ಕೊಪ್ಪಳ, ಜ.೦೨ (ಕ ವಾ) ಪ್ರವಾಸೋದ್ಯಮ ಇಲಾಖೆಯ ಜಿಲ್ಲಾ ಪ್ರವಾಸೋದ್ಯಮ ಸಮಿತಿ ಇವರ ವತಿಯಿಂದ ಪ್ರಸಕ್ತ ಸಾಲಿನ ಹಿಂದುಳಿದ ಹಾಗೂ ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದ ವಿದ್ಯಾವಂತ ನಿರುದ್ಯೋಗಿ ಅಭ್ಯರ್ಥಿಗಳಿಗೆ ಪ್ರವಾಸಿ ಟ್ಯಾಕ್ಸಿ ಯೋಜನೆಯಡಿ ಪ್ರವಾಸಿ ಟ್ಯಾಕ್ಸಿ ಖರೀದಿಸಲು ಸಹಾಯಧನ ನೀಡಲಾಗುತ್ತಿದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.ಯೋಜನೆಯಡಿ ಆಯ್ಕೆಗೊಳ್ಳುವ ಫಲಾನುಭವಿಗಳಿಗೆ ತಲಾ ೨ ಲಕ್ಷ ರೂ.ಗಳನ್ನು ಸಹಾಯಧನ ರೂಪದಲ್ಲಿ ನೀಡಲಾಗುತ್ತಿದ್ದು, ವಾಹನದ ಬೆಲೆಯ ಶೇಕಡಾ ೫ ರಷ್ಟು ಮೊತ್ತವನ್ನು ಆಯ್ಕೆಯಾದ ಫಲಾನುಭವಿಗಳು ಭರಿಸಬೇಕಾಗುತ್ತದೆ. ಅಲ್ಲದೇ, ಉಳಿದ ಮೊತ್ತವನ್ನು ರಾಷ್ಟ್ರೀಕೃತ ಅಥವಾ ವಾಣಿಜ್ಯ ಬ್ಯಾಂಕ್ ಮೂಲಕ ಸಾಲವನ್ನು ಫಲಾನುಭವಿಯೇ ಪಡೆದುಕೊಳ್ಳಬೇಕಾಗುತ್ತದೆ. ಜನಸಂಖ್ಯೆ ಹಾಗೂ ಪ್ರವಾಸಿ ತಾಣಗಳ ಸಂಖ್ಯೆಯನ್ನು ಮಾನದಂಡವಾಗಿಟ್ಟುಕೊಂಡು ಕೊಪ್ಪಳ ಜಿಲ್ಲೆಯ ಹಿಂದುಳಿದ ಹಾಗೂ ಅಲ್ಪಸಂಖ್ಯಾತ ವರ್ಗದವರಿಗೆ ೩೬ ಪ್ರವಾಸಿ ಟ್ಯಾಕ್ಸಿಗಳ ಗುರಿ ಹಂಚಿಕೆ ಮಾಡಲಾಗಿದೆ.ಅರ್ಜಿ ಸಲ್ಲಿಸಲಿಚ್ಛಿಸುವ ಅಭ್ಯರ್ಥಿಗಳು ಕಡ್ಡಾಯವಾಗಿ ಕೊಪ್ಪಳ ಜಿಲ್ಲೆಯವರಾಗಿರಬೇಕು. ೨೦ ರಿಂದ ೪೫ ವರ್ಷದೊಳಗಿನ ವಯೋಮಿತಿ ಹೊಂದಿರಬೇಕು. ಹಿಂದುಳಿದ ಹಾಗೂ ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದವರಾಗಿರಬೇಕು. ಕನಿಷ್ಟ ೧೦ನೇ ತರಗತಿ ಉತ್ತೀರ್ಣರಾಗಿರಬೇಕು. ಲಘು ವಾಹನ ಚಾಲನಾ ಪರವಾನಗಿ ಪಡೆದು ಕನಿಷ್ಟ ಒಂದು ವರ್ಷವಾಗಿರಬೇಕು ಮತ್ತು ಎಲ್.ಎಮ್.ವಿ ಬ್ಯಾಡ್ಜ್ ಕಡ್ಡಾಯವಾಗಿ ಹೊಂದಿರಬೇಕು, ಕುಟುಂಬದಲ್ಲಿ ಯಾರು ಸರ್ಕಾರಿ ಇಲಾಖೆಯಲ್ಲಿ ಅಥವಾ ನಿಗಮ ಮಂಡಳಿಗಳಲ್ಲಿ ನೌಕರಿಯಲ್ಲಿರಬಾರದು. ಅರ್ಜಿಯೊಂದಿಗೆ ಸಲ್ಲಿಸಲಾಗಿರುವ ವರಮಾನ ಪತ್ರದ ಪ್ರಕಾರ ಅರ್ಜಿಗಳನ್ನು ಕ್ರೋಢೀಕರಿಸಿ ಅತಿ ಕಡಿಮೆ ವರಮಾನ ಹೊಂದಿರುವ ಕಡು ಬಡವರನ್ನು ಆಯ್ಕೆ ಮಾಡಲಾಗುವುದು. ಒಂದು ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.ಅರ್ಜಿಗಳನ್ನು ಜ.೦೧ ರಿಂದ ಜ.೨೫ ರವರೆಗೆ ಜಿಲ್ಲಾಡಳಿತ ಭವನದಲ್ಲಿರುವ ಪ್ರವಾಸೋದ್ಯಮ ಇಲಾಖೆಯ ಕಾರ್ಯಾಲಯದಲ್ಲಿ ಹೆಸರನ್ನು ನಮೂದಿಸಿ, ೨೫ ರೂ. ಪಾವತಿಸಿ ಪಡೆಯಬಹುದಾಗಿದೆ. ಅರ್ಜಿಯನ್ನು ಖುದ್ದಾಗಿ ಅಭ್ಯರ್ಥಿಗಳು ಪಡೆದುಕೊಂಡು ದ್ವಿಪ್ರತಿಯಲ್ಲಿ ಭರ್ತಿ ಮಾಡಿ, ಅರ್ಜಿಯೊಂದಿಗೆ ಇತ್ತೀಚಿನ ೦೨ ಭಾವಚಿತ್ರ ಹಾಗೂ ಗೆಜೆಟೆಡ್ ಅಧಿಕಾರಿಗಳಿಂದ ಎಲ್ಲಾ ದಾಖಲಾತಿಗಳನ್ನು ದೃಢೀಕರಿಸಿ ಲಗತ್ತಿಸಿ, ಎ೪ ಗಾತ್ರದ ಲಕೋಟೆಯಲ್ಲಿ ಚೆಕ್ ಲಿಸ್ಟ್ ಪ್ರಕಾರ ತುಂಬಿ ಸೀಲು ಮಾಡಿದ ಲಕೋಟೆಯೊಂದಿಗೆ ಜ.೨೫ ರಿಂದ ೩೦ ರ ಸಂಜೆ ೦೪.೩೦ ರೊಳಗಾಗಿ ಸಲ್ಲಿಸಿ, ಸ್ವೀಕೃತಿ ಪಡೆಯಬಹುದಾಗಿದೆ.ಹೆಚ್ಚಿನ ಮಾಹಿತಿಗಾಗಿ ಪ್ರವಾಸೋದ್ಯಮ ಇಲಾಖೆ, ಕೊಪ್ಪಳ ಇವರ ಕಾರ್ಯಾಲಯವನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿ ಎಂ.ಕನಗವಲ್ಲಿ ಅವರು ತಿಳಿಸಿದ್ದಾರೆ.
ಭಾರಿ ವಾಹನ ಚಾಲನಾ ತರಬೇತಿ ಅರ್ಜಿ ಆಹ್ವಾನಕೊಪ್ಪಳ,
ಜ.೦೨ (ಕರ್ನಾಟಕ ವಾರ್ತೆ) ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ನಿಯಮಿತ ಇವರಿಂದ ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಪಂಗಡದ ನಿರುದ್ಯೋಗಿ ಯುವಕ, ಯುವತಿಯರಿಗೆ ಭಾರಿ ವಾಹನ ಚಾಲನಾ ತರಬೇತಿ ನೀಡಲಾಗುತ್ತಿದ್ದು ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.ಅರ್ಜಿ ಸಲ್ಲಿಸಲಿಚ್ಛಿಸುವವರು ಪರಿಶಿಷ್ಟ ಪಂಗಡದವರಾಗಿರಬೇಕು. ಕಳೆದ ೧೫ ವರ್ಷಗಳಿಂದ ಜಿಲ್ಲೆಯ ನಿವಾಸಿಯಾಗಿದ್ದು, ೨೧ ರಿಂದ ೪೦ ವರ್ಷದೊಳಗಿನ ವಯೋಮಿತಿ ಹೊಂದಿರಬೇಕು. ಎಲ್.ಎಂ.ವಿ ಪರವಾನಿಗೆ ಪಡೆದು ಕನಿಷ್ಟ ಒಂದು ವರ್ಷ ಪೂರ್ಣಗೊಂಡಿರಬೇಕು. ಒಂದು ವೇಳೆ ಟ್ರ್ಯಾಕ್ಟರ್ ಪರವಾನಿಗೆ ಇದ್ದಲ್ಲಿ ಪರವಾನಿಗೆ ಪಡೆದು ಎರಡು ವರ್ಷಗಳಾಗಿರಬೇಕು. ಎಸ್.ಎಸ್.ಎಲ್.ಸಿ ಉತ್ತೀರ್ಣ ಅಥವಾ ಅನುತ್ತೀರ್ಣ ಆಗಿರಬೇಕು. ಅರ್ಜಿಗಳನ್ನು ಅರ್ಜಿದಾರರೇ ಸ್ವತಃ ಬಂದು ತಮ್ಮ ವೈಯಕ್ತಿಕ ದಾಖಲೆಗಳಾದ ಪಡಿತರ ಚೀಟಿ, ಚುನಾವಣಾ ಗುರುತಿನ ಚೀಟಿ, ಆಧಾರ್ ಗುರುತಿನ ಚೀಟಿಗಳನ್ನು ಹಾಜರುಪಡಿಸಿ, ಅರ್ಜಿ ವಹಿಯಲ್ಲಿ ಸಹಿ ಮಾಡಿ, ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ. ಮದ್ಯವರ್ತಿಗಳಿಂದ ಪಡೆದ ಅರ್ಜಿಗಳನ್ನು ತಿರಸ್ಕರಿಸಲಾಗುವುದು. ಅಗತ್ಯ ದಾಖಲಾತಿಗಳೊಂದಿಗೆ ಭರ್ತಿ ಮಾಡಿದ ಅರ್ಜಿಗಳನ್ನು ಜ.೨೦ ರೊಳಗಾಗಿ ಸಲ್ಲಿಸಬಹುದಾಗಿದ್ದು, ಅವಧಿ ಮೀರಿ ಬಂದಂತಹ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವ್ಯವಸ್ಥಾಪಕರು, ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ, ಕೊಠಡಿ ಸಂಖ್ಯೆ: ೧೦೯, ಜಿಲ್ಲಾಡಳಿತ ಭವನ, ಕೊಪ್ಪಳ ದೂರವಾಣಿ ಸಂಖ್ಯೆ: ೦೮೫೩೯-೨೨೧೧೭೬ ನ್ನು ಸಂಪರ್ಕಿಸಬಹುದಾಗಿದೆ ಎಂದು ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ನಿಯಮಿತದ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.
0 comments:
Post a Comment