ಕೊಪ್ಪಳ ಆಗಸ್ಟ್ ೨೦ (ಕವಾ): ಹಿಂದುಳಿದ ವರ್ಗದವರ ಹಾಗೂ ಅಲ್ಪಸಂಖ್ಯಾತರ ಶ್ರೇಯೋಭಿವೃದ್ಧಿಗಾಗಿ ಬಹುಸಂಖ್ಯಾತರ ವಿರೋಧವನ್ನು ಲೆಕ್ಕಿಸದೆ ದಿಟ್ಟ ನಿರ್ಧಾರವನ್ನು ಕೈಗೊಳ್ಳುತ್ತಿದ್ದ ದಿವಂಗತ ಡಿ. ದೇವರಾಜ ಅರಸು ಅವರು ಸಾಮಾಜಿಕ ಪರಿವರ್ತನೆಯ ಹರಿಕಾರ ಎಂದು ರಾಜ್ಯ ಸಣ್ಣ ಕೈಗಾರಕೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಸಂಗಣ್ಣ ಕರಡಿ ಅವರು ಹೇಳಿದ್ದಾರೆ.
ನಗರದ ಸಾಹಿತ್ಯ ಭವನದಲ್ಲಿ ಏರ್ಪಡಿಸಲಾಗಿದ್ದ ದೇವರಾಜ ಅರಸು ಅವರ ೯೬ ನೇ ಜನ್ಮದಿನಾಚರಣೆ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಹಿಂದುಳಿದ ವರ್ಗದವರ ಕಲ್ಯಾಣಕ್ಕಾಗಿ ಹಾಗೂ ಬಡ ಕೂಲಿಕಾರ್ಮಿಕರ ಬದುಕನ್ನು ಹಸನಾಗಿಸಲು ಬಹುಸಂಖ್ಯಾತರ ವಿರೋಧವಿದ್ದರೂ ಸಹ ಅದನ್ನು ಲೆಕ್ಕಿಸದೆ, ದೇವರಾಜ ಅರಸು ಅವರು ಉಳುವವನೇ ಭೂಮಿಯ ಒಡೆಯ ಆಗುವಂತಹ ಕಾನೂನನ್ನು ಜಾರಿಗೆ ತಂದು ಹಿಂದುಳಿದ ಹಾಗೂ ಶೋಷಿತ ಸಮುದಾಯದವರು ನೆಮ್ಮದಿಯ ಜೀವನ ನಡೆಸಲು ಕಾರಣೀಭೂತರಾಗಿದ್ದಾರೆ. ಇಂತಹ ಮಹಾನ್ ವ್ಯಕ್ತಿಯನ್ನು ಸ್ಮರಿಸುವ ಮೂಲಕ ಮುಂದಿನ ಪೀಳಿಗೆಗೆ ಪ್ರೇರಕ ಶಕ್ತಿಯನ್ನು ತುಂಬುವಂತಹ ಕೆಲಸವಾಗಬೇಕು. ದೇವರಾಜ ಅರಸು ಅವರು ಮೂಲತಃ ಕೃಷಿಕ ಕುಟುಂಬದಿಂದ ಬಂದು, ಸಾಹಿತ್ಯ, ಶೈಕ್ಷಣಿಕ, ಸಹಕಾರಿ ಕ್ಷೇತ್ರಗಳ ಸಾಹಿತ್ಯವನ್ನು ಓದಿ, ಅರ್ಥೈಸಿಕೊಂಡು ರಾಜಕೀಯ ಮಟ್ಟದಲ್ಲಿ ಉನ್ನತ ಮಟ್ಟಕ್ಕೆ ಏರಿದವರು. ಅವರ ವಿಚಾರಧಾರೆಗಳು ಹಿಂದುಳಿದ, ಅಲ್ಪಸಂಖ್ಯಾತರ ಅಭಿವೃದ್ಧಿ ಕುರಿತಂತೆ ಯೋಜನೆಗಳನ್ನು ರೂಪಿಸುವಲ್ಲಿ ಮಹತ್ತರ ಪಾತ್ರ ವಹಿಸಿತು. ಶಿಕ್ಷಣ, ಉದ್ಯೋಗ ಕ್ಷೇತ್ರದಲ್ಲಿನ ಮೀಸಲಾತಿ ವ್ಯವಸ್ಥೆಯನ್ನು ಬಲಪಡಿಸಲು ಶ್ರಮಿಸಿದರು. ದೇವರಾಜ ಅರಸು ಅವರು ಸಾಗಿಬಂದ ದಾರಿಯನ್ನು ಒಮ್ಮೆ ಅವಲೋಕಿಸಿದಾಗ ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ವರ್ಗದವರು ಸೇರಿದಂತೆ ಎಲ್ಲ ಬಡಜನರ ಮೇಲೆ ಅವರಲ್ಲಿದ್ದ ಕಳಕಳಿ ಅರ್ಥವಾಗುತ್ತದೆ ಎಂದು ರಾಜ್ಯ ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಸಂಗಣ್ಣ ಕರಡಿ ಅವರು ಬಣ್ಣಿಸಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಾಪುರ ಅವರು ಮಾತನಾಡಿ, ದೇವರಾಜ ಅರಸು ಅವರು ಒಬ್ಬ ಆದರ್ಶ ವ್ಯಕ್ತಿಯಾಗಿದ್ದರು, ಜೀವನದಲ್ಲಿ ಅನೇಕ ಕಷ್ಟಗಳನ್ನು ಸಹಿಸಿಕೊಂಡು ಉನ್ನತ ಸ್ಥಾನಕ್ಕೆ ಏರಿದವರು. ಆದರೆ ರಾಜಕೀಯದಲ್ಲಿ ಇಂದು ಗ್ರಾಮ ಪಂಚಾಯತ್ ಸದಸ್ಯನಾದ ಕೂಡಲೆ, ಶಾಸಕನಾಗಿ, ನಂತರ ಅಲ್ಪಾವಧಿಯಲ್ಲಿಯೇ ಸಚಿವ ಸ್ಥಾನ ಬೇಕೆನ್ನುವ ಆಸೆಬುರುಕುತನ ರಾಜಕಾರಣಿಗಳಲ್ಲಿ ಮನೆ ಮಾಡಿದೆ. ಭ್ರಷ್ಠತೆಯ ಇನ್ನೊಂದು ಮುಖವೇ ರಾಜಕಾರಣ ಎನ್ನುವ ಪರಿಸ್ಥಿತಿ ತಲೆದೋರಿದ್ದು, ಕೃತಜ್ಞತಾಭಾವ ಮರೆಯಾಗಿ ಕೃತಘ್ನತಾ ಮನೋಭಾವನೆ ಬೆಳೆಯುತ್ತಿದೆ. ಇಂದಿನ ರಾಜಕೀಯ ವಾತಾವರಣ ಕಲುಷಿತಗೊಂಡಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಾಸಕ (ವಿಧಾನಪರಿಷತ್) ಹಾಲಪ್ಪ ಆಚಾರ್ ಅವರು ಮಾತನಾಡಿ ಜನರ ಬೇಡಿಕೆ ಹಾಗೂ ಕುಂದುಕೊರತೆಗಳಿಗೆ ಸ್ಪಂದಿಸುವವನೇ ನಿಜವಾದ ರಾಜಕಾರಣಿ, ಈ ದಿಸೆಯಲ್ಲಿ ದೇವರಾಜ ಅರಸು ಅವರು ಎಲ್ಲ ರಾಜಕಾರಣಿಗಳಿಗೂ ಆದರ್ಶಪ್ರಾಯ. ಹಿಂದುಳಿದ ವರ್ಗದವರರನ್ನು ಮುಖ್ಯ ವಾಹಿನಿಗೆ ಸೇರಿಸುವಂತಹ ಕಾರ್ಯ ಇಂದಿನ ದಿನಗಳಲ್ಲಿ ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ. ದೇಶದ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ, ದೇಶದ ಬೆನ್ನೆಲುಬಾಗಿರುವ ರೈತರ ಆರ್ಥಿಕ ಸ್ಥಿತಿಗತಿ ಸುಧಾರಿಸುವುದು ಅಗತ್ಯವಾಗಿದೆ. ಎಲ್ಲ ಹಿಂದುಳಿದ ವರ್ಗದವರು, ಶೋಷಿತ ಸಮುದಾಯವನ್ನು ಅಭಿವೃದ್ಧಿಯ ದಿಕ್ಕಿನತ್ತ ಕೊಂಡೊಯ್ದ ಧೀಮಂತ ವ್ಯಕ್ತಿ ದೇವರಾಜ ಅರಸು ಎಂದು ಅವರು ಅಭಿಪ್ರಾಯಪಟ್ಟರು.
ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜ್ಯೋತಿ ಬಿಲ್ಳಾರ್ ಅವರು ಸಮಾರಂಭ ಉದ್ಘಾಟಿಸಿ ಮಾತನಾಡಿದರು, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಡಾ. ಸೀತಾ ಹಲಗೇರಿ, ತಾಲೂಕಾ ಪಂಚಾಯತ್ ಅಧ್ಯಕ್ಷ ಅಮರೇಶ ಉಪಲಾಪುರ ಜಿ.ಪಂ. ಸದಸ್ಯರುಗಳಾದ ನಾಗನಗೌಡ ಪಾಟೀಲ, ಹೇಮಾವತಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು, ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಪ್ರಾಂಶುಪಾಲರುಗಳು, ಗಣ್ಯರಾದ ವಿಠ್ಠಪ್ಪ ಗೋರಂಟ್ಲಿ, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು, ಯಲಬುರ್ಗಾ ತಾಲೂಕು ಸರ್ಕಾರಿ ಪ.ಪೂ. ಕಾಲೇಜಿನ ಉಪನ್ಯಾಸಕ ಗಂಗಾಧರ ಜಿ. ಕುರಹಟ್ಟಿ ಅವರು ದೇವರಾಜ ಅರಸು ಅವರ ಹಿನ್ನೆಲೆ ಹಾಗೂ ಅಭಿವೃದ್ಧಿಪರ ಚಿಂತನೆಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಇಲಾಖೆಯ ಜಿಲ್ಲಾ ಅಧಿಕಾರಿ ಕಲ್ಲೇಶ್ ಅವರು ಸ್ವಾಗತಿಸಿ, ವಂದಿಸಿದರು, ಇದೇ ಸಂದರ್ಭದಲ್ಲಿ ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಇಲಾಖೆಯ ವಸತಿ ನಿಲಯ, ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ವ್ಯಾಸಂಗ ಮಾಡಿ ಎಸ್.ಎಸ್.ಎಲ್.ಸಿ. ಹಾಗೂ ಪಿ.ಯು.ಸಿ. ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಅಲ್ಲದೆ ದೇವರಾಜ ಅರಸು ಜನ್ಮದಿನಾಚರಣೆ ಅಂಗವಾಗಿ ಜಿಲ್ಲಾ ಮಟ್ಟದಲ್ಲಿ ಏರ್ಪಡಿಸಲಾದ ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಸಮಾರಂಭಕ್ಕೂ ಮುನ್ನ ಡಿ. ದೇವರಾಜ ಅರಸು ಅವರ ಭಾವಚಿತ್ರದೊಂದಿಗೆ ಶ್ರೀ ಗವಿಸಿದ್ದೇಶ್ವರ ಕ್ರೀಡಾಂಗಣದಿಂದ ಜವಾಹರ ರಸ್ತೆ ಮೂಲಕ ಸಾಹಿತ್ಯ ಭವನದವರೆಗೆ ಭವ್ಯ ಮೆರವಣಿಗೆ ಏರ್ಪಡಿಸಲಾಗಿತ್ತು.
0 comments:
Post a Comment