PLEASE LOGIN TO KANNADANET.COM FOR REGULAR NEWS-UPDATES


- ಸನತ್‌ಕುಮಾರ ಬೆಳಗಲಿ

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಪ್ರತ್ಯೇಕ ಪಕ್ಷ ಕಟ್ಟುವ ಪ್ರಹಸನವನ್ನು ಒಂದೆಡೆ ನಡೆಸಿದ್ದರೆ, ಬಿಜೆಪಿಯಲ್ಲಿ ಅವರನ್ನು ಉಳಿಸಿಕೊಳ್ಳುವ ನೆಪದಲ್ಲಿ ತಮ್ಮ ಕುರ್ಚಿಯನ್ನು ಉಳಿಸಿಕೊಳ್ಳುವ ಕಸರತ್ತನ್ನು ಕೆಲ ಮಂತ್ರಿಗಳು ಆರಂಭಿಸಿದ್ದಾರೆ. ಮತ್ತೊಂದೆಡೆ ಆರೆಸ್ಸೆಸ್ ರಾಜ್ಯದಲ್ಲಿ ಕೋಮುಕಲಹದ ಕಿಡಿಯನ್ನು ಹೊತ್ತಿಸಲು ಅವಿರತ ಕಾರ್ಯಾಚರಣೆಯನ್ನು ನಡೆಸಿದೆ. ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಕರ್ನಾಟಕದ 16ಊರುಗಳಲ್ಲಿ ಪ್ರಕ್ಷುಬ್ದ ಪರಿಸ್ಥಿತಿಯನ್ನು ನಿರ್ಮಾಣ ಮಾಡಲಾಗಿತ್ತು. ಅಲ್ಪಸಂಖ್ಯಾತ ಮುಸಲ್ಮಾನರನ್ನು, ಕ್ರೈಸ್ತರನ್ನು ಗುರಿಯಾಗಿರಿಸಿಕೊಂಡು ಆತಂಕದ ವಾತಾವರಣವನ್ನು ಸೃಷ್ಟಿಸಿ ಈ ಉದ್ರೇಕದ ಪರಿಸ್ಥಿತಿಯನ್ನು ಕಾಪಾಡಿಕೊಂಡು ಬರಲಾಗುತ್ತಿದೆ.ಸಂಘ ಪರಿವಾರ ಬಿಕ್ಕಟ್ಟಿನ ಸುಳಿಗೆ ಸಿಲುಕಿದಾಗೆಲ್ಲ ಜನರ ಗಮನವನ್ನು ಬೇರೆಡೆ ಸೆಳೆಯಲು ಭಾರತೀಯರನ್ನು ಕೋಮು ಆಧಾರದಲ್ಲಿ ವಿಭಜಿಸಲು ಇಂಥ ಹುನ್ನಾರ ನಡೆಸುತ್ತಾ ಬಂದಿದೆ. ಈ ಹುನ್ನಾರದ ಭಾಗವಾಗಿ ಉತ್ತರ ಕರ್ನಾಟಕದ ಹುಬ್ಬಳ್ಳಿ, ಬೆಳಗಾವಿ, ಗಂಗಾವತಿ, ದಾವಣೆಗೆರೆ ಮುಂತಾದ ಕಡೆ ಗಲಭೆ ನಡೆಸುವ ಷಡ್ಯಂತ್ರ ರೂಪಿಸಲಾಗಿತ್ತು. ಅನೇಕ ಕಡೆ ಪೊಲೀಸ್ ಅಧಿಕಾರಿಗಳು ಗಲಭೆಕೋರ ಪರಿವಾರಕ್ಕೆ ಶರಣಾಗತ ವಾಗುವಂಥ ಸನ್ನಿವೇಶವನ್ನು ಬಿಜೆಪಿ ಸರಕಾರ ನಿರ್ಮಾಣ ಮಾಡಿತ್ತು.
ಬಹುತೇಕ ಕಡೆ ದಂಗೆಕೋರರನ್ನು ರಕ್ಷಿಸುವ ಯತ್ನ ಆಡಳಿತದಿಂದಲೇ ನಡೆಯಿತು. ಪೊಲೀಸ್ ವ್ಯವಸ್ಥೆಯಂತೂ ಸಂಪೂರ್ಣವಾಗಿ ಸಂಘಪರಿವಾರಕ್ಕೆ ಶರಣಾದಂತೆ ಕಾಣುತ್ತದೆ.ನಾನು ಇತ್ತೀಚೆಗೆ ಹುಬ್ಬಳ್ಳಿಗೆ ಹೋಗಿದ್ದಾಗಲೂ ಇಂಥದೊಂದು ಘಟನೆ ನಡೆಯಿತು. ಬಕ್ರೀದ್ ಹಬ್ಬದ ಹಿಂದಿನ ದಿನ ಹಳೆ ಹುಬ್ಬಳ್ಳಿಯ ಇಂಡಿಪಂಪ್ ಬಳಿ ಅಕ್ರಮವಾಗಿ ವಿಶ್ವಹಿಂದೂ ಪರಿಷತ್ ಹಾಗೂ ಭಜರಂಗದಳ ಗೂಂಡಾಗಳು ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದ ಯುವಕರ ಮೇಲೆ ಹಲ್ಲೆ ಮಾಡಿ ಮನಬಂದದಂತೆ ಥಳಿಸಿದರು. ಅಕ್ರಮ ದನ ಸಾಗಣೆ ಅಪರಾಧ ಎಂದಾದರೆ ಪೊಲೀಸರಿಗೆ ತಿಳಿಸಬಹುದಾಗಿತ್ತು. ಆದರೆ ಈ ಗೂಂಡಾಗಳು ತಾವೇ ಕಾನೂನನ್ನು ಕೈಗೆತ್ತಿಕೊಂಡು ಹಲ್ಲೆ ಮಾಡಿದರು. ಈ ಘಟನೆಯಲ್ಲಿ ಗಾಯಗೊಂಡ ಅಮಾಯಕ ಅಲ್ಪಸಂಖ್ಯಾತ ಯುವಕರು ಆಸ್ಪತ್ರೆ ಸೇರಿದ್ದಾರೆ.
ಇದಿಷ್ಟೇ ಆಗಿದ್ದರೆ ಬೇರೆ ವಿಷಯ. ಇದು ಇಲ್ಲಿಗೆ ಮುಗಿಯಲಿಲ್ಲ. ಹಲ್ಲೆ ಮಾಡಿದ ಭಜರಂಗಿಗಳನ್ನು ಪೊಲೀಸರು ಬಂಧಿಸಿದರು. ಆಗ ಆರಂಭವಾಯಿತು ಚಡ್ಡಿಗಳ ಆರ್ಭಟ. ಹಿಂದೂ ಸಂಘಟನೆ ಕಾರ್ಯಕರ್ತರನ್ನು ಪೊಲೀಸರು ಬಂಧಿಸದ್ದು ಮಹಾಪರಾಧ ಎಂದು ಬಿಜೆಪಿ ನಾಯಕರು ರಂಪಾಟ ನಡೆಸಿದರು. ಸಂಬಂಧಿಸಿದ ಪೊಲೀಸ್ ಅಧಿಕಾರಿಗಳ ವರ್ಗಾವಣೆಗೆ ಒತ್ತಾಯಿಸಲು ತೊಡಗಿದರು. ಆಗ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರು ಗೋಕುಲ ರಸ್ತೆಯ ಆರೆಸ್ಸೆಸ್ ಕಚೇರಿಗೆ ಧಾವಿಸಿ ಒಲೈಸಲು ಆರಂಭಿಸಿದರು. ಸಂಘ ಕಾರ್ಯಾಲಯಕ್ಕೆ ಹೋಗಿ ಮಂಡಿಯೂರು ವಂತೆ ಸ್ಥಳೀಯ ಬಿಜೆಪಿ ಸಂಸದರು ಪೊಲೀಸರ ಮೇಲೆ ಒತ್ತಡ ಹೇರಿದರು.
ಭಜರಂಗ ದಳದವರನ್ನು ಬಂಧಿಸಿದ ಪೊಲೀಸಾಧಿಕಾರಿಗಳು ಆರೆಸ್ಸೆಸ್ ಕಚೇರಿಗೆ ಹೋಗಿ ಕ್ಷಮೆ ಯಾಚನೆ ಮಾಡುವಮತೆ ಇಲಾಖೆಯ ಮೇಲಧಿಕಾರಿಗಳೂ ಒತ್ತಡ ಹೇರಿದರು. ಪೊಲೀಸಾಧಿಕಾರಿಗಳು ಆರೆಸ್ಸೆಸ್ ಕಾರ್ಯಾಲಯಕ್ಕೆ ಹೋಗಿ ಕ್ಷಮೆ ಯಾಚಿಸುವುದು ಸಂವಿಧಾನ ಬಾಹಿರ ಕೃತ್ಯ. ಈ ಸಂವಿಧಾನೇತರ ಕೇಂದ್ರವೊಂದಕ್ಕೆ ಕಾನೂನು ಪಾಲನೆ ಮಾಡಬೇಕಾದ ಪೊಲೀಸ್ ಅಧಿಕಾರಿಗಳು ಶರಣಾಗತರಾಗುವುದು ನಾಚಿಕೆಗೇಡಿನ ಸಂಗತಿ ಎಂದು ಹುಬ್ಬಳ್ಳಿಯ ದಲಿತ, ಪ್ರಗತಿಪರ ಸಂಘಟನೆ ಗಳು ಯುವ ಕಾಂಗ್ರೆಸ್ ಜೊತೆ ಸೇರಿ ಪ್ರತಿಭಟನೆ ನಡೆಸಿದವು.
ಈ ಕ್ಷಮೆ ಯಾಚನೆಗೂ ಆರೆಸ್ಸೆಸ್ ಮಣಿಯಲಿಲ್ಲ. ಭಜರಂಗದಳ, ವಿ.ಎಚ್.ಪಿ. ಕಾರ್ಯಕರ್ತರನ್ನು ಬಂಧಿಸಿದ ಇಬ್ಬರು ಸರ್ಕಲ್ ಇನ್ಸ್‌ಪೆಕ್ಟರ್‌ಗಳು, ಒಬ್ಬ ಪೇದೆಯನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ಇನ್ನಿಬ್ಬರು ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ಹಲ್ಲೆಕೋರರನ್ನು ಕಾನೂನು ಪ್ರಕಾರ ಬಂಧಿಸಿದ ಪೊಲೀಸಾಧಿಕಾರಿಗಳನ್ನು ಈ ರೀತಿ ಶಿಕ್ಷಿಸಿದರೆ ಪೊಲೀಸರ ನೈತಿಕ ಸ್ಥೈರ್ಯ ಕುಸಿಯುತ್ತದೆ ಎಂದು ನಾನು ಭೇಟಿಯಾದ ಹೆಸರು ಹೇಳಲಿಚ್ಛಿಸದ ಪೊಲೀಸಾಧಿಕಾರಿ ಅಲವತ್ತು ಕೊಂಡರು.
ಇದು ಹುಬ್ಬಳ್ಳಿ ಕಡೆ ಮಾತ್ರವಲ್ಲ, ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲೂ ಬಕ್ರೀದ್ ಹಬ್ಬದ ದಿನ ಗಲಭೆ ನಡೆಸಲು ಪ್ರಚೋದಿಸ ಲಾಯಿತು. ಇದರಿಂದಾಗಿ ನಾಯ್ಕರ ಓಣಿಯಲ್ಲಿ ಪ್ರಕ್ಷುಬ್ದ ಪರಿಸ್ಥಿತಿ ನಿರ್ಮಾಣ ವಾಯಿತು. ದಾವಣಗೇರೆಯಲ್ಲಿ ಗಣೇಶೋತ್ಸವದ ಸಂದರ್ಭದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಇಡಲಾಗಿದ್ದ ಗಣಪತಿ ಮೂರ್ತಿಗಳನ್ನೇ ಮಧ್ಯರಾತ್ರಿ ಕಳ್ಳತನ ಮಾಡಲಾಯಿತು. ಇದಕ್ಕೆ ಅಲ್ಪಸಂಖ್ಯಾತರೇ ಕಾರಣ ಎಂದು ಸಂಘಪರಿವಾರದ ಸಂಘಟನೆಗಳು ಪ್ರತಿಭಟನೆ ಆರಂಭಿಸಿದರು. ಆದರೆ ಗಣಪತಿಯನ್ನು ಕಳ್ಳತನ ಮಾಡಿದ ಕಿಡಿಗೇಡಿಗಳು ಅಲ್ಪಸಂಖ್ಯಾತ ಸಮುದಾಯವರಲ್ಲ, ಅವರೆಲ್ಲ ಹಿಂದೂಗಳು ಎಂಬ ಸಂಗತಿ ನಂತರ ಬಯಲಾಯಿತು.
ಸಾರ್ವಜನಿಕ ಸ್ಥಳಗಳಲ್ಲಿ ಇಡಲ್ಪಟ್ಟಿದ್ದ ಗಣಪತಿ ಮೂರ್ತಿಗಳನ್ನು ಕಳವು ಮಾಡಿದರೆ ಮನೆಗೆ ಐಶ್ವರ್ಯ ಲಕ್ಷ್ಮಿ ಬರುತ್ತಾಳೆ, ಸಂಪತ್ತಿನ ಹೊಳೆ ಮನೆ ಬಾಗಿಲಿಗೆ ಹರಿದು ಬರುತ್ತದೆ ಎಂದು ಖಾಸಗಿ ಟಿವಿ ಚಾನಲ್ ಒಂದರಲ್ಲಿ ಲಫಂಗ ಜ್ಯೋತಿಷಿಯೊಬ್ಬ ಹೇಳಿದ ಮಾತನ್ನು ನಂಬಿ ಕಳ್ಳತನ ಮಾಡಿದ್ದಾಗಿ ಹಿಂದೂ ಯುವಕರು ಪೊಲೀಸರ ಎದುರು ಒಪ್ಪಿಕೊಂಡರು. ಹೀಗಾಗಿ ಇದನ್ನೇ ನೆಪ ಮಾಡಿಕೊಂಡು ದಾವಣಗೆರೆಯಲ್ಲಿ ಕೋಮುಗಲಭೆಗೆ ಕೋಮುವಾದಿಗಳು ರೂಪಿಸಿದ ಸಂಚು ವಿಫಲಗೊಂಡಿತು.
ದಾವಣಗೆರೆಯ ಚಡ್ಡಿಗಳು ಅಷ್ಟಕ್ಕೆ ಸುಮ್ಮನಾಗಲಿಲ್ಲ. ಕ್ರೈಸ್ತರಿಗೆ ಗಂಟು ಬಿದ್ದರು. ಚರ್ಚ್ ಮೇಲೆ ದಾಳಿ ಮಾಡಿದರು. ಪಾದ್ರಿಗೆ ಜೀವಬೆದರಿಕೆ ಹಾಕಿದರು.
ಬಿಜೆಪಿ ಸರಕಾರ ಬಂದ ನಂತರ ಸಂಘಪರಿವಾರದ ಕರಾಳ ಹಸ್ತಗಳು ಗ್ರಾಮೀಣ ಪ್ರದೇಶದಲ್ಲೂ ಕಿತಾಪತಿ ಮಾಡುತ್ತಲೇ ಇವೆ. ಬಿಜಾಪುರ ಜಿಲ್ಲೆಯ ಸಿಂದಗಿ ತಾಲೂಕಿನ ಚಿಕ್ಕಹಳ್ಳಿ, ಬಳಗಾನೂರಲ್ಲೂ ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಮುಸಲ್ಮಾನರ ಮೇಲಿನ ಹಲ್ಲೆಗೆ ಯತ್ನ ನಡೆಯಿತು. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯಲ್ಲೂ ಪ್ರಕ್ಷುಬ್ದ ಪರಿಸ್ಥಿತಿ ನಿರ್ಮಾಣ ಮಾಡಲಾಯಿತು. ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗಳು ಸಮೀಪಿಸು ತ್ತಿರುವಂತೆ ಕರ್ನಾಟಕದ ಹಲವೆಡೆ ಕೋಮು ಕಲಹದ ಕಿಡಿ ಹೊತ್ತಿಸಲು ಸಂಘ ಪರಿವಾರ ಮಸಲತ್ತು ನಡೆಸಿದೆ. ಆಂತರಿಕ ಬಿಕ್ಕಟ್ಟಿನಿಂದ, ಭ್ರಷ್ಟಚಾರದ ಇಕ್ಕಟ್ಟಿನಿಂದ ತತ್ತರಿಸಿದ ಬಿಜೆಪಿಗೂ ಇದು ಬೇಕಾಗಿದೆ. ಅಂತಲೇ ಗಲಭೆಕೋರರ ಮೇಲೆ ಪೊಲೀಸರು ಕ್ರಮ ಕೈಗೊಳ್ಳದಂತೆ ಅವರ ಮೇಲೆ ಒತ್ತಡ ಹೇರಲಾಗುತ್ತಿದೆ.ಹುಬ್ಬಳ್ಳಿ ಯಲ್ಲಿ ಬಿಜೆಪಿ ಸಂಸದ ಪ್ರಹ್ಲಾದ ಜೋಶಿಯ ಒತ್ತಡಕ್ಕೆ ಮಣಿದು ಪೊಲೀಸಾಧಿಕಾರಿಗಳು ಆರೆಸ್ಸೆಸ್ ಕಚೇರಿಗೆ ಹೋಗಿ ಕ್ಷಮೆ ಕೇಳಿದರೆಂಬುದು ಗುಟ್ಟಿನ ಸಂಗತಿಯಲ್ಲ.
ಒಂದೆಡೆ ಸಂಘಪರಿವಾರ ರಾಜ್ಯದಲ್ಲಿ ಕೋಮುಗಲಭೆಗೆ ಹುನ್ನಾರ ನಡೆಸುತ್ತಿದ್ದರೆ ಇನ್ನೊಂದೆಡೆ ಇದನ್ನು ತಡೆದು ವಿಫಲಗೊಳಿಸಬೇಕಾಗಿದ್ದ ಜಾತ್ಯತೀತ ಎಂದು ಹೇಳಿಕೊಳ್ಳುವ ಪಕ್ಷಗಳು ಇನ್ನೂ ಗಾಢ ನಿದ್ರೆಯಲ್ಲಿವೆ. ಕಾಂಗ್ರೆಸ್ಸಿಗರು ನಿದ್ರೆಯಿಂದ ಎದ್ದೇಳಬೇಕಾದರೆ ಚುನಾವಣೆ ಬರಬೇಕು. ಚುನಾವಣೆಯಲ್ಲಿ ಅಧಿಕಾರ ಬಂದರೆ ಮಾತ್ರ ಅವರ ಕೆಲ ಅಂಗಾಂಗ ಗಳು ಕ್ರಿಯಾಶೀಲವಾಗುತ್ತವೆ. ಜೀರ್ಣಶಕ್ತಿ ವೃದ್ಧಿಸುತ್ತದೆ. ಇನ್ನು ಜೆಡಿಎಸ್. ಅದು ಯಡಿಯೂರಪ್ಪ ರಹಿತ ಬಿಜೆಪಿ ಜೊತೆ ಅಧಿಕಾರ ಹಂಚಿಕೊಳ್ಳುವ ಮಸಲತ್ತು ನಡೆಸಿದೆ.
ಬರೀ ರಾಜಕೀಯ ಪಕ್ಷಗಳನ್ನು ಅಂದರೆ ಬಲಪಂಥೀಯ ಪಕ್ಷಗಳನ್ನು ನಂಬಿ ಕುಳಿತರೆ ಆಗುವುದಿಲ್ಲ. ಅಧಿಕಾರವಿರಲಿ, ಇಲ್ಲದಿರಲಿ, ಜಾತಿ-ಮತಗಳ ಆಚೆ ನಿಂತು ಜನರ ನೋವಿಗೆ ಸ್ಪಂದಿಸುತ್ತ ಬಂದ ಎಡಪಂಥೀಯ ಜನಪರ ಸಂಘಟನೆಗಳು ರಾಜ್ಯದಲ್ಲಿವೆ. ಆದರೆ ಅವುಗಳು ಒಂದೇ ವೇದಿಕೆಗೆ ಬರುವುದಿಲ್ಲ. ಈ ಒಡಕೇ ಕೋಮುವಾದಿಗಳಿಗೆ ಅನುಕೂಲವಾಗಿದೆ. ಇನ್ನು ಮುಂದಾದರೂ ಈ ಪ್ರಗತಿಪರ ಸಂಘಟನೆಗಳು ಜನವಿಭಜಕ ಶಕ್ತಿಗಳ ವಿರುದ್ಧ ಒಕ್ಕೊರಲಿನಿಂದ ದನಿಯೆತ್ತಬೇಕಾಗಿದೆ.

Advertisement

0 comments:

Post a Comment

 
Top