ದಿಕ್ಕು ತೋಚದಂತಾದ ಮತದಾರರು
ಬಳ್ಳಾರಿ ನ. : ‘ಸ್ವಾಭಿಮಾನಿ ಸಮರ’ ಎದುರಿಸಲು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಖಾಡಕ್ಕಿಳಿದಿದ್ದಾರೆ. ಮುಖ್ಯಮಂತ್ರಿ ಸದಾನಂದಗೌಡ ಸೇರಿದಂತೆ ಇಡೀ ಸಚಿವ ಸಂಪುಟ‘ಶಕ್ತಿ ಸೌಧ’ ಬಿಟ್ಟು ಬಳ್ಳಾರಿಯಲ್ಲೇ ಠಿಕಾಣಿ ಹೂಡಿದ್ದು ಸ್ವತಂತ್ರ ಅಭ್ಯರ್ಥಿ ಶ್ರೀರಾಮುಲು ವಿರುದ್ಧ ತೊಡೆ ತಟ್ಟಿದೆ. ಹೀಗಾಗಿ‘ಬಳ್ಳಾರಿ ರಣಾಂಗಣ’ ಈಗ ಭರ್ಜರಿ ಕಾವೇರಿದೆ.
ಮಂಗಳವಾರ ಯಡಿಯೂರಪ್ಪ, ಸದಾನಂದಗೌಡ, ಈಶ್ವರಪ್ಪ, ಸಚಿವರಾದ ಜಗದೀಶ ಶೆಟ್ಟರ್, ಬೊಮ್ಮಾಯಿ, ಉದಾಸಿ, ಸೋಮಣ್ಣ, ರಾಜುಗೌಡ, ಬಾಲಚಂದ್ರ ಜಾರಕಿಹೊಳಿ, ರೇಣುಕಾಚಾರ್ಯ, ಗೋವಿಂದ ಕಾರಜೋಳ ಸೇರಿದಂತೆ ಇನ್ನಿತರ ಘಟಾನುಘಟಿ ನಾಯಕರು ಪಕ್ಷದ ಅಭ್ಯರ್ಥಿ ಗಾದಿಲಿಂಗಪ್ಪ ಪರ ಬಿರುಸಿನ ಪ್ರಚಾರ ನಡೆಸಿ ಶ್ರೀರಾಮುಲು ವಿರುದ್ಧ ಹರಿಹಾಯ್ದರು.
ಇದೇ ವೇಳೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ, ವಿಪಕ್ಷ ನಾಯಕ ಸಿದ್ದರಾಮಯ್ಯ, ಮುಖಂಡ ರಾದ ಅನಿಲ್ ಲಾಡ್, ಎಚ್.ಎಂ ರೇವಣ್ಣ, ಮೋಟಮ್ಮ, ಬಸವರಾಜ ರಾಯರೆಡ್ಡಿ ಹಾಗೂ ಇನ್ನಿತರ ದಂಡ ನಾಯಕರು ಪಕ್ಷದ ಅಭ್ಯರ್ಥಿ ರಾಮಪ್ರಸಾದ್ ಪರ ಮತಯಾಚಿಸಿದರು.
ಪ್ರಚಾರದಲ್ಲೂ ಗುದ್ದಾಟ: ಕನಕದೇವಿ ಆದಿದುರ್ಗಮ್ಮ ದೇವಿಗೆ ಪೂಜೆ ಸಲ್ಲಿಸಿದ ಬಳಿಕ ಬಿಜೆಪಿ ನಾಯಕರನ್ನು ಹೊತ್ತ ತೆರೆದ ವಾಹನ ಭಾರಿ ಜನಸ್ತೋಮದೊಂದಿಗೆ ಕೌಲ್ ಬಜಾರ್ ರಸ್ತೆ ಬಳಿ ಬಂದಾಗ ಶ್ರೀರಾಮುಲು ಬೆಂಬಲಿಗರ ಬೃಹತ್ ಮೆರವಣಿಗೆ ಕೆಣಕಿತು.
ಮೆರವಣಿಗೆಯಲ್ಲಿ ರಾಮುಲು ಭಾವಚಿತ್ರವಿರುವ ಬಾವುಟಗಳನ್ನು ಎತ್ತಿ ಹಿಡಿದ ಅವರು ತೆರೆದ ವಾಹನದಲ್ಲಿ ಸಾಗುತ್ತಿದ್ದ ಮುಖಂಡರಿಗೆ ಕೇಳುವಂತೆ ಬಿಜೆಪಿ ವಿರುದ್ಧ ಘೋಷಣೆ ಕೂಗಿದರು. ಮತ್ತೊಂದೆಡೆ ಸದಾನಂದಗೌಡ ಅವರು ಬಿಜೆಪಿಗೆ ಜಯವಾಗಲಿ ಎಂದು ವಿಜಯದ ಸಂಕೇತ ವಾಗಿ ಬೆರಳು ತೋರಿದ್ದಕ್ಕೆ ಕೆಲವರು ಹೆಬ್ಬೆರಳು ಕೆಳಮುಖ ಮಾಡಿ ತೋರಿಸಿ ಧಿಕ್ಕಾರ ಎಂದು ಅಪಹಾಸ್ಯ ಮಾಡಿದರು.
ಈ ಮಧ್ಯೆ ರೇಡಿಯೋ ಪಾರ್ಕ್ ವೃತ್ತ ಮತ್ತು ಬೆಳಗಲ್ ಕ್ರಾಸ್ ವೃತ್ತದಲ್ಲಿ ಶ್ರೀರಾಮುಲು ಬೆಂಬಲಿಗರ ಮೆರವಣಿಗೆ ಮುಂದೆ ಹೋಗುವುದಕ್ಕಾಗಿ ದಾರಿ ಮಾಡಿ ಕೊಡಲು ಬಿಜೆಪಿ ಮುಖಂಡರು ನಡು ರಸ್ತೆಯಲ್ಲೇ ಅರ್ಧ ಗಂಟೆಗಳ ಕಾಲ ಕಾದು ನಿಂತ ಪ್ರಸಂಗವೂ ನಡೆಯಿತು.
ಅನುರಣಿಸಿದ‘ಬಳ್ಳಾರಿ ಭಯೋತ್ಪಾದನೆ’: ಬಳ್ಳಾರಿ ಜನತೆ ಭಯದಲ್ಲಿ ಬದುಕುತ್ತಿದ್ದಾರೆ. ಜಿಲ್ಲೆಯುದ್ದಕ್ಕೂ ಭಯೋತ್ಪಾದನೆಯ ಕರಿನೆರಳು ಚಾಚಿದೆ. ಉಪ ಚುನಾವಣೆ ಗೆಲವಿಗಾಗಿ ಕೆಲವರು ಈ ವಾತಾವರಣ ನಿರ್ಮಿಸಿದ್ದಾರೆ. ರಾಜ್ಯ ಚುನಾವಣಾ ಆಯೋಗ ಈಗಲೇ ಎಚ್ಚೆತ್ತುಕೊಂಡು ಭಯಮುಕ್ತ ವಾತಾವರಣ ನಿರ್ಮಿಸಿ ಎಲ್ಲರಿಗೂ ಮುಕ್ತ ಮತದಾನಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಸಿಎಂ ಸದಾನಂದಗೌಡ ಮನವಿ ಮಾಡಿದರು.
ಶ್ರೀರಾಮುಲು ಹೆಸರು ಪ್ರಸ್ತಾಪಿಸದೇ ವಾಗ್ದಾಳಿ ನಡೆಸಿದ ಸದಾನಂದಗೌಡ,‘ಬಿಜೆಪಿ ನಂಬಿ ಅವರನ್ನು ಗೆಲ್ಲಿಸಿದಿರಿ. ಬಿಜೆಪಿ ಕೂಡ ಅವರನ್ನು ಸಾಕಷ್ಟು ಬೆಳೆಸಿತು, ಮಂತ್ರಿ ಮಾಡಿತು. ಸಚಿವ ಸಂಪುಟ ಸಭೆಗಳಿಗೂ ಬಾರದೆ, ನಿಮಗಾಗಿ ಸರ್ಕಾರ ರೂಪಿಸಿದ ಯೋಜನೆಗಳನ್ನೂ ಸರಿಯಾಗಿ ಅನುಷ್ಠಾನ ಮಾಡದೇ ಕ್ಷೇತ್ರದ ಜನತೆ-ಪಕ್ಷಕ್ಕೆ ಅವರು ದ್ರೋಹ ಬಗೆದಿದ್ದಾರೆ.
ಇವರನ್ನು ಬೆಳೆಸಿದ್ದೇ ತಪ್ಪಾಗಿದೆ. ನಮ್ಮ ತಪ್ಪನ್ನು ತಿದ್ದಿಕೊಳ್ಳುತ್ತೇವೆ. ಇಂಥ ಸ್ವಾರ್ಥಿಗಳಿಗೆ ತಕ್ಕ ಪಾಠ ಕಲಿಸಲು ಇದು ಸೂಕ್ತ ಸಮಯ’ ಎಂದರು.
ಎಲ್ಲದಕ್ಕೂ ಸಿದ್ಧ: ಮಾಜಿ ಸಿಎಂ ಯಡಿಯೂರಪ್ಪ ಮಾತನಾಡಿ,‘ಬಳ್ಳಾರಿಯಲ್ಲಿ ಮಿತಿ ಮೀರಿರುವ ಭಯೋತ್ಪಾದನೆ ಮತ್ತು ಗಲಭೆಗೆ ಪ್ರಚೋದನೆ ನೀಡುವರ ವಿರುದ್ಧ ಚುನಾವಣಾ ಆಯೋಗಕ್ಕೆ ಲಿಖಿತ ದೂರು ನೀಡುತ್ತೇನೆ. ಬಳ್ಳಾರಿ ಕರ್ನಾಟಕದಲ್ಲಿದೆ ಎನ್ನುವುದನ್ನು ಯಾರೂ ಮರೆಯ ಬಾರದು. ಇಂಥ ಗೊಡ್ಡು ಬೆದರಿಕೆ, ಗಲಭೆಗಳಿಗೆ ನಾವು ಬಗ್ಗುವುದಿಲ್ಲ. ನಾವೂ ಕೂಡ ಎಲ್ಲದಕ್ಕೂ ತಯಾರಾಗಿ ಬಂದಿದ್ದೇವೆ’ ಎಂದರು.
ಕಾಂಗ್ರೆಸ್ ಕಸರತ್ತು: ಕಾಂಗ್ರೆಸ್ ಕೂಡ ಪ್ರಚಾರದಲ್ಲಿ ಹಿಂದೆ ಬಿದ್ದಿಲ್ಲ. ಡಾ.ಪರಮೇಶ್ವರ ಕೌಲ್‌ಬಜಾರ್ ಪ್ರದೇಶದಲ್ಲಿ ಪ್ರಚಾರ ನಡೆಸಿ,‘ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದಲೂ ಇಂಥ ಕೆಟ್ಟ ವಾತಾವರಣ ನಿರ್ಮಾಣವಾಗಿದೆ. ಮುಖ್ಯಮಂತ್ರಿ ಬಳ್ಳಾರಿಗೆ ಬಂದಾಗಲೂ ಸರಿಯಾದ ಸ್ವಾಗತ ಮಾಡಿರಲಿಲ್ಲ. ಇನ್ನು ವಿರೋಧ ಪಕ್ಷದ ನಾಯಕ ಬಂದಾಗಲೂ ಸರಿಯಾದ ಭದ್ರತೆ ಒದಗಿಸಿರ ಲಿಲ್ಲ. ಆಗ ಬಿಜೆಪಿ ನಾಯಕರಿಗೆ ಇದರ ಕುರಿತು ಜ್ಞಾನೋದಯವಾಗಿರಲಿಲ್ಲವೇ’ ಎಂದು ಪ್ರಶ್ನಿಸಿದರು.
ಇಂದು ಬಳ್ಳಾರಿಗೆ ಮೇಸ್ತ್ರಿ: ಸಿದ್ದರಾಮಯ್ಯ ಕೊಳಗಲ್ ಹಾಗೂ ಕೃಷ್ಣನಗರದಲ್ಲಿ ಅಪಾರ ಬೆಂಬಲಿಗರೊಂದಿಗೆ ಪ್ರಚಾರ ನಡೆಸಿದರು. ಮುಖಂಡರಾದ ದಿನೇಶ್ ಗುಂಡೂರಾವ್, ಪ್ರಕಾಶಂ, ಮೋಟಮ್ಮ, ಅನಿಲ್ ಲಾಡ್, ಎಚ್.ಎಂ ರೇವಣ್ಣ, ಮಹಾದೇವಪ್ಪ, ಸಂತೋಷ್ ಲಾಡ್, ಜೆ.ಎಸ್. ಆಂಜನೇಯಲು, ಎಂ.ಪಿ. ರವೀಂದ್ರ ಅವರು ವಿವಿಧ ಕಡೆಗಳಲ್ಲಿ ಪ್ರಚಾರ ಮಾಡುವ ಮೂಲಕ ಮತದಾರನ ಮನವೊಲಿಕೆಗೆ ಕಸರತ್ತು ನಡೆಸಿದರು.
ಇದೇ ವೇಳೆ ನ.೨೩ರಂದು ರಾಜ್ಯ ಕಾಂಗ್ರೆಸ್‌ನ ಉಸ್ತುವಾರಿ ವಹಿಸಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಧುಸೂದನ್ ಮಿಸ್ತ್ರಿ ಆಗಮಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಸ್ವಾಭಿಮಾನಿ ಶ್ರೀರಾಮುಲು ಪ್ರಚಾರ: ಶ್ರೀರಾಮುಲು ಕೂಡ ಭರ್ಜರಿ ಪ್ರಚಾರ ನಡೆಸಿದ್ದು, ಸಹೋದರಿ, ಸಂಸದೆ ಜೆ. ಶಾಂತಾ ಹಾಗೂ ಅಳಿಯ ಶಾಸಕ ಟಿ.ಎಚ್. ಸುರೇಶ್‌ಬಾಬು, ಮಿತ್ರ ಕೆಎಂಎಫ್ ಅಧ್ಯಕ್ಷ ಜಿ. ಸೋಮಶೇಖರ ರೆಡ್ಡಿ ಸಾಥ್ ನೀಡುತ್ತಿದ್ದಾರೆ.
ಯಡಿಯೂರಪ್ಪ ಕಾರಿಗೆ ಆನಂದ ಸಿಂಗ್ ಚಾಲಕ
ಬಳ್ಳಾರಿ ಗ್ರಾಮೀಣ ಉಪ ಚುನಾವಣೆಯ ಪ್ರಚಾರ ಕಾರ್ಯಕ್ರಮಕ್ಕೆ ಆಗಮಿಸಿದ್ದ ಮಾಜಿ ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ವಾಹನಕ್ಕೆ ಹೊಸಪೇಟೆ ಶಾಸಕ ಆನಂದ ಸಿಂಗ್ ಚಾಲಕರಾಗಿದ್ದರು! ಈ ಹಿಂದೆ ರೆಡ್ಡಿ ಪಾಳೆಯದಲ್ಲಿ ಗುರುತಿಸಿಕೊಂಡಿದ್ದ ಆನಂದ ಸಿಂಗ್, ಬಳ್ಳಾರಿ ರೆಡ್ಡಿ ಬಳಗವನ್ನು ತೊರೆದು ಬಿಜೆಪಿ ಪರ ಮತಯಾಚನೆ ಮಾಡಲು ಕಳೆದ ೩-೪ ದಿನಗಳಿಂದ ಬಳ್ಳಾರಿಯಲ್ಲಿದ್ದಾರೆ. ಬಳ್ಳಾರಿ ರೇಲ್ವೆ ನಿಲ್ದಾಣದಲ್ಲಿ ಬಂದಿಳಿದ ಬಿಎಸ್‌ವೈ ಕಾರಿನ ಚಾಲಕರಾಗಿ ಆನಂದಸಿಂಗ್ ಚಾಲನೆ ಮಾಡಿದರು.
ಇಂದು ಜೆಡಿಎಸ್ ನಿಲವು ಪ್ರಕಟ: ಎಚ್ಡಿಕೆ
ಪಕ್ಷದ ಜಿಲ್ಲಾಧ್ಯಕ್ಷರು, ಕಾರ್ಯಕರ್ತರೊಂದಿಗೆ ಅಂತಿಮವಾಗಿ ಚರ್ಚೆ ನಡೆಸಲಾಗುತ್ತಿದೆ. ಯಾರಿಗೆ ಬೆಂಬಲ ನೀಡಬೇಕು ಎನ್ನುವ ಕುರಿತು ನ.೨೩ರಂದು ಅನಧಿಕೃತವಾಗಿ ಪ್ರಕಟಿಸುವುದಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ ಬಾರಿ ನಾನು ಬಂದಾಗ ಪಕ್ಷದ ಜಿಲ್ಲಾಧ್ಯಕ್ಷರು ಇರಲಿಲ್ಲ. ಆದ್ದರಿಂದ ಕೇವಲ ಪಕ್ಷೇತರರಿಗೆ ಬೆಂಬಲ ನೀಡುವುದಾಗಿ ಹೇಳಿದ್ದೆ. ಅದನ್ನು ಈಗ ಕಾರ್ಯಕರ್ತರೊಂದಿಗೆ ಚರ್ಚಿಸಿ, ನಿರ್ಧಾರ ಪ್ರಕಟಿಸುವುದಾಗಿ ಹೇಳಿದರು.
ನೋಟಿಸ್ ನೀಡಿದ ಮೇಲೆ ನಿರ್ಧಾರ: ಸಣ್ಣ ಫಕೀರಪ್ಪ
ನಾನು ಶ್ರೀರಾಮುಲು ಪರ ಪ್ರಚಾರ ಮಾಡುತ್ತಾ ಅವರಿಗೆ ಬೆಂಬಲ ನೀಡುತ್ತೇನೆ. ಬಿಜೆಪಿ ರಾಜ್ಯಾ ಧ್ಯಕ್ಷರು ನನಗೆ ನೋಟಿಸ್ ನೀಡಿದ ಮೇಲೆ ನಿರ್ಧಾರ ಪ್ರಕಟಿಸುತ್ತೇನೆ ಎಂದು ಸಂಸದ ಸಣ್ಣ ಫಕೀರಪ್ಪ ಸ್ಪಷ್ಟಪಡಿಸಿದ್ದಾರೆ. ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಶ್ರೀರಾಮುಲುಗೆ ಬೆಂಬಲ ನೀಡುವ ಚುನಾಯಿತ ಪ್ರತಿನಿಧಿಗಳು ರಾಜಿನಾಮೆ ಕೊಟ್ಟು ಹೋಗಲಿ ಎಂದು ಈಶ್ವರಪ್ಪ ಸೋಮವಾರ ನೀಡಿರುವ ಹೇಳಿಕೆ ಕುರಿತಾಗಿ ಪ್ರತಿಕ್ರಿಯಿಸಿ, ತಮ್ಮ ಮೇಲೆ ಏನು ಕ್ರಮ ಕೈಗೊಳ್ಳುತ್ತಾರೋ ಕೈಗೊಳ್ಳಲಿ. ನೋಟಿಸ್ ನೀಡಿದ ಮೇಲೆ ನಿರ್ಧಾರ ಪ್ರಕಟಿಸುತ್ತೇವೆ. ಆದರೆ, ತಾವು ಶ್ರೀರಾಮುಲು ಪರ ಪ್ರಚಾರ ಮಾಡುವುದಾಗಿ ಕಡ್ಡಿ ಮುರಿದಂತೆ ಹೇಳಿದ್ದಾರೆ.
-ಬಳ್ಳಾರಿ ಉಪ ಚುನಾವಣೆ: ಕೊಯ್ಲಿಗೆ ದೊರೆಯದ ಕೂಲಿಕಾರ...
ಬಳ್ಳಾರಿ: `ಇದು ಸುಗ್ಗಿ ಕಾಲ. ಭತ್ತ (ನೆಲ್ಲು) ಕೊಯ್ಲು ಆರಂಭವಾಗಿದೆ. ಹೊಲದಲ್ಲಿ ಹತ್ತಿ ಅರಳಿದೆ. ಮೆಣಸಿನಕಾಯಿ ಕೆಂಪಗಾಗಿದೆ. ಕೂಲಿಕಾರರನ್ನೆಲ್ಲ ಪ್ರಚಾರಕ್ಕೆ ಕರೆದುಕೊಂಡು ಹೋಗುತ್ತಿದ್ದಾರೆ. ನಾವು ನೂರು ರೂಪಾಯಿ ಕೊಟ್ಟರೂ ಕೂಲಿಕಾರರು ಸಿಗದಂತಾಗಿದೆ. ಇದೆಲ್ಲ ಎಲೆಕ್ಷನ್ ಪ್ರಭಾವ`. ಇದು ತಾಲ್ಲೂಕಿನ ಕೊಳಗಲ್ ಗ್ರಾಮದ ರೈತ ಹೊನ್ನೂರಪ್ಪನ ಆರೋಪ.
`ನೀರಾವರಿ ಆಶ್ರಿತ ಭೂಮಿಯಲ್ಲಿ ಫಸಲು ಬಂದಿದೆ. ಸುಗ್ಗಿಯ ಕಾಲವಾದ್ದರಿಂದ ಎಡೆಬಿಡದ ಕೆಲಸಗಳಿವೆ. ಆದರೂ ಹೊಲಗಳು ಬಿಕೋ ಎನ್ನುತ್ತಿವೆ. ಕೊಯ್ಲು ಮಾಡುವಲ್ಲಿ ತಡ ಮಾಡಿದರೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗುತ್ತದೆ. ಈ ಎಲೆಕ್ಷನ್ ಯಾಕಾದ್ರೂ ಬಂತೋ?` ಎಂದು ಆತ ಆಕ್ರೋಶ ವ್ಯಕ್ತಪಡಿಸುತ್ತಾನೆ.
`ನೋಡಣ್ಣ, ಊರಾಗಿನ ಹೆಣ್ಣಮಕ್ಕಳಿಗೆಲ್ಲಾ ನೂರಿನ್ನೂರು ರೂಪಾಯಿ ಕೊಟ್ಟು ಜೈಕಾರ ಹಾಕೋದಕ್ಕೆ ಕರ್ಕಂಡ್ ಹೋಗಿಬಿಡ್ತಾರ. ಮಧ್ಯಾಹ್ನ ಊಟಾನೂ ಕೊಡ್ತಾರಂತ. ಹಿಂಗ್ ರೊಕ್ಕಾ ಸಿಗೂದಾದ್ರ ಹೊಲದ ಕೆಲಸಕ್ಕ ಯಾರ್ ಬರ್ತಾರಣ್ಣಾ` ಎಂದು ಆತ ಪ್ರಶ್ನಿಸಿದ.
ಅಭ್ಯರ್ಥಿ ಹಾಗೂ ಮುಖಂಡರಿಗೆ ಜೈಕಾರ ಹಾಕುವುದಕ್ಕೆ, ಕರಪತ್ರ ಹಂಚುವುದಕ್ಕೆ, ತಮಗೇ ಹೆಚ್ಚು ಬೆಂಬಲ ಇದೆ ಎಂಬ ಭಾವನೆ ಮೂಡಿಸುವುದಕ್ಕೆ ಈ ರೀತಿ ಜನರನ್ನು ಕರೆದೊಯ್ಯುವುದು ಚುನಾವಣೆ ವೇಳೆ ಬಳ್ಳಾರಿಯಲ್ಲಿ ಹೊಸದೇನೂ ಅಲ್ಲ ಎಂದು ಅನೇಕರು ತಿಳಿಸಿದರು.
ಭತ್ತ ಕೊಯ್ಲು ಮಾಡಲು, ಮೆಣಸಿನಕಾಯಿ, ಹತ್ತಿ ಬಿಡಿಸಲು ಜನ ಸಿಗಬೇಕೆಂದರೆ ಇನ್ನೊಂದು ವಾರ ಕಾಯದೆ ವಿಧಿಯಿಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದೆ ಎಂದೂ ಅವರು ತಿಳಿಸಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರು ಬುಧವಾರ ಬಳ್ಳಾರಿಯಲ್ಲಿ ರೋಡ್ ಶೋ ನಡೆಸಿದ ವೇಳೆ ಮೆರವಣಿಗೆ ಮುಂದೆ ಹಾದು ಹೋಗಲು ನೂರಾರು ಜನ ಮಹಿಳೆಯರನ್ನು ಕರೆತರಲಾಗಿತ್ತು.
`ನಾವು ಬಂಡಿಹಟ್ಟಿಯವರು. ನೂರು ರೂಪಾಯಿ ಕೊಡ್ತೀವಿ ಅಂತ ಬೆಳಿಗ್ಗೆ ಏಳು ಗಂಟೆಗೇ ಕರ್ಕಂಡ್ ಬಂದಾರ. ಊಟ, ತಿಂಡೀನೂ ಕೊಡ್ತೀವಿ ಅಂತ ಹೇಳ್ಯಾರ. ಕುಡ್ಯಾಕ್ ನೀರೂ ಕೊಟ್ಟಿಲ್ಲ. ಮೂರು ದಿನ ಆತು ಹಳ್ಳಿಗುಳಿಗೂ ಹೋಗಿ ಬಂದೀವಿ. ಇವತ್ತ ಕೌಲ್‌ಬಝಾರ್‌ನಾಗ ಓಡಾಡಕತ್ತೀವಿ. ಎಲ್ಯರ ಒಂದ್ ಕಡೆ ತಣ್ಣಗ ಕುಂದರಬೇಕಂದ್ರೂ ಕುಂದಿರ್ಸಿ ಕೊಡುವಲ್ಲರು` ಎಂದು ವೃದ್ಧ ಮಹಿಳೆಯೊಬ್ಬರು ಆರೋಪಿಸಿದರು.
`ಸಣ್ಣಸಣ್ಣ ಮಕ್ಕಳದಾವು. ಆದರೂ ಏನ್ ಮಾಡೂದಣ್ಣಾ? ಒಂದ್ ವಾರ ಇವ್ರ್ ಹಿಂದ್‌ಮುಂದ್ ಓಡಾಡೀದ್ರ ಒಂದಷ್ಟ್ ರೊಕ್ಕಾ ಸಿಗ್ತಾದ ಅಂತ ಬಂದೀವಿ. ಮನೀಗೆ ಹೋಗಿ ಊಟಾ ಮಾಡ್ತೀವಿ. ಇವತ್ತ ದೊಡ್ಡವ್ರೆಲ್ಲಾ ಬಂದಾರ. ಊಟಾನೂ ಕೊಡಬೌದು` ಎಂದು ರುಕ್ಮಿಣ್ಣಮ್ಮ ಎಂಬ ಮಹಿಳೆ ತಿಳಿಸಿದರು.
0 comments:
Post a Comment