ಅಪ್ರತಿಮ ದೇಶಭಕ್ತನಾಗಿದ್ದ ಟಿಪ್ಪು ಸುಲ್ತಾನ್ ಸರ್ವಧರ್ಮ ರಕ್ಷಕನಾಗಿದ್ದರು, ಟಿಪ್ಪು ಸುಲ್ತಾನ್ ಜಯಂತಿಯನ್ನು ಸರ್ಕಾರದಿಂದ ಆಚರಿಸುವದನು ಟೀಕಿಸುವವರು, ಇತಿಹಾಸವನ್ನು ಸರಿಯಾಗಿ ಓದಲಿ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಸಣ್ಣ ನೀರಾವರಿ ಸಚಿವ ಶಿವರಾಜ ಎಸ್ ತಂಗಡಗಿ ಅವರು ಹೇಳಿದರು.
ಜಿಲ್ಲಾಡಳಿತದ ವತಿಯಿಂದ ನಗರದ ಸಾಹಿತ್ಯ ಭವನದಲ್ಲಿ ಇದೇ ಮೊದಲ ಬಾರಿಗೆ ಸರ್ಕಾರದ ವತಿಯಿಂದ ಮಂಗಳವಾರದಂದು ಏರ್ಪಡಿಸಲಾಗಿದ್ದ ಹಜರತ್ ಟಿಪ್ಪು ಸುಲ್ತಾನ್ ಜಯಂತಿ ಸಮಾರಂಭದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಹಜರತ್ ಟಿಪ್ಪು ಸುಲ್ತಾನ್ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ, ದೇಶಭಕ್ತ ಹಾಗೂ ಸರ್ವಧರ್ಮ ರಕ್ಷಕರಾಗಿದ್ದರು. ಒಬ್ಬ ಸಿಪಾಯಿಯ ಮಗನಾಗಿ ಹುಟ್ಟಿ, ತನ್ನ ಸ್ವ ಸಾಮರ್ಥ್ಯದಿಂದ ಈ ನಾಡಿನ ದೊರೆಯಾಗಿ ಆಳಿದರು. ಇಂತಹ ಮಹಾನ್ ಪುರುಷ ಹಜರತ್ ಟಿಪ್ಪು ಸುಲ್ತಾನ್ ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಿಸಲು ನಿರ್ಧಾರ ಕೈಗೊಂಡ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಅಭಿನಂದನಾರ್ಹರು. ಸಾಧು ಸಂತರು, ಮಹನೀಯರ ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಿಸಲಾಗುತ್ತಿದೆ. ಈ ನಿರ್ಧಾರವನ್ನು ಟೀಕಿಸುವವರು ಇತಿಹಾಸವನ್ನು ಸರಿಯಾಗಿ ಓದಿಲ್ಲ. ಟಿಪ್ಪು ಸುಲ್ತಾನ್ ತನ್ನ ಸ್ವಾರ್ಥ್ಯಕ್ಕಾಗಿ ಹೋರಾಡಲಿಲ್ಲ, ದೇಶದ ಹಿತಾಸಕ್ತಿಗಾಗಿ ಬ್ರಿಟೀಷರ ವಿರುದ್ಧ ಹೋರಾಡಿದರು. ಮಕ್ಕಳನ್ನು ಅಡವಿಡಲು ಬಯಸುತ್ತೇನೆಯೇ ಹೊರತು, ದೇಶವನ್ನು ಅಡವಿಡಲಾರೆ ಎಂಬ ದಿಟ್ಟ ನಿರ್ಧಾರವನ್ನು ಕೈಗೊಂಡಿದ್ದವರು ಟಿಪ್ಪು ಸುಲ್ತಾನ್. ಎಲ್ಲ ಸಮಾಜಗಳು ಪ್ರೀತಿಯಿಂದ, ಸಾಮರಸ್ಯದಿಂದ ಬದುಕಬೇಕು ಎನ್ನುವುದು ಟಿಪ್ಪುವಿನ ಆಶಯವಾಗಿತ್ತು. ೧೬ ವರ್ಷಗಳ ಕಾಲ ದಕ್ಷತೆಯಿಂದ ಆಡಳಿತ ನಡೆಸಿದ ಟಿಪ್ಪು ಸುಲ್ತಾನ್, ತನ್ನ ಆಡಳಿತಾವಧಿಯಲ್ಲಿ ಕೃಷಿ ಹಾಗೂ ನೀರಾವರಿಗೆ ಹೆಚ್ಚಿನ ಆದ್ಯತೆ ಕೊಟ್ಟಿದ್ದರು. ಟಿಪ್ಪು ಸುಲ್ತಾನ್ ಅವರ ಆಡಳಿತಾವಧಿಯಲ್ಲಿ ಅನೇಕ ಹಿಂದೂ ದೇವಾಲಯಗಳ ಅಭಿವೃದ್ಧಿಗೆ ಕೊಡುಗೆಗಳ ಮಹಾಪೂರವನ್ನು ಹರಿಸಿರುವುದು ಇತಿಹಾಸದಿಂದ ತಿಳಿದು ಬರುತ್ತದೆ. ದೇಶಭಕ್ತರನ್ನು ಯಾವುದೇ ಒಂದು ಜಾತಿ, ಧರ್ಮಕ್ಕೆ ಸೀಮಿತಗೊಳಿಸಬಾರದು. ಮಹನೀಯರ ಜಯಂತಿಗಳ ಆಚರಣೆಯು ಮಹನೀಯರ ಜೀವನ ಚರಿತ್ರೆ, ಅವರ ತತ್ವಾದರ್ಶಗಳ ಬಗ್ಗೆ ಯುವ ಪೀಳಿಗೆಗೆ ಅರಿವು ಮೂಡಿಸುವ ಉದ್ದೇಶವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಮತ್ತು ಸಣ್ಣ ನೀರಾವರಿ ಸಚಿವ ಶಿವರಾಜ ಎಸ್ ತಂಗಡಗಿ ಅವರು ಹೇಳಿದರು.
ಟಿಪ್ಪು ಸುಲ್ತಾನ್ ಅವರ ಜೀವನ ಚರಿತ್ರೆ ಕುರಿತು ವಿಶೇಷ ಉಪನ್ಯಾಸ ನೀಡಿದ ಮರಿಯಮ್ಮನಹಳ್ಳಿ ಸ್ಮಯೋರ ವ್ಯಾಸಪುರಿ ಕಾಲೇಜು ಕನ್ನಡ ಅಧ್ಯಾಪಕ ಪ್ರೊ. ಚಂದ್ರಶೇಖರ ಎಸ್.ಬಿ. ಅವರು, ಟಿಪ್ಪು ಸುಲ್ತಾನ್ ಅವರನ್ನು ಕೇವಲ ಒಂದು ಪ್ರದೇಶಕ್ಕೆ ಸೀಮಿತಗೊಳಿಸಬಾರದು. ಅವರು ಅಖಂಡ ಭಾರತದ ಹುಲಿಯಾಗಿದ್ದರು. ಹಿಂದೂ ಧರ್ಮವನ್ನು ಮುಸಲ್ಮಾನ್ ಧರ್ಮಕ್ಕೆ ಸಮಾನವಾಗಿ ಕಾಣುತ್ತಿದ್ದರು. ಹಿಂದೂ ಸ್ವಾಮೀಜಿಗಳಿಗೆ ಸೈನ್ಯದ ರಕ್ಷಣೆಯನ್ನು ಒದಗಿಸಿದ್ದರು ಎಂದು ಇತಿಹಾಸದಿಂದ ತಿಳಿದುಬರುತ್ತದೆ. ಇಂತಹ ಮಹಾನ್ ಪುರುಷರ ಜಯಂತಿಯನ್ನು ಸರ್ಕಾರದಿಂದ ಆಚರಿಸುವ ಬಗ್ಗೆ ಟೀಕೆ ವ್ಯಕ್ತಪಡಿಸುವುದು ಸರಿಯಲ್ಲ ಎಂದರು.
ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಹೊರತಂದ ಕೊಪ್ಪಳ ಜಿಲ್ಲಾ ಅಭಿವೃದ್ಧಿ ಬಿಂಬಿಸುವ ಭತ್ತದ ನಾಡು ಕೊಪ್ಪಳ- ಅಭಿವೃದ್ಧಿಗೆ ಹೊಸ ಆಯಾಮ ಕಿರುಹೊತ್ತಿಗೆ ಹಾಗೂ ಟಿಪ್ಪು ಸುಲ್ತಾನ್ ಜಯಂತಿ ಅಂಗವಾಗಿ ಪ್ರಕಟಿಸಿರುವ ’ಮೈಸೂರು ಹುಲಿ ಟಿಪ್ಪು ಸುಲ್ತಾನ್’ ಮಡಿಕೆ ಪತ್ರವನ್ನು ಜಿಲ್ಲಾ ಉಸ್ತುವಾರಿ ಸಚಿವರು ಬಿಡುಗಡೆ ಮಾಡಿದರು. ಟಿಪ್ಪು ಸುಲ್ತಾನ್ ಅವರ ಕುರಿತು ಏರ್ಪಡಿಸಲಾದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಇದೇ ಸಂದರ್ಭದಲ್ಲಿ ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮೌಲಾನಾ ಮುಫ್ತಿ ಮಹಮ್ಮದ್ ನಜೀರ್ ಅಹ್ಮದ್, ಕೌತಾಳಂನ ಜಗದ್ಗುರು ಖಾದರಲಿಂಗ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜುಲ್ಲು ಖಾದರ್ ಖಾದ್ರಿ ನಗರಸಭೆ ಅಧ್ಯಕ್ಷೆ ಬಸಮ್ಮ ಹಳ್ಳಿಗುಡಿ, ಜಿಲ್ಲಾಧಿಕಾರಿ ಡಾ. ಪ್ರವೀಣಕುಮಾರ್ ಜಿ.ಎಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ತ್ಯಾಗರಾಜನ್, ಜಿ.ಪಂ. ಸಿಇಓ ಕೃಷ್ಣ ಉದಪುಡಿ, ಉಪವಿಭಾಗಾಧಿಕಾರಿ ಇಸ್ಮಾಯಿಲ್ ಸಾಹೇಬ್ ಶಿರಹಟ್ಟಿ ಸೆರಿದಂತೆ ಹಲವು ಗಣ್ಯರು, ಮುಸ್ಲಿಂ ಸಮುದಾಯದ ಮುಖಂಡರು ಉಪಸ್ಥಿತರಿದ್ದರು. ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಬಿ. ಕಲ್ಲೇಶ್ ಸ್ವಾಗತಿಸಿದರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರಪ್ಪ ಚೋರನೂರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಕಾರ್ಯಕ್ರಮಕ್ಕೂ ಪೂರ್ವದಲ್ಲಿ ಟಿಪ್ಪು ಸುಲ್ತಾನ್ ಅವರ ಭಾವಚಿತ್ರದ ವೈಭವದ ಮೆರವಣಿಗೆ ನಗರದ ಶಿರಸಪ್ಪಯ್ಯನ ಮಠ ಬಳಿಯ ನೂರಾನಿ ಮಸೀದಿ ಆವರಣದಿಂದ ಪ್ರಾರಂಭಗೊಂಡು, ಜವಾಹರ ರಸ್ತೆ ಮೂಲಕ ಸಾಹಿತ್ಯ ಭವನದವರೆಗೆ ಸಾಗಿ ಬಂದಿತು. ಮುಸ್ಲಿಂ ಬಾಂಧವರು ಸೇರಿದಂತೆ ಅನೇಕ ಸಂಘಟನೆಯವರು, ವಿವಿಧ ಸಮುದಾಯದ ಪ್ರಮುಖರು ಮೆರವಣಿಗೆ ಹಾಗೂ ಸಮಾರಂಭದಲ್ಲಿ ಭಾಗವಹಿಸಿದ್ದರು.
0 comments:
Post a Comment
Click to see the code!
To insert emoticon you must added at least one space before the code.