ಕೊಪ್ಪಳ ಲೋಕೋಪಯೋಗಿ ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿದ್ದ ಸಯ್ಯದ್ ಹಸನ್ ಅವರು ವೈದ್ಯಕೀಯ ಬಿಲ್ ಮರುಪಾವತಿಗೆ ಸಂಬಂಧಿಸಿದಂತೆ ತಮ್ಮದೇ ಇಲಾಖೆಯ ವಾಹನ ಚಾಲಕ ಮೆಹಬೂಬ್ ಅವರಿಂದ ೧೩೦೦ ರೂ. ಲಂಚ ಸ್ವೀಕರಿಸುವ ಸಂದರ್ಭದಲ್ಲಿ ಲೋಕಾಯುಕ್ತ ಬಲೆಗೆ ಬಿದ್ದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ನ್ಯಾಯಾಲಯವು ಆರೋಪಿ ಸಯ್ಯದ್ ಹಸನ್‌ಗೆ ೩ ವರ್ಷಗಳ ಸಾದಾ ಕಾರಾಗೃಹ ಶಿಕ್ಷೆ ವಿಧಿಸಿ ಫೆ. ೧೮ ರಂದು ತೀರ್ಪು ನೀಡಿದೆ.
ಲೋಕೋಪಯೋಗಿ ಇಲಾಖೆಯ ಪ್ರದಸ ಸಯ್ಯದ್ ಹಸನ್ ಅವರು ಮೂರು ತಿಂಗಳ ವೈದ್ಯಕೀಯ ವೆಚ್ಚ ಮರುಪಾವತಿ ಬಿಲ್ ಮಂಜೂರಾತಿಗೆ ಸಂಬಂಧಿಸಿದಂತೆ ತಮ್ಮದೇ ಇಲಾಖೆಯಲ್ಲಿ ಕುಷ್ಟಗಿಯಲ್ಲಿ ವಾಹನ ಚಾಲಕರಾಗಿದ್ದ ಮೆಹಬೂಬ್ ಅವರಿಂದ ೧೩೦೦ ರೂ.ಗಳ ಲಂಚ ಸ್ವೀಕರಿಸುವಾಗ ಕಳೆದ ೨೦೦೯ ರ ಜುಲೈ ೨೭ ರಂದು ಲೋಕಾಯುಕ್ತರ ಬಲೆಗೆ ಬಿದ್ದಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಕೊಪ್ಪಳ ಜಿಲ್ಲಾ ನ್ಯಾಯಾಲಯವು ಆರೋಪಿ ಸಯ್ಯದ್ ಹಸನ್ ಲಂಚ ಸ್ವೀಕಾರ ಆರೋಪ ಸಾಬೀತಾಗಿದೆ ಎಂದು ತೀರ್ಮಾನಿಸಿ, ಆರೋಪಿಗೆ ಲಂಚ ಪ್ರತಿಭಂದಕ ಕಾಯ್ದೆ ಕಲಂ ೭ ರನ್ವಯ ೧ ವರ್ಷ ಸಾದಾ ಕಾರಾಗೃಹ ಶಿಕ್ಷೆ ಹಾಗೂ ೫೦೦೦ ರೂ. ದಂಡ, ದಂಡ ಭರಿಸಲು ತಪ್ಪಿದಲ್ಲಿ ಎರಡು ತಿಂಗಳು ಕಾರಾಗೃಹ ಶಿಕ್ಷೆ ಅಲ್ಲದೆ ಕಲಂ ೧೩ (೧)(ಡಿ) ಅಪರಾಧಕ್ಕಾಗಿ ಎರಡು ವರ್ಷ ಸಾದಾ ಕಾರಾಗೃಹ ಶಿಕ್ಷೆ ಹಾಗೂ ೧೦೦೦೦ ರೂ. ದಂಡ, ತಪ್ಪಿದಲ್ಲಿ ನಾಲ್ಕು ತಿಂಗಳ ಕಾರಾಗೃಹ ಶಿಕ್ಷೆ ವಿಧಿಸಿ ಎರಡೂ ಶಿಕ್ಷೆಗಳನ್ನು ಏಕಕಾಲದಲ್ಲಿ ಅನುಭವಿಸುವಂತೆ ಜಿಲ್ಲಾ ಸತ್ರ ನ್ಯಾಯಾಧೀಶ ಸಿ.ಎಸ್. ಮಾಳಗಿ ಅವರು ತೀರ್ಪು ನೀಡಿದ್ದಾರೆ. ಕರ್ನಾಟಕ ಲೋಕಾಯುಕ್ತದ ವಿಶೇಷ ಅಭಿಯೋಜಕ ಎಚ್.ಎಸ್. ಹಿರೇಮಠ ಅವರು ಸರ್ಕಾರದ ಪರ ವಾದ ಮಂಡಿಸಿದ್ದರು ಎಂದು ಕೊಪ್ಪಳ ಲೋಕಾಯುಕ್ತ ಪೊಲೀಸ್ ಇನ್ಸ್‌ಪೆಕ್ಟರ್ ತಿಳಿಸಿದ್ದಾರೆ.
0 comments:
Post a Comment