PLEASE LOGIN TO KANNADANET.COM FOR REGULAR NEWS-UPDATES


ಹೊಸದಿಲ್ಲಿ, ನ.15: ಆಶ್ಚರ್ಯಕರ ಬೆಳವಣಿಗೆಯೊಂದರಲ್ಲಿ ಸರಕಾರವಿಂದು ಪೆಟ್ರೋಲ್‌ನ ಬೆಲೆಯನ್ನು ಲೀಟರ್‌ಗೆ ರೂ. 2.22ರಷ್ಟು ಕಡಿತಗೊಳಿಸಿದೆ. ಕಳೆದ 33 ತಿಂಗಳಲ್ಲಿ ಇದೇ ಮೊದಲ ಬಾರಿಗೆ ಪೆಟ್ರೋಲ್‌ನ ಬೆಲೆಯು ಕಡಿಮೆಯಾಗಿದೆ. ಬೆಲೆ ಇಳಿಕೆ ಇಂದು ಮಧ್ಯ ರಾತ್ರಿಯಿಂದ ಜಾರಿಗೆ ಬರಲಿದೆ. ಇದರಿಂದಾಗಿ ದಿಲ್ಲಿಯಲ್ಲಿ ರೂ. 68.64 ಇದ್ದ ಬೆಲೆ ರೂ. 66.42ಕ್ಕೆ ಇಳಿಯಲಿದೆ. ಕೆಲವೇ ದಿನಗಳ ಹಿಂದೆ ಸರಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು ಪೆಟ್ರೋಲ್ ಬೆಲೆಯನ್ನು ಲೀ. ಗೆ ರೂ. 1.80ರಷ್ಟು ಹೆಚ್ಚಿಸಿದ್ದವು. ಇಂದಿನ ಬೆಲೆ ಇಳಿಕೆ ಘೋಷಣೆಯೊಂದಿಗೆ ಅದರ ಬೆಲೆ ಕಳೆದ ಬೆಲೆ ಏರಿಕೆ ಪೂರ್ವದ ದರಕ್ಕಿಂತಲೂ 42 ಪೈಸೆ ಕಡಿಮೆಯಾದಂತಾಗಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಬ್ಯಾರಲ್‌ಗೆ 5 ಡಾಲರ್‌ಗಳಷ್ಟು ಕಡಿಮೆ ಯಾಗಿರುವುದರಿಂದ ಹಾಗೂ ರೂಪಾಯಿಯ ಬೆಲೆ ಚೇತರಿಕೆ ಕಂಡಿರುವುದರಿಂದ ತೈಲ ಸಂಸ್ಥೆಗಳು ಇದರ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಲು ನಿರ್ಧರಿಸಿವೆ. ಇದರಿಂದ ಲೀ. ಗೆ ರೂ. 1.85 ರಷ್ಟು ಲಾಭ ಹಾಗೂ ಕಡಿಮೆಯಾಗುವ ಸ್ಥಳೀಯ ಸುಂಕ ಸೇರಿ ಪೆಟ್ರೋಲನ್ನು ಲೀ. ಗೆ ರೂ. 2.22ರಷ್ಟು ಅಗ್ಗಗೊಳಿಸಲು ಅವು ಯೋಚಿಸಿರುವುದರಿಂದ ಬೆಲೆಯೇರಿಕೆಯ ಬಿಸಿ ಅನುಭವಿಸಿದ್ದ ಗ್ರಾಹಕರಿಗೆ ಸ್ವಲ್ಪ ತಂಗಾಳಿ ಬೀಸಿದಂತಾಗಿದೆ.
ಪೆಟ್ರೋಲಿಗೆ ಮುಂಬೈಯಲ್ಲಿ ರೂ. 2.34, ಕೋಲ್ಕತಾದಲ್ಲಿ ರೂ. 2.31 ಹಾಗೂ ಚೆನ್ನೈಯಲ್ಲಿ ರೂ. 2.35ರಷ್ಟು ಕಡಿಮೆಯಾಗಲಿದೆ. ನಿನ್ನೆಯಷ್ಟೇ ಪೆಟ್ರೋಲ್ ಬೆಲೆಯನ್ನು ಲೀ.ಗೆ ರೂ. 1.32ರಷ್ಟು ಏರಿಸುವುದು ಅನಿವಾರ್ಯ ವೆಂಬ ಸೂಚನೆ ಸರಕಾರದಿಂದ ದೊರೆತಿತ್ತು. ಆದರೆ, ಬೆಲೆ ಇಳಿಸುವ ಈ ನಿರ್ಧಾರ ಎಲ್ಲರ ಹುಬ್ಬೇರುವಂತೆ ಮಾಡಿದ್ದು, ಇದು ಎಷ್ಟು ದಿನ? ಎಂಬ ಪ್ರಶ್ನೆಯೂ ಮೂಡಿದೆ. 2009ರ ಜನವರಿಯಲ್ಲಿ ಪೆಟ್ರೋಲ್‌ನ ಬೆಲೆಯನ್ನು ರೂ. 5ರಷ್ಟು ಇಳಿಸಲಾಗಿತ್ತು. ಆ ಬಳಿಕ ತೈಲ ಬೆಲೆ ಇಳಿಸಿರುವುದು ಇದೇ ಮೊದಲು.
ಪೆಟ್ರೋಲ್ ನಿಯಂತ್ರಣ ಮುಕ್ತ ಸರಕಾಗಿರುವುದರಿಂದ ಅಂತಾರಾಷ್ಟ್ರೀಯ ಮಾರುಕಟ್ಟೆ ಬೆಲೆಯನುಸಾರ ಕಡಿತವನ್ನು ಗ್ರಾಹಕರಿಗೆ ವರ್ಗಾಯಿಸಲಾಗುತ್ತದೆಂದು ಭಾರತೀಯ ತೈಲ ನಿಗಮದ ಅಧ್ಯಕ್ಷ ಆರ್.ಎಸ್. ಬುಟೋಲಾ ತಿಳಿಸಿದರು.
ಗ್ಯಾಸೋಲಿನ್ ಅಥವಾ ಪೆಟ್ರೋಲ್‌ನ ಬೆಲೆ ಅಕ್ಟೋಬರ್‌ನ ಉತ್ತರಾರ್ಧದಲ್ಲಿ ಬ್ಯಾರಲ್‌ಗೆ 121.67 ಡಾಲರ್ ಇದ್ದುದು ನವೆಂಬರ್‌ನ ಪ್ರಥಮಾರ್ಧದಲ್ಲಿ 115.85 ಡಾಲರ್‌ಗೆ ಇಳಿದಿದೆ. ರೂಪಾಯಿಯ ಬೆಲೆಯೂ ಅಕ್ಟೋಬರ್‌ನಲ್ಲಿ ಡಾಲರ್‌ಗೆ ರೂ. 49.40 ಇದ್ದುದು ಈ ತಿಂಗಳು ರೂ. 49.20ಕ್ಕೇರಿದೆ.
ತೈಲ ಸಂಸ್ಥೆಗಳು ಪೆಟ್ರೋಲ್ ಬೆಲೆಯನ್ನು ಮೇ 15ರಂದು ರೂ. 5, ಸೆ.16ರಂದು ರೂ. 3.14 ಹಾಗೂ ನ.4ರಂದು ರೂ. 1.80ರಷ್ಟು ಏರಿಸಿದ್ದವು. ಕಳೆದ ಬಾರಿಯ ಪೆಟ್ರೋಲ್ ಬೆಲೆಯೇರಿಕೆ ವಿರೋಧ ಪಕ್ಷಗಳು ಮಾತ್ರವಲ್ಲದೆ ಯುಪಿಎಯ ಮಿತ್ರ ಪಕ್ಷಗಳಿಂದಲೂ ವ್ಯಾಪಕ ಖಂಡನೆಗೆ ಗುರಿಯಾಗಿತ್ತು. ಆದರೆ, ಇಂದಿನ ಬೆಲೆ ಇಳಿಕೆಗೆ ಮಿತ್ರ ಪಕ್ಷಗಳ ಒತ್ತಡವಾಗಲಿ, ಉತ್ತರಪ್ರದೇಶದ ಚುನಾವಣೆಯಾಗಲಿ ಕಾರಣವಲ್ಲವೆಂದು ಪೆಟ್ರೋಲಿಯಂ ಸಚಿವರು ಪ್ರತಿಪಾದಿಸಿದ್ದಾರೆ.

Advertisement

0 comments:

Post a Comment

 
Top