ಕೊಪ್ಪಳ : ಜಿಲ್ಲೆಯಲ್ಲಿ ಮುಂಗಾರು ಮಳೆ ವಿಳಂಬವಾಗಿರುವ ಹಿನ್ನೆಲೆಯಲ್ಲಿ ಬರಪರಿಸ್ಥಿತಿ ಅಥವಾ ಅತಿವೃಷ್ಠಿ ಪರಿಸ್ಥಿತಿ ಸೇರಿದಂತೆ ಯಾವುದೇ ಪರಿಸ್ಥಿತಿ ಎದುರಾದರೂ, ಸಮರ್ಥವಾಗಿ ನಿರ್ವಹಿಸಲು ಅಧಿಕಾರಿಗಳು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯಾಗಿರುವ ರಾಜ್ಯ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎನ್. ಮಂಜುನಾಥ ಪ್ರಸಾದ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ಜಿಲ್ಲೆಯಲ್ಲಿನ ಬರ ಪರಿಸ್ಥಿತಿ ಹಾಗೂ ಪರಿಹಾರ ಕಾರ್ಯಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಇಷ್ಟೊತ್ತಿಗೆ ಮುಂಗಾರು ಮಳೆ ಆರಂಭವಾಗಬೇಕಿತ್ತು. ಆದರೆ ಮುಂಗಾರು ವಿಳಂಬವಾಗಿರುವುದರಿಂದ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ, ಜಾನುವಾರುಗಳಿಗೆ ಮೇವಿನ ಸಮಸ್ಯೆಯ ಕಡೆ ಅಧಿಕಾರಿಗಳು ಹೆಚ್ಚಿನ ಆದ್ಯತೆ ನೀಡಬೇಕಿದೆ. ಜಿಲ್ಲೆಯಲ್ಲಿ ೧೫ ಗ್ರಾಮಗಳಲ್ಲಿ ಗೋಶಾಲೆಗಳನ್ನು ಪ್ರಾರಂಭಿಸಲಾಗಿದೆ. ಈ ಗೋಶಾಲೆಗಳಲ್ಲಿ ಒಟ್ಟು ೧೪೦೦೦ ಕ್ಕೂ ಹೆಚ್ಚು ಜಾನುವಾರುಗಳಿವೆ. ಗೋಶಾಲೆಗಳಿಗೆ ಸರಬರಾಜು ಮಾಡಲಾಗುತ್ತಿರುವ ಮೇವಿನ ವಿತರಣೆ ಸಮರ್ಪಕವಾಗಿ ನಡೆಯಬೇಕು, ಸಮರ್ಪಕ ವಿತರಣೆಯ ಗೊಂದಲದಿಂದಾಗಿ ಮೇವಿನ ಕೊರತೆ ಕಂಡು ಬರುತ್ತಿದೆ ಎಂಬ ವರದಿಗಳು ಬಂದಿದ್ದು, ಅಧಿಕಾರಿಗಳು ಗೋಶಾಲೆಗಳಿಗೆ ಸರಬರಾಜು ಮಾಡಲಾಗುವ ಮೇವನ್ನು ಸಮರ್ಪಕವಾಗಿ ಜಾನುವಾರುಗಳಿಗೆ ವಿತರಿಸಲು ಮುಂದಾಗಬೇಕು. ಸದ್ಯ ಜಿಲ್ಲೆಯಲ್ಲಿ ಇನ್ನೂ ೧೦ ವಾರಗಳಿಗೆ ಬೇಕಾಗುವಷ್ಟು ಮೇವು ಲಭ್ಯವಿದ್ದು, ಪ್ರತಿ ಜಾನುವಾರಿಗೆ ಪ್ರತಿ ದಿನಕ್ಕೆ ಬೇಕಾಗುವ ಮೇವಿನ ಪ್ರಮಾಣದ ಬಗೆಗಿನ ಗೊಂದಲ ಪರಿಹರಿಸಲು ಮೂರು ದಿನಗಳ ಒಳಗಾಗಿ ಸೂಕ್ತ ವರದಿಯನ್ನು ನೀಡಬೇಕು. ಈ ವರದಿಯ ಅನುಸಾರ ಹೆಚ್ಚಿನ ಮೇವು ಖರೀದಿಯ ಅಗತ್ಯವಿದ್ದಲ್ಲಿ, ಸರ್ಕಾರ ಹೆಚ್ಚಿನ ಅನುದಾನ ಒದಗಿಸಲು ಕ್ರಮ ಕೈಗೊಳ್ಳಲಿದೆ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎನ್. ಮಂಜುನಾಥ ಪ್ರಸಾದ್ ಅವರು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ. ನಿಂಬರಗಿ ಅವರಿಗೆ ಸೂಚನೆ ನೀಡಿದರು.
ಬೋರ್‌ವೆಲ್ ಮಾಹಿತಿ ಜಿಪಿಎಸ್‌ಗೆ ಅಳವಡಿಸಿ : ಬೇಸಿಗೆ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿನ ಕುಡಿಯುವ ನೀರಿನ ತೊಂದರೆ ನಿವಾರಣೆಗಾಗಿ ಜಿಲ್ಲೆಯಲ್ಲಿ ಸುಮಾರು ೪೦೦ ಹೊಸ ಕೊಳವೆ ಬಾವಿಗಳನ್ನು ಕೊರೆಯಿಸಲಾಗಿದ್ದು, ಈ ಹೊಸ ಕೊಳವೆಬಾವಿ ಕೊರೆಯಿಸಿರುವ ಸ್ಥಳದ ಬಗ್ಗೆ ಜಿಪಿಎಸ್ ನಲ್ಲಿ ಅಕ್ಷಾಂಶ, ರೇಖಾಂಶ ವಿವರ ಸಹಿತವುಳ್ಳ ಮಾಹಿತಿಯನ್ನು ಕೂಡಲೆ ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಸಬೇಕು. ಅಲ್ಲದೆ ಕುಡಿಯುವ ನೀರು ಕಾಮಗಾರಿಗಳಿಗಾಗಿ ಬಿಡುಗಡೆ ಮಾಡಲಾಗಿರುವ ೩. ೨೦ ಕೋಟಿ ರೂ.ಗಳ ಅನುದಾನ ವೆಚ್ಚದ ಬಗ್ಗೆ ಹಣ ಬಳಕೆ ಪ್ರಮಾಣ ಪತ್ರವನ್ನು ಮೂರು ದಿನಗಳ ಒಳಗಾಗಿ ಸಲ್ಲಿಸಿದಲ್ಲಿ ಮಾತ್ರ ಎರಡನೆ ಹಂತದ ಅನುದಾನ ಬಿಡುಗಡೆಗೆ ಸರ್ಕಾರ ಕ್ರಮ ಕೈಗೊಳ್ಳಲಿದೆ. ಪಂಚಾಯತ್ ರಾಜ್ ಇಲಾಖೆಯ ಆಯಾ ತಾಲೂಕು ಸಹಾಯಕ ಕಾರ್ಯಪಾಲಕ ಅಭಿಯಂತರರಿಂದ ಸಮಗ್ರ ಮಾಹಿತಿ ಪಡೆದುಕೊಂಡು, ಹಣ ಬಳಕೆ ಪ್ರಮಾಣ ಪತ್ರ ನೀಡಬೇಕು. ತಪ್ಪಿದಲ್ಲಿ ಪಂಚಾಯತಿ ರಾಜ್ ಕಾರ್ಯಪಾಲಕ ಅಭಿಯಂತರರನ್ನೇ ಹೊಣೆಗಾರರನ್ನಾಗಿಸಲಾಗುವುದು ಎಂದರು.
ಕ್ರಿಯಾ ಯೋಜನೆ ತಯಾರಿಸಿ : ಜಿಲ್ಲೆಯಲ್ಲಿ ಒಂದು ವೇಳೆ ಮಳೆಯ ತೀವ್ರ ಕೊರತೆ ಕಂಡುಬಂದಲ್ಲಿ ಉದ್ಭವಿಸಬಹುದಾದ ಸಮಸ್ಯೆಗಳ ನಿವಾರಣೆಗೆ ಸಂಬಂಧಿಸಿದಂತೆ ಅಧಿಕಾರಿಗಳು ಮುಂದಿನ ೬ ತಿಂಗಳಿಗಾಗಿ ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವ ಕುರಿತು ನೀರಿನ ಮೂಲಗಳು, ಕೊಳವೆ ಬಾವಿಗಳು (ಖಾಸಗಿ ಬೋರ್‌ವೆಲ್ ಸಹಿತ), ಮೇವಿನ ಕೊರತೆ ಉಂಟಾಗದಂತೆ ನೋಡಿಕೊಳ್ಳಲು ಮೇವು ಲಭ್ಯವಾಗುವ ಸ್ಥಳ, ಮೇವಿನ ಪ್ರಮಾಣ, ಇದಕ್ಕಾಗಿ ಬೇಕಾಗುವ ಅನುದಾನದ ವಿವರ ಸೇರಿದಂತೆ ಅಗತ್ಯ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿ ಇಟ್ಟುಕೊಳ್ಳಬೇಕು. ಒಂದು ವೇಳೆ ಉತ್ತಮ ಮಳೆಯಾದಲ್ಲಿ ಕುಡಿಯುವ ನೀರು, ಮೇವಿನ ಸಮಸ್ಯೆ ತಂತಾನೆ ಪರಿಹಾರಗೊಳ್ಳುತ್ತವೆ. ಕ್ರಿಯಾ ಯೋಜನೆ ಮುಂದಿನ ಸಾಂದರ್ಭಿಕ ದಿನಗಳಲ್ಲಿ ಉಪಯುಕ್ತವಾಗಲಿದೆ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ರಸಗೊಬ್ಬರ ದಾಸ್ತಾನಿಗೆ ಸೂಚನೆ : ಪ್ರಸಕ್ತ ಮುಂಗಾರು ಹಂಗಾಮಿಗೆ ಮುಂದಿನ ೬ ತಿಂಗಳ ಅವಧಿಗೆ ಒಟ್ಟು ೩೩೦೦೦ ಟನ್ ಯೂರಿಯಾ ಬೇಕಾಗುವ ಸಾಧ್ಯತೆ ಇದೆ. ಜಿಲ್ಲೆಯಲ್ಲಿ ಸದ್ಯ ೨೨೦೦ ಟನ್ ಯೂರಿಯಾ ದಾಸ್ತಾನಿದ್ದು, ಇನ್ನೊಂದು ವಾರದೊಳಗಾಗಿ ಇನ್ನೂ ೨೫೦೦ ಟನ್ ಯೂರಿಯಾ ಬರಲಿದೆ ಎಂದು ಜಂಟಿಕೃಷಿ ನಿರ್ದೇಶಕ ಬಾಲರೆಡ್ಡಿ ಅವರು ಸಭೆಗೆ ವಿವರಿಸಿದರು. ಯಾವುದೇ ಕಾರಣಕ್ಕೂ ಬಿತ್ತನೆ ಬೀಜ ಅಥವಾ ರಸಗೊಬ್ಬರದ ಕೊರತೆ ಉಂಟಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು. ಇದರಲ್ಲಿ ಯಾವುದೇ ತೊಂದರೆ ಅಥವಾ ಸಮಸ್ಯೆ ಎದುರಾದಲ್ಲಿ, ಸರ್ಕಾರದ ಮಟ್ಟದಲ್ಲಿ ಪರಿಹರಿಸಲು ಕ್ರಮ ಕೈಗೊಳ್ಳುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎನ್. ಮಂಜುನಾಥ ಪ್ರಸಾದ್ ಅವರು ತಿಳಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್. ರಾಜಾರಾಂ, ಪಂಚಾಯತಿ ರಾಜ್ ಇಂಜಿನಿಯರಿಂಗ್ ವಿಭಾಗದ ಕಾರ್ಯಪಾಲಕ ಅಭಿಯಂತರ ಮುರಳಿಧರ್, ತಾಲೂಕು ತಹಸಿಲ್ದಾರರು, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.
0 comments:
Post a Comment