PLEASE LOGIN TO KANNADANET.COM FOR REGULAR NEWS-UPDATES


ಹೊಸದಿಲ್ಲಿ, ಆ.21: ತನ್ನ ಚಳವಳಿಯು ಸರಕಾರದೊಂದಿಗೆ ಮಾತುಕತೆಯ ಬಾಗಿಲನ್ನು ಮುಚ್ಚಿಲ್ಲವೆಂದು ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಝಾರೆ ಇಂದಿಲ್ಲಿ ಹೇಳಿದ್ದಾರೆ. ಪ್ರಧಾನಿ ಮನಮೋಹನ್ ಸಿಂಗ್ ನಿನ್ನೆಯಷ್ಟೇ ಸರಕಾರ ಮಾತುಕತೆಗೆ ಸಿದ್ಧವೆಂದು ತಿಳಿಸಿದ್ದರು.ತಾವು ಮಾತುಕತೆಯ ಬಾಗಿಲು ಮುಚ್ಚಿಲ್ಲ. ಅದನ್ನು ತೆರೆದೇ ಇಟ್ಟಿದ್ದೇವೆ. ಕೇವಲ ಮಾತುಕತೆಯಿಂದಷ್ಟೇ ಸಮಸ್ಯೆ ಪರಿಹಾರವಾಗಬಹುದೆಂದು ಹಝಾರೆ, ರಾಮ್‌ಲೀಲಾ ಮೈದಾನದಲ್ಲಿಂದು ತನ್ನ ಬೆಂಬಲಿಗರಿಗೆ ಹೇಳಿದರು. ಅವರ ನಿರಶನ ಇಂದಿಗೆ 6 ದಿನಗಳನ್ನು ಪೂರೈಸಿದೆ.ಮಾತುಕತೆಗೆ ಸಿದ್ಧವೆಂಬ ಪ್ರಧಾನಿಯ ಹೇಳಿಕೆಯನ್ನುಲ್ಲೇಖಿಸಿದ ಅಣ್ಣಾ ಬಳಗದ ಸದಸ್ಯರು, ಸರಕಾರದಿಂದ ಇದುವರೆಗೆ ಅಂತಹ ಪ್ರಸ್ತಾಪ ತಮಗೆ ಬಂದಿಲ್ಲ ಎಂದರು.ತಾವು ಯಾರೊಂದಿಗೆ, ಏನನ್ನು, ಎಲ್ಲಿ ಚರ್ಚಿಸಬೇಕೆಂದು ಪ್ರಶ್ನಿಸಿದ ಅಣ್ಣಾ ನಿಕಟವರ್ತಿ ಅರವಿಂದ ಕೇಜ್ರಿವಾಲ್, ಇಂದು ಮುಂಜಾನೆ ‘ಭ್ರಷ್ಟಾಚಾರದ ವಿರುದ್ಧ ಭಾರತ’ ಸಂಘಟನೆಯ ಕೋರ್ ಸಮಿತಿಯಲ್ಲಿ ಕೈಗೊಂಡಿರುವ ಐದು ನಿರ್ಣಯಗಳನ್ನು ಪ್ರಕಟಿಸಿದರು
ಪ್ರತಿ ಲೋಕಸಭಾ ಕ್ಷೇತ್ರದಲ್ಲಿ ಸಂಸದರ ನಿವಾಸದ ಮುಂದೆ ಧರಣಿ ನಡೆಸುವಂತೆ ಬೆಂಬಲಿಗರಿಗೆ ಕರೆ ನೀಡಿದ ಹಝಾರೆ ಹಾಗೂ ಕೇಜ್ರಿವಾಲ್, ಜನಲೋಕಪಾಲ ಮಸೂದೆಗೆ ಅವರಿಂದ ಲಿಖಿತ ರೂಪದ ಬದ್ಧತೆಯನ್ನು ಪಡೆಯುವಂತೆ ಸೂಚಿಸಿದರು.
ಧರಣಿಯು ಸಚಿವರು ಹಾಗೂ ವಿವಿಧ ರಾಜಕೀಯ ಪಕ್ಷಗಳ ನಾಯಕರ ಮನೆಗಳ ಮುಂದೆಯೂ ನಡೆಯಬೇಕೆಂದು ಅವರು ಹೇಳಿದರು.
ನಾಳೆ ಗಾಂಧಿವಾದಿಯ ಚಳವಳಿಗೆ ಬೆಂಬಲ ಸೂಚಿಸಿ ರಮಝಾನ್ ಹಾಗೂ ಜನ್ಮಾಷ್ಟಮಿ ಉಪವಾಸವನ್ನು ಒಟ್ಟಿಗೇ ಬಿಡಲಾಗುವುದೆಂದು ಕೇಜ್ರಿವಾಲ್ ತಿಳಿಸಿದರು.ಕೊಡು ಕೊಳ್ಳುವಿಕೆಗೆ ಧಾರಾಳ ಅವಕಾಶವಿದೆ. ಸರಕಾರವು ಮಾತುಕತೆ ಹಾಗೂ ಚರ್ಚೆಗೆ ಸಿದ್ಧವೆಂದು ಪ್ರಧಾನಿ ನಿನ್ನೆ ಹೇಳಿದ್ದರು.ಜನಲೋಕಪಾಲ ಮಸೂದೆ ಸಂಸತ್ತಿನಲ್ಲಿ ಮಂಜೂರಾಗುವಂತೆ ಮಾಡುವ ಹೋರಾಟದಿಂದ ತಾನು ಹಿಂದೆ ಸರಿಯುವುದೇ ಇಲ್ಲವೆಂದು ಸ್ಪಷ್ಟಪಡಿಸಿರುವ ಹಝಾರೆ, ಮಸೂದೆಯ ವ್ಯಾಪ್ತಿಗೆ ಪ್ರಧಾನಿಯನ್ನು ತಂದರೂ ತನ್ನ ಅಭಿ ಯಾನವನ್ನು ಕೊನೆಗೊಳಿಸಲಾಗುವುದಿಲ್ಲ ಎಂದರು. ಜನಲೋಕಪಾಲ ಮಸೂದೆ ಮಂಜೂರಾಗುವ ತನಕ ತಮ್ಮ ಅಭಿ ಯಾನ ನಿಲ್ಲದೆಂದು ಅವರು ಒತ್ತಿ ಹೇಳಿದರು.
ತನ್ನ ಚಳವಳಿಯ ಟೀಕಾಕಾರರ ವಿರುದ್ಧ ಚಾಟಿ ಬೀಸಿದ ಹಝಾರೆ, ಜನತಾ ಸಂಸತ್ತು ರಾಷ್ಟ್ರೀಯ ಸಂಸತ್ತಿಗಿಂತ ಉನ್ನತವಾದುದು ಎಂದರು.‘‘ನಾವು ಸಂಸದರನ್ನು ಬೊಕ್ಕಸದ ವಿಶ್ವಸ್ತರಾಗಿ ಕಳುಹಿಸುತ್ತೇವೆ. ಆದರೆ, ಅವರು ಅಲ್ಲಿಗೆ ಹೋಗಿ ಜನರ ಹಣವನ್ನು ಲೂಟಿ ಮಾಡುವುದಕ್ಕೆ ಆರಂಭಿಸುತ್ತಾರೆ. ಆದರೆ, ಈಗ ನೈಜ ಮಾಲಕರಾದ ಜನರು ಎಚ್ಚೆತ್ತಿದ್ದಾರೆ. ಇನ್ನು ಇಂತಹ ಅನೇಕ ಸಚಿವರನ್ನು ಅಧಿಕಾರದಿಂದ ಇಳಿಸಿ ಸೆರೆಮನೆಗೆ ಅಟ್ಟಬೇಕಾಗಿದೆ’’ ಎಂದವರು ಘೋಷಿಸಿದರು.

ಜಾತಿ, ಮತ, ಭೇದವಿಲ್ಲದೆ ತನ್ನ ಬೆಂಬಲಕ್ಕೆ ಆಗಮಿಸಿದ ಜನರಿಗೆ ಹಝಾರೆ ಕೃತಜ್ಞತೆ ಸಲ್ಲಿಸಿದರು. ಚಳವಳಿಗೆ ಒತ್ತು ನೀಡುವಲ್ಲಿ ಮಾಧ್ಯಮಗಳ ಪಾತ್ರವನ್ನೂ ಅವರು ಶ್ಲಾಘಿಸಿದರು.ಮಾಧ್ಯಮಗಳು ಚಳವಳಿಯನ್ನು ಪ್ರತಿ ಮನೆಗೆ ತಲುಪಿಸಿವೆ ಹಾಗೂ ಸಾರ್ವಜನಿಕರು ಪ್ರತಿಭಟನೆಗೆ ಕಾವು ನೀಡಿದ್ದಾರೆಂದ ಹಝಾರೆ, ಶಾಂತಿಯುತ ಚಳವಳಿಯನ್ನು ‘ಅಭೂತಪೂರ್ವವಾಗಿ’ ಮುಂದುವರಿಸಿರುವ ಜನತೆಯನ್ನು ಕೊಂಡಾಡಿದರು

Advertisement

0 comments:

Post a Comment

 
Top