ಕೊಪ್ಪಳ ಜೂ. ೨೮ (ಕ.ವಾ): ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಪ್ರಸಕ್ತ ಸಾಲಿನ ಕಲಾ ಪ್ರತಿಭೋತ್ಸವ ಕಾರ್ಯಕ್ರಮದಡಿ ಬಾಲಪ್ರತಿಭೆ, ಕಿಶೋರಪ್ರತಿಭೆ ಹಾಗೂ ಯುವಪ್ರತಿಭೆ ಸ್ಪರ್ಧೆಗಳನ್ನು ಏರ್ಪಡಿಸಿದೆ ಅಲ್ಲದೆ ರಂಗೋಲಿ ಸ್ಪರ್ಧೆಯನ್ನು ಆಯೋಜಿಸಿದ್ದು, ಸ್ಪರ್ಧೆಗಳು ಜುಲೈ ೧೫ ಮತ್ತು ೧೬ ರಂದು ಎರಡು ದಿನಗಳ ಕಾಲ ನಗರದ ಸಾಹಿತ್ಯ ಭವನದಲ್ಲಿ ನಡೆಯಲಿದೆ.
ಜು. ೧೫ ರಂದು ಬೆಳಿಗ್ಗೆ ೧೦ ಗಂಟೆಗೆ ಸಾಹಿತ್ಯ ಭವನದಲ್ಲಿ ಆಯೋಜಿಸಲಾಗಿರುವ ಬಾಲ ಪ್ರತಿಭೆ ಹಾಗೂ ಕಿಶೋರ ಪ್ರತಿಭೆ ಸ್ಪರ್ಧಾ ವಿಭಾಗದಲ್ಲಿ ಕರ್ನಾಟಕ ವಾದ್ಯ ಸಂಗೀತ, ಹಿಂದೂಸ್ತಾನಿ ಹಾಡುಗಾರಿಕೆ, ಸುಗಮ ಸಂಗೀತ, ಜಾನಪದ ಗೀತೆ, ಏಕಪಾತ್ರಾಭಿನಯ, ಶಾಸ್ತ್ರೀಯ ನೃತ್ಯ ಹಾಗೂ ಚಿತ್ರಕಲೆ ಸ್ಪರ್ಧೆಗಳಿವೆ. ಜು. ೧೬ ರಂದು ಬೆಳಿಗ್ಗೆ ೧೦ ಗಂಟೆಗೆ ನಡೆಯಲಿರುವ ಯುವಪ್ರತಿಭೆ ಸ್ಪರ್ಧಾ ವಿಭಾಗದಲ್ಲಿ ಏಕವ್ಯಕ್ತಿ ಸ್ಪರ್ಧೆಗಳಾದ ಕರ್ನಾಟಕ ಶಾಸ್ತ್ರೀಯ ಹಾಡುಗಾರಿಕೆ, ಹಿಂದೂಸ್ತಾನಿ ವಾದ್ಯ ಸಂಗೀತ, ಸುಗಮ ಸಂಗೀತ, ಏಕಪಾತ್ರಾಭಿನಯ, ನನ್ನ ಮೆಚ್ಚಿನ ಸಾಹಿತಿ, ಶಾಸ್ತ್ರೀಯ ನೃತ್ಯ ಹಾಗೂ ಚಿತ್ರ ಕಲೆ ಪ್ರಕಾರಗಳ ಸ್ಪರ್ಧೆ ನಡೆಯಲಿದೆ. ಅದೇ ದಿನ ಮಧ್ಯಾಹ್ನ ೩ ಗಂಟೆಗೆ ನಡೆಯುವ ಸಮೂಹ ಸ್ಪರ್ಧೆಯಲ್ಲಿ ನಾಟಕ ಹಾಗೂ ಜಾನಪದ ನೃತ್ಯ ಪ್ರಕಾರದ ಸ್ಪರ್ಧೆ ಆಯೋಜಿಸಲಾಗಿದೆ. ಸಮೂಹ ಪ್ರಕಾರಗಳಲ್ಲಿ ಭಾಗವಹಿಸುವ ತಂಡದ ಸದಸ್ಯರ ಸಂಖ್ಯೆ ಕನಿಷ್ಟ ೫ ಮತ್ತು ಗರಿಷ್ಠ ೧೫ ಜನ ನಿಗದಿಪಡಿಸಿದೆ. ಜುಲೈ ೧೬ ರಂದು ಮಧ್ಯಾಹ್ನ ೩ ಗಂಟೆಗೆ ಕೊಪ್ಪಳದ ಶ್ರೀ ರಾಘವೇಂದ್ರಸ್ವಾಮಿ ಕಲ್ಯಾಣ ಮಂಟಪದಲ್ಲಿ ರಂಗೋಲಿ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು, ರಂಗೋಲಿಯನ್ನು ಕೈಯಿಂದ ಮಾತ್ರ ಬಿಡಿಸಬೇಕು, ಯಾವುದೇ ಉಪಕರಣಗಳ ನೆರವಿನಿಂದ ರಂಗೋಲಿ ಬಿಡಿಸುವಂತಿಲ್ಲ. ರಂಗೋಲಿ ಬಿಡಿಸಲು ಅಗತ್ಯವಾದ ಪುಡಿ, ಬಣ್ಣ, ಸಾಮಗ್ರಿಯನ್ನು ಸ್ಪರ್ಧಿಗಳೇ ತರಬೇಕು.
ಬಾಲ ಪ್ರತಿಭೆ ವಿಭಾಗದಲ್ಲಿ ಭಾಗವಹಿಸಿಲು ವಯೋಮಿತಿ ೮ ರಿಂದ ೧೩ ವರ್ಷದೊಳಗಿರಬೇಕು, ಕಿಶೋರ ಪ್ರತಿಭೆಗೆ ೧೩ ರಿಂದ ೧೮ ವರ್ಷದೊಳಗಿರಬೇಕು, ಯುವಪ್ರತಿಭೆಗೆ ೧೮ ರಿಂದ ೩೦ ವರ್ಷದೊಳಗಿರಬೇಕು. ರಂಗೋಲಿ ಸ್ಪರ್ಧೆಯಲ್ಲಿ ೧೫ ವರ್ಷ ಮೇಲ್ಪಟ್ಟ ಮಹಿಳೆಯರು ಮಾತ್ರ ಭಾಗವಹಿಸಬಹುದಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸಬಯಸುವ ಆಸಕ್ತರು ಬಿಳಿ ಹಾಳೆಯಲ್ಲಿ ತಮ್ಮ ಹೆಸರು, ದೂರವಾಣಿ ಸಂಖ್ಯೆ, ಸ್ಪರ್ಧೆಯ ಹೆಸರು, ದೂರವಾಣಿ ಸಂಖ್ಯೆ, ಇತ್ಯಾದಿ ನಮೂದಿಸಿ ತಮ್ಮ ವಯಸ್ಸಿನ ದೃಢೀಕರಣದೊಂದಿಗೆ ಅರ್ಜಿಯನ್ನು ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾಡಳಿತ ಭವನ, ಮೊದಲನೆ ಮಹಡಿ, ಕೊಪ್ಪಳ ಇವರಿಗೆ ಜುಲೈ ೧೧ ರ ಒಳಗಾಗಿ ಸಲ್ಲಿಸುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಶ್ರೀಶೈಲಕರಿಶಂಕರಿ ಅವರು ತಿಳಿಸಿದ್ದಾರೆ.
0 comments:
Post a Comment