ಕವಿಸಮಯದಲ್ಲಿ ಕವನಗಳು ತಮ್ಮ ಶಬ್ದಗಳ ಬಳಕೆಯಿಂದ, ಸಾಹಿತ್ಯದ ಬಳಕೆಯಿಂದ ಗಮನಸೆಳೆಯುತ್ತಿವೆ. ಯುವಕವಿಗಳು ಹೆಚ್ಚು ಹೆಚ್ಚು ಅಧ್ಯಯನಶೀಲರಾಗಬೇಕು. ಹಾಗಾದಾಗ ಉತ್ತಮ ಸಾಹಿತ್ಯ ರಚನೆ ಸಾಧ್ಯ ಮತ್ತು ಅದನ್ನು ಅಭಿವ್ಯಕ್ತಗೊಳಿಸಲು ಸಾಧ್ಯ ಎಂದು ಹಿರಿಯ ಕವಿ ವಿಠ್ಠಪ್ಪ ಗೋರಂಟ್ಲಿ ಹೇಳಿದರು.
ಅವರು ಕವಿಸಮೂಹ ಕನ್ನಡನೆಟ್.ಕಾಂ ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಕವಿಸಮಯ ಕಾರ್‍ಯಕ್ರಮದಲ್ಲಿ ಕವನಗಳ ವಿಶ್ಲೇಷಣೆ ಮಾಡುತ್ತಾ ಮಾತನಾಡುತ್ತಿದ್ದರು. ಕೇವಲ ಮೂರು ಜನ ಆಸಕ್ತ ಕವಿಗಳಿಂದ ಶುರುವಾದ ಕವಿಸಮಯ ಕಾರ್‍ಯಕ್ರಮ ವಾರದಿಂದ ವಾರಕ್ಕೆ ಹೆಚ್ಚು ಕವಿಗಳು ಆಸಕ್ತರನ್ನು ಸೆಳೆಯುತ್ತಿರುವುದು ಶ್ಲಾಘನೀಯ ಎಂದರು. ಕವಿಸಮಯದಲ್ಲಿ ಕವನಗಳ ವಿಮರ್ಶೆ ಎನ್ನುವುದಕ್ಕಿಂತ ಅವುಗಳ ವಿಶ್ಲೇಷಣೆ ಎನ್ನಬಹುದು ಎಂದರು.
ಈ ಸಲ ೧೮ ಕವಿಗಳು ತಮ್ಮ ಕವನ ವಾಚನ ಮಾಡಿದರು. ಮಹಾಂತೇಶ ಮಲ್ಲನಗೌಡರ- ಅಮರ ಭಗತಸಿಂಗ್, ಪುಷ್ಪಲತಾ ಏಳುಬಾವಿ- ಪ್ರಶ್ನೆ, ಶಾಂತಾದೇವಿ ಹಿರೇಮಠ- ಹಸ್ತಮಳೆ, ವಿಠ್ಠಪ್ಪ ಗೋರಂಟ್ಲಿ-ಚುಟುಕುಗಳು, ಚೌಡೇಶ್ ಎಸ್- ಕವಿಸಮಯ, ಸಿರಾಜ್ ಬಿಸರಳ್ಳಿ- ಅಹಿಂಸಾವಾದ, ಮಹೇಶ ಬಳ್ಳಾರಿ- ಶಬ್ದ, ಶಿ.ಕಾ,ಬಡಿಗೇರ- ಚುಟುಕುಗಳು, ಶ್ರೀನಿವಾಸ ಚಿತ್ರಗಾರ-ಹೀಗೊಂದು ಭಿನ್ನಹ, ಜಿ.ಎಸ್.ಬಾರಕೇರ- ಮರಳಿ ಜನಿಸುವೆ, ವೀರಣ್ಣ ಹುರಕಡ್ಲಿ- ತಾಯಿ,ಹೆಸರು, ಜಡೆಯಪ್ಪ - ಚಿಂತೆಯಾಗಾಕತ್ತೈತಿ ನನಗ, ಅಲ್ಲಮಪ್ರಭು ಬೆಟ್ಟದೂರ- ಚುಟುಕುಗಳು, ರಾಜಶೇಖರ ಜುಕ್ತಿಮಠ ಹುಬ್ಬಳ್ಳಿ- ಧರ್ಮ ಅಂದು ಇಂದು, ಕಲ್ಲನಗೌಡ ಬೇವೂರ- ಇವರು ನಮ್ಮ ಶಕುನಿಗಳು, ವಾಸುದೇವ ಕುಲಕರ್ಣಿ- ಮಳೆಯೂ ಸುರಿಯಲಿ , ವಾಗೀಶ ಪಾಟೀಲ್ - ಅವಳು ಬದಲಾಗುತ್ತಿದ್ದಾಳೆ ಕವನಗಳನ್ನು ವಾಚನ ಮಾಡಿದರು.
ಕವನವಾಚನದ ನಂತರ ಕೊಪ್ಪಳದ ಪ್ರತಿಭಾವಂತ ಯುವಕವಿ ಮಹೇಶ ಬಳ್ಳಾರಿಯವರ ಕಗ್ಗತ್ತಲು ಕವನ ಸಂಕಲನದ ಕುರಿತು ಸಂವಾದ ನಡೆಯಿತು. ಸಿರಾಜ್ ಬಿಸರಳ್ಳಿ ಕವನ ಸಂಕಲನದ ಬಗ್ಗೆ ಮಾತನಾಡಿ ಹಸಿವು, ದಾರಿದ್ರ್ಯ, ನೋವು ಇವು ಎಲ್ಲರನ್ನೂ ಕಾಡುವ ಸಂಗತಿಗಳು ಬಳ್ಳಾರಿಯವರ ಕವನಗಳಲ್ಲಿ ಹಸಿದವರ ನೋವು ಎದ್ದು ಕಾಣುವಂತಿದೆ. ಅವರ ಹೋರಾಟದ ಕಿಚ್ಚಿನ ಕವನಗಳು ಗಮನ ಸೆಳೆಯುತ್ತವೆ, ಪ್ರಸ್ತುತ ಸಮಸ್ಯೆಗಳನ್ನು ಹೇಳುತ್ತಾ ಕೆಲವು ಕವನಗಳು ವಾಚ್ಯ ಎನಿಸುತ್ತವೆ ಎಂದು ಅಭಿಪ್ರಾಯ ಪಟ್ಟರೆ, ಶಿ.ಕಾ.ಬಡಿಗೇರ- ಈಗಾಗಲೇ ಈ ಕವನ ಸಂಕಲನದ ಬಗ್ಗೆ ವಿಮರ್ಶೆ ಬರೆದು ಪ್ರಕಟಿಸಿದ್ದೇನೆ. ಉತ್ತಮ ಕವನಗಳನ್ನು ರಚಿಸಿದ್ದಾರೆ ಎಂದರು. ಪುಷ್ಪಲತಾ ಏಳುಬಾವಿ ಮಾತನಾಡಿ- ಶೋಷಣೆಯ ವಿರುದ್ದದ ಕವನಗಳು ಬಹಳ ಗಮನ ಸೆಳೆಯುತ್ತವೆ ಎಂದರು. ಎನ್ .ಜಡೆಯಪ್ಪ ಮಾತನಾಡಿ- ಕೆಲವು ಕವನಗಳು ಓದುತ್ತಿದ್ದಾಗ ಇಷ್ಟು ಬೇಗ ಮುಗಿದು ಹೋಯಿತಲ್ಲ ಎನ್ನುವ ಭಾವನೆ ಕಾಡಿತ್ತು ಎಂಬ ಅನಿಸಿಕೆ ಹಂಚಿಕೊಂಡರು. ಚೌಡೇಶ್- ಬಳ್ಳಾರಿಯವರ ಕವನ ರಚನೆಯು ಯುವಕವಿಗಳಿಗೆ ಸ್ಪೂರ್ತಿ ದಾಯಕ ಎಂದರು. ಜಿ.ಎಸ್.ಬಾರಕೇರ ಸಂಕಲನದ ಎಲ್ಲ ಕವನಗಳು ತಮಗೆ ಮೆಚ್ಚುಗೆ ಯಾಗಿವೆ ಎಂದರು. ಮಹಾಂತೇಶ ಮಲ್ಲನಗೌಡರು ಮಹೇಶ ಬಳ್ಳಾರಿ ಪ್ರತಿಭಾವಂತ ಕವಿಯಾಗಿದ್ದು ಅವರ ಕವನಗಳು ಗಮನ ಸೆಳೆಯುತ್ತವೆ ಎಂದರು. ಶಾಂತದೇವಿ ಹಿರೇಮಠ ಮತ್ತು ವಿಠ್ಠಪ್ಪ ಗೋರಂಟ್ಲಿಯವರು ಮಹೇಶ ಬಳ್ಳಾರಿಯವರ ಕವನಗಳಲ್ಲಿ ಅವರ ತಂದೆ ಗವಿಸಿದ್ದ ಎನ್. ಬಳ್ಳಾರಿ ಕಾಣುತ್ತಾರೆ. ಅವರ ಭಾವನೆಗಳು ಇವರಲ್ಲಿ ಹರಿದು ಬಂದಿವೆ ಎನ್ನುವಂತಿವೆ ಎಂದು ಅಭಿಪ್ರಾಯ ಪಟ್ಟರು. ಅಲ್ಲಮಪ್ರಭು ಬೆಟ್ಟದೂರರು ತಂದೆಗಿಂತ ವಿಭಿನ್ನವಾದ ಶೈಲಿಯಲ್ಲಿ ಬರೆಯುವದನ್ನು ರೂಡಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು. ಕವಿ ಮಹೇಶ ಬಳ್ಳಾರಿ ತಮ್ಮ ಕವನಸಂಕಲನದ ಬಗ್ಗೆ ಮಾತನಾಡಿದ ಎಲ್ಲರಿಗೆ ವಂದಿಸಿ, ಅವಸರಲ್ಲಿ ಮಾಡಿದ್ದರಿಂದ ಮುಖಪುಟ ಬಾಲಿಶವಾಯಿತು. ತಮ್ಮ ಸಲಹೆ ಸೂಚನೆಗಳನ್ನು ಪಾಲಿಸಿ ಮುಂದಿನ ದಿನಗಳಲ್ಲಿ ಅವುಗಳನ್ನು ಕಾರ್‍ಯಗತಗೊಳಿಸುತ್ತೇನೆ ಎಂದರು. ಕಾರ್‍ಯಕ್ರಮದಲ್ಲಿ ಬಸವರಾಜ ಶೀಲವಂತರ, ಎಸ್.ಎ.ಗಫಾರ್,ಶಿವಾನಂದ ಹೊದ್ಲೂರ ಸೇರಿದಂತೆ ಆಸಕ್ತರು ಪಾಲ್ಗೊಂಡಿದ್ದರು.
ಶಿ.ಕಾ.ಬಡಿಗೇರ ಸ್ವಾಗತಿಸಿದರೆ, ಸಿರಾಜ್ ಬಿಸರಳ್ಳಿ ಕಾರ್‍ಯಕ್ರಮ ನಡೆಸಿಕೊಟ್ಟರು.
0 comments:
Post a Comment