PLEASE LOGIN TO KANNADANET.COM FOR REGULAR NEWS-UPDATES

Veer kannada film review


"ವೀರ"ಮಹಿಳೆಯ ವೀರಾವೇಶ. ಮತ್ತೊಂದು ಸಣ್ಣಎಳೆಯ ಕಥೆ, ದೊಡ್ಡ ಸಿನಿಮಾ!

    ಆಕ್ಷನ್ ಕ್ವೀನ್ ಮಾಲಾಶ್ರೀ ಸಿನಿಮಾ ಹೇಗಿರಬೇಕೋ ವೀರ ಹಾಗಿದೆ ನಿಜ. ಅದರೆ ದುರ್ಗಿ, ಶಕ್ತಿ ಸಿನಿಮಾಗಳ ಮುಂದುವರೆದ ಭಾಗದಂತೆ ಭಾಸವಾಗುತ್ತದೆ. ದುರ್ಗಿಯಲ್ಲಿ ತಂಗಿಯನ್ನು ಕೊಂದ ಪಾಪಿಗಳ ವಿರುದ್ಧ ವೀರಾವೇಶ ತೋರಿದ್ದ ಮಾಲಾಶ್ರೀ ವೀರದಲ್ಲಿ ತಮ್ಮನ ಸಾವಿಗೆ ಕಾರಣರಾದವರ ವಿರುದ್ದ ಪಂಜ ಬೀಸಿದ್ದಾರಷ್ಟೇ.
    ದೇಶದಲ್ಲಿರುವ ರಾಜಕೀಯ ನಾಯಕರ ಮುಖಂಡರ ಮುಖವಾಡಗಳನ್ನು ಬಿಚ್ಚಿಡುತ್ತಾ ತೆರೆದುಕೊಳ್ಳುವ ಕತೆ, ಆದೇ ರಾಜಕಾರಣಿಗಳೇ ಖೋಟಾನೋಟಿನ ಜಾಲದ ರೂವಾರಿಗಳು ಎಂಬುದನ್ನು ಬಿಂಬಿಸಲಾಗಿದೆ. ಖೋಟಾನೋಟು ಚಲಾವಣೆಗೆ ತರಲು ಒಬ್ಬ ಇಂಟರ್‌ನ್ಯಾಷನಲ್ ಡಾನ್ ಬೇಕು, ಆದಕ್ಕೆ ರಾಹುಲ್ ದೇವ್ ಹಾಂಗ್ಕಾಂಗ್‌ನಲ್ಲೇ ಇದ್ದುಕೊಂಡು ಭಾರತದಲ್ಲಿ ಕ್ರಿಮಿನಲ್ ದಂಧೆಗಳನ್ನು ನಡೆಸುವಾಗ ದಿಢೀರನೇ ಲೇಡಿ ಡಾನ್ ಅವನ ಭೂಗತ ಸಾಮ್ರಾಜ್ಯವನ್ನು ನೆಲಸಮ ಮಾಡುತ್ತಾಳೆ. ಅಷ್ಟೇ ಆಲ್ಲ, ಜೀವಕ್ಕಿಂತ ಹೆಚ್ಚಾಗಿರುವ ತಮ್ಮ, ಸ್ನೇಹಿತನನ್ನು ಕೊಲ್ಲುವ ಮೂಲಕ ಸಿಂಹಸ್ವಪ್ನವಾಗುತ್ತಾಳೆ.
     ಸಿಂಹಿಣಿಯ ಕಾಟಕ್ಕೆ ಕಾರಣ ಇಂಟರ್‌ನ್ಯಾಷನಲ್ ಡಾನ್ ಕಾರಣ ಹುಡುಕಿದಾಗ ಆಲ್ಲೊಂದು ಫ್ಲ್ಯಾಶ್‌ಬ್ಯಾಕ್. ಚಿಕ್ಕ ವಯಸ್ಸಿನಲ್ಲಿ ಸೋಮ ಅಲಿಯಾಸ್ ಆರ್.ಡಿ. ವೀರಲಕ್ಷ್ಮಿಯ ಸಹೋದರನನ್ನು ಕೊಂದಿರುತ್ತಾನೆ. ಕೋಪದ ರಭಸದಲ್ಲಿ ವೀರಲಕ್ಷ್ಮೀ ಸೋಮನ ಗ್ಯಾಂಗ್‌ನಲ್ಲಿರುವ ಪುಢಾರಿಯೊಬ್ಬನನ್ನು ಸಾಯಿಸಿ ಜೈಲು ಸೇರಿರುತ್ತಾಳೆ.
     ಕೊನೆಗೆ ಆರ್.ಡಿ. ಆಕೆಯೊಂದಿಗೆ ಸಂಧಾನದ ನಾಟಕವಾಡಿ ಸಾಯಿಸುತ್ತಾನೆ. ಭ್ರಷ್ಟ ರಾಜಕಾರಣಿಗಳಿಗೆ ಎಲ್ಲವನ್ನೂ ಪೂರೈಸುವ ಆರ್.ಡಿ. ಹಾಗೂ ಭ್ರಷ್ಟ ರಾಜಕಾರಣಿಗಳನ್ನು ನಿಷ್ಟಾವಂತ ಪೊಲೀಸ್ ಅಧಿಕಾರಿ ಆಶೀಷ್ ವಿದ್ಯಾರ್ಥಿ ಹಾಗೂ ವೀರಲಕ್ಷ್ಮೀ ಸೇರಿಕೊಂಡು ಮಟ್ಟ ಹಾಕಿದಾಗ ಥೇಟರ್‌ನಲ್ಲಿದ್ದ ಜನ ಕಥೆ ಇಷ್ಟೇನಾ ಅಂತ ಎದ್ದು ಹೋಗುತ್ತಾರೆ.
     ಎರಡು ಶೇಡ್‌ನ ಪಾತ್ರದಲ್ಲಿ ಮಾಲಾಶ್ರೀ ಆಭಿನಯ ಸಹಿಸಬಹುದು. ಆದರೆ ತೂಕ ಇನ್ನೊಂಚೂರು ಕಡಿಮೆಯಾಗಬೇಕಿತ್ತು. ಬಹಳ ದಿನಗಳ ನಂತರ ಸಿ.ಆರ್.ಸಿಂಹ ತಘಲಕ್ ಥರದ ರಾಜಕಾರಣಿ ಪಾತ್ರದಲ್ಲಿ ಕಾಣಿಸಿಕೊಂಡು ಇಷ್ಟವಾಗುತ್ತಾರೆ. ರಾಜು ತಾಳಿಕೋಟೆ ಮಾತಿನಲ್ಲೇ ಮೋಡಿ ಮಾಡುತ್ತಾರೆ. ಕೋಮಲ್ ಇತ್ತ ಹಿರೋನೂ ಅಲ್ಲ, ಅತ್ತ ಕಾಮಿಡಿಯನ್ ಕೂಡಾ ಅಲ್ಲ ಎನ್ನುವ ವಿಚಿತ್ರ ಪಾತ್ರದಲ್ಲಿ ಕಾಣಿಸಿಕೊಂಡು ಖುಷಿ ಕೊಡುತ್ತಾರೆ. ಸಿನಿಮಾದಲ್ಲಿ ಹಲವು ಪಾತ್ರಗಳಿದ್ದರೂ ಕಥೆ ಗಿರಕಿ ಹೊಡೆಯುವುದು ಮಾಲಾಶ್ರೀ ಮತ್ತು ರಾಹುಲ್ ದೇವ್ ಸುತ್ತ ಮಾತ್ರ.
      ಅನಿಲ್‌ಕುಮಾರ್ ಬರೆದ ಸಂಭಾಷಣೆ ಚಪ್ಪಾಳೆ ಗಿಟ್ಟಿಸುತ್ತವೆ. ರಾಜೇಶ ಕಾಟ ಅವರ ಛಾಯಾಗ್ರಹಣದ ಬಗ್ಗೆ ಎರಡೂ ಮಾತಿಲ್ಲ. ಆಯ್ಯಪ್ಪ ಪಿ. ಶರ್ಮಾ ಇಂಥ ಹಲವು ಚಿತ್ರಗಳನ್ನು ನಿರ್ದೇಶಿಸಿ ಅನುಭವ ಇರುವುದರಿಂದ, ಪಾತ್ರ ಪೋಷಣೆ, ನಿರೂಪಣೆಯಲ್ಲಿ ಎಡವಿಲ್ಲ. ಹಂಸಲೇಖ ಅವರ ಸಂಗೀತದಲ್ಲಿ ದೋಸ್ತಿ ಎಂದರೆ ದೋಖಾ ಟೈಟಲ್ ಸಾಂಗ್ ಕೇಳುವಂತಿದೆ. ಹಿನ್ನೆಲೆ ಸಂಗೀತ ಚಿತ್ರದ ಓಟಕ್ಕೆ ಪೂರಕವಾಗಿದೆ. ನಿರ್ಮಾಪಕ ರಾಮು ಹಿಂದೆ ಮುಂದೆ ನೋಡದೇ ರಿಚ್‌ನೆಸ್‌ಗೆ ಆಗತ್ಯವಾದದ್ದನ್ನೆಲ್ಲ ಕೊಟ್ಟಿರುವುದು ಪ್ರತಿ ಫ್ರೇಮ್‌ನಲ್ಲೂ ಎದ್ದು ಕಾಣುತ್ತದೆ.
      ಇಷ್ಟೆಲ್ಲಾ ಇದ್ದರೂ ಕಥೆ ಇನ್ನೂ ಬಿಗಿಯಾಗಿರಬೇಕಿತ್ತು ಅನಿಸುತ್ತದೆ. ಒಂದು ಸಣ್ಣ ಕಥೆಯ ಎಳೆಯನ್ನು ಇಟ್ಟುಕೊಂಡು ಆದನ್ನೇ ಹಿಗ್ಗಿಸಿ ತೋರಿಸಿದಂತಿದೆ. ಅದರೂ ವೀರಮಹಿಳೆಯ ವೀರಾವೇಶ ಬೋರ್ ಆಗದು. ಒಮ್ಮೆ ನೋಡಬಹುದು.
       ಚುನಾವಣೆಯ ಈ ಸಮಯದಲ್ಲಿ ಟೋಪಿವಾಲಾ ಸಿನಿಮಾದಂತೆ ವೀರ ಸಿನಿಮಾ ಕೂಡ ಭ್ರಷ್ಟ ರಾಜಕಾರಣಿಗಳ ಬಣ್ಣವನ್ನು ಬಯಲು ಮಾಡುವ ಸಿನಿಮಾ. ಜೊತೆಗೆ ಖೋಟಾನೋಟು ಚಲಾವಣೆಯ ಮುಖಗಳನ್ನು ಎತ್ತಿ ತೋರಿಸಿರುವ ಕಥೆ. ಸಮಾಜ ಸುಧಾರಣೆಯ ಬಗ್ಗೆ ಕನಸಿರುವ ಯುವಕರು ಸಿನಿಮಾವನ್ನು ನೋಡಲೇಬೇಕು ಎಂಬರ್ಥದ ಸಂಭಾಷಣೆ ಚಿತ್ರದಲ್ಲಿದೆ. ಉಳಿದದ್ದು ನಿಮಗೆ ಬಿಟ್ಟದ್ದು.
-ಚಿತ್ರಪ್ರಿಯ ಸಂಭ್ರಮ್.
ಪ್ರದರ್ಶನ : ಲಕ್ಷ್ಮೀ ಚಿತ್ರಮಂದಿರ, ಕೊಪ್ಪಳ.


Advertisement

0 comments:

Post a Comment

 
Top