PLEASE LOGIN TO KANNADANET.COM FOR REGULAR NEWS-UPDATES


ಬೆಂಗಳೂರು, ಆ.19: ಭಗವದ್ಗೀತೆ ಅಭಿಯಾನವೂ ಒಂದು ಬಗೆಯ ಭಯೋತ್ಪಾದನೆಯಾಗಿದ್ದು, ಅದನ್ನು ಸಾಂಸ್ಕೃತಿಕ ಭಯೋತ್ಪಾದನೆ ಎನ್ನಬಹುದು ಎಂದು ಜ್ಞಾನಪೀಠ ಪುರಸ್ಕೃತ ಸಾಹಿತಿ ಗಿರೀಶ್ ಕಾರ್ನಾಡ್ ಅಭಿಪ್ರಾಯಪಟ್ಟಿದ್ದಾರೆ. ನಗರದ ಕನ್ನಡ ಸಾಹಿತ್ಯ ಕೃಷ್ಣರಾಜ ಪರಿಷನ್ಮಂದಿರದಲ್ಲಿಂದು ಭಗವದ್ಗೀತೆ ವಿರೋಧಿ ಜಾಗೃತಿ ಒಕ್ಕೂಟ ಹಮ್ಮಿಕೊಂಡಿದ್ದ ಭಗವದ್ಗೀತೆ ವಿರೋಧಿ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಕೇವಲ ಬಾಂಬ್-ಬಂದೂಕು ಗಳಿಂದ ನಡೆಯುವ ಹಿಂಸಾಚಾರವಷ್ಟೆ ಭಯೋತ್ಪಾದನೆಯಲ್ಲ. ಭಗವದ್ಗೀತೆ ಅಭಿಯಾನದಂತಹ ಕೋಮುವಾದಿ ಚಟುವಟಿಕೆಗಳ ಮೂಲಕ ಮುಗ್ಧ ಮಕ್ಕಳಲ್ಲಿ ಕೋಮುವಾದದ ವಿಷಬೀಜ ಬಿತ್ತುವುದು ಕೂಡ ಭಯೋತ್ಪಾದನೆಯೇ. ಮಕ್ಕಳ ಮನಸ್ಸನ್ನು ಆವರಿಸುವ ಈ ಚಟುವಟಿಕೆ ಬಾಂಬ್ ಭಯೋತ್ಪಾದನೆಗಿಂತಲೂ ಭಯಾನಕವಾದುದು. ಈ ಅಭಿಯಾನದ ಹಿಂದೆ ಬ್ರಾಹ್ಮಣವಾದದ ಹುನ್ನಾರವಿದೆ ಎಂದು ಅವರು ವಿಷಾದಿಸಿದರು.
ಈ ಹಿಂದೆ ಬಿಬಿಸಿ ಚಾನೆಲ್‌ನವರು ಜಗತ್ತನ್ನು ನಡುಗಿಸಿದ ಭಯಾನಕ ಕಲಾಕೃತಿಯ ಬಗ್ಗೆ ಸಾಕ್ಷಚಿತ್ರವನ್ನು ತಯಾರಿಸುವ ಹೊಣೆಯನ್ನು ನನಗೆ ವಹಿಸಿದ್ದರು. ನಾನು ಸಾಕಷ್ಟು ಚಿಂತನೆ ನಡೆಸಿ ಭಗವದ್ಗೀತೆಯೇ ಅತ್ಯಂತ ಭಯಾನಕ ಕಲಾಕೃತಿ ಎಂದು ನಿರ್ಧರಿಸಿ ಆ ಕುರಿತು ಸಾಕ್ಷ ಚಿತ್ರವನ್ನು ತಯಾರಿಸಿದ್ದೆ. ಈ ಚಿತ್ರದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದವು ಎಂದು ಅವರು ತಿಳಿಸಿದರು. ಭಗವದ್ಗೀತೆಯಲ್ಲಿ ಎಷ್ಟು ಒಳ್ಳೆಯ ವಿಚಾರಗಳಿವೆಯೋ ಅಷ್ಟೇ ದುಷ್ಟ ವಿಚಾರ ಗಳಿವೆ. ಆರೆಸ್ಸೆಸ್ ಎಂಬ ರಾಜಕೀಯ ಸಂಘಟನೆಯೂ ಇದನ್ನು ಸಾಂಸ್ಕೃತಿಕ ಅಭಿಯಾನ ಎಂದು ಬಿಂಬಿಸುವ ಮೂಲಕ ತನ್ನ ಬೇಳೆ ಬೇಯಿಸಿಕೊಳ್ಳುತ್ತಿದೆ ಎಂದು ಅವರು ಹೇಳಿದರು.
ಶಿಕ್ಷಣ ಸಚಿವ ಕಾಗೇರಿಯವರು ಬ್ರಾಹ್ಮಣರಾಗಿದ್ದುದರಿಂದಲೆ ‘ಭಗವದ್ಗೀತೆಯನ್ನು ಒಪ್ಪಿಕೊಳ್ಳದವರು ಈ ದೇಶ ಬಿಟ್ಟು ತೊಲಗಿ’ ಎಂಬ ಅಹಂಕಾರದ ಮಾತು ಹೇಳಲು ಸಾಧ್ಯವಾಗಿದೆ. ಬ್ರಾಹ್ಮಣರು ಮಾತ್ರ ಶ್ರೇಷ್ಠರು ಎಂಬ ವಾದ ಮನುಸ್ಮತಿ ಯಿಂದಲೆ ಬಂದಿದೆ. ಶಿಕ್ಷಣವೆಂದರೆ ಚರ್ಚಿಸುವುದು ಮತ್ತು ಪ್ರಶ್ನಿಸುವುದು. ಆದರೆ, ಶಿಕ್ಷಣ ಸಚಿವರಾಗಿರುವ ಕಾಗೇರಿಯವರು ಭಗವದ್ಗೀತೆ ಒಂದು ಪವಿತ್ರ ಗ್ರಂಥ. ಆದುದರಿಂದ ಅದರ ಬಗ್ಗೆ ಚರ್ಚೆ ಬೇಡ ಎಂದು ಆದೇಶಿಸುವುದು ಶಿಕ್ಷಣ ಇಲಾಖೆಗೆ ಮಾಡಿದ ಅವಮಾನ ಎಂದು ಅವರು ಆರೋಪಿಸಿದರು. ಭಗವದ್ಗೀತೆ ಆಗಿನ ಕಾಲಕ್ಕೆ ಶ್ರೇಷ್ಠವಾಗಿರಬಹುದು. ಆದರೆ ಈಗಿನ ವರ್ತಮಾನದ ವೌಲ್ಯಗಳು ಬದಲಾಗಿವೆ. ಯಾವುದೆ ಒಂದು ಕೃತಿ ಎಲ್ಲ ಕಾಲಕ್ಕೂ ಸಲ್ಲುವಂತಹದ್ದಲ್ಲ. ಅಂದಿನ ಭಗವದ್ಗೀತೆಯನ್ನು ಇಂದು ಒತ್ತಾಯದ ಮೂಲಕ ಹೇರಲು ಪ್ರಯತ್ನಿಸಿದರೆ ಅದರ ಹಿಂದೆ ಹುನ್ನಾರವಿದೆ ಎಂದು ಅರ್ಥೈಸಿಕೊಳ್ಳಬೇಕಾಗುತ್ತದೆ ಎಂದರು.
ಭಗವದ್ಗೀತೆಯಲ್ಲಿರುವ ಕಂದಾಚಾರಗಳ ವಿರುದ್ಧ ಅಂದೆ ಹೋರಾಟ ಪ್ರಾರಂಭವಾಗಿತ್ತು. ಆದರೆ ವಿರೋಧಿಸಿದ ಚಾರ್ವಾಕವಾದಿಗಳು, ಲೋಕಾಯತರು ಮುಂತಾದವರಿಗೆ ಬೆಳೆಯಲು ಅವಕಾಶ ನೀಡಲಿಲ್ಲ. ಭೌದ್ಧರನ್ನಂತೂ ಈ ದೇಶ ಬಿಟ್ಟು ಓಡಿಸಲಾಯಿತು ಎಂದು ಅವರು ದೂರಿದರು. ವೇದಿಕೆಯಲ್ಲಿ ಮಾಜಿ ಸಚಿವೆ ಮತ್ತು ಸಾಹಿತಿ ಬಿ.ಟಿ.ಲಲಿತಾನಾಯಕ್ ಮತ್ತು ನ್ಯಾಯವಾದಿ ಎಸ್.ಬಾಲನ್ ಉಪಸ್ಥಿತರಿದ್ದರು

Advertisement

0 comments:

Post a Comment

 
Top