ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸೋಮವಾರ ದೇವಸ್ಥಾನದ ಆಡಳಿತ ಮಂಡಳಿಯ ನಿಷೇಧ ಸೂಚನೆಯ ಹೊರತಾಗಿಯೂ ಮಡೆಸ್ನಾನ ಆಚರಿಸುತ್ತಿರುವ ಭಕ್ತರು.
ಎಂಜಲೆಲೆಯಲ್ಲಿ ಹೊರಳಾಡಿದ ನಮ್ಮ ಸರಕಾರಿ ವ್ಯವಸ್ಥೆ
ವಿವಾದಕ್ಕೊಳಗಾಗಿರುವ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮಡೆಸ್ನಾನವನ್ನು ಈ ಬಾರಿಯೂ ಸಂಭ್ರಮದಿಂದಲೇ ಆಚರಿಸಲಾ ಗಿದೆ. ಎಂದಿನಂತೆ ಹಲವು ಪರ-ವಿರೋಧ ಧ್ವನಿಗಳು ಈ ಬಾರಿಯೂ ಕೇಳಿ ಬಂದಿವೆ. ವಿಶೇಷವೆಂದರೆ, ದೇವಳದ ಆಡಳಿತ ಮಂಡಳಿ ಮಡೆಸ್ನಾನ ವಿವಾದದಿಂದ ದೂರ ನಿಲ್ಲಲು ಈ ಬಾರಿ ನಿರ್ಧರಿಸಿದಂತಿದೆ. ಅದಕ್ಕಾಗಿ ಮೊದಲೇ, ಮಡೆಸ್ನಾನಕ್ಕೆ ನಿಷೇಧವನ್ನು ಘೋಷಿಸಿಬಿಟ್ಟಿತ್ತು. ‘ದೇವಸ್ಥಾನದಲ್ಲಿ ಜಾತ್ರಾ ಸಮಯದಲ್ಲಿ ಭಕ್ತರು ಸ್ವ ಇಚ್ಛೆಯಿಂದ ನಡೆಸುವ ಮಡೆಸ್ನಾನ(ಬ್ರಾಹ್ಮಣರು ಉಂಡ ಎಲೆಯ ಮೇಲೆ ಮಾಡುವ ಉರುಳು ಸೇವೆ) ನಿಷೇಧಿಸಲಾಗಿದೆ ಎಂದು ದೇವಳದ ಆಡಳಿತ ಸಮಿತಿಯ ಪ್ರಕಟನೆ ನೀಡಿತ್ತು. ವಿಪರ್ಯಾಸ ವೆಂದರೆ, ಈ ಬಾರಿ ಸ್ಥಳೀಯ ಜನರೇ ಒತ್ತಾಯ ಪೂರ್ವಕವಾಗಿ ಮಡೆಸ್ನಾನ ನಡೆಸಿ ದ್ದಾರೆ. ಅಥವಾ, ಈ ಬಾರಿ ಸ್ಥಳೀಯ ಜನರನ್ನು ಮುಂದಿಟ್ಟು ದೇವಸ್ಥಾನ ಮಡೆಸ್ನಾನವನ್ನು ಆಚರಿಸಿತು ಎಂದರೆ ಹೆಚ್ಚು ಸರಿ. ಈ ಮೂಲಕ, ಮಡೆಸ್ನಾನ ಜನರ ಬೇಡಿಕೆಯಾಗಿದೆ ಎನ್ನುವ ವಾದವನ್ನು ಮಂಡಿಸಿ, ಸರಕಾರದ, ಜಿಲ್ಲಾಡಳಿತದ ಬಾಯಿ ಮುಚ್ಚಿಸುವುದಕ್ಕೆ ಮುಂದಾಗಿದೆ ಆಡಳಿತ ಮಂಡಳಿ.
ಯಾವುದೇ ಧರ್ಮ, ಜಾತಿಗಳ ದೇವಸ್ಥಾನ, ನಂಬಿಕೆ, ಆಚರಣೆ ಇತ್ಯಾದಿಗಳನ್ನು ಪ್ರಶ್ನಿಸುವುದು ಸರಿಯಲ್ಲ. ಆದರೆ ಒಂದು ದೇವಸ್ಥಾನದ ನಂಬಿಕೆ, ಆಚರಣೆ ಇತರ ಧರ್ಮ, ಜಾತಿಗಳ ಜನರನ್ನು ತುಳಿಯುವ, ಅವಮಾನಿಸುವ, ಶೋಷಿಸುವ ಉದ್ದೇಶವನ್ನು ಹೊಂದಿದ್ದರೆ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಅದನ್ನು ಪ್ರಶ್ನಿಸಲೇ ಬೇಕಾಗುತ್ತದೆ. ಈ ಕಾರಣದಿಂದಲೇ, ಶೋಷಣೆಗೆ ಒಳಗಾಗಲು ಸ್ವತಃ ಒಂದು ಸಮುದಾಯದ ಒಪ್ಪಿಗೆಯಿದ್ದರೂ ಅವರನ್ನು ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಶೋಷಣೆ ಮಾಡುವಂತಿಲ್ಲ.
ಹಲವು ದಶಕಗಳ ಹಿಂದೆ ರಾಜ್ಯದಲ್ಲಿ ಬೆತ್ತಲೆ ಸೇವೆ ಇದೇ ಕಾರಣಕ್ಕೆ ಸುದ್ದಿಯಾಗಿತ್ತು. ಕೆಳ ಸಮುದಾಯ ಈ ಆಚರಣೆ ತಮ್ಮ ಹಕ್ಕು, ತಮ್ಮ ನಂಬಿಕೆ ಎಂದು ಬಿಂಬಿಸಲು ಪ್ರಯತ್ನಿಸಿತು. ಆದರೆ ಸರಕಾರ ಬಲ ಪ್ರಯೋಗಿಸಿ ಈ ಆಚರಣೆಯನ್ನು ನಿಲ್ಲಿಸಿತು. ಇದೀಗ ಸುಬ್ರಹ್ಮಣ್ಯದಲ್ಲೂ ಅದೇ ಆಗುತ್ತಿದೆ. ಕೆಳವರ್ಗದ ಜನರೇ ಮುಂದೆ ನಿಂತು ‘ನಾವು ಮಡೆಸ್ನಾನ ಮಾಡುತ್ತೇವೆ’ ಎಂದು ಹೋರಾಟಕ್ಕಿಳಿದಿದ್ದಾರೆ. ಅಥವಾ ದೇವಸ್ಥಾನದ ಆಡಳಿತ ಮಂಡಳಿ ಅವರನ್ನು ಹೋರಾಟಕ್ಕಿಳಿಸಿದೆ ಹಾಗೂ ಸಾರ್ವಜನಿಕವಾಗಿ ಬ್ರಾಹ್ಮಣರು ತಿಂದ ಎಂಜಲೆಲೆಯಲ್ಲಿ ಹೊರಳಾಡಿದ್ದಾರೆ. ಏಕ ಕಾಲದಲ್ಲಿ ದೈಹಿಕ ಹಾಗೂ ಮಾನಸಿಕ ರೋಗಗಳನ್ನು ಹರಡುವ ಈ ಆಚರಣೆಯನ್ನು ಜನರ ನಂಬಿಕೆ ಎಂದು ಯಾವ ಕಾರಣಕ್ಕೂ ಪೋಷಿಸುವುದು ಸರಿಯಲ್ಲ.
ಕೆಲವರು ವಿಚಿತ್ರವಾದ ವಾದವನ್ನು ಮುಂದಿಟ್ಟು ಈ ಆಚರಣೆಯನ್ನು ಸಮರ್ಥಿಸುತ್ತಾರೆ. ‘‘ಅವರಿಗೆ ಮಾನಸಿಕವಾಗಿ ತೃಪ್ತಿ ಸಿಗುತ್ತದೆಯಾದರೆ ಮಡೆಸ್ನಾನ ಆಚರಣೆ ಮಾಡಲಿ’ ಎನ್ನುವುದು ಈ ‘ಚಿಂತಕ’ರ ವಾದ. ತುಳುನಾಡಿನಲ್ಲಿ ದಲಿತರಿಗೆ ಅಜೆಲ್ ನೀಡುವ ಪದ್ಧತಿಯಿದೆ. ಉಗುರು, ಕೂದಲು, ಎಂಜಲು ಸೇರಿದಂತೆ ಇನ್ನಿತರ ಕೊಡುಗೆಗಳ ಮೂಲಕ ತಮ್ಮ ಅನಿಷ್ಟಗಳನ್ನು ಹಸ್ತಾಂತರಿಸುವುದು ಇದರ ಉದ್ದೇಶ. ನಾಳೆ ಈ ಆಚರಣೆ ಬೇಕು ಎಂದು ಆ ವರ್ಗದ ಜನ ಹಠ ಹಿಡಿದರೆ ಅದಕ್ಕೆ ಅನುಮತಿ ನೀಡಲು ಸಾಧ್ಯವೇ? ಮಡೆಸ್ನಾನವನ್ನು ಕೆಲವು ಬುದ್ಧಿಹೀನ ಜನರು ಅಪೇಕ್ಷಿಸುತ್ತಾರೆ ಎಂದು ಅದಕ್ಕೆ ಅನುಮತಿ ನೀಡಿದರೆ, ಈಗಾಗಲೇ ಕಾನೂನಿನ ಮೂಲಕ ಮಟ್ಟ ಹಾಕಿದ ಅನೇಕ ಆಚರಣೆಗಳು ಮತ್ತೆ ತಲೆಯೆತ್ತುವ ಸಾಧ್ಯತೆ ಇದೆ. ಆದುದರಿಂದ, ಕಾನೂನು ಪ್ರಕಾರವೇ ಇದರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ದೇವಸ್ಥಾನದ ಆವರಣದಲ್ಲಿ ಆಚರಣೆ ನಡೆದಿರುವುದರಿಂದ ಮಂಡಳಿಯ ಮುಖಂಡರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು.
ಇದು ಸಾಂಕ್ರಾಮಿಕ ರೋಗಗಳು ಹರಡುವಂತಹ ಕಾಲ. ವಿವಿಧ ರೋಗಗಳ ಕುರಿತಂತೆ ಜಾಗೃತಿ ಮೂಡಿಸಲು ಸರಕಾರ ಈಗಾಗಲೇ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿದೆ. ಆದರೆ ಈ ಎಲ್ಲ ಕಾರ್ಯಕ್ರಮಗಳನ್ನು ಅಣಕಿಸುವಂತೆ, ಚರ್ಮ ರೋಗಗಳು ಗುಣವಾಗುತ್ತವೆ ಎಂದು ನಂಬಿ ಸಾರ್ವಜನಿಕವಾಗಿ ಎಂಜಲೆಲೆಯಲ್ಲಿ ಹೊರಳಾಡುತ್ತಾರೆ. ಇದು ಕೇವಲ ದೈಹಿಕ ರೋಗಗಳನ್ನು ಮಾತ್ರವಲ್ಲ, ಮೇಲು ಕೀಳು ಎನ್ನುವಂತಹ ಸಾಮಾಜಿಕ, ಮಾನಸಿಕ ರೋಗಗಳಿಗೂ ಕಾರಣವಾಗಿದೆ. ಎಂಜಲೆಲೆಯಲ್ಲಿ ಹೊರಳುವ ಮೂಲಕ ಮನುಷ್ಯ ತನ್ನ ಅಹಂನ್ನು, ದುರಹಂಕಾರವನ್ನು ಕಳೆದು ಕೊಳ್ಳುತ್ತಾನೆ ಎಂಬಿತ್ಯಾದಿ ವ್ಯಾಖ್ಯಾನಗಳನ್ನೂ ಕೆಲವರು ನೀಡಲು ಪ್ರಯತ್ನಿಸಿದ್ದಾರೆ.ಇದು ನಮ್ಮ ಅಹಂನ್ನು ದೂರಮಾಡುವುದಿಲ್ಲ.ಬದಲಿಗೆ ಮೇಲ್ವರ್ಣದ ಜನರ ಎಂಜಲನ್ನು ವೈಭವೀಕರಿಸುತ್ತದೆ. ಮೇಲ್ವರ್ಣೀಯರನ್ನು ಪರೋಕ್ಷವಾಗಿ ಶ್ರೇಷ್ಟರು ಎಂದು ಘೋಷಿಸುತ್ತದೆ. ಕೆಳವರ್ಗದ ಜನರನ್ನು ಮೇಲ್ವರ್ಗದ ಜನರ ಎಂಜಲಲ್ಲಿ ಹೊರಳಿಸುವ ಈ ಸಂಪ್ರದಾಯದ ಹಿಂದೆ, ಜಾತೀಯ ಮನಸ್ಸು ಕೆಲಸ ಮಾಡಿದೆ. ವರ್ಣ ವ್ಯವಸ್ಥೆಯನ್ನು ವೈಭವೀಕರಿಸುತ್ತದೆ.
ರೋಗಗ್ರಸ್ತ ಸಮಾಜ ಮಾತ್ರ ಈ ಮಡೆಸ್ನಾನವನ್ನು ಸಮರ್ಥಿಸಿಕೊಳ್ಳುತ್ತದೆ. ಆದುದರಿಂದ ಸುಬ್ರಹ್ಮಣ್ಯದಲ್ಲಿ ನಡೆದ ಮಡೆಸ್ನಾನವನ್ನು ನಾಡಿನ ಜನರು ಒಕ್ಕೊರಲಲ್ಲಿ ಖಂಡಿಸಬೇಕು. ಇದಕ್ಕೆ ಅವಕಾಶ ಮಾಡಿಕೊಟ್ಟ ಆಡಳಿತ ಮಂಡಳಿ ಮತ್ತು ಸ್ಥಳೀಯ ಜಿಲ್ಲಾಡಳಿತದ ವಿರುದ್ಧ ಸರಕಾರ ತಕ್ಷಣ ಕ್ರಮ ಕೈಗೊಳ್ಳಬೇಕು.
0 comments:
Post a Comment