ದೇಶಭಕ್ತನೆಂದು ಕರೆಸಿಕೊಳ್ಳುವುದು, ಜಾತ್ಯತೀತನಾಗಿರುವುದು ಭಾರತದಲ್ಲಿ ಅಷ್ಟು ಸುಲಭವಲ್ಲ. ಇಲ್ಲಿ, ಅದನ್ನು ನೀಡುವುದಕ್ಕಾಗಿಯೇ ಕೆಲವು ವ್ಯಕ್ತಿಗಳು, ಸಂಸ್ಥೆಗಳಿವೆ. ದೇಶಭಕ್ತರೆಂದು, ಜಾತ್ಯತೀತರೆಂದು ಅವರಿಂದ ಅಧಿಕೃತ ರುಜು ಬೀಳುವುದು ಅತ್ಯಗತ್ಯ. ಅದರಲ್ಲೂ ಮುಸ್ಲಿಮರು, ಕ್ರೈಸ್ತರೂ ಸೇರಿದಂತೆ ಅಲ್ಪಸಂಖ್ಯಾತರು ಇವರು ಒಡ್ಡಿದ ಎಲ್ಲ ಪರೀಕ್ಷೆಗಳಲ್ಲಿ ಗೆದ್ದು ತಮ್ಮನ್ನು ತಾವು ದೇಶಭಕ್ತರೆಂದು ಸಾಬೀತು ಪಡಿಸಬೇಕು. ಇವರೆಲ್ಲ ಪರೀಕ್ಷೆಗಳಲ್ಲಿ ಗೆದ್ದರೂ ಮುಗಿಯುವುದಿಲ್ಲ. ಆ ಬಳಿಕವೂ ಅವರು ಕಣ್ಣಿಟ್ಟು ಅವರನ್ನು ನೋಡುತ್ತಿರುತ್ತಾರೆ. ಎಲ್ಲಾದರೂ ಎಡವಿದರೆ ತಕ್ಷಣ ಹಣೆಗೆ ದೇಶದ್ರೋಹಿ, ಸಮಯಸಾಧಕ ಮೊದಲಾದ ಹಣೆಪಟ್ಟಿಗಳನ್ನು ಒತ್ತಿ ಬಿಡುತ್ತಾರೆ.
ಎಪಿಜೆ ಅಬ್ದುಲ್ ಕಲಾಂರನ್ನು ದೇಶಭಕ್ತರಾಗಿ, ಈ ದೇಶದ ಸಕಲ ಮುಸ್ಲಿಮರ ಪ್ರತಿನಿಧಿಯಾಗಲು ಅರ್ಹರೆಂದು ಬಿಜೆಪಿ ಒಪ್ಪಿಕೊಳ್ಳುವ ಮೊದಲು ಅವರು ಎದುರಿಸಿದ ಪರೀಕ್ಷೆ ಒಂದೆರಡಲ್ಲ. ಅಣು ಪರೀಕ್ಷೆ ಅವರ ಹೆಗ್ಗಳಿಕೆಯಾದರೂ ಅದರಾಚೆಗಿನ ಹತ್ತು ಹಲವು ದೇಶಪ್ರೇಮದ ಪರೀಕ್ಷೆಗಳಲ್ಲಿ ಗೆದ್ದು, ಬಿಜೆಪಿ, ಸಂಘಪರಿವಾರ ಅಧಿಕೃತವಾಗಿ ಅವರನ್ನು ಅಪ್ಪಟ ದೇಶಪ್ರೇಮಿಯೆಂದು ಒಪ್ಪಿತು. ಕಲಾಂ ಸಸ್ಯಾಹಾರಿಯಾಗಿದ್ದಾರೆ ಎನ್ನುವುದು ಅವರ ದೇಶಪ್ರೇಮದ ಅತಿ ದೊಡ್ಡ ಹೆಗ್ಗಳಿಕೆಯಾಗಿತ್ತು. ಅವರು ಬೆಳೆದ ಓಣಿ, ಅವರ ಪರಿಸರ, ಅವರು ನುಡಿಸುತ್ತಿದ್ದ ವೀಣೆ, ತ್ಯಾಗರಾಜರ ಕಾವ್ಯ ಇವೆಲ್ಲವುಗಳೂ ಕಲಾಂರ ಜಾತ್ಯತೀತತೆಗೆ ಮುಖ್ಯಮಾನದಂಡಗಳಾಗಿದ್ದವು ಎನ್ನುವುದು ನಮಗೆ ಗೊತ್ತಿದ್ದದ್ದೇ. ಮೊನ್ನೆ ಮೊನ್ನೆಯವರೆಗೂ ತನ್ನ ದೇಶಪ್ರೇಮವನ್ನು, ಜಾತ್ಯತೀತತೆಯನ್ನು ಅಷ್ಟೇ ಜಾಗ್ರತೆಯಿಂದ ಕಾಪಾಡಿಕೊಂಡು ಬಂದವರು ಎಪಿಜೆ ಅಬ್ದುಲ್ ಕಲಾಂ.
ಇದೀಗ ಮೊದಲ ಬಾರಿಗೆ ಅವರ ಜಾತ್ಯತೀತತೆ, ದೇಶಭಕ್ತಿ ಸಂಶಯಕ್ಕೀಡಾಗಿದೆ. ಅವರು ಬರೆದಿರುವ ‘ಟರ್ನಿಂಗ್ ಪಾಯಿಂಟ್’ ಕೃತಿಯಲ್ಲಿ ಪ್ರಸ್ತಾಪಿಸಿರುವ ಘಟನೆಗಳು ಬಿಜೆಪಿ, ಸಂಘಪರಿವಾರವನ್ನು ಕೆರಳಿಸಿವೆ. ಈ ಘಟನೆಗಳನ್ನು ಪ್ರಸ್ತಾಪಿಸಿರುವುದು ಮತ್ತು ಕಲಾಂ ತನ್ನ ಅಭಿಪ್ರಾಯಗಳನ್ನು ಮಂಡಿಸಿರುವುದು ಸಮಯ ಸಾಧಕತನ ದಂತೆಯೂ, ದೇಶದ್ರೋಹದಂತೆಯೂ ಕಾಣಿಸಿದೆ. ತನ್ನನ್ನು ರಾಷ್ಟ್ರಪತಿಯನ್ನಾಗಿ ಮಾಡಿದ ಬಿಜೆಪಿ, ಸಂಘಪರಿವಾರ ಅಥವಾ ಎನ್‌ಡಿಎಯ ಮೂಗಿನ ನೇರಕ್ಕೆ ಮಾತನಾಡುತ್ತಿದ್ದ ಕಲಾಂ, ಈ ಕೃತಿಯಲ್ಲಿ ಒಂದಿಷ್ಟು ಸ್ವಂತಿಕೆಯನ್ನು, ತನ್ನ ಮನದಾಳದ ಮಾತುಗಳನ್ನು ಹಂಚಿಕೊಂಡುದೇ ತಪ್ಪಾಗಿ ಬಿಟ್ಟಿದೆ. ಕಲಾಂ ಈ ದೇಶದ ಎಲ್ಲಾ ಮುಸ್ಲಿಮರಂತೆಯೇ ಪ್ರಶ್ನಾರ್ಹರಾಗಿ ಬಿಟ್ಟಿದ್ದಾರೆ.
ಟರ್ನಿಂಗ್ ಪಾಯಿಂಟ್‌ನಲ್ಲಿ ವಿಶೇಷವಾದದ್ದೇನೂ ಹಂಚಿಕೊಂಡಿಲ್ಲ. ಈ ದೇಶದ ರಹಸ್ಯಕ್ಕೆ ಸಂಬಂಧಪಟ್ಟ ಯಾವ ವಿಷಯಗಳನ್ನೂ ಪ್ರಸ್ತಾಪಿಸಿಲ್ಲ. 2004ರಲ್ಲಿ ಸೋನಿಯ ಗಾಂಧಿಯವರಿಗೆ ಪ್ರಧಾನಿ ಯಾಗಲು ಎಲ್ಲ ರೀತಿಯ ಅರ್ಹತೆಯೂ ಇತ್ತು ಎನ್ನುವುದನ್ನು ಕಲಾಂ ಹೇಳಿದ್ದಾರೆ. ಹಾಗೆ ನೋಡಿದರೆ ಇದರಲ್ಲಿ ಹೊಸತೇನೂ ಇಲ್ಲ. ಸೋನಿಯಾ ಗಾಂಧಿಯವರಿಗೆ ಈ ದೇಶದ ಪ್ರಧಾನಿಯಾಗುವ ಹಕ್ಕನ್ನು ನಮ್ಮ ಸಂವಿಧಾನ ನೀಡಿದೆ ಎನ್ನುವ ಕಾರಣಕ್ಕೆ ಅವರನ್ನು ಪ್ರಧಾನಿಯಾಗಿ ಈ ದೇಶದ ಜನ ಆರಿಸಿದ್ದರು. ಪ್ರಧಾನಿಯಾಗುವ ಅವರ ಹಾದಿಯಲ್ಲಿ ಯಾವುದೇ ಸಂವಿಧಾನ ಬಾಹಿರವಾದ ಕಲ್ಲು ಮುಳ್ಳುಗಳು ಇರಲಿಲ್ಲ. ಹೀಗಿರುವಾಗ ರಾಷ್ಟ್ರಾಧ್ಯಕ್ಷರು ಹೇಗೆ ತಾನೆ ಸೋನಿಯಾ ಗಾಂಧಿಯವರನ್ನು ವಿರೋಧಿಸಬಹುದು? ಇದನ್ನೇ ತನ್ನ ಪುಸ್ತಕದಲ್ಲಿ ಕಲಾಂ ತೋಡಿಕೊಂಡಿದ್ದಾರೆ.
ಹಾಗೆಯೇ ಇನ್ನೊಂದು ಮಹತ್ವದ ವಿಷಯವನ್ನೂ ಕಲಾಂ ತನ್ನ ಪುಸ್ತಕದಲ್ಲಿ ಬರೆದಿದ್ದಾರೆ. ಅದೆಂದರೆ, ರಾಷ್ಟ್ರಾಧ್ಯಕ್ಷರ ಗುಜರಾತ್ ಭೇಟಿಯನ್ನು ಅಂದು ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ತಡೆದಿದ್ದರು ಎನ್ನುವ ಅಂಶವನ್ನು. ಇದು ತುಂಬ ಮಹತ್ವದ ದಾಖಲೆ. ರಾಷ್ಟ್ರಪತಿಯಾಗಿ ಗುಜರಾತನ್ನು ಭೇಟಿ ಮಾಡುವುದು ಕಲಾಂರ ಮಹತ್ವದ ಹೊಣೆಗಾರಿಕೆಯಾಗಿತ್ತು. ಆದರೆ ತನ್ನ ಅಧಿಕಾರದುದ್ದಕ್ಕೂ ಗುಜರಾತ್‌ನ ಕುರಿತ ತನ್ನ ನಿಲುವುದನ್ನು ಬಚ್ಚಿಟ್ಟುಕೊಂಡೇ ಮುಂದುವರಿದರು ಕಲಾಂ. ಆದುದರಿಂದಲೇ ಅವರು ಬಿಜೆಪಿ ಮತ್ತು ಸಂಘಪರಿವಾರದ ಪ್ರೀತಿಯ ‘ಮುಸ್ಲಿಂ’ ರಾಷ್ಟ್ರಪತಿಯಾಗಿ ಮುಂದುವರಿದರು. ಇದೀಗ ಕಲಾಂ ಬಹಿರಂಗಪಡಿಸಿದ ಅಂಶದಿಂದ ಪ್ರಶ್ನೆಗೊಳಗಾಗ ಬೇಕಾದವರು ಕಲಾಂ ಅಲ್ಲ. ಬದಲಿಗೆ ವಾಜಪೇಯಿ. ಅವರ ಜಾತ್ಯತೀತತೆಯ ಮುಖವಾಡವನ್ನು ತನ್ನ ಕೃತಿಯ ಮೂಲಕ ಕಲಾಂ ಪರೋಕ್ಷವಾಗಿ ಬಯಲಾಗಿಸಿದ್ದಾರೆ.
ಆದರೆ, ಯಾರು ಟೀಕೆಗೊಳಗಾಗಬೇಕೋ ಅವರನ್ನು ಟೀಕೆಗೊಳಪಡಿಸದೆ, ಕಲಾಂರನ್ನು ಕಟಕಟೆಯಲ್ಲಿ ನಿಲ್ಲಿಸಿರುವುದು ಅತ್ಯಂತ ವಿಷಾದನೀಯ ಸಂಗತಿಯಾಗಿದೆ. ‘‘ಅಂದೇ ನಿಮಗೆ ಇದನ್ನೆಲ್ಲ ಹೇಳಬಹುದಿತ್ತಲ್ಲ’’ ಎನ್ನುವ ಶರದ್ ಯಾದವ್‌ರ ಮಾತು ಅತ್ಯಂತ ನಿಷ್ಕರುಣೆ ಮತ್ತು ಉಡಾಫೆಯಿಂದ ಕೂಡಿದ್ದು. ಅಂದು ಕಲಾಂ ರಾಷ್ಟ್ರಪತಿ ಸ್ಥಾನದಲ್ಲಿದ್ದರು. ಆ ಸಂದರ್ಭದಲ್ಲಿ ಅವರು ಅಂತಹದೊಂದು ಹೇಳಿಕೆಯನ್ನು ನೀಡಿದ್ದರೆ ಅದು ರಾಜಕೀಯ ರೂಪವನ್ನು ಪಡೆದುಕೊಳ್ಳುತ್ತಿತ್ತು. ಹಾಗೆಯೇ ಒಬ್ಬ ರಾಜಕೀಯ ನಾಯಕ ಅದರಲ್ಲೂ ಕಲಾಂರಂತಹ ಸೃಜನಶೀಲ ಮನುಷ್ಯ ಕೃತಿಯಲ್ಲಿ ಕೆಲವು ಖಾಸಗಿ ವಿಷಯಗಳನ್ನು ಹಂಚಿಕೊಳ್ಳುವುದು ದೇಶದ ಪಾಲಿಗೂ ಒಳ್ಳೆಯದೇ. ನಿಜಕ್ಕೂ ಇವರೆಲ್ಲ ಕಲಾಂ ಮೇಲೆ ಇಟ್ಟಿರುವ ಗೌರವ ನಿಜವಾದುದೇ ಆದರೆ, ಅವರು ಎತ್ತಿದ ಪ್ರಶ್ನೆಗಳನ್ನು ಮುಂದಿಟ್ಟು ಚರ್ಚೆ ನಡೆಸಬೇಕು. ಅದರ ಬದಲಿಗೆ ಕಲಾಂರ ಬಾಯಿ ಮುಚ್ಚಿಸುವುದರಿಂದ ರಾಜಕೀಯ ನಾಯಕರು ಇನ್ನಷ್ಟು ಸಣ್ಣವರಾಗುತ್ತಾರೆ. -ವಾರ್ತಾಭಾರತಿ ಸಂಪಾದಕೀಯ
0 comments:
Post a Comment