ಸರ್ವೋಚ್ಛ ನ್ಯಾಯಾಲಯದ ಸೂಚನೆ ಹಾಗೂ ಸರ್ಕಾರದ ಆದೇಶದನ್ವಯ ಇನ್ನು ಮುಂದೆ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲೂ ಜನನ-ಮರಣ ನೋಂದಣಿಯಾಗುವಂತೆ ಆಯಾ ಆಸ್ಪತ್ರೆಯ ವೈದ್ಯಾಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ ಎಂದು ಸಹಾಯಕ ಆಯುಕ್ತ ಶರಣಬಸಪ್ಪ ಅವರು ಹೇಳಿದರು.
ಜನನ-ಮರಣ ನೋಂದಣಿ ಹಾಗೂ ಪ್ರಮಾಣ ಪತ್ರವನ್ನು ವಿತರಿಸುವ ಕುರಿತಂತೆ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಜಿಲ್ಲೆಯ ಎಲ್ಲ ವೈದ್ಯಾಧಿಕಾರಿಗಳಿಗೆ ಶನಿವಾರ ಏರ್ಪಡಿಸಲಾಗಿದ್ದ ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜಿಲ್ಲಾ ಪಂಚಾಯತಿ ಮುಖ್ಯ ಯೋಜನಾಧಿಕಾರಿ ಟಿ.ಪಿ. ದಂಡಿಗದಾಸರ್ ಅವರು ಮಾತನಾಡಿ, ಸರ್ಕಾರ ಇತ್ತೀಚೆಗೆ ಯಾವುದೇ ವಿಷಯಗಳ ಕುರಿತ ಅಂಕಿ-ಅಂಶಗಳಿಗೆ ಹೆಚ್ಚಿನ ಮಹತ್ವ ನೀಡಿದೆ. ಅಂಕಿ-ಸಂಖ್ಯೆಗಳ ತಪ್ಪು ಮಾಹಿತಿ ಒದಗಿಸುವ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವ ಕಾಯ್ದೆ ಜಾರಿಗೊಳಿಸಿದೆ. ಜನನ-ಮರಣ ಪ್ರಮಾಣದ ನಿಖರ ಅಂಕಿ-ಅಂಶ ಆಯಾ ಜಿಲ್ಲೆಯ ಮಾನವ ಸೂಚ್ಯಂಕ, ಜನನ ಪ್ರಮಾಣ, ಮರಣ ಪ್ರಮಾಣವನ್ನು ಗುರುತಿಸಲು ಸಹಾಯಕಾರಿಯಾಗಿದೆ. ಇದಕ್ಕಾಗಿ ಆರೋಗ್ಯ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ಪ್ರತಿ ಗ್ರಾಮ ಪಂಚಾಯತಿ ಮಟ್ಟದಲ್ಲೂ ಅಂಕಿ-ಅಂಶ ತಯಾರಿಕೆಗೆ ನಾವು ಅನುವಾಗಬೇಕಾಗಿದೆ ಎಂದರು.
ಬೆಂಗಳೂರಿನ ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದ ಉಪನಿರ್ದೇಶಕ ಕೆ. ಜಯರಾಂ ಅವರು ಮಾತನಾಡಿ, ಜನನ-ಮರಣ ನೋಂದಣಿ ಕಾಯ್ದೆಯು ದೇಶದಲ್ಲಿ ೧೮೮೯ ರಲ್ಲಿ ಜಾರಿಗೆ ಬಂದಿದ್ದರೂ ಆಗ ಅದು ಕಡ್ಡಾಯವಾಗಿರಲಿಲ್ಲ. ಆದರೆ ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ ಈ ಕಾಯ್ದೆಯನ್ನು ೧೯೬೯ ರಲ್ಲಿ ಪರಿಷ್ಕರಿಸಿ ಜನನ-ಮರಣ ನೋಂದಣಿಯನ್ನು ಕಡ್ಡಾಯಗೊಳಿಸಲಾಗಿದೆ. ಸದ್ಯ ರಾಜ್ಯದಲ್ಲಿ ಜನನ-ಮರಣ ನೋಂದಣಿ ಪ್ರಮಾಣ ಶೇ. ೯೦ ರಷ್ಟಿದ್ದು, ಶೇ. ೧೦೦ ರಷ್ಟಾಗಬೇಕು ಎನ್ನುವುದು ಸರ್ಕಾರದ ಆಶಯವಾಗಿದೆ. ಜನನ ಪ್ರಮಾಣ ಪತ್ರದಿಂದ ಶಾಲಾ ದಾಖಲಾತಿಗೆ, ಉದ್ಯೋಗ, ಮತದಾನ ಹಕ್ಕು, ಡ್ರೈವಿಂಗ್ ಲೈಸೆನ್ಸ್, ಪಾಸ್‌ಪೋರ್ಟ್, ವಿಮಾ ಪಾಲಿಸಿ, ವಿವಾಹ ನೋಂದಣಿ, ಮಾತಾ-ಪಿತೃತ್ವದ ಸಿಂಧುತ್ವಕ್ಕೆ ಅಗತ್ಯವಾಗಿದೆ. ಇನ್ನು ಮರಣದ ದಾಖಲಾತಿಯು ವಿಮಾ ಹಣ ಪಡೆಯಲು, ಆಸ್ತಿಯ ಉತ್ತರಾಧಿಕಾರ, ಆಸ್ತಿಯ ಹಕ್ಕು, ಪಿಂಚಣಿ ಹಕ್ಕು, ಅನುಕಂಪದ ನೌಕರಿ, ಪರಿಹಾರಭತ್ಯೆ, ಆರೋಗ್ಯ ಕಾರ್ಯಕ್ರಮ ಪಡೆಯಲು ಜೊತೆಗೆ ದೇಶದ ಜನಸಂಖ್ಯೆ ಅಂದಾಜಿಗೆ ಅಗತ್ಯವಾಗಿದೆ ಎಂದು ವಿವರಿಸಿದರು.
ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕೃಷ್ಣಮೂರ್ತಿ ದೇಸಾಯಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಹದೇವಸ್ವಾಮಿ ವೇದಿಕೆ ಮೇಲೆ ಉಪಸ್ಥಿತರಿದ್ದರು. ಜಿಲ್ಲೆಯ ಎಲ್ಲ ಪ್ರಾಥಮಿಕ, ಸಮುದಾಯ ಆರೋಗ್ಯ ಕೇಂದ್ರಗಳ ಸುಮಾರು ೫೦ಕ್ಕೂ ಹೆಚ್ಚು ವೈದ್ಯಾಧಿಕಾರಿಗಳು ತರಬೇತಿಯಲ್ಲಿ ಭಾಗವಹಿಸಿದ್ದರು.
0 comments:
Post a Comment