸುರೇಶ್ ಮಸೂತಿ, ಬಸವರಾಜ್ ಸೇರಿದಂತೆ ಜಿಲ್ಲೆಯ ಎಲ್ಲ ತಾಲೂಕುಗಳ ಪೊಲೀಸ್ ಅಧಿಕಾರಿಗಳಾದ ವೆಂಕಟಪ್ಪ ನಾಯಕ್, ವಿಜಯ ಬಿರಾದಾರ್, ಜಿ.ಎಸ್. ನೆಲ್ಲೂರ್, ಓಲೇಕಾರ್, ಜೆ.ಆರ್. ನಿಕ್ಕಂ ಮುಂತಾದವರು ಭಾಗವಹಿಸಿದ್ದರು.

Advertisement

0 comments:

Post a Comment

 
Top