PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ ಜಿಲ್ಲೆಯಲ್ಲಿ ನೂತನವಾಗಿ ಪ್ರಾರಂಭವಾಗಿರುವ ನೆಹರು ಯುವ ಕೇಂದ್ರದ ವತಿಯಿಂದ ಯುವಶಕ್ತಿಯನ್ನು ಸತ್ಕಾರ್ಯಗಳಿಗೆ ಪ್ರೇರೇಪಿಸುವಂತಹ ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೊಳಿಸುವಂತೆ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಸೂಚನೆ ನೀಡಿದರು.
     ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ನೆಹರು ಯುವ ಕೇಂದ್ರದ ಮೊದಲ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
     ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯು ಯುವಜನ ಶಕ್ತಿಯನ್ನು ಉತ್ತಮ ಕಾರ್ಯಗಳಿಗೆ ಪ್ರೇರೇಪಿಸುವ ರೀತಿಯಲ್ಲಿ ಕ್ರೀಡೆ, ಸಂಸ್ಕೃತಿ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ತೊಡಸಿಕೊಳ್ಳುವಂತೆ ಯುವಜನೋತ್ಸವ, ಗ್ರಾಮೀಣ ಕ್ರೀಡಾಕೂಟಗಳು, ಯುವಜನ ಮೇಳದಂತಹ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸುತ್ತಿದೆ.  ಇದೇ ರೀತಿ ನೆಹರು ಯುವ ಕೇಂದ್ರದ ವತಿಯಿಂದಲೂ ಯುವಜನರನ್ನು ಉತ್ತಮ ಕಾರ್ಯಗಳಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಯುವಜನಶಕ್ತಿ ಕೇಂದ್ರಿತ ಕಾರ್ಯಕ್ರಮಗಳನ್ನು ರೂಪಿಸಬೇಕು.  ಇದಕ್ಕಾಗಿ ಈ ವರ್ಷದ ಕ್ರಿಯಾ ಯೋಜನೆಯಲ್ಲಿ ಕಾರ್ಯಕ್ರಮಗಳನ್ನು ಅಳವಡಿಸುವಂತೆ ಸೂಚನೆ ನೀಡಿದರು.
     ಸೇನಾ ನೇಮಕಾತಿ ಭರ್ತಿ ರ್‍ಯಾಲಿಯಂತಹ ದೈಹಿಕ ಸಾಮರ್ಥ್ಯ ಆಧಾರಿತ ರೀತಿಯ ನೇಮಕಾತಿ ಪರೀಕ್ಷೆಗಳಲ್ಲಿ ಕೊಪ್ಪಳ ಜಿಲ್ಲೆಯ ಅಭ್ಯರ್ಥಿಗಳು ಅರ್ಹತೆ ಗಿಟ್ಟಿಸಲು ವಿಫಲರಾಗುತ್ತಿರುವುದು ಕಂಡುಬರುತ್ತಿದೆ.  ಜಿಲ್ಲೆಯ ಅಭ್ಯರ್ಥಿಗಳಿಗೆ ಗ್ರಾಮೀಣ ಮಟ್ಟದಲ್ಲಿಯೂ ಉತ್ತಮ ದೈಹಿಕ ತರಬೇತಿ ಪಡೆಯಲು ಸಾಧ್ಯವಾಗುವಂತೆ ಮಾಡಲು ನೆಹರು ಯುವಕೇಂದ್ರದಿಂದ ಮೊದಲ ಹಂತವಾಗಿ ಜಿಲ್ಲೆಯ ೫ ಗ್ರಾಮಗಳನ್ನು ಆಯ್ಕೆ ಮಾಡಿ, ಅಲ್ಲಿ ದೈಹಿಕ ಸಾಮರ್ಥ್ಯ ವೃದ್ಧಿಸಲು ತರಬೇತಿ ನೀಡುವಂತಹ ಯೋಜನೆ ರೂಪಿಸಬೇಕು, ಅಲ್ಲದೆ ಜಿಲ್ಲೆಯ ೩ ಗ್ರಾಮಗಳಲ್ಲಿ ಬಾಲಕಿಯರಿಗಾಗಿ ಖೋಖೋ ಕ್ರೀಡಾಂಗಣ ಅಭಿವೃದ್ಧಿಪಡಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.
     ನೆಹರು ಯುವಕೇಂದ್ರದ ಕಚೇರಿಯನ್ನು ಈಗಿರುವ ಬಾಡಿಗೆ ಕಟ್ಟಡದಿಂದ ಜಿಲ್ಲಾ ಕ್ರೀಡಾಂಗಣಕ್ಕೆ ಸ್ಥಳಾಂತರಿಸಿ, ಅದೇ ಬಾಡಿಗೆ ಹಣವನ್ನು ಜಿಲ್ಲಾ ಕ್ರೀಡಾಂಗಣ ಸಮಿತಿಗೆ ಪಾವತಿಸಬೇಕು.  ಇದರಿಂದ ಜಿಲ್ಲಾ ಕ್ರೀಡಾಂಗಣ ಅಭಿವೃದ್ಧಿಗೆ ಸಂಪನ್ಮೂಲ ಕ್ರೋಢೀಕರಣವಾದಂತಾಗುತ್ತದೆ.  ಜಿಲ್ಲಾ ಕ್ರೀಡಾಂಗಣದಲ್ಲಿ ಮಹಿಳಾ ವ್ಯಾಯಾಮ ಶಾಲೆ ಪ್ರಾರಂಭಿಸಬೇಕೆನ್ನುವ ಯೋಜನೆಗೆ ಸಹಕಾರಿಯಾಗಲಿದೆ ಎಂದು ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಸೂಚನೆ ನೀಡಿದರು.
     ಸಭೆಯಲ್ಲಿ ಭಾಗವಹಿಸಿದ್ದ ಕೊಪ್ಪಳ ನೆಹರು ಯುವಕೇಂದ್ರದ ಜಿಲ್ಲಾ ಯುವ ಸಮನ್ವಯಾಧಿಕಾರಿ ಮಾಲತಿ ಗಾಯಕವಾಡ್ ಅವರು ನೆಹರು ಯುವಕೇಂದ್ರದ ಚಟುವಟಿಕೆಗಳ ಬಗ್ಗೆ ವಿವರ ನೀಡಿ, ಕಳೆದ ಸೆಪ್ಟಂಬರ್‌ನಲ್ಲಿ ಕಿನ್ನಾಳ ಗ್ರಾಮ ಹಾಗೂ ಇದೇ ತಿಂಗಳು ಕುಷ್ಟಗಿಯಲ್ಲಿ ಯೂತ್ ಕ್ಲಬ್ ಕ್ಯಾಂಪೇನ್ ನಡೆಸಲಾಗಿದೆ.  ಹೊರತಟ್ನಾಳ ಹಾಗೂ ತೋಪಲಕಟ್ಟಿ ಗ್ರಾಮದಲ್ಲಿ ಜಾನಪದ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಗಿದೆ.  ಅಳವಂಡಿ, ಕುಷ್ಟಗಿ ಗ್ರಾಮಗಳಲ್ಲಿ ಮಹಿಳೆಯರಿಗೆ ಹೊಲಿಗೆ ತರಬೇತಿ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದರು.
     ಸಭೆಯಲ್ಲಿ ನೆಹರು ಯುವಕೇಂದ್ರ ಸಲಹಾ ಸಮಿತಿ ಸದಸ್ಯರುಗಳಾದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ವಿ.ಎನ್. ಘಾಡಿ, ಜಿಲ್ಲಾ ವಾರ್ತಾಧಿಕಾರಿ ತುಕಾರಾಂ ರಾವ್ ಬಿ.ವಿ., ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಹೆಚ್.ಎಸ್. ಅಂಗಡಿ, ಸ್ವಯಂ ಸೇವಾ ಸಂಸ್ಥೆ ಪ್ರತಿನಿಧಿಗಳಾದ ಜಿ. ಗೋನಾಳ, ರಾಕೇಶ್ ಮುಂತಾದವರು ಭಾಗವಹಿಸಿದ್ದರು.

Advertisement

0 comments:

Post a Comment

 
Top