ಕೊಪ್ಪಳ-ಹಿರೇಸಿಂದೋಗಿ ಮಾರ್ಗದಲ್ಲಿನ ನಗರಸಭೆಗೆ ಸಂಬಂಧಿತ ಘನತ್ಯಾಜ್ಯ ವಸ್ತು ವಿಲೇವಾರಿ ಘಟಕದಲ್ಲಿ ಅಳವಡಿಸಲಾಗಿರುವ ಘನತ್ಯಾಜ್ಯ ಸರಳ ಸಂಸ್ಕರಣ ಯಂತ್ರದ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು.
ಪ್ಲಾಸ್ಟಿಕ್ ಸೇರಿದಂತೆ ಘನತ್ಯಾಜ್ಯ ವಸ್ತುಗಳ ವಿಲೇವಾರಿ ರಾಜ್ಯದ ದೊಡ್ಡ ದೊಡ್ಡ ನಗರಗಳಲ್ಲಿ ಪ್ರಮುಖ ಸಮಸ್ಯೆಯಾಗಿದ್ದು, ಘನತ್ಯಾಜ್ಯ ವಸ್ತುವಿನ ವಿಲೇವಾರಿಯ ಜೊತೆಗೆ ರೈತ ಸ್ನೇಹಿಯನ್ನಾಗಿ ಸಂಸ್ಕರಣೆ ಮಾಡುವ ಮೂಲಕ, ಅದನ್ನು ರೈತೋಪಯೋಗಿ ಗೊಬ್ಬರವನ್ನಾಗಿ ಪರಿವರ್ತಿಸಲು ಕೊಪ್ಪಳದ ನಗರಸಭೆಯ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಸರಳ ಸಂಸ್ಕರಣೆ ಯಂತ್ರವನ್ನು ಅಳವಡಿಸಲಾಗಿದೆ. ಇಡೀ ರಾಜ್ಯದಲ್ಲಿ ಕೊಪ್ಪಳದಲ್ಲಿಯೇ ಪ್ರಥಮ ಬಾರಿಗೆ ಈ ವಿಧಾನ ಅಳವಡಿಸಲಾಗಿದ್ದು, ರಾಜ್ಯಕ್ಕೆ ಕೊಪ್ಪಳವೇ ಮಾದರಿಯಾಗಲಿದೆ. ಘನತ್ಯಾಜ್ಯ ಕಸವನ್ನು ಸರಳ ಯಂತ್ರದ ಮೂಲಕ ಸಂಸ್ಕರಿಸಿ, ಅದನ್ನು ಗೊಬ್ಬರವನ್ನಾಗಿಸಲಾಗುವುದು. ರೈತರಿಗೆ ಉಚಿತವಾಗಿ ನೀಡುವ ಬದಲಿಗೆ, ಅತ್ಯಂತ ಕಡಿಮೆ ದರ ನಿಗದಿಪಡಿಸಿ, ರೈತರಿಗೆ ವಿತರಿಸಲು ನಿರ್ಧರಿಸಲಾಗಿದೆ. ಇಂತಹ ಗೊಬ್ಬರವು ಕೃಷಿ ಮತ್ತು ತೋಟಗಾರಿಕೆಗೆ ಅತ್ಯಂತ ಉಪಯುಕ್ತ ಸಾವಯವ ಗೊಬ್ಬರವಾಗಲಿದ್ದು, ಸುತ್ತಮುತ್ತಲ ಗ್ರಾಮಗಳ ರೈತರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ. ಸಂಸ್ಕರಿತ ಗೊಬ್ಬರದ ತ್ವರಿತ ವಿಲೇವಾರಿಯಿಂದಾಗಿ, ಕಸದ ಸಂಗ್ರಹಣೆ ಹಾಗೂ ವಿಲೇವಾರಿಯ ಸಮಸ್ಯೆಯೂ ಪರಿಹಾರವಾಗಲಿದೆ. ಇಡೀ ರಾಜ್ಯದ ಎಲ್ಲ ನಗರ, ಸ್ಥಳೀಯ ಸಂಸ್ಥೆಗಳಲ್ಲಿ ಇದೇ ವಿಧಾನವನ್ನು ಅಳವಡಿಸಲು ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ನಿರ್ಧರಿಸಿದ್ದು, ಇದಕ್ಕೆ ಅಗತ್ಯ ಅನುದಾನವನ್ನು ಒದಗಿಸಲೂ ಸಹ ಮಂಡಳಿ ಸಿದ್ಧವಿದೆ ಎಂದು ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಡಾ. ವಾಮನ ಆಚಾರ್ಯ ಅವರು ಹೇಳಿದರು.
ರಾಜ್ಯ ಪೌರಾಡಳಿತ ನಿರ್ದೇಶನಾಲಯದ ಕಾರ್ಯನಿರ್ವಾಹಕ ಅಭಿಯಂತರ ಎಂ.ಎಚ್.ಎಂ. ಶ್ರೀಪ್ರಕಾಶ್ ಅವರು, ಪ್ರಾಸ್ತಾವಿಕವಾಗಿ ಮಾತನಾಡಿ, ರಾಜ್ಯದ ಎಲ್ಲ ಸ್ಥಳೀಯ ಸಂಸ್ಥೆಗಳು ಘನತ್ಯಾಜ್ಯ ವಿಲೇವಾರಿಗಾಗಿ ಸೂಕ್ತ ಸ್ಥಳಾವಕಾಶ ಹೊಂದಿದ್ದು, ಇದರ ಮೂಲ ಸೌಕರ್ಯಗಳನ್ನು ಹಂತ, ಹಂತವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ರಾಜ್ಯದಲ್ಲಿ ಒಟ್ಟಾರೆ ಸುಮಾರು ೫೭೦೦ ಮೆಟ್ರಿಕ್ ಟನ್ ತ್ಯಾಜ್ಯ ಶೇಖರಣೆಯಾಗುತ್ತಿದ್ದು, ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ೧೩ನೇ ಹಣಕಾಸು ಯೋಜನೆಯಡಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಅನುದಾನದ ನೆರವಿನಿಂದ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಕೊಪ್ಪಳ ನಗರಸಭೆಯಲ್ಲಿ ಸುಮಾರು ೨೫ ರಿಂದ ೩೦ ಮೆಟ್ರಿಕ್ ಟನ್ ತ್ಯಾಜ್ಯ ಸಂಗ್ರಹವಾಗುತ್ತಿದ್ದು, ಇದುವರೆಗೂ ತ್ಯಾಜ್ಯ ಸಂಗ್ರಹಣೆ ಮಾಡಲಾಗುತ್ತಿದ್ದು, ಇದರಿಂದ ಸ್ಥಳಾವಕಾಶದ ತೊಂದರೆಯಾಗುತ್ತಿದೆ. ಇದನ್ನು ತಪ್ಪಿಸಲು ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ನಗರಸಭೆಯ ಸಹಯೋಗದೊಂದಿಗೆ ಸರಳ ಸಂಸ್ಕರಣ ಯಂತ್ರವನ್ನು ಸ್ಥಾಪಿಸಲಾಗಿದೆ. ಇದರಿಂದ ಉತ್ಪತ್ತಿಯಾಗುವ ಗೊಬ್ಬರವನ್ನು ಪ್ರತಿ ಟನ್‌ಗೆ ರೂ. ೧೫೦ ರಂತೆ ರೈತರಿಗೆ ವಿತರಿಸಲು ದರ ನಿಗದಿಪಡಿಸಲಾಗಿದೆ. ರೈತರು ಇದರ ಸದುಪಯೋಗ ಪಡೆಯಬಹುದಾಗಿದ್ದು, ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಇದೇ ವಿಧಾನ ಅನುಸರಿಸಲು ಪೌರಾಡಳಿತ ಇಲಾಖೆ ನಿರ್ಧರಿಸಿದೆ ಎಂದರು.
ಸಮಾರಂಭಕ್ಕೂ ಪೂರ್ವದಲ್ಲಿ ಗವಿಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿಯವರು ಸರಳ ಸಂಸ್ಕರಣ ಯಂತ್ರಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಪ್ಪಣ್ಣ ಪದಕಿ, ಜಿ.ಪಂ. ಸದಸ್ಯ ನಾಗನಗೌಡ ಪಾಟೀಲ, ಅಪರ ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಸರ್ಕಾರಿ ಅಭಿಯೋಜಕ ವಿ.ಎಂ. ಭೂಸನೂರಮಠ, ನಗರಸಭೆ ನೂತನ ಸದಸ್ಯರುಗಳಾದ ಮಹೇಂದ್ರ ಛೋಪ್ರಾ, ಪ್ರಾಣೇಶ್, ಮಲ್ಲಣ್ಣ ಮುರಡಿ ಮುಂತಾದ ಗಣ್ಯರು ಭಾಗವಹಿಸಿದ್ದರು. ನಗರಸಭೆ ಪೌರಾಯುಕ್ತೆ ಬಿ.ಎಂ. ಅಶ್ವಿನಿ ಸ್ವಾಗತಿಸಿದರು, ಮಂಜಪ್ಪ ಬಳ್ಳಾರಿ ವಂದಿಸಿದರು.
0 comments:
Post a Comment