PLEASE LOGIN TO KANNADANET.COM FOR REGULAR NEWS-UPDATES


ಮೈಸೂರು, ನ. 14: ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಡಿಸೆಂಬರ್ 9ರಿಂದ ಮೂರು ದಿನಗಳ ಕಾಲ ನಡೆಯುವ 78ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ತನ್ನ ಭಾಷಣ ಸಂಕ್ಷಿಪ್ತವಾಗಿರುತ್ತದೆ ಎಂದು ಸಮ್ಮೇಳನದ ನಿಯೋಜಿತ ಅಧ್ಯಕ್ಷ ಹಾಗೂ ಹಿರಿಯ ಸಾಹಿತಿ ಪ್ರೊ. ಸಿ.ಪಿ. ಕೃಷ್ಣಕುಮಾರ್ ಪ್ರಕಟಿಸಿದ್ದಾರೆ. ಜಿಲ್ಲಾ ಪತ್ರಕರ್ತರ ಸಂಘದ ವತಿ ಯಿಂದ ಸೋಮವಾರ ಇಲ್ಲಿ ಏರ್ಪಡಿಸಲಾಗಿದ್ದ ಅಭಿನಂದನೆ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.
ಭಾಷಣಗಳಿಂದ ಯಾವ ಪ್ರಯೋಜನವೂ ಇಲ್ಲ. ಒಂದು ವೇಳೆ ಇರುತ್ತಿದ್ದರೆ, ಕನ್ನಡ ಮತ್ತು ಕರ್ನಾಟಕ ಈ ಹೊತ್ತಿಗೆ ಸ್ವರ್ಗ ಆಗಿರುತ್ತಿತ್ತು ಎಂದು ಅಭಿಪ್ರಾಯಪಟ್ಟ ಸಿಪಿಕೆ, ಆದುದರಿಂದ ಸಮ್ಮೇಳನದ ಅಧ್ಯಕ್ಷನಾಗಿ ತಾನು ಸುದೀರ್ಘ ಭಾಷಣ ಮಾಡುವುದಿಲ್ಲ ಎಂದರು. ಅಲ್ಲದೆ, ಅಧ್ಯಕ್ಷರ ಭಾಷಣ ದಲ್ಲಿನ ಅನೇಕ ಅಂಶಗಳು ಸಾಮಾನ್ಯವಾಗಿ ಸಮ್ಮೇಳನದ ನಿರ್ಣಯಗಳೂ ಆಗಿರುತ್ತವೆ. ಈ ಕಾರಣದಿಂದ ಕೂಡ ಸುದೀರ್ಘ ಭಾಷಣದ ಅಗತ್ಯವಿಲ್ಲವೆಂದು ತಾನು ಭಾವಿಸಿರುವುದಾಗಿ ಅವರು ಹೇಳಿದರು.
ಸಾಹಿತ್ಯಕ ರಾಜಕಾರಣ ಅಪಾಯಕಾರಿ:  ವ್ಯಾವಹಾರಿಕ ರಾಜಕಾರಣಕ್ಕಿಂತ ಸಾಹಿತ್ಯಕ ರಾಜಕಾರಣ ಹೆಚ್ಚು ಅಪಾಯಕಾರಿ. ಇದು ಸಾಹಿತ್ಯ ಕ್ಷೇತ್ರದಲ್ಲಿ ಗುಂಪುಗಾರಿಕೆಯನ್ನು ಹುಟ್ಟುಹಾಕುತ್ತದೆ. ಪರಿಣಾಮ, ಪರಸ್ಪರ ಗುಂಪುಗಳು ಅಪ ಪ್ರಚಾರದಲ್ಲಿ ತೊಡಗುತ್ತವೆ. ಇದರಿಂದ ಕೆಲವು ಸಾಹಿತಿಗಳು ಅನ್ಯಾಯಕ್ಕೆ ಒಳಗಾಗುತ್ತಾರೆ ಎಂದು ಸಿಪಿಕೆ ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ನುಡಿದರು.
ಸಾಹಿತ್ಯ ವಲಯದಲ್ಲಿರುವ ಗುಂಪುಗಾರಿಕೆಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯವಲ್ಲದೆ, ಜಾತಿಯ ಅಂಶವೂ ಕಾರಣವಾಗಿದ್ದು, ಇದರಿಂದ ಸಾಹಿತ್ಯದ ಬೆಳವಣಿಗೆಗೆ ತೊಡಕಾಗುತ್ತದೆ ಎಂದ ಅವರು, ಸಾಹಿತ್ಯ ಸಮ್ಮೇಳನಗಳಲ್ಲಿ ಸಾಮಾಜಿಕ ನ್ಯಾಯ ದೊರಕಬೇಕು ಎಂದು ಪ್ರತಿಪಾದಿಸಿದರು. ಸಾಹಿತ್ಯಕ್ಕಿಂತ ಬದುಕು ದೊಡ್ಡದು:  ಸಾಹಿತ್ಯವನ್ನು ಜನಪ್ರಿಯ ಮತ್ತು ಜನಪ್ರಿಯವಲ್ಲದ ಎಂಬುದಾಗಿ ವಿಂಗಡಿಸುವುದು ಸರಿಯಲ್ಲ. ಎಲ್ಲ ಪ್ರಕಾರದ ಬರವಣಿಗೆಯೂ ಸಾಹಿತ್ಯವೇ ಆಗಿರುತ್ತದೆ. ಎಸ್.ಎಲ್.ಭೈರಪ್ಪ ಜನಪ್ರಿಯ ಸಾಹಿತಿ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಅದೇ ಕಾರಣಕ್ಕೆ ಅವರನ್ನು ಗಂಭೀರ ಸಾಹಿತ್ಯ ವಲಯದಿಂದ ದೂರವಿಡುವ ಪ್ರಯತ್ನ ಸರಿಯಲ್ಲ ಎಂದರು.
ಎಡ ಹಾಗೂ ಬಲ ಪಂಥೀಯ ಸಾಹಿತಿಗಳೆಲ್ಲರೂ ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಅಲ್ಲದೆ, ಭಾಷೆ ಮತ್ತು ಸಾಹಿತ್ಯಕ್ಕಿಂತ ಬದುಕು ದೊಡ್ಡದು ಎಂಬುದನ್ನು ಪ್ರತಿಯೊಬ್ಬರೂ ಮನಗಾಣಬೇಕಿದೆ ಎಂದು ಸಿಪಿಕೆ ಅಭಿಪ್ರಾಯಪಟ್ಟರು.
ಪರಂಪರೆ ಪ್ರಜ್ಞೆಯ ಕೊರತೆ: ಹೊಸ ತಲೆಮಾರಿನ ಸಾಹಿತಿಗಳಲ್ಲಿ ನಮ್ಮ ಪರಂಪರೆ ಪ್ರಜ್ಞೆಯ ಕೊರತೆಯಿರುವುದು ಗೋಚರಿಸುತ್ತದೆ. ಈ ದೌರ್ಬಲ್ಯವನ್ನು ನಿವಾರಿಸಿಕೊಂಡರೆ ಅವರ ಸಾಹಿತ್ಯ ಮತ್ತಷ್ಟು ಗಟ್ಟಿಯಾಗಬಲ್ಲದು ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಸಂತೋಷಕರ ಸಂಗತಿ: 
ಇತ್ತೀಚಿನ ದಿನಗಳಲ್ಲಿ ದಲಿತ ಸಾಹಿತ್ಯ ಬಲಿತ ಸಾಹಿತ್ಯವಾಗುತ್ತಿದೆ. ಮಹಿಳಾ ಸಾಹಿತ್ಯ ಅಡುಗೆ ಮನೆಯ ಹೊಸ್ತಿಲು ದಾಟಿ ನಡುಮನೆಗೆ ಬಂದಿದೆ ಎಂದು ವ್ಯಾಖ್ಯಾನಿಸಿದ ಅವರು, ಇದು ಸಂತೋಷಕರ ಸಂಗತಿ ಎಂದರು. ಆಂಗ್ಲ ಶಾಲೆಗಳನ್ನು ಮುಚ್ಚಿ: ಪ್ರಾಥಮಿಕ ಶಾಲೆಗಳಲ್ಲಿ ಕನ್ನಡ ಕಡ್ಡಾಯ ಶಿಕ್ಷಣ ಮಾಧ್ಯಮವಾಗಬೇಕು ಎಂಬುದನ್ನು ಪುನರುಚ್ಚರಿಸಿದ ಅವರು, ಇದರ ಯಶಸ್ವಿ ಜಾರಿಗಾಗಿ ಸರಕಾರ ಮತ್ತು ಜನತೆ ಪರಸ್ಪರ ಕೈಜೋಡಿಸಬೇಕು. ಕನ್ನಡ ಶಾಲೆಗಳ ಬದಲಿಗೆ ಆಂಗ್ಲ ಮಾಧ್ಯಮ ಶಾಲೆಗಳನ್ನು ಮುಚ್ಚುವ ನಿರ್ಧಾರವನ್ನು ಸರಕಾರ ಕೈಗೊಳ್ಳಬೇಕು. ಇಲ್ಲದಿದ್ದರೆ ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳ ಮೂಲಕ ಬಲಪಂಥೀಯ ಸಿದ್ಧಾಂತಕ್ಕೆ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದು ಎಚ್ಚರಿಸಿದರು.
ಪ್ರತ್ಯೇಕ ವಿವಿ ಅಗತ್ಯವಿಲ್ಲ:  ಕನ್ನಡ ಸೇರಿದಂತೆ ಭಾಷೆ ಅಥವಾ ವಿಷಯಕ್ಕೊಂದು ವಿಶ್ವವಿದ್ಯಾನಿಲಯ ಸ್ಥಾಪಿಸುವ ಅಗತ್ಯವಿಲ್ಲ. ಆದರೆ ಜಾನಪದ ವಿಶ್ವವಿದ್ಯಾನಿಲಯ ಸ್ಥಾಪನೆ ಅತ್ಯಂತ ಸ್ವಾಗತಾರ್ಹ ಸಂಗತಿಯಾಗಿದೆ. ಜಾನಪದ ಎಂದಿಗೂ ಅಳಿಯುವುದಿಲ್ಲ, ಕಾಲದಿಂದ ಕಾಲಕ್ಕೆ ಅದು ರೂಪಾಂತರ ಹೊಂದುತ್ತದೆ ಎಂದು ಸಿಪಿಕೆ ನುಡಿದರು.
ಕಾರ್ಯಶೈಲಿ ಬದಲಾಗಬೇಕು:  ಕರ್ನಾಟಕದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಸ್ತಿತ್ವದಲ್ಲಿರುವುದು ದುರ್ದೈವ. ಹೊರ ರಾಜ್ಯ ಅಥವಾ ಹೊರ ದೇಶಗಳಲ್ಲಿ ಪ್ರಾಧಿಕಾರ ಕಾರ್ಯನಿರ್ವಹಿಸುವಂತಿದ್ದರೆ ಅದು ಹೆಮ್ಮೆಯ ಸಂಗತಿಯಾಗಿರುತ್ತಿತ್ತು. ಆದ್ದರಿಂದ ಕನ್ನಡ ಅಭಿವೃದ್ಧಿ ಪ್ರಾಧಿಕಾರ ತನ್ನ ಕಾರ್ಯಶೈಲಿಯನ್ನು ಬದಲಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು. ಚಳವಳಿ ಮತ್ತು ಚಳವಳಿಗಾರರಿಂದ ಕನ್ನಡ ಉಳಿವಿಗೆ ನೆರವಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಐಕ್ಯತೆಯ ಕೊರತೆ ಉಂಟಾಗಿದ್ದು, ಈ ನಿಟ್ಟಿನಲ್ಲಿ ಚಳವಳಿಗಾರರು ಗಂಭೀರವಾಗಿ ಆಲೋಚಿಸಬೇಕು ಎಂದು ಅವರು ಮನವಿ ಮಾಡಿದರು. ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ, ಉಪಾಧ್ಯಕ್ಷರಾದ ಪ್ರಗತಿ ಗೋಪಾಲಕೃಷ್ಣ, ಭೇರ್ಯ ಮಹೇಶ್, ಪ್ರಧಾನ ಕಾರ್ಯದರ್ಶಿ ಕೆ.ದೀಪಕ್, ಕಾರ್ಯದರ್ಶಿ ಎಂ.ಸುಬ್ರಹ್ಮಣ್ಯ ಉಪಸ್ಥಿತರಿದ್ದರು.

Advertisement

1 comments:

  1. ಮಾನ್ಯರೆ,
    ದಯವಿಟ್ಟು
    ಸಮ್ಮೇಳನದ ಅಧ್ಯಕ್ಷ ಭಾಷಣ ಪ್ರಕಟಿಸಿ.

    ಪಂಡಿತಾರಾಧ್ಯ ಮೈಸೂರು

    ReplyDelete

 
Top