ಹೊಸದಿಲ್ಲಿ, ನ.21: ಕಾಲೇಜು ವಿದ್ಯಾರ್ಥಿನಿ ಇಶ್ರತ್ ಜಹಾನ್‌ಳನ್ನು 2004ರಲ್ಲಿ ನಕಲಿ ಎನ್‌ಕೌಂಟರ್‌ನಲ್ಲಿ ಕೊಲ್ಲಲಾಗಿದೆಯೆಂದು ವಿಶೇಷ ತನಿಖಾ ತಂಡವು ನಿರ್ಣಯಕ್ಕೆ ಬಂದಿದ್ದು, ಗುಜರಾತ್‌ನ ನರೇಂದ್ರ ಮೋದಿ ಸರಕಾರಕ್ಕೆ ತೀವ್ರ ಹಿನ್ನಡೆಯಾಗಿದೆ. ಈ ಹಿನ್ನೆಲೆಯಲ್ಲಿ, ಆರೋಪಿ ಪೊಲೀಸರ ವಿರುದ್ಧ ಹೊಸದಾಗಿ ಪ್ರಥಮ ಮಾಹಿತಿ ವರದಿ ದಾಖಲಿಸುವಂತೆ ಗುಜರಾತ್ ಹೈಕೋರ್ಟ್ ಆದೇಶ ನೀಡಿದೆ. ಎನ್‌ಕೌಂಟರ್ ನಡೆದಿದೆಯೆನ್ನಲಾದ 2004ರ ಜು. 15ರ ಮೊದಲೇ ಇಶ್ರತ್ ಹಾಗೂ ಇತರ ಮೂವರನ್ನು ಕೊಲ್ಲಲಾಗಿತ್ತೆಂದು ಸಿಟ್ ತನ್ನ ವರದಿಯಲ್ಲಿ ಹೇಳಿದೆ.
ನಕಲಿ ಎನ್‌ಕೌಂಟರ್‌ನಲ್ಲಿ ಭಾಗಿಯಾಗಿದ್ದ ಪೊಲೀಸ್ ಅಧಿಕಾರಿಗಳ ವಿರುದ್ಧ ಸಂಬಂಧಿತ ಪೊಲೀಸ್ ಠಾಣೆಯಲ್ಲಿ ಸೆ.302ರ (ಕೊಲೆಗೆ ಶಿಕ್ಷೆ) ಅನ್ವಯ ಬೇರೆಯೇ ಎಫ್‌ಐಆರ್ ದಾಖಲಿಸುವಂತೆ ನ್ಯಾಯಮೂರ್ತಿಗಳಾದ ಜಯಂತ ಪಟೇಲ್ ಹಾಗೂ ಅಭಿಲಾಷಾ ಕುಮಾರಿಯವರಿದ್ದ ವಿಭಾಗೀಯ ಪೀಠವೊಂದು ಆದೇಶಿಸಿದೆ.
ಸಿಟ್ ಎನ್‌ಕೌಂಟರ್ ಕುರಿತ ತನ್ನ ತನಿಖಾ ವರದಿಯನ್ನು ನ.18ರಂದು ಹೈಕೋರ್ಟ್‌ಗೆ ಸಲ್ಲಿಸಿದೆ. ಎರಡನೆ ಎಫ್‌ಐಆರ್ ದಾಖಲಿಸಿದ ಬಳಿಕ ಪ್ರಕರಣದ ತನಿಖೆಯನ್ನು ಸಿಬಿಐ ನಡೆಸಬೇಕೇ ಅಥವಾ ಎನ್‌ಐಎಗೆ ಒಪ್ಪಿಸಬೇಕೇ ಎಂಬ ಕುರಿತು ನ್ಯಾಯಾಲಯವೀಗ ಪರಿಶೀಲಿಸುತ್ತಿದ್ದು, ದೂರುದಾರರು ಹಾಗೂ ರಾಜ್ಯ ಸರಕಾರದ ಸಲಹೆಯನ್ನು ಕೇಳಿದೆ. ಎನ್‌ಕೌಂಟರ್‌ನಲ್ಲಿ ಪ್ರಮುಖ ಪಾತ್ರವನ್ನು ಯಾರು ವಹಿಸಿದ್ದರೆಂಬುದನ್ನು ತನಿಖಾ ಸಂಸ್ಥೆ ಪರಿಶೋಧಿಸಬೇಕಾಗಿದೆ. ಇದರ ಉದ್ದೇಶ ಹಾಗೂ ನಾಲ್ವರ ಸಾವಿನ ನಿಖರ ಸಮಯವನ್ನೂ ಅದು ಕಂಡು ಹಿಡಿಯಬೇಕಾಗಿದೆಯೆಂದು ನ್ಯಾಯಾಲಯ ಹೇಳಿದೆ.
ಪ್ರಕರಣದ ತನಿಖೆ ನಡೆಸಿದ ಸಿಟ್‌ನ ನೇತೃತ್ವವನ್ನು ಆರ್.ಆರ್. ವರ್ಮ ವಹಿಸಿದ್ದು, ಐಪಿಎಸ್ ಅಧಿಕಾರಿ ಮೋಹನ್ ಝಾ ಹಾಗೂ ಸತೀಶ್ ವರ್ಮಾ ಸದಸ್ಯರಾಗಿದ್ದರು.
18ರ ಹರೆಯದ ಇಶ್ರತ್, ಜಾವೇದ್ ಶೇಕ್ ಅಲಿಯಾಸ್ ಪ್ರಾಣೇಶ್ ಪಿಳ್ಳೆ, ಅಮ್ಜದ್ ಅಲಿ ರಾಣಾ ಹಾಗೂ ಝೀಶನ್ ಜೋಹರ್ ಎಂಬವರನ್ನು ಅಹ್ಮದಾಬಾದ್ ಕ್ರೈಂ ಬ್ರಾಂಚ್‌ನ ಪೊಲೀಸರು 2004ರ ಜು.15ರಂದು ಎನ್‌ಕೌಂಟರೊಂದರಲ್ಲಿ ಕೊಂದಿದ್ದರು.
ಹತ ನಾಲ್ವರೂ ಲಷ್ಕರೆ ತಯ್ಯಿಬಾ ಸದಸ್ಯರಾಗಿದ್ದು, ಮುಖ್ಯಮಂತ್ರಿ ನರೇಂದ್ರ ಮೋದಿಯವರ ಹತ್ಯೆಗಾಗಿ ಬಂದಿದ್ದರೆಂದು ಕ್ರೈಂ ಬ್ರಾಂಚ್ ಪ್ರತಿಪಾದಿಸಿತ್ತು.
2009ರ ಸೆ.7ರಂದು ನಗರ ದಂಡಾಧಿಕಾರಿ ಎಸ್.ಪಿ. ತಮಾಂಗ್ ನೀಡಿದ್ದ ನ್ಯಾಯಾಂಗ ವಿಚಾರಣಾ ವರದಿಯೂ ಎನ್‌ಕೌಂಟರ್ ನಕಲಿಯಾಗಿದ್ದು, ಪೊಲೀಸ್ ಅಧಿಕಾರಿಗಳು ತಮ್ಮ ಲಾಭಕ್ಕಾಗಿ ಅದನ್ನು ನಡೆಸಿದ್ದರೆಂದು ಹೇಳಿತ್ತು.
ಇಶ್ರತ್‌ಳ ತಾಯಿ ಶಮೀಮಾ ಕೌಸರ್ ಹಾಗೂ ಜಾವೇದ್‌ನ ತಂದೆ ಗೋಪಿನಾಥ್ ಪಿಳ್ಳೆ ಎಂಬವರ ಅರ್ಜಿಯ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಗಾಗಿ ಕಳೆದ ವರ್ಷ ಸಿಟ್ ಒಂದನ್ನು ನೇಮಿಸಿದ್ದ ಗುಜರಾತ್ ಹೈಕೋರ್ಟ್ ತಾನೇ ನೇರವಾಗಿ ತನಿಖೆಯ ಉಸ್ತುವಾರಿ ವಹಿಸಿತ್ತು. ಕ್ರೈಂ ಬ್ರಾಂಚ್ ಜೆಪಿಸಿ ಪಿ.ಪಿ. ಪಾಂಡೆ, ಅಮಾನತಾಗಿರುವ ಡಿಐಜಿ ಡಿ.ಜಿ. ವಂಝಾರ, ಆಗಿನ ಎಸಿಪಿ ಜಿ.ಎಲ್. ಸಿಂಘಾಲ್ ಹಾಗೂ ಎಸಿಪಿ ಎನ್.ಕೆ. ಅಮೀನ್ ಸಹಿತ 21 ಪೊಲೀಸ್ ಅಧಿಕಾರಿಗಳು ಪ್ರಕರಣದ ಆರೋಪಿಗಳಾಗಿದ್ದಾರೆ.
ಸೊಹ್ರಾಬುದ್ದೀನ್ ಶೇಕ್ ಹಾಗೂ ಆತನ ಪತ್ನಿ ಕೌಸರ್‌ಬಿಯ ಹತ್ಯಾ ಪ್ರಕರಣದ ಆರೋಪಿಗಳೂ ಆಗಿರುವ ವಂಝಾರ ಹಾಗೂ ಅಮೀನ್ ಪ್ರಕೃತ ಬಂದಿಖಾನೆಯಲ್ಲಿದ್ದಾರೆ.
ಜು.15-2004: ಇಶ್ರತ್ ಜಹಾನ್ ಹಾಗೂ ಇತರ ಮೂವರನ್ನು ಮುಖ್ಯಮಂತ್ರಿ ನರೇಂದ್ರ ಮೋದಿಯವರ ಹತ್ಯೆ ನಡೆಸಲು ಬಂದ ಪಾಕಿಸ್ತಾನ ಮೂಲದ ಲಷ್ಕರೆ ತಯ್ಯಿಬಾ ಉಗ್ರರೆಂದು ಕರೆದು ಅಹ್ಮದಾಬಾದ್‌ನ ಹೊರವಲಯದಲ್ಲಿ ನಕಲಿ ಎನ್‌ಕೌಂಟರ್ ನಡೆಸಿ ಹತ್ಯೆ ಮಾಡಿದುದು.
ಸೆ.2009: ಎನ್‌ಕೌಂಟರ್ ನಕಲಿಯೆಂದು ಅಹ್ಮದಾಬಾದ್ ನಗರ ದಂಡಾಧಿಕಾರಿಯಿಂದ ನ್ಯಾಯಾಂಗ ತನಿಖಾ ವರದಿ.
ಆ.2010: ಸಿಬಿಐಯ ಮಾಜಿ ನಿರ್ದೇಶಕ ಆರ್.ಕೆ. ರಾಘವನ್ ನೇತೃತ್ವದಲ್ಲಿ ಗುಜರಾತ್ ಹಿಂಸಾಚಾರ ಪ್ರಕರಣದ ತನಿಖೆಗಾಗಿ ಸುಪ್ರೀಂ ಕೋರ್ಟ್ ನೇಮಿಸಿದ್ದ ಸಿಟ್‌ಗೆ ಇಶ್ರತ್ ಪ್ರಕರಣದ ತನಿಖೆ ನಡೆಸುವಂತೆ ಗುಜರಾತ್ ಹೈಕೋರ್ಟ್‌ನ ಮನವಿ.
ಸೆ.2010: ರಾಘವನ್ ನೇತೃತ್ವದ ಸಿಟ್ ತನಿಖೆ ನಡೆಸಲು ಅಸಾಧ್ಯವೆಂದು ತಿಳಿಸಿದ ಬಳಿಕ, ಗುಜರಾತ್ ಹೈಕೋರ್ಟ್‌ನಿಂದ ಹೊಸ ಸಿಟ್ ರಚನೆ.
ನ.2010: ಹೊಸ ಸಿಟ್ ರಚನೆಯನ್ನು ಪ್ರಶ್ನಿಸಿದ ಗುಜರಾತ್ ಸರಕಾರದ ಅರ್ಜಿ ಸುಪ್ರೀಂ ಕೋರ್ಟ್‌ನಲ್ಲಿ ತಿರಸ್ಕೃತ.
ಡಿ.2010: ತ್ರಿ ಸದಸ್ಯ ಸಿಟ್‌ನಿಂದ ತನಿಖೆ ಆರಂಭ. ಸಾಕ್ಷಿಗಳು ಹಾಗೂ ಆರೋಪಿ ಪೊಲೀಸರ ಹೇಳಿಕೆ ದಾಖಲಾತಿ ಆರಂಭ.
ಜ.28-2011: ಎನ್‌ಕೌಂಟರ್ ನಕಲಿಯೆಂದು ಸಿಟ್ ಸದಸ್ಯ ಸತೀಶ್ ವರ್ಮಾರಿಂದ ಅಫಿದಾವಿತ್. ಇತರಿಬ್ಬರು ಸದಸ್ಯರು ಪಕ್ಷಪಾತ ರಹಿತ ತನಿಖೆಗೆ ಅವಕಾಶ ನೀಡುತ್ತಿಲ್ಲವೆಂದು ಆರೋಪ.
ಎ.8-2011: ರಾಜ್ಯವು ಯಾವುದೇ ಅಡಚಣೆಯಿಲ್ಲದೆ ಸಿಟ್ ತನಿಖೆಗೆ ಅವಕಾಶ ನೀಡದಿದ್ದಲ್ಲಿ ಪ್ರಕರಣವನ್ನು ಸಿಬಿಐ ಅಥವಾ ಎನ್‌ಎಐಗೆ ಒಪ್ಪಿಸುವುದಾಗಿ ಹೈಕೋರ್ಟ್ ವಿಭಾಗೀಯ ಪೀಠದ ಎಚ್ಚರಿಕೆ.
ನ.18-2011: ಸಿಟ್‌ನಿಂದ ಹೈಕೋರ್ಟ್‌ಗೆ ವರದಿ ಸಲ್ಲಿಕೆ.
ನ.21-2011: ಆರೋಪಿ ಪೊಲೀಸರ ವಿರುದ್ಧ ಹೊಸದಾಗಿ ಎಫ್‌ಐಆರ್ ದಾಖಲಿಸುವಂತೆ ಹೈಕೋರ್ಟ್ ಆದೇಶ
0 comments:
Post a Comment