ಕೊಪ್ಪಳ ನಗರವೂ ಸೇರಿದಂತೆ ಜಿಲ್ಲೆಯ ಯಾವುದೇ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಬೇಸಿಗೆ ಸಂದರ್ಭದಲ್ಲಿ ಕುಡಿಯುವ ನೀರಿನ ತೊಂದರೆಯಾಗದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ರಾಜ್ಯ ನಗರಾಭಿವೃದ್ಧಿ ಸಚಿವ ವಿನಯಕುಮಾರ್ ಸೊರಕೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.


ಕೊಪ್ಪಳ ಹಾಗೂ ಗಂಗಾವತಿ ನಗರಸಭೆಯಲ್ಲಿ ಒಳಚರಂಡಿ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದ್ದು, ನಾನಾ ಕಾರಣಗಳಿಂದ ಕಾಮಗಾರಿ ಪೂರ್ಣಗೊಳಿಸುವ ಕಾಲಮಿತಿಯನ್ನು ಪದೇ ಪದೇ ವಿಸ್ತರಿಸಲಾಗುತ್ತಿರುವುದು ಕಂಡುಬಂದಿದೆ. ಅರೆಬರೆ ಕಾಮಗಾರಿಯಿಂದಾಗಿ ನಗರವಾಸಿಗಳು ತೀವ್ರ ತೊಂದರೆ ಎದುರಿಸುತ್ತಿದ್ದಾರೆ. ರಾಜ್ಯಾದ್ಯಂತ ಇಂತಹದೇ ಸಮಸ್ಯೆ ಎದುರಿಸಲಾಗುತ್ತಿದ್ದು, ಈ ಕುರಿತು ಪರಿಶೀಲಿಸಿ, ಸೂಕ್ತ ನಿರ್ಧಾರ ಕೈಗೊಳ್ಳುವ ಸಲುವಾಗಿ ಐಎಎಸ್ ಅಧಿಕಾರಿ ಪೊನ್ನುರಾಜ್ ಅವರನ್ನು ನೇಮಿಸಲಾಗಿದೆ. ವಿವಿಧ ಜಿಲ್ಲೆಗಳಿಗೆ ಭೇಟಿ ನೀಡಿ, ಅವರು ಪರಿಶೀಲಿಸುತ್ತಿದ್ದು, ಕೊಪ್ಪಳ ಜಿಲ್ಲೆಗೂ ಶೀಘ್ರ ಭೇಟಿ ನೀಡಿ, ಅವರು ಪರಿಶೀಲನೆ ನಡೆಸಲಿದ್ದಾರೆ ಎಂದು ಸಚಿವರು ಹೇಳಿದರು.
ತೆರಿಗೆ ಸಂಗ್ರಹದಲ್ಲಿ ಜಿಲ್ಲೆಯ ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯತಿಗಳು ಬಹಳಷ್ಟು ಹಿಂದೆ ಉಳಿದಿವೆ. ತೆರಿಗೆ ಸಂಗ್ರಹದಲ್ಲಿ ಪ್ರಗತಿ ಸಾಧಿಸದಿದ್ದರೆ, ಸ್ಥಳೀಯ ಸಂಸ್ಥೆಗಳು ಸಂಕಷ್ಟಕ್ಕೆ ಸಿಲುಕಲಿವೆ. ಇನ್ನಾದರೂ ತೆರಿಗೆ ಸಂಗ್ರಹದಲ್ಲಿ ಹೆಚ್ಚಿನ ಪ್ರಗತಿ ಸಾಧಿಸುವಂತೆ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.
ಕೊಪ್ಪಳ ಜಿಲ್ಲೆಯ ನಗರ ಮತ್ತು ಪಟ್ಟಣಗಳಲ್ಲಿ ಜಾರಿಗೊಳಿಸಲಾಗಿರುವ ಎರಡು ಹಂತಗಳ ನಗರೋತ್ಥಾನ ಯೋಜನೆ ಕಾಮಗಾರಿಗಳೂ ಸಹ ನಿರೀಕ್ಷಿತ ಮಟ್ಟದಲ್ಲಿ ಆಗುತ್ತಿಲ್ಲ. ಕೊಪ್ಪಳ ನಗರದಲ್ಲಿ ೨೧೯ ಕಾಮಗಾರಿಗಳ ಪೈಕಿ ೧೪೦ ಕಾಮಗಾರಿಗಳು ಪೂರ್ಣಗೊಂಡಿವೆ. ಗಂಗಾವತಿಯಲ್ಲಿ ೨೩೭ ಕಾಮಗಾರಿಗಳ ಪೈಕಿ ೧೩೩, ಕುಷ್ಟಗಿಯಲ್ಲಿ ೪೬ ಕಾಮಗಾರಿಗಳ ಪೈಕಿ ೨೯, ಯಲಬುರ್ಗಾದಲ್ಲಿ ೩೭ ಕಾಮಗಾರಿಗಳ ಪೈಕಿ ೧೬ ಮಾತ್ರ ಪೂರ್ಣಗೊಂಡಿವೆ. ನಗರೋತ್ಥಾನ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸದಿದ್ದಲ್ಲಿ, ಮೂರನೆ ಹಂತದ ನಗರೋತ್ಥಾನ ಯೋಜನೆಗೆ ಅನುದಾನ ಬಿಡುಗಡೆ ಮಾಡಲು ಸಾಧ್ಯವಾಗುವುದಿಲ್ಲ. ಈ ನಿಟ್ಟಿನಲ್ಲಿ ಶೀಘ್ರ ಕಾಮಗಾರಿಗಳನ್ನು ಪೂರ್ಣಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಪಾಲ್ಗೊಂಡಿದ್ದ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಮಾತನಾಡಿ, ನಗರಸಭೆ, ಪುರಸಭೆಗಳೂ ಸೇರಿದಂತೆ ಇತ್ತೀಚೆಗೆ ಮೇಲ್ದರ್ಜೆಗೇರಿಸಲಾಗಿರುವ ಪುರಸಭೆ ಮತ್ತು ಪಟ್ಟಣ ಪಂಚಾಯತಿಗಳಲ್ಲಿ ಇಂಜಿನಿಯರ್‌ಗಳು ಇಲ್ಲದಿರುವುದರಿಂದ, ಯೋಜನೆಗಳ ಅನುಷ್ಠಾನದಲ್ಲಿ ತೀವ್ರ ತೊಂದರೆಯಾಗುತ್ತಿದೆ. ಸದ್ಯ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತಿ ರಾಜ್ ಇಲಾಖೆಗಳ ಜೂನಿಯರ್ ಇಂಜಿನಿರ್‌ಗಳನ್ನು ನಿಯೋಜನೆ ಮೇಲೆ ವಾರದಲ್ಲಿ ಒಮ್ಮೆ ಪಟ್ಟಣ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸಲು ಸೂಚನೆ ನೀಡಲಾಗಿದೆ. ಕನಿಷ್ಟ ಪಕ್ಷ ಹೊರಗುತ್ತಿಗೆ ಆಧಾರದಲ್ಲಿ ಇಂಜಿನಿಯರ್‌ಗಳನ್ನು ನೇಮಿಸಲು ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಿದಲ್ಲಿ, ಯೋಜನೆಗಳ ತ್ವರಿತ ಅನುಷ್ಠಾನಕ್ಕೆ ಸಹಕಾರಿಯಾಗಲಿದೆ ಎಂದು ಸಚಿವರಲ್ಲಿ ಮನವಿ ಮಾಡಿಕೊಂಡರು.
ಸಭೆಯಲ್ಲಿ ಸಂಸದೀಯ ಕಾರ್ಯದರ್ಶಿ ಡಾ. ಮಕ್ಬೂಲ್ ಭಾಗವಾನ್, ಕೊಪ್ಪಳ ನಗರಸಭೆ ಅಧ್ಯಕ್ಷ ಮಹೇಂದ್ರ ಛೋಪ್ರ, ನಗರ ನೀರು ಸರಬರಾಜು ಮಂಡಳಿ ಮುಖ್ಯ ಅಭಿಯಂತರ ಕೃಷ್ಣಮೂರ್ತಿ, ಕೊಪ್ಪಳ ನಗರಸಭೆ ಪೌರಾಯುಕ್ತ ರಮೇಶ್ ಪಟ್ಟೇದಾರ, ಗಂಗಾವತಿ ನಗರಸಭೆ ಪೌರಾಯುಕ್ತ ರಂಗಸ್ವಾಮಿ ಸೇರಿದಂತೆ ಪುರಸಭೆ, ಪಟ್ಟಣ ಪಂಚಾಯತಿಗಳ ಮುಖ್ಯಾಧಿಕಾರಿಗಳು ಉಪಸ್ಥಿತರಿದ್ದರು.
0 comments:
Post a Comment
Click to see the code!
To insert emoticon you must added at least one space before the code.