ಸಾರ್ವಜನಿಕರಿಗೆ ವಿವಿಧ ಇಲಾಖೆಗಳ ಮೂಲಕ ನೀಡುವ ಸೇವೆಯನ್ನು ಸಮರ್ಪಕವಾಗಿ ಕಾಲಮಿತಿಯಲ್ಲಿ ಒದಗಿಸಲು ಸಕಾಲ ಯೋಜನೆಯನ್ನು ಜಾರಿಗೆ ತರಲಾಗಿದ್ದು, ಹಲವು ಇಲಾಖೆಗಳು ಯೋಜನೆಯಲ್ಲಿ ನಿರ್ಲಕ್ಷ್ಯ ವಹಿಸುವುದು ಕಂಡುಬಂದಿದ್ದು, ಅಂತಹ ಅಧಿಕಾರಿ, ಸಿಬ್ಬಂದಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವರು ಎಚ್ಚರಿಕೆ ನೀಡಿದರು.
ಸಕಾಲ ಯೋಜನೆಯ ಅನುಷ್ಠಾನದಲ್ಲಿನ ಪ್ರಗತಿ ಪರಿಶೀಲನೆಗಾಗಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಾರ್ವಜನಿಕರಿಗೆ ನಿಗದಿತ ಕಾಲಮಿತಿಯಲ್ಲಿ ಸರ್ಕಾರಿ ಸೇವೆಗಳನ್ನು ಒದಗಿಸುವ ಸಲುವಾಗಿ ಸರ್ಕಾರ ‘ಸಕಾಲ’ ಯೋಜನೆಯನ್ನು ಜಾರಿಗೊಳಿಸಿದೆ. ಇದು ಕೇವಲ ಯೋಜನೆ ಮಾತ್ರವಲ್ಲದೆ, ಕಾಯ್ದೆಯೂ ಆಗಿರುವುದರಿಂದ, ನಿರ್ಲಕ್ಷ್ಯ ವಹಿಸುವವರಿಗೆ ಕಠಿಣ ಕ್ರಮ ಜರುಗಿಸಲು ಕಾಯ್ದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಹಲವು ಇಲಾಖೆಗಳು ತಮ್ಮ ಕಚೇರಿಗೆ ಬರುವ ಅರ್ಜಿಗಳನ್ನು ಸಕಾಲ ಯೋಜನೆಯಡಿ ಸ್ವೀಕರಿಸದೆ, ಬೈಪಾಸ್ ಪದ್ಧತಿ ಅಂದರೆ ಸಕಾಲದಲ್ಲಿ ನೋಂದಣಿ ಮಾಡದೆ ಸ್ವೀಕರಿಸುವುದು ಹಾಗೂ ವಿಲೇವಾರಿ ಮಾಡುತ್ತಿರುವ ಬಗ್ಗೆ ವರದಿಯಾಗಿದೆ. ತಹಸಿಲ್ದಾರರ ಕಚೇರಿಯಲ್ಲಿ ಮುಟೇಷನ್, ಜಾತಿ, ಆದಾಯ ಪ್ರಮಾಣಪತ್ರ, ಮಾಸಾಶನ ಮಂಜೂರು ಹೀಗೆ ವಿವಿಧ ಸೇವೆಗಳ ಅರ್ಜಿಗಳನ್ನು ಸಮರ್ಪಕವಾಗಿ ಯೋಜನೆಯಡಿ ಸ್ವೀಕರಿಸದೇ ಇರುವುದರಿಂದ, ಯೋಜನೆಗೆ ತೀವ್ರ ಹಿನ್ನಡೆಯಾಗುತ್ತಿದೆ. ನಿಗದಿತ ಕಾಲಮಿತಿಯ ವಿಳಂಬಕ್ಕೆ ವಿಧಿಸಲಾಗುವ ಶಿಸ್ತುಕ್ರಮವನ್ನು ತಪ್ಪಿಸಿಕೊಳ್ಳಲು, ಬಹಳಷ್ಟು ಇಲಾಖೆಗಳು ಈ ಪದ್ಧತಿಯನ್ನು ಅನುಸರಿಸುತ್ತಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಲಾಗುವುದು. ಯೋಜನೆ ಜಾರಿಯಾದಾಗಿನಿಂದ ಈವರೆಗೆ ವಿವಿಧ ಇಲಾಖೆಗಳಿಂದ ಒಟ್ಟು 12,76,844 ಅರ್ಜಿಗಳು ಸಕಾಲ ಯೋಜನೆಯಡಿ ಸ್ವೀಕೃತಗೊಂಡು, 12,59,903 ಅರ್ಜಿಗಳು ವಿಲೇವಾರಿಯಾಗಿವೆ. ರಾಜ್ಯಮಟ್ಟದಲ್ಲಿ ಜಿಲ್ಲೆಯನ್ನು ಹೋಲಿಸಿದಾಗ ಈ ಸಂಖ್ಯೆ ಕಡಿಮೆ ಇದ್ದು, ಜಿಲ್ಲೆಯ ಸ್ಥಾನಮಾನ ಕೆಳಮಟ್ಟದಲ್ಲಿದೆ. ಸರ್ವೆ ಇಲಾಖೆಗೆ ಸಂಬಂಧಿಸಿದಂತೆ ಬಹಳಷ್ಟು ಅರ್ಜಿಗಳು ಅನಗತ್ಯ ವಿಳಂಬವಾಗುತ್ತಿರುವುದು ಕಂಡುಬಂದಿದ್ದು, ಅಧಿಕಾರಿ, ಸಿಬ್ಬಂದಿಗಳ ನಿರ್ಲಕ್ಷ್ಯದಿಂದ, ಸಾರ್ವಜನಿಕರಿಗೆ ತೊಂದರೆಯಾಗುವುದು ಸರಿಯಲ್ಲ. ಕರ್ತವ್ಯ ನಿರ್ಲಕ್ಷ್ಯ ತೋರಿರುವ ಗಂಗಾವತಿ ತಾಲೂಕಿನ ಸರ್ವೆ ಇಲಾಖೆ ಸೂಪರ್‍ವೈಸರ್ ಡಿ. ಬಡಿಗೇರ್ ಅವರನ್ನು ಕೂಡಲೆ ಅಮಾನತುಗೊಳಿಸಲು ಕಡತ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಖಾತೆ ತೆರೆಯದ ಗ್ರಾ.ಪಂ.ಗಳು : ಸಕಾಲ ಯೋಜನೆಯನ್ನು ಅನುಷ್ಠಾನಗೊಳಿಸುವಲ್ಲಿ ಹಲವು ಗ್ರಾಮ ಪಂಚಾಯತಿಗಳು ಸಾಕಷ್ಟು ನಿರ್ಲಕ್ಷ್ಯ ವಹಿಸುತ್ತಿರುವುದು ಕಂಡುಬಂದಿದ್ದು, ಎಲ್ಲೆಡೆ ಬೈಪಾಸ್ ಪದ್ಧತಿಯಲ್ಲಿ ಅರ್ಜಿಗಳು ಸ್ವೀಕೃತಿ ಹಾಗೂ ವಿಲೇವಾರಿ ಮಾಡುತ್ತಿರುವುದು ಸಾಮಾನ್ಯವಾಗಿದೆ. ಕುಷ್ಟಗಿ ತಾಲೂಕಿನ ಕಬ್ಬರಗಿ, ಯರಗೇರಾ, ಕಂದಕೂರ, ಸಂಗನಾಳ ಗ್ರಾಮ ಪಂಚಾಯತಿಗಳು ಯೋಜನೆ ಜಾರಿಯಾದಾಗಿನಿಂದ ಈವರೆಗೂ, ಯಾವುದೇ ಅರ್ಜಿಯನ್ನು ಸಕಾಲ ಅಡಿ ಅರ್ಜಿಯನ್ನು ಸ್ವೀಕರಿಸಿಯೇ ಇಲ್ಲ, ಅಂದರೆ ಇದುವರೆಗೂ ಖಾತೆಯನ್ನೆ ತೆರೆದಿಲ್ಲ. ಇನ್ನು 35 ಗ್ರಾಮ ಪಂಚಾಯತಿಗಳು ಇದುವರೆಗೂ ಕೇವಲ 10 ಕ್ಕಿಂತ ಕಡಿಮೆ ಸಂಖ್ಯೆಯ ಅರ್ಜಿಗಳನ್ನು ಸಕಾಲ ಅಡಿ ವಿಲೇವಾರಿ ಮಾಡಿವೆ. ಸಕಾಲ ಯೋಜನೆಯ ಅನುಷ್ಠಾನದಲ್ಲಿ ನಿರ್ಲಕ್ಷ್ಯ ವಹಿಸುತ್ತಿರುವುದನ್ನು ಸಹಿಸಲು ಸಾಧ್ಯವಿಲ್ಲ. ಇದಕ್ಕೆ ಕಾರಣರಾಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಜಿಲ್ಲಾ ಪಂಚಾಯತಿಯ ಉಪಕಾರ್ಯದರ್ಶಿಗಳಿಗೆ ಸೂಚನೆ ನೀಡಿದರು.
ವಿವಿಧ ಇಲಾಖೆಗಳು ಹಿಂದೆ : ಸಕಾಲ ಯೋಜನೆಯಡಿ ರೇಷ್ಮೆ, ಆಯುಷ್, ಲೋಕೋಪಯೋಗಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಮೀನುಗಾರಿಗೆ ಮುಂತಾದ ಇಲಾಖೆಗಳಲ್ಲಿ ಅತ್ಯಂತ ಕಡಿಮೆ ಅರ್ಜಿಗಳು ಸ್ವೀಕೃತವಾಗಿ, ವಿಲೇವಾರಿಯಾಗುತ್ತಿವೆ. ಆರೋಗ್ಯ ಇಲಾಖೆಯಲ್ಲಿ ಕೊಪ್ಪಳದಲ್ಲಿ ಮಾತ್ರ ಯೋಜನೆ ಸಮರ್ಪಕವಾಗಿ ಅನುಷ್ಠಾನವಾಗುತ್ತಿದ್ದು, ಉಳಿದಂತೆ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರಗಳು ಸಾರ್ವಜನಿಕರಿಗೆ ನೀಡುವ ವಿವಿಧ ಸೌಲಭ್ಯಗಳನ್ನು ಈ ಯೋಜನೆಯಡಿ ಒದಗಿಸುತ್ತಿಲ್ಲ. ಅದೇ ರೀತಿ ಪೊಲೀಸ್ ಇಲಾಖೆಗೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಮಾತ್ರ ಅರ್ಜಿಗಳು ಸಲ್ಲಿಕೆಯಾಗುತ್ತಿದ್ದು, ಉಳಿದ ತಾಲೂಕುಗಳಲ್ಲಿನ ಠಾಣೆಗಳಲ್ಲಿ ಸಮರ್ಪಕ ಅನುಷ್ಠಾನವಾಗುತ್ತಿಲ್ಲ ಎಂದು ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಅಧಿಕಾರಿ, ಸಿಬ್ಬಂದಿಗಳು ಸಕಾಲ ಸೇವೆಯಲ್ಲಿನ ಸೌಲಭ್ಯಗಳನ್ನು ಸಮರ್ಪಕವಾಗಿ ಸಾರ್ವಜನಿಕರಿಗೆ ತಲುಪಿಸಬೇಕು. ಬರುವ ದಿನಗಳಲ್ಲಿ ಸಮರ್ಪಕವಾಗಿ ಕಾರ್ಯ ನಿರ್ವಹಿಸದಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಹಿಂದೇಟು ಹಾಕುವುದಿಲ್ಲ ಎಂಬುದಾಗಿ ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವರು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಅಪರ ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ್, ಉಪವಿಭಾಗಾಧಿಕಾರಿ ಪಿ.ಎಸ್. ಮಂಜುನಾಥ್, ಜಿ.ಪಂ. ಉಪಕಾರ್ಯದರ್ಶಿ ಎನ್.ಕೆ. ತೊರವಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲೂಕುಗಳ ತಹಸಿಲ್ದಾರರು ತಾಲೂಕಾ ಪಂಚಾಯತಿಗಳ ಕಾರ್ಯನಿರ್ವಾಹಕ ಅಧಿಕಾರಿಗಳು, ನಗರಸಭೆ, ಪುರಸಭೆಗಳ ಮುಖ್ಯಾಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡು, ಇಲಾಖೆಗಳ ಕುರಿತು ವಿವರಗಳನ್ನು ಸಭೆಗೆ ನೀಡಿದರು.
0 comments:
Post a Comment