PLEASE LOGIN TO KANNADANET.COM FOR REGULAR NEWS-UPDATES


ಬೆಂಗಳೂರು, ನ.20: ಖ್ಯಾತ ಇಸ್ಲಾಮಿ ವಿದ್ವಾಂಸ, ಬೆಂಗಳೂರಿನ ಐತಿಹಾಸಿಕ ಸಿಟಿ ಜಾಮೀಯಾ ಮಸೀದಿಯ ಇಮಾಮ್ ಹಾಗೂ ಖತೀಬ್ ರಿಯಾಝುರ್ರಹ್ಮಾನ್ ರಶಾದಿ ರವಿವಾರ ಬೆಳಗ್ಗೆ ಸೌದಿ ಅರೇಬಿಯಾದ ಮಕ್ಕಾದಲ್ಲಿ ನಿಧನ ಹೊಂದಿದರು. ಅವರಿಗೆ 60 ವರ್ಷ ವಯಸ್ಸಾಗಿತ್ತು.
ಕಳೆದ ಅಕ್ಟೋಬರ್ ತಿಂಗಳ 30 ರಂದು ವೌಲಾನ ರಶಾದಿಯವರು ಹಜ್ಜ್ ಯಾತ್ರೆಗೆ ತೆರಳಿದ್ದರು. ಕೆಲ ದಿನಗಳಿಂದ ಅವರ ಆರೋಗ್ಯದಲ್ಲಿ ಅಲ್ಪ ಪ್ರಮಾಣದ ವೈಪರೀತ್ಯ ಕಂಡು ಬಂದಿದ್ದ ಪರಿಣಾಮ ರವಿವಾರ ಬೆಳಗ್ಗೆ ನಿಧನ ಹೊಂದಿದರು. ಸಂಜೆ 7:30 ಗಂಟೆಗೆ ಮಕ್ಕಾದಲ್ಲಿ ಮೃತರ ಅಂತ್ಯಕ್ರಿಯೆ ನೆರವೇರಲಿದೆ ಎಂದು ಸಿಟಿ ಜಾಮೀಯಾ ಮಸೀದಿಯ ಮೂಲಗಳು ತಿಳಿಸಿವೆ.
ಚಿಕ್ಕಮಗಳೂರಿನಲ್ಲಿ 1952ರಲ್ಲಿ ಜನಿಸಿದ ವೌಲಾನ ರಿಯಾಝುರ್ರಹ್ಮಾನ್ ರಶಾದಿ, 1969ರಲ್ಲಿ ಸಬೀಲುರ್ರಶಾದ್‌ನಿಂದ ಪಾಂಡಿತ್ಯ ಪದವಿ ಪಡೆದರು. 1971 ರಿಂದ 79ರವರೆಗೆ ಅದೇ ಸಂಸ್ಥೆಯಲ್ಲಿ ಬೋಧಕರಾಗಿ ಸೇವೆ ಸಲ್ಲಿಸಿದರು. 1980ರಲ್ಲಿ ಐತಿಹಾಸಿಕ ಸಿಟಿ ಜಾಮೀಯಾ ಮಸೀದಿಯ ಇಮಾಮ್ ಹಾಗೂ ಖತೀಬ್ ಆಗಿ ನೇಮಕ ಗೊಂಡರು. 1986ರಲ್ಲಿ ಜಾಮೆಅಲ್ ಊಲೂಮ್ ಎಂಬ ಹೆಸರಲ್ಲಿ ಸಣ್ಣ ಮದ್ರಸವನ್ನು ಸ್ಥಾಪಿಸಿದರು. ಈಗ ಅದು ಜಾಮೆಅಲ್ ಊಲೂಮ್ ಸಮೂಹ ಶಿಕ್ಷಣ ಸಂಸ್ಥೆಯಾಗಿ ಹೆಮ್ಮರವಾಗಿ ಬೆಳೆದಿದೆ.
ಸಿಟಿ ಜಾಮೀಯಾ ಮಸೀದಿಯನ್ನು ಶಿಕ್ಷಣದ ಕೇಂದ್ರವನ್ನಾಗಿ ಮಾಡಿದ ಕೀರ್ತಿಗೆ ರಿಯಾಝುರ್ರಹ್ಮಾನ್ ರಶಾದಿ ಪಾತ್ರರಾಗಿದ್ದರು. ಜಾಮೆಅಲ್ ಊಲೂಮ್ ರೆಸಿಡೆನ್ಸಿಯಲ್ ಸ್ಕೂಲ್, ಜಾಮೆಅಲ್ ಊಲೂಮ್ ಪದವಿ ಪೂರ್ವ ಕಾಲೇಜ್, ಬಿಸಿಎ, ಟಿಸಿಎಚ್ ಕಾಲೇಜ್ ಇತ್ಯಾದಿ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿದ್ದ ವೌಲಾನರು ಸುದೀರ್ಘ 30 ವರ್ಷಗಳ ಕಾಲ ಅದರ ಸಂಸ್ಥಾಪಕ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು. ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದ ರಿಯಾಝುರ್ರಹ್ಮಾನ್ ರಶಾದಿ, ಅವರಿಗಾಗಿ ಧಾರ್ಮಿಕ ಮತ್ತು ಆಧುನಿಕ ಶಿಕ್ಷಣದ ವ್ಯವಸ್ಥೆ ಸಹ ಮಾಡಿದ್ದರು.
ವೌಲಾನ ರಿಯಾಝುರ್ರಹ್ಮಾನ್ ರಶಾದಿಯವರ ‘ಜುಮಾ ಖುತ್ಬಾ’ (ಪ್ರವಚನ)ಗಳು ಅತ್ಯಂತ ಜನಪ್ರಿಯತೆಯನ್ನು ಪಡೆದಿದ್ದವು. ಇಸ್ಲಾಮಿನ ಶೈಕ್ಷಣಿಕ, ಸಾಮಾಜಿಕ, ರಾಜಕೀಯ ಕ್ಷೇತ್ರಗಳಲ್ಲಿ ಇವರ ಕೊಡುಗೆ ಅಪಾರ. ಮಿತಭಾಷಿಕರಾಗಿದ್ದ ವೌಲಾನ ರಶಾದಿ, ಸೌಹಾರ್ದತೆ ಮತ್ತು ಸಾಮರಸ್ಯಕ್ಕೆ ಆದ್ಯತೆ ನೀಡುತ್ತಿದ್ದರು. ಸಮಾಜದ ವಿವಿಧ ಸ್ತರಗಳ ಗಣ್ಯರೊಂದಿಗೆ ಹಾಗೂ ಸಮುದಾಯದ ವಿವಿಧ ಸಂಘಟನೆಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ಆಲ್ ಇಂಡಿಯಾ ಮಿಲ್ಲಿ ಕೌನ್ಸಿಲ್‌ನ ರಾಜ್ಯಾಧ್ಯಕ್ಷರಾಗಿದ್ದ ಇವರಿಗೆ ಅನೇಕ ಪ್ರಶಸ್ತಿಗಳು ಲಭಿಸಿವೆ.
ಮೃತರು ಮೂವರು ಹೆಣ್ಣು ಮಕ್ಕಳು, ಒಂದು ಗಂಡು ಮಗು ಸೇರಿದಂತೆ ಅಪಾರ ಶಿಷ್ಯವೃಂದ ಮತ್ತು ಅಭಿಮಾನಿ ಬಳಗವನ್ನು ಆಗಲಿದ್ದಾರೆ. ವೌಲಾನ ರಶಾದಿಯವರ ನಿಧನಕ್ಕೆ ಸಮುದಾಯದ ಧಾರ್ಮಿಕ ಹಾಗೂ ರಾಜಕೀಯ ಮುಖಂಡರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

Advertisement

0 comments:

Post a Comment

 
Top