PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ ಅ. : ಮುಂಬರುವ ಕನ್ನಡ ರಾಜ್ಯೋತ್ಸವವನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ ಅವರು ಹೇಳಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಆಚರಣೆ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಪ್ರತಿ ವರ್ಷದಂತೆ ಈ ವರ್ಷವೂ ಕೂಡ ನ. ೦೧ ರಂದು ಕನ್ನಡ ರಾಜ್ಯೋತ್ಸವವನ್ನು ಸಡಗರ ಸಂಬ್ರಮದಿಂದ ಆಚರಿಸಲಾಗುವುದು. ಅಂದು ಬೆಳಿಗ್ಗೆ ೭ ಗಂಟೆಗೆ ತಾ ಭುವನೇಶ್ವರಿ ದೇವಿ ಭಾವಚಿತ್ರ ಮೆರವಣಿಗೆ ಗಡಿಯಾರ ಕಂಬ ವೃತ್ತದಿಂದ ಹೊರಡಲಿದೆ. ಮೆರವಣಿಗೆಯಲ್ಲಿ ಡೊಳ್ಳು, ಹಲಿಗೆ ಮಜಲು, ನಂದಿಕೋಲು, ಕರಡಿ ಮಜಲು ಮುಂತಾದ ಜಾನಪದ ಕಲಾತಂಡಗಳು ಭಾಗವಹಿಸಲಿವೆ. ಅಲ್ಲದೆ ಜಿಲ್ಲೆಯ ಸಾಂಸ್ಕೃತಿಕ ಹಾಗೂ ಐತಿಹಾಸಿಕ ಪರಂಪರೆ ಬಿಂಬಿಸುವ ಸ್ತಬ್ಧ ಚಿತ್ರಗಳು ಭಾಗವಹಿಸಲಿವೆ. ಮೆರವಣಿಗೆಯು ಗಡಿಯಾರ ಕಂಬ ವೃತ್ತದಿಂದ ಪ್ರಾರಂಭಗೊಂಡು, ಅಶೋಕ ವೃತ್ತ, ಬಸ್ ನಿಲ್ದಾಣ ರಸ್ತೆ ಮೂಲಕ ಸಾಗಿ ಜಿಲ್ಲಾ ಕ್ರೀಡಾಂಗಣ ತಲುಪಲಿದೆ. ಬೆಳಿಗ್ಗೆ ೯-೩೦ ಗಂಟೆಗೆ ಕ್ರೀಡಾಂಗಣದಲ್ಲಿ ಸಹಕಾರ ಸಚಿವ ಲಕ್ಷ್ಮಣ ಸವದಿ ಅವರು ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸುವರು. ಧ್ವಜವಂದನೆ ಕಾರ್ಯಕ್ರಮದಲ್ಲಿ ಪೊಲೀಸ್, ಗೃಹರಕ್ಷಕ ದಳ, ಎನ್.ಸಿ.ಸಿ., ಸ್ಕೌಟ್ ಮತ್ತು ಗೈಡ್ಸ್ ಹಾಗೂ ಇತರೆ ತಂಡಗಳು ಭಾಗವಹಿಸಲಿವೆ. ಪ್ರಮುಖವಾದ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದ್ದು, ಇದೇ ಸಂದರ್ಭದಲ್ಲಿ ಜಿಲ್ಲೆಯ ಸಾಹಿತಿ, ಕಲಾವಿದರ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಗುವುದು. ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ಯಲ್ಲಿ ಕನ್ನಡ ವಿಷಯದಲ್ಲಿ ಅತಿಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಹಾಗೂ ಆಯಾ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸಿರುವ ಅಧಿಕಾರಿ, ಸಿಬ್ಬಂದಿಯವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು. ಜಿಲ್ಲೆಯಲ್ಲಿ ಒಂದು ವಾರ ಕಾಲ ಚಲನಚಿತ್ರ ಮಂದಿರಗಳಲ್ಲಿ ಕನ್ನಡ ಚಲನಚಿತ್ರ ಪ್ರದರ್ಶಿಸಲು ಕ್ರಮ ಕೈಗೊಳ್ಳಲಾಗುವುದು. ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ಜಿಲ್ಲಾಡಳಿತದೊಂದಿಗೆ ಕನ್ನಡಪರ ಸಂಘಟನೆಗಳು ಹಾಗೂ ಸಾರ್ವಜನಿಕ ವ್ಯಾಪಾರಿ ಉದ್ದಿಮೆದಾರರು ತಪ್ಪದೆ ಪಾಲ್ಗೊಳ್ಳುವಂತಾಗಬೇಕು. ಅಂಗಡಿ ಮುಂಗಟ್ಟು, ಸರ್ಕಾರಿ ಕಚೇರಿಗಳು, ಪ್ರಮುಖ ಬೀದಿಗಳ ವೃತ್ತಗಳಿಗೆ ವಿದ್ಯುತ್ ದೀಪಾಲಂಕಾರ ಕೈಗೊಳ್ಳಲು ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಪ್ರತಿ ವಾಣಿಜ್ಯ ಮಳಿಗೆ, ಬ್ಯಾಂಕ್, ಹೋಟೆಲ್ ಅಂಗಡಿ ಮುಂಗಟ್ಟುಗಳ ಮುಂದೆ ಕನ್ನಡ ಬಾವುಟ ಮತ್ತು ರಾಜ್ಯೋತ್ಸವ ಶುಭಾಷಯ ಕೋರುವ ಬ್ಯಾನರ್‌ಗಳನ್ನು ಪ್ರದರ್ಶಿಸುವಂತಾಗಬೇಕು. ರಾಜ್ಯೋತ್ಸವವನ್ನು ಯಶಸ್ವಿಗೊಳಿಸಲು ಐದು ಉಪಸಮಿತಿಗಳನ್ನು ರಚಿಸಲಾಗಿದೆ. ಸ್ತಬ್ಧ ಚಿತ್ರ ತಯಾರಿಕೆ ಸಮಿತಿಯ ಅಧ್ಯಕ್ಷರನ್ನಾಗಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿನಿರ್ದೇಶಕ ಎ. ಆನಂದ್, ವೇದಿಕೆ ನಿರ್ಮಾಣ ಸಮಿತಿ ಅಧ್ಯಕ್ಷರಾಗಿ ಸಹಾಯಕ ಆಯುಕ್ತ ಶರಣಬಸಪ್ಪ, ಸಾಂಸ್ಕೃತಿಕ ಸಮಿತಿ ಅಧ್ಯಕ್ಷರಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ರಾಜೇಂದ್ರ ಪ್ರಸಾದ್, ಸನ್ಮಾನ ಸಮಿತಿ ಅಧ್ಯಕ್ಷರಾಗಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಎನ್.ಪಿ. ಪಾಟೀಲ್, ಜಿಲ್ಲಾ ಮಟ್ಟದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿರುವ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರಿಗೆ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷರನ್ನಾಗಿ ಅಪರ ಜಿಲ್ಲಾಧಿಕಾರಿ ಬಿ.ಪಿ. ಅಡ್ನೂರ್ ಅವರನ್ನು ನೇಮಿಸಲಾಯಿತು. ಈ ಕಾರ್ಯಕ್ರಮದಲ್ಲಿ ಲಯನ್ಸ್, ರೋಟರಿ ಅಲ್ಲದೆ ವಿವಿಧ ಸಂಘಟನೆಗಳು ಕಾರ್ಯಕ್ರಮದಲ್ಲಿ ಭಾಗವಮಿಸಿ ಯಶಸ್ವಿಗೊಳಿಸುವಂತೆ ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ ಅವರು ಮನವಿ ಮಾಡಿಕೊಂಡರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಈಶ್ವರಚಂದ್ರ ವಿದ್ಯಾಸಾಗರ್, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್. ಮೂರ್ತಿ, ಅಪರ ಜಿಲ್ಲಾಧಿಕಾರಿ ಬಿ.ಪಿ. ಅಡ್ನೂರ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ರಾಜೇಂದ್ರ ಪ್ರಸಾದ್, ಪ.ಪೂ. ಶಿಕ್ಷಣ ಇಲಾಖೆ ಉಪನಿರ್ದೇಶಕ ಡಿ.ಬಿ. ದೊಡ್ಡಮನಿ, ಪ್ರಾಂಶುಪಾಲ ಅಲ್ಲಮಪ್ರಭು ಬೆಟ್ಟದೂರ, ಶಿವಾನಂದ ಹೊದ್ಲೂರ್, ರಾಜಶೇಖರ ರೆಡ್ಡಿ, ವಿವಿಧ ಸಂಘಟನಾ ಪದಾಧಿಕಾರಿಗಳು,ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

Advertisement

0 comments:

Post a Comment

 
Top