ಕೊಪ್ಪಳ ಜಿಲ್ಲೆ ಕಲೆ, ಸಾಹಿತ್ಯ, ಸಂಸ್ಕೃತಿ ಕ್ಷೇತ್ರದಲ್ಲಿ ಶ್ರೀಮಂತ ಜಿಲ್ಲೆ ಎಂಬುದನ್ನು ಮನದಟ್ಟಾಗಿಸಿಕೊಳ್ಳುವ ಸದಾವಕಾಶ ಒದಗಿಬಂದದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಗರದ ಸಾಹಿತ್ಯ ಭವನದಲ್ಲಿ ಆಯೋಜಿಸಿದ್ದ ’ಜನಪರ ಉತ್ಸವ’ ಕಾರ್ಯಕ್ರಮದಲ್ಲಿ ಎಂದರೆ ತಪ್ಪಾಗಲಿಕ್ಕಿಲ್ಲ.

ನಾಡಿನ ಸಾಂಸ್ಕೃತಿಕ ಹಿರಿಮೆಯಲ್ಲಿ ವಿಶಿಷ್ಟ ಪಾತ್ರ ಹೊಂದಿರುವ ಜಿಲ್ಲೆಯ ಸಂಸ್ಕೃತಿಯ ಜಾನಪದ ಸಂಭ್ರಮದ ಜನಪರ ಉತ್ಸವದಲ್ಲಿ ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿದ್ದ ದಲಿತ ವರ್ಗದ ಅನೇಕ ಕಲಾವಿದರು ಅಪ್ಪಟ ಗ್ರಾಮೀಣ ಸೊಗಡಿನ ಅಪರೂಪದ ಕಲಾಪ್ರಕಾರಗಳನ್ನು ನಗರದ ಸಾಹಿತ್ಯ ಭವನದಲ್ಲಿ ಏರ್ಪಡಿಸಿದ ’ಜನಪರ ಉತ್ಸವ’ದಲ್ಲಿ ಅನಾವರಣಗೊಳಿಸಿದರು.
ಕೊಪ್ಪಳ ತಾಲೂಕಿನ ಹೈದರನಗರ ಗ್ರಾಮದ ಮಂಜುಳಾ ಮತ್ತು ತಂಡ ನಡೆಸಿಕೊಟ್ಟ ಲಂಬಾಣಿ ನೃತ್ಯ ಪ್ರೇಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಯಿತು. ಖ್ಯಾತ ತತ್ವಪದ ಗಾಯಕ ಮಾರೆಪ್ಪ ಮಾರೆಪ್ಪ ದಾಸರ್ ಅವರ ತತ್ವಪದಗಳಿಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು. ರಾಜ್ಯೋತ್ಸವ ಪ್ರಶಸ್ತಿ ವಿಜೇತೆ ಭೀಮವ್ವ ಶಿಳ್ಳೆಕ್ಯಾತರ್ ಅವರು ರಾಮಾಯಣ ಕುರಿತು ತೊಗಲುಗೊಂಬೆಯಾಟ ನಡೆಸಿಕೊಟ್ಟರು. ಇದಕ್ಕೂ ಪೂರ್ವದಲ್ಲಿ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ನಗರಸಭೆ ಉಪಾಧ್ಯಕ್ಷ ಬಾಳಪ್ಪ ಬಾರಕೇರ ಅವರು, ದಲಿತ ವರ್ಗದಲ್ಲಿ ಹಲವಾರು ಪ್ರತಿಭಾವಂತ ಕಲಾವಿದರಿದ್ದು, ಅಂತಹ ಕಲಾವಿದರಿಗೆ ಸೂಕ್ತ ವೇದಿಕೆ ಕಲ್ಪಿಸಿಕೊಟ್ಟು, ಉತ್ತೇಜನ ನೀಡುವ ಕಾರ್ಯ ಆಗಬೇಕು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಈ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಅವರು ಮಾತನಾಡಿ, ಜಿಲ್ಲೆ ಶೈಕ್ಷಣಿಕವಾಗಿ ಹಿಂದುಳಿದಿದ್ದರೂ, ಕಲೆ, ಸಂಸ್ಕೃತಿಯಲ್ಲಿ ಶ್ರೀಮಂತಿಕೆಯನ್ನು ಪಡೆದಿದೆ. ಗ್ರಾಮೀಣ ಸೊಗಡಿನ ಜಾನಪದ ಕಲೆಗಳು ಮಾಯವಾಗುತ್ತಿವೆ. ಮಾಧ್ಯಮಗಳು ಜಿಲ್ಲೆಯ ಪ್ರತಿಭಾವಂತ ಕಲಾವಿದರ ಬಗ್ಗೆ ವ್ಯಾಪಕ ಪ್ರಚಾರ ನೀಡಬೇಕು ಎಂದು ಮನವಿ ಮಾಡಿದರು. ಸಿದ್ದಲಿಂಗಪ್ಪ ಕೊಟ್ನೆಕಲ್ ಮಾತನಾಡಿ ಟಿವಿ ಹಾಗೂ ಇಂಟರ್‌ನೆಟ್ ಮಾಧ್ಯಮಗಳು ಜನಪ್ರಿಯತೆ ಪಡೆಯುತ್ತಿರುವ ಇಂದಿನ ದಿನಗಳಲ್ಲಿ ಜಾನಪದ ಕಲೆಗಳು ನೇಪಥ್ಯಕ್ಕೆ ಸರಿಯುತ್ತಿದ್ದು, ಮುಂದಿನ ಪೀಳಿಗೆಗೆ ಇಂತಹ ಕಲೆಗಳನ್ನು ಉಳಿಸುವ ಕಾರ್ಯ ಆಗಬೇಕಿದೆ ಎಂದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರಪ್ಪ ಚೋರನೂರ ಸ್ವಾಗತಿಸಿ, ಪ್ರಾಸ್ತಾವಿಕ ಭಾಷಣ ಮಾಡಿದರು. ಶಿವಾನಂದ ಹೊದ್ಲೂರ, ಸದಾಶಿವ ಪಾಟೀಲ, ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಎಸ್. ಶಿಂಧಾ ಮುಂತಾದವರು ಉಪಸ್ಥಿತರಿದ್ದರು. ಸಿ.ವಿ. ಜಡಿಯವರ್ ಕಾರ್ಯಕ್ರಮ ನಿರೂಪಿಸಿದರು.
ಜನಪರ ಉತ್ಸವದ ಅಂಗವಾಗಿ ಹನುಮಂತರಾವ್ ಮುಧೋಳ್ ಅವರಿಂದ ಕೊಳಲುವಾದನ, ಶಂಕರ ಬಿನ್ನಾಳರಿಂದ ಹಾರ್ಮೋನಿಯಂ ಸೋಲೋ, ಬಸವರಾಜ ಮಾಲಗತ್ತಿ ತಂಡದಿಂದ ನೃತ್ಯ, ಮಾರುತಿ ಬಿನ್ನಾಳರಿಂದ ಸುಗಮ ಸಂಗೀತ, ಗಾಳೆಪ್ಪ ಹೊರತಟ್ನಾಳ ತಂಡದಿಂದ ಜಾನಪದ ಗೀತೆಗಳು, ಗೌಡೇಶ ಪವಾರ ಅವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಗಾಯನ, ರೇಣುಕಾ ಹನುವಾಳ ರಿಂದ ಭರತನಾಟ್ಯ, ಹನುಮವ್ವ ತಂಡದಿಂದ ಸಂಪ್ರದಾಯ ಪದಗಳು, ಸುಮಿತ್ರಾ ತಂಡದಿಂದ ಗೀಗೀಪದ, ಮಂಜುಳಾ ಪೂಜಾರ ಅವರಿಂದ ಭಾವಗೀತೆ ಕಾರ್ಯಕ್ರಮಗಳು ನೋಡುಗರ ಮನ ಸೂರೆಗೊಂಡವು.
0 comments:
Post a Comment
Click to see the code!
To insert emoticon you must added at least one space before the code.