ಬಳ್ಳಾರಿ ಉಪಚುನಾವಣೆಯಲ್ಲಿ ಶೇ. 72ರಷ್ಟು ಮತದಾನವಾಗಿದೆ. ಕಳೆದ ಬಾರಿಗಿಂತ ಶೇ.13ರಷ್ಟು ಅಧಿಕ ಮತದಾರರು ಮತದಾನದಲ್ಲಿ ಭಾಗವಹಿಸಿ ದ್ದಾರೆ. ಇದರರ್ಥ, ಮತದಾರರು ಅತ್ಯುತ್ಸಾಹದಿಂದ ಮತದಾನದಲ್ಲಿ ಭಾಗವಹಿಸಿದ್ದಾರೆ ಎಂದಲ್ಲ. ಬದಲಿಗೆ ರಾಜಕಾರಣಿಗಳು ಅವರನ್ನು ಮೂಲೆ ಮೂಲೆಯಿಂದ ಮತಗಟ್ಟೆಗೆ ಎಳೆದು ಕೊಂಡು ಬಂದು ಮತ ಹಾಕಿಸಿದ್ದಾರೆ. ಹಣ ತಲುಪುವಲ್ಲಿಗೆ ತಲುಪಿದೆ. ಶ್ರೀರಾಮುಲುಗೆ ಈ ಚುನಾವಣೆ ಮಾಡು ಇಲ್ಲವೇ ಮಡಿ ಪ್ರಯತ್ನವಾಗಿರುವುದರಿಂದ, ಅವರ ಕಾರ್ಯಕರ್ತರು ‘ಚೆನ್ನಾಗಿಯೇ’ ದುಡಿದಂತಿದೆ. ಮತದಾನದ ಬಗ್ಗೆ ಬಳ್ಳಾರಿಯ ಜನರು ಜಾಗೃತರಾಗಿದ್ದಾರೆ ಎಂದು ಇದನ್ನು ಯಾವ ಕಾರಣಕ್ಕೂ ವ್ಯಾಖ್ಯಾನಿಸುವಂತಿಲ್ಲ. ಎಲ್ಲ ಪಕ್ಷಗಳು ಹಣವನ್ನು ಸುರಿದ ಪರಿಣಾಮವಿದು.
ಉಪಚುನಾವಣೆಯ ಫಲಿತಾಂಶ ಡಿಸೆಂಬರ್ 4ರಂದು ಹೊರ ಬೀಳಲಿದೆ. ಈ ಫಲಿತಾಂಶ ಕೇವಲ ಒಂದು ಕ್ಷೇತ್ರಕ್ಕೆ ಸಂಬಂಧಪಟ್ಟುದಲ್ಲ. ಇಲ್ಲಿನ ಸೋಲು- ಗೆಲುವು ಈ ರಾಜ್ಯ ಸರಕಾರದ ಅಳಿವು ಉಳಿವನ್ನು ನಿರ್ಧರಿಸಲಿದೆ. ಆದುದರಿಂದ ಎಲ್ಲರೂ ಡಿಸೆಂಬರ್ 4ನ್ನು ಕುತೂಹಲ ದಿಂದ ಎದುರು ನೋಡುತ್ತಿದ್ದಾರೆ. ಶ್ರೀರಾಮುಲು ಗೆಲುತ್ತಾರೋ ಇಲ್ಲವೋ? ಎನ್ನುವುದು ಎಲ್ಲರ ಮುಂದಿರುವ ಪ್ರಶ್ನೆ. ಗೆದ್ದರೂ ಸೋತರೂ ಮುಂದೇನು? ಇದು ಎರಡನೆಯ ಪ್ರಶ್ನೆ. ಒಂದು ವೇಳೆ ಶ್ರೀರಾಮುಲು ಸೋತರೆ ಅದು ಗಣಿ ರೆಡ್ಡಿಗಳ ರಾಜಕೀಯ ನಿರ್ಧಾರಗಳಿಗೆ ಬಹು ದೊಡ್ಡ ಸೋಲು.
ಮತ್ತೆ ಅವರು ಬಿಜೆಪಿ ನಾಯಕರಿಗೆ ಶರಣಾಗಿ ಅವರೊಳಗೆ ಒಂದಾಗಿ ಬಿಡುವ ಸಾಧ್ಯತೆಯೂ ಇದೆ. ಅಥವಾ ಇವರ ಸಹವಾಸವೇ ಬೇಡ ಎಂದು ಬಿಜೆಪಿಯೇ ದೂರ ಇಡಲೂ ಸಾಕು. ಆದರೆ ಹಾಗೆ ದೂರವಿಟ್ಟರೆ, ಬಿಜೆಪಿ ಸರಕಾರ ಕುಸಿಯುವ ಸಾಧ್ಯತೆಯಿದೆ. ಆದುದರಿಂದ ಇಬ್ಬರು ಕೆಲವು ರಾಜಿಗಳನ್ನು ಮಾಡಿ ಪರಸ್ಪರರನ್ನು ಒಪ್ಪಿಕೊಳ್ಳುವ ಸಾಧ್ಯತೆಯೇ ಹೆಚ್ಚು. ಅಥವಾ ಗಣಿ ರೆಡ್ಡಿಗಳ ಸಹವಾಸಕ್ಕಿಂತ ಚುನಾವಣೆಯೇ ವಾಸಿ ಎಂದು ಸರಕಾರ ವನ್ನು ವಿಸರ್ಜಿಸಿದರೂ ಅಚ್ಚರಿಯಿಲ್ಲ.
ಒಂದು ವೇಳೆ ಶ್ರೀರಾಮುಲು ಗೆದ್ದರೆ? ಆಗ ಬಿಜೆಪಿ ಒಂದು ಹೆಜ್ಜೆ ಹಿಂದಿಟ್ಟು ಶ್ರೀರಾಮುಲುರನ್ನು ಓಲೈಸುವ ಸಾಧ್ಯತೆ ಯಿದೆ. ಅಂದರೆ, ಈ ಹಿಂದೆ ಶ್ರೀರಾಮುಲು ಏನೇನು ಬೇಡಿಕೆಗಳನ್ನು ಮುಂದಿಟ್ಟಿದ್ದರೋ ಅವನ್ನು ಈಡೇರಿಸುವ ಭರವಸೆ ನೀಡಿ ಅವರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳುವ ಸಾಧ್ಯತೆ ಇಲ್ಲದಿಲ್ಲ. ಸರಕಾರ ಬಿದ್ದರೆ ಅದರಿಂದ ಗಣಿ ರೆಡ್ಡಿಗಳಿಗೂ ಸಮಸ್ಯೆಗಳಿರುವುದರಿಂದ, ಬಿಜೆಪಿಯೊಂದಿಗೆ ರೆಡ್ಡಿಗಳು ಮತ್ತೆ ಕೈಜೋಡಿಸಿದರೆ ಅದರಲ್ಲಿ ಅಚ್ಚರಿಯೇನೂ ಇಲ್ಲ.
ಬಿಜೆಪಿ ಮತ್ತು ಗಣಿ ರೆಡ್ಡಿಗಳು ಪರಸ್ಪರರ ವಿರುದ್ಧ ಚುನಾವಣೆ ಯಲ್ಲಿ ಸ್ಪರ್ಧಿಸಿದ್ದರಾದರೂ, ಎಲ್ಲೂ ಲಕ್ಷ್ಮಣ ರೇಖೆಯನ್ನು ಮೀರಿಲ್ಲ. ಸಂಬಂಧ ತೀರಾ ಹರಿದುಕೊಳ್ಳುವಂತಹ ಮಾತನ್ನಾಡಿಲ್ಲ. ಯಡಿಯೂರಪ್ಪ ನೀಡಿರುವ ಕೆಲವು ವಿವಾದಾತ್ಮಕ ಹೇಳಿಕೆಗಳನ್ನು ಬಿಟ್ಟರೆ ಬಿಜೆಪಿಯ ವರಿಷ್ಠರು ಗಣಿ ರೆಡ್ಡಿಗಳ ಜೊತೆಗಿನ ಸಂಬಂಧವನ್ನು ಕಡಿದೆಸೆದಿಲ್ಲ. ಮುಳುಗುವವನಿಗೆ ಹುಲ್ಲು ಕಡ್ಡಿಯೂ ದೊಡ್ಡ ಆಸರೆಯಾಗಬಲ್ಲುದು. ಆದುದರಿಂದ ಒಂದು ವೇಳೆ ಶ್ರೀರಾಮುಲುರಿಗೆ ಸಚಿವ ಪದವಿ ಸಿಗುವುದಾದರೆ ಮತ್ತೆ ಸಂಬಂಧ ಸರಿ ಹೋಗುವ ಸಾಧ್ಯತೆಯೂ ಇದೆ. ಯಡಿಯೂರಪ್ಪ ಆಗ ಬಿಜೆಪಿಗೆ ಸಮಸ್ಯೆಯಾಗಬಹುದಾದರೂ, ಮುಖ್ಯಮಂತ್ರಿ ಕುರ್ಚಿಯನ್ನು ಅವರಿಗೆ ಬಿಟ್ಟುಕೊಟ್ಟರೆ ಅಲ್ಲಿಗೆ ಸಮಸ್ಯೆ ಮುಗಿಯಿತು.
ಆದರೆ ಇದೆಲ್ಲ ಸಂಭವಿಸುವ ಸಾಧ್ಯತೆಗಳ ನಡುವೆಯೇ ಸರಕಾರ ಬೀಳುವ ಸಾಧ್ಯತೆಯೂ ಅಷ್ಟೇ ಪ್ರಮಾಣದಲ್ಲಿದೆ. ಮತ್ತೆ ಶ್ರೀರಾಮುಲುಗೆ ಸಚಿವ ಸ್ಥಾನ ನೀಡುವುದು ಅಷ್ಟು ಸುಲಭವಿಲ್ಲ. ಪಕ್ಷದೊಳಗೇ ಇದಕ್ಕೆ ವ್ಯಾಪಕ ವಿರೋಧವಿದೆ. ಈಗಾಗಲೇ ಬಿಜೆಪಿಯ ವಿರುದ್ಧ ಸ್ಪರ್ಧಿಸಿದ ಶ್ರೀರಾಮುಲುರನ್ನು ಮತ್ತೆ ತಬ್ಬಿಕೊಳ್ಳುವುದ ರಿಂದ ಬಿಜೆಪಿಯ ವರ್ಚಸ್ಸಿಗೂ ಸಾಕಷ್ಟು ಧಕ್ಕೆಯಾಗುತ್ತದೆ. ಇದೇ ಸಂದರ್ಭದಲ್ಲಿ ಹೊಸ ಪಕ್ಷ ಕಟ್ಟುವ ಮಾತನ್ನಾಡಿದ್ದಾರೆ ಶ್ರೀರಾಮುಲು. ಅಂತಹ ನಿರ್ಧಾರ ವನ್ನೇನಾದರೂ ಶ್ರೀರಾಮುಲು ತಳೆಯು ವುದು ನಿಜವೇ ಆಗಿದ್ದರೆ ಸರಕಾರ ಬೀಳುವುದು ಶತಸಿದ್ಧ. ಅಂತೂ ಡಿಸೆಂಬರ್ 4ರಂದು ಪ್ರಕಟವಾಗುವ ಫಲಿತಾಂಶ ರಾಜ್ಯ ಸರಕಾರದ ಬುಡವನ್ನು ಅಲುಗಾಡಿಸುವಲ್ಲಿ ಪ್ರಧಾನ ಪಾತ್ರ ವಹಿಸಲಿದೆ. ಇದರಲ್ಲಿ ಅನುಮಾನವಿಲ್ಲ.
ಇಂತಹ ಸ್ಥಿತಿಯಲ್ಲಿ ರೆಡ್ಡಿಗಳಿಗೆ ಜೀ ಹುಜೂರ್ ಹೇಳಿಕೊಂಡು ಮುಂದು ವರಿಯುವುದಕ್ಕಿಂತ ಸರಕಾರವನ್ನು ವಿಸರ್ಜಿಸು ವುದರಿಂದ ಬಿಜೆಪಿಗೆ ಹೆಚ್ಚು ಲಾಭವಿದೆ. ಒಂದು ವೇಳೆ ಕೆಲವು ತೇಪೆಗಳ ಮೂಲಕ ಸರಕಾರವನ್ನು ಸುಭದ್ರಗೊಳಿಸಿದರೂ ಅದು ಹೆಚ್ಚು ಸಮಯ ಬಾಳುವ ಲಕ್ಷಣಗಳಿಲ್ಲ. ಪದೇ ಪದೇ ಇಂತಹ ಬಿಕ್ಕಟ್ಟಿನಿಂದ ಪಕ್ಷದ ಮಾನ ಹರಾಜಾಗುವುದಕ್ಕಿಂತ, ಸರಕಾರವನ್ನು ವಿಸರ್ಜಿಸಿ ಹೊಸದಾಗಿ ಜನಾದೇಶಕ್ಕೆ ಸಿದ್ಧವಾಗುವುದು ಬಿಜೆಪಿಗೆ ಒಳಿತು. varthabharati sampadakiya
0 comments:
Post a Comment