PLEASE LOGIN TO KANNADANET.COM FOR REGULAR NEWS-UPDATES


  ಡಿ.ಸಿ. ತುಳಸಿ ಮದ್ದಿನೇನಿ
 ವಿಧಾನಸಭಾ ಕ್ಷೇತ್ರಗಳ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಈಗಾಗಲೆ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದು, ಎಲ್ಲ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.  ತಪ್ಪಿದಲ್ಲಿ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಎಚ್ಚರಿಕೆ ನೀಡಿದರು.
  ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
  ವಿಧಾನಸಭಾ ಕ್ಷೇತ್ರಗಳ ಚುನಾವಣೆಗೆ ಸಂಬಂಧಿಸಿದಂತೆ ನೀತಿ ಸಂಹಿತೆ ಜಾರಿಯಲ್ಲಿದ್ದು, ಎಲ್ಲ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.  ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ, ಕಾನೂನು ರೀತ್ಯಾ ಕ್ರಮ ಜರುಗಿಸಲಾಗುವುದು.  ಯಾವುದೇ ಕಾರ್ಯಕ್ರಮ ನಡೆಸುವುದು, ರಾಜಕೀಯ ಪ್ರಮುಖರ ಬಹಿರಂಗ ಸಭೆ ಏರ್ಪಡಿಸುವುದಕ್ಕೆ ಸಂಬಂಧಪಟ್ಟ ಕ್ಷೇತ್ರ ಚುನಾವಣಾಧಿಕಾರಿಗಳಿಂದ ಅನುಮತಿ ಪಡೆಯಬೇಕು.  ಈ ಬಾರಿ ಯಾವುದೇ ಫ್ಲೆಕ್ಸ್ ಅಳವಡಿಕೆ, ಸಭೆ, ಸಮಾರಂಭಗಳಿಗೆ ಅನುಮತಿ, ವಾಹನಗಳ ಬಳಕೆ ಇತ್ಯಾದಿಗಳಿಗೆ ಆಯಾ ಕ್ಷೇತ್ರ ಚುನಾವಣಾಧಿಕಾರಿಗಳಿಂದ ಅನುಮತಿ ಪಡೆಯಲು ಏಕಗವಾಕ್ಷಿ ವ್ಯವಸ್ಥೆ ಅಂದರೆ ನಗರಸಭೆ/ಪೊಲೀಸ್/ಅಗ್ನಿಶಾಮಕ ಮುಂತಾದ ಅನುಮತಿಗೆ ಒಂದೇ ಕಡೆ ಅರ್ಜಿ ಸಲ್ಲಿಸಿ  ಅನುಮತಿ ಪಡೆಯಲು ಅನುಕೂಲ ಕಲ್ಪಿಸಲಾಗಿದೆ.  ಅರ್ಜಿ ಸಲ್ಲಿಸಿದ ೨೪ ಗಂಟೆಯ ಒಳಗಾಗಿ ಅನುಮತಿಗೆ ಸಲ್ಲಿಸಿದ ಅರ್ಜಿಯನ್ನು ವಿಲೇವಾರಿ ಮಾಡಲಾಗುವುದು.  ಹೆಲಿಕಾಪ್ಟರ್ ಬಳಕೆಗೆ ಮಾತ್ರ ಜಿಲ್ಲಾಧಿಕಾರಿಗಳ ಕಚೇರಿಯಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ ಎಂದರು.
ಹೆಸರು ಸೇರ್ಪಡೆಗೆ ಏ. ೧೦ ರವರೆಗೆ ಅವಕಾಶ : ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಳಿಸಲು ಏ. ೧೦ ರವರೆಗೆ ಅವಕಾಶ ಕಲ್ಪಿಸಲಾಗಿದ್ದು, ೧೮ ವರ್ಷ ಮೇಲ್ಪಟ್ಟ ಅರ್ಹರು ಆಯಾ ಮತಗಟ್ಟೆಯಲ್ಲಿನ ಬೂತ್ ಮಟ್ಟದ ಅಧಿಕಾರಿಗಳಿಂದ ನಮೂನೆ-೬ ಅನ್ನು ಭರ್ತಿ ಮಾಡಿ, ಪಾಸ್‌ಪೋರ್ಟ್ ಅಳತೆಯ ಭಾವಚಿತ್ರದೊಂದಿಗೆ ಅರ್ಜಿ ಸಲ್ಲಿಸಬೇಕು.  ಸದ್ಯ ಭಾವಚಿತ್ರವಿರುವ ಮತದಾರರ ಗುರುತಿನ ಚೀಟಿ ತಯಾರಿಸುವುದನ್ನು ಸ್ಥಗಿತಗೊಳಿಸಲಾಗಿದ್ದು, ಹೊಸದಾಗಿ ಹೆಸರು ಸೇರ್ಪಡೆಗೊಳಿಸಲು ಅರ್ಜಿ ಸಲ್ಲಿಸುವವರ ಹೆಸರನ್ನು ಮತದಾರರ ಪಟ್ಟಿಗೆ ಸೇರಿಸಿಕೊಳ್ಳಲಾಗುವುದು. ಅಲ್ಲದೆ ಅಂತಹವರಿಗೆ ಭಾವಚಿತ್ರವಿರುವ ಮತದಾರರ ಪಟ್ಟಿಯನ್ನು ಪರಿಶೀಲಿಸಿಕೊಂಡು, ಮತದಾನಕ್ಕೆ ಅವಕಾಶ ಕಲ್ಪಿಸಲಾಗುವುದು.  ಜಿಲ್ಲೆಯ ವಿವಿಧೆಡೆ ಮತಗಟ್ಟೆ ಅಧಿಕಾರಿಗಳಿಗೆ ಒಂದೇ ಬಾರಿ, ಒಬ್ಬರೇ ವ್ಯಕ್ತಿ ೫೦೦ ರಿಂದ ೧೦೦೦ ಅರ್ಜಿಗಳನ್ನು ಸಲ್ಲಿಸುತ್ತಿರುವ ಬಗ್ಗೆ ದೂರುಗಳು ಕೇಳಿಬಂದಿದ್ದು, ಈ ರೀತಿ ಅರ್ಜಿ ಸಲ್ಲಿಸಲು ಅವಕಾಶವಿಲ್ಲ.  ಹೆಸರು ಸೇರ್ಪಡೆಗೊಳಿಸಲು ಬಯಸುವ ಅರ್ಹ ಅರ್ಜಿದಾರರೇ ಖುದ್ದಾಗಿ ಬೂತ್ ಮಟ್ಟದ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಲು ಮಾತ್ರ ಅವಕಾಶ ಕಲ್ಪಿಸಲಾಗಿದೆ.  ಈ ಬಾರಿ ಮತದಾನಕ್ಕೂ ಮೂರು ದಿನಗಳ ಮೊದಲೇ ಆಯಾ ಬೂತ್ ಮಟ್ಟದ ಅಧಿಕಾರಿಗಳು ಮತದಾರರಿಗೆ ಮತದಾನದ ಗುರುತಿನ ಚೀಟಿ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ.  ಈಗಾಗಲೆ ಆಯಾ ಮತಗಟ್ಟೆ ಅಧಿಕಾರಿಗಳಿಗೆ ಮತ್ತು ರಾಜಕೀಯ ಪಕ್ಷಗಳಿಗೆ ಮತದಾರರ ಪಟ್ಟಿಯನ್ನು ವಿತರಿಸಲಾಗಿದ್ದು, ಆಯಾ ಮತದಾರರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಹಾಗೂ ಫೋಟೋ ಇರುವುದನ್ನು ಪರಿಶೀಲಿಸಿಕೊಂಡು ಖಾತ್ರಿಪಡಿಸಿಕೊಳ್ಳಬೇಕು.  ಒಂದು ವೇಳೆ ಮತದಾರರ ಪಟ್ಟಿಯಲ್ಲಿ ಹೆಸರು ಬಿಟ್ಟುಹೋಗಿದ್ದಲ್ಲಿ ಅಥವಾ ಡಿಲೀಟ್ ಆಗಿದ್ದಲ್ಲಿ, ಅಂತಹವರು ಪುನಃ ಸೂಕ್ತ ದಾಖಲೆಗಳೊಂದಿಗೆ ನಮೂನೆ-೬ ಅನ್ನು ಭರ್ತಿ ಮಾಡಿ, ಹೆಸರು ಸೇರ್ಪಡೆಗೊಳಿಸಬಹುದಾಗಿದೆ ಎಂದರು.
ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ : ಚುನಾವಣೆ ಪ್ರಚಾರ ಸಂದರ್ಭದಲ್ಲಿ ಮಕ್ಕಳನ್ನು ಬಳಕೆ ಮಾಡುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಕಠಿಣ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗ ಸೂಚನೆ ನೀಡಿದ್ದು, ಯಾವುದೇ ರಾಜಕೀಯ ಪಕ್ಷಗಳು ಅಥವಾ ಅಭ್ಯರ್ಥಿಗಳು ಚುನಾವಣಾ ಪ್ರಚಾರಕ್ಕೆ ಮಕ್ಕಳನ್ನು ಬಳಕೆ ಮಾಡುವುದು ಕಂಡುಬಂದಲ್ಲಿ, ಅಂತಹವರ ವಿರುದ್ಧ ಮಕ್ಕಳ ರಕ್ಷಣಾ ಕಾಯ್ದೆ ಅಡಿ ದೂರು ದಾಖಲಿಸಿ, ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು.  ಪತ್ರಿಕಾ ಮಾಧ್ಯಮ ಅಥವಾ ಕೇಬಲ್ ಹಾಗೂ ಇತರೆ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಯಾವುದೇ ಜಾಹೀರಾತನ್ನು ನೇರವಾಗಿ ಪ್ರಕಟಿಸುವುದು ಅಥವಾ ಪ್ರಸಾರ ಮಾಡಲು ಅವಕಾಶವಿಲ್ಲ.  ಯಾವುದೇ ಜಾಹೀರಾತು/ಪ್ರಚಾರಕ್ಕೆ ಸಂಬಂಧಿಸಿದಂತೆ ಜಿಲ್ಲಾ ಮಟ್ಟದ ಸಮಿತಿಯಿಂದ ಕ್ಲಿಯರೆನ್ಸ್ ಪ್ರಮಾಣ ಪತ್ರ ಪಡೆದು ಪ್ರಸಾರಗೊಳಿಸಬಹುದಾಗಿದೆ.  ಇದನ್ನು ಉಲ್ಲಂಘಿಸುವ ಪಕ್ಷ/ಅಭ್ಯರ್ಥಿ/ಮಾಧ್ಯಮದವರ ವಿರುದ್ಧ ನೀತಿಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗುವುದು.  ಚುನಾವಣಾ ಪ್ರಚಾರಕ್ಕಾಗಿ ಯಾವುದೇ ಧಾರ್ಮಿಕ ಸ್ಥಳ, ಮಸೀದಿ, ಮಂದಿರಗಳನ್ನು ಬಳಸುವಂತಿಲ್ಲ ಎಂದರು.
ನೀತಿ ಸಂಹಿತೆ ನಿಗಾ ತಂಡ : ಚುನಾವಣೆಯನ್ನು ಮುಕ್ತ ಹಾಗೂ ನ್ಯಾಯಸಮ್ಮತವಾಗಿ ನಡೆಸುವ ಉದ್ದೇಶದಿಂದ ನೀತಿ ಸಂಹಿತೆ ಪಾಲನೆಯ ಬಗ್ಗೆ ನಿಗಾ ವಹಿಸಲು ಪ್ರತಿ ೮-೧೦ ಮತಗಟ್ಟೆಗಳಿಗೆ ಒಬ್ಬರಂತೆ ಸೆಕ್ಟರ್ ಅಧಿಕಾರಿಗಳನ್ನು ನೇಮಿಸಲಾಗಿದೆ.    ಪ್ರತಿ ಪ್ರಮುಖ ಅಭ್ಯರ್ಥಿಗೆ ವಿಡಿಯೋ ಕವರೇಜ್ ತಂಡವನ್ನು ಸಹ ನಿಯೋಜಿಸಲಾಗುತ್ತಿದೆ.  ಅಲ್ಲದೆ ಈ ರೀತಿ ಚಿತ್ರೀಕರಣ ನಡೆಸಿದ ವಿಡಿಯೋ ದೃಶ್ಯಾವಳಿಗಳನ್ನು ವೀಕ್ಷಿಸಲು ಮತ್ತು ನೀತಿ ಸಂಹಿತೆ ಉಲ್ಲಂಘನೆಯ ಪ್ರಕರಣ ಪತ್ತೆ ಹಚ್ಚಲು ಸಹ ಪ್ರತ್ಯೇಕ ತಂಡಗಳನ್ನು ರಚಿಸಲಾಗಿದೆ.  ಚುನಾವಣಾ ವೆಚ್ಚ ಪರಿಶೀಲನೆ, ಲೆಕ್ಕಾಚಾರಗಳ ನಿರ್ವಹಣೆಗೆ ಪ್ರತ್ಯೇಕ ತಂಡ ನೇಮಕ ಮಾಡಲಾಗಿದ್ದು, ಯಾವುದೇ ಚುನಾವಣಾ ಅಕ್ರಮ ನಡೆಸಲು ಅವಕಾಶ ಇರುವುದಿಲ್ಲ ಎಂದು ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಹೇಳಿದರು.
  ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಂಜುನಾಥ ಅಣ್ಣಿಗೇರಿ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಿ.ಕೆ. ರವಿ, ಅಪರ ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಸೇರಿದಂತೆ ಆಯಾ ಕ್ಷೇತ್ರ ಚುನಾವಣಾಧಿಕಾರಿಗಳು, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

Advertisement

0 comments:

Post a Comment

 
Top