ಅದು ಸ್ವಾತಂತ್ರ್ಯಪೂರ್ವದ ಕಾಲಘಟ್ಟ. ಸಿಂಗನೂರು ಎಂಬ ಕುಗ್ರಾಮ. ರೈಲು ಬಂದಾಗ ಮಾತ್ರ ಅಲ್ಲಿನ ಜನರಿಗೆ ನೀರು. ಅಲ್ಲಿಗೆ ಕಲೆಕ್ಟರ್ ಆಗಿ ಬರುವ ಲಿಂಗೇಶ್ವರ (ರಜಿನಿಕಾಂತ), ಊರಿಗೆ ಕಾಲಿಡುತ್ತಲೇ ಅಲ್ಲಿರುವ ರೈತರ ಬವಣೆ, ಕಣ್ಣೆದುರಿಗೆ ನಡೆಯುವ ಕುಟುಂಬವೊಂದರ ಆತ್ಮಹತ್ಯೆ ಜನ ಎದುರಿಸುತ್ತಿರುವ ಸಮಸ್ಯೆಗಳನ್ನು ಅರ್ಥವಾಗುವಂತೆ ಮಾಡುತ್ತವೆ.
ಸಿಂಗನೂರು ನದಿಗೆ ಅಣೆಕಟ್ಟು ನಿರ್ಮಾಣವೊಂದೇ ಪರಿಹಾರ ಎಂದು ಅರಿಯುವ ಕಲೆಕ್ಟರ್ ಬ್ರಿಟಿಷ್ ಸರಕಾರದ ಕಲೆಕ್ಟರ್‌ಗಳ ಸಭೆಯಲ್ಲಿ ಸಮಸ್ಯೆಯನ್ನು ವಿವರಿಸಿದರೂ, ಭಾರತದ ಪ್ರದೇಶವೊಂದರಲ್ಲಿ ಅಣೆಕಟ್ಟು ಕಟ್ಟುವುದಕ್ಕೆ ಬ್ರಿಟಿಷ್ ಸರಕಾರ, ಬ್ರಿಟಿಷ್ ಮೂಲದ ಅಧಿಕಾರಿಗಳು ವಿರೋಧಿಸುತ್ತಾರೆ. ಮಾತ್ರವಲ್ಲ, ಈ ಪ್ರಸ್ತಾವನೆಯನ್ನು ಕೈ ಬಿಡದಿದ್ದರೆ ಕಲೆಕ್ಟರ್ ಹುದ್ದೆಯಿಂದ ವಜಾಗೊಳಿಸುವ ಬೆದರಿಕೆಯನ್ನೂ ಹಾಕುತ್ತಾರೆ. ಬ್ರಿಟಿಷ್ ಅಧಿಕಾರಿಗಳ ಬೆದರಿಕೆಗೆ ಮಣಿಯದ ಲಿಂಗೇಶ್ವರ ಕಲೆಕ್ಟರ್ ಕೆಲಸಕ್ಕೆ ರಾಜಿನಾಮೆ ನೀಡಿ, ತಾನು ಎಣಿಸಿದಂತೆ ಜನರ ಸಹಕಾರದಿಂದ ಸಿಂಗನೂರಿಗೆ ಅಣೆಕಟ್ಟು ನಿರ್ಮಿಸುತ್ತಾನೆ.

ಇದು ಲಿಂಗೇಶ್ವರನ ಕಥೆಯಾದರೆ ಚಿತ್ರದಲ್ಲಿ ಬರುವ ಮತ್ತೊಬ್ಬ ಲಿಂಗ (ರಜನಿಕಾಂತ)ನ ಕಥೆಯೂ ಇದೆ. ಈ ಲಿಂಗ ಕಾಮಿಡಿಗೆ, ಸ್ಟಂಟ್‌ಗೆ ಹಾಗೂ ಕಳ್ಳತನಕ್ಕೆ ಮೀಸಲು. ಚಿತ್ರದ ಆರಂಭ ಹಾಗೂ ಅಂತ್ಯದಲ್ಲಿ ಸೂಪರ್‌ಸ್ಟಾರ್‌ನ ತರಹೇವಾರಿ ಸ್ಟೈಲ್‌ಗಳನ್ನು ಕಣ್ತುಂಬಿಕೊಳ್ಳಬಹುದು. ಲಿಂಗೇಶ್ವರನ ಮೊಮ್ಮಗನಾಗಿರುವ ಲಿಂಗ ತಾತನ ತದ್ರೂಪು. ಹಾಗಾಗಿ ಮೀಡಿಯಾವೊಂದರಲ್ಲಿ ಕೆಲಸ ಮಾಡುವ ನಾಯಕಿ, ಲಿಂಗನನ್ನು ಸಿಂಗನೂರಿಗೆ ಕರೆದೊಯ್ಯುತ್ತಾಳೆ. ದುಷ್ಟರು ಅಣೆಕಟ್ಟನ್ನು ಒಡೆಯಲು ರೂಪಿಸಿರುವ ಸಂಚನ್ನು ನುಚ್ಚುನೂರು ಮಾಡಲು ಸಹಾಯವಾಗುತ್ತಾಳೆ. ಕೊನೆಗೆ ಎಲ್ಲವೂ ಸುಖಾಂತ್ಯ.
ರಜನಿ ತಮ್ಮ ವಯಸ್ಸಿಗೆ ತಕ್ಕ ಪಾತ್ರ ಮಾಡಿದ್ದಾರೆ. ನಮ್ಮ ನಡುವಿನ ಹಿರಿಯ ಎನಿಸುವ ಆಪ್ತಭಾವ ಅವರನ್ನು ತೆರೆ ಕಂಡ ಮೇಲೆ ಕಂಡಾಗ ಆವರಿಸುತ್ತದೆ. ಕನ್ನಡದಲ್ಲಿ ಡಾ.ರಾಜ್, ಡಾ.ವಿಷ್ಣು ಅವರ ಸಿನಿಮಾಗಳನ್ನು ನೋಡಿದ ಫೀಲ್ ಸಿನಿಮಾದಲ್ಲಿದೆ. ಅನುಷ್ಕಾಶೆಟ್ಟಿ, ಸೋನಾಕ್ಷಿ ನಾಯಕಿಯರಾಗಿ ಮನ ತಣಿಸುತ್ತಾರೆ. ಮಿಕ್ಕ ಕಲಾವಿದರು ಪಾತ್ರಗಳಿಗೆ ಜೀವ ತುಂಬಿದ್ದಾರೆ. ಎ.ಆರ್.ರೆಹಮಾನ್ ಸಂಗೀತದ ೨ ಹಾಡುಗಳು ಇಷ್ಟವಾಗುತ್ತವೆ. ಕೆ.ಎಸ್.ರವಿಕುಮಾರ ನಿರ್ದೇಶನದಲ್ಲಿ ತೆರೆಗೆ ಬಂದಿರುವ ಲಿಂಗ ರಜನಿ ಅಭಿಮಾನಿಗಳನ್ನು ಮಾತ್ರವಲ್ಲ, ಎಲ್ಲರನ್ನೂ ಸೆಳೆಯುತ್ತದೆ. ಛಾಯಾಗ್ರಹಣ ಚೆನ್ನಾಗಿದೆ. ಸ್ಟಂಟ್ಸ್ ಮೈ ಜುಮ್ಮೆನಿಸುತ್ತವೆ. ಕನ್ನಡಿಗ ಧೀರ ರಾಕ್‌ಲೈನ್ ವೆಂಕಟೇಶ ಇಡೀ ದೇಶಕ್ಕೆ ಉತ್ತಮ ಚಿತ್ರ ಕೊಟ್ಟಿದ್ದಾರೆ ಎಂದು ನಿಸ್ಸಂಶಯವಾಗಿ ಹೇಳಬಹುದು.
-ಚಿತ್ರಪ್ರಿಯ ಸಂಭ್ರಮ್.
ರೇಟಿಂಗ್ : ****
---------------------
*ನೋಡಬೇಡಿ
**ನೋಡ್ತಿರಾ?
***ನೋಡಬಹುದು.
****ಚೆನ್ನಾಗಿದೆ.
*****ನೋಡಲೇಬೇಕು.
0 comments:
Post a Comment
Click to see the code!
To insert emoticon you must added at least one space before the code.