PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ, ನ.೦೬ (ಕ ವಾ)  ವಿದ್ಯಾರ್ಥಿಗಳನ್ನು ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಅಥವಾ ಭಾರತೀಯ ನೌಕಾ ಅಕಾಡೆಮಿಗೆ ಸೇರಿಸಲು ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ, ಮಾನಸಿಕವಾಗಿ ಮತ್ತು ದೈಹಿಕವಾಗಿ ತರಬೇತಿ ಗೊಳಿಸುವ ಉದ್ದೇಶವನ್ನು ಹೊಂದಿರುವ ಕೊಡಗಿನ ಸೈನಿಕ ಶಾಲೆಗೆ ಪ್ರವೇಶ ಪರೀಕ್ಷೆ ಮೂಲಕ ಪ್ರಸಕ್ತ ಸಾಲಿನ ೬ನೇ ಮತ್ತು ೯ನೇ ತರಗತಿ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
     ೬ನೇ ತರಗತಿ ಪರೀಕ್ಷೆಗೆ ಅರ್ಜಿ ಸಲ್ಲಿಸಲಿಚ್ಛಿಸುವವರು ೨೦೦೫ ರ ಜುಲೈ ೦೨ ಹಾಗೂ ೨೦೦೬ ರ ಜುಲೈ ೦೧ ಅವಧಿಯಲ್ಲಿ ಜನಿಸಿದವರಾಗಿರಬೇಕು. ೯ನೇ ತರಗತಿ ಪರೀಕ್ಷೆಗೆ ಅರ್ಜಿ ಸಲ್ಲಿಸಲಿಚ್ಛಿಸುವವರು ೨೦೦೨ ರ ಜುಲೈ ೦೨ ಹಾಗೂ ೨೦೦೩ ರ ಜುಲೈ ೦೧ ಅವಧಿಯಲ್ಲಿ ಜನಿಸಿದವರಾಗಿರಬೇಕು. ಮಾನ್ಯತೆ ಪಡೆದ ಶಾಲೆಯಲ್ಲಿ ೮ನೇ ತರಗತಿಯಲ್ಲಿ ಓದುತ್ತಿರಬೇಕು. ೬ನೇ ತರಗತಿ ಪ್ರವೇಶಕ್ಕಾಗಿ ಬೆಂಗಳೂರು, ಹಾಸನ, ಮಂಗಳೂರು, ಶಿವಮೊಗ್ಗ ಮತ್ತು ಕೊಡಗು ಇಲ್ಲಿ ಮತ್ತು ೯ನೇ ತರಗತಿ ಪ್ರವೇಶಕ್ಕಾಗಿ ಸೈನಿಕ ಶಾಲೆ ಕೊಡಗಿನ ಪರೀಕ್ಷಾ ಕೇಂದ್ರದಲ್ಲಿ ಮಾತ್ರ ಜನೇವರಿ ೦೩ ರಂದು ಪ್ರವೇಶ ಪರೀಕ್ಷೆಗಳು ನಡೆಯಲಿವೆ.
     ಪ್ರವೇಶದಲ್ಲಿ ಎಸ್.ಸಿ ಯವರಿಗೆ ಶೇಕಡಾ ೧೫ ರಷ್ಟು, ಎಸ್.ಟಿ ಯವರಿಗೆ ಶೇಕಡಾ ೭.೫ ರಷ್ಟು ಹಾಗೂ ರಕ್ಷಣಾ ಪಡೆಯ ಸಿಬ್ಬಂದಿಯವರಿಗೆ ಶೇಕಡಾ ೨೫ ರಷ್ಟು ಮೀಸಲಾತಿ ಕಲ್ಪಿಸಲಾಗಿದ್ದು, ೬ನೇ ತರಗತಿಗೆ ೭೫ ರಿಂದ ೮೦ ಮತ್ತು ೯ನೇ ತರಗತಿಗೆ ೨೦ ರಿಂದ ೨೫ ಮಕ್ಕಳನ್ನು ಆಯ್ಕೆ ಮಾಡಲಾಗುವುದು. ಅರ್ಜಿ, ಮಾಹಿತಿ ಪುಸ್ತಕವನ್ನು ಪಡೆಯಲು ಸಾಮಾನ್ಯ ವರ್ಗ ಮತ್ತು ರಕ್ಷಣಾ ಇಲಾಖೆಯವರಿಗೆ ೫೦೦ ರೂ. ಎಸ್‌ಸಿ ಮತ್ತು ಎಸ್‌ಟಿ ಯವರಿಗೆ ೩೫೦ ರೂ. (ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳು ಸೇರಿ) ಶುಲ್ಕ ನಿಗದಿಪಡಿಸಲಾಗಿದ್ದು, ಶುಲ್ಕವನ್ನು ಪ್ರಾಂಶುಪಾಲರು, ಸೈನಿಕ ಶಾಲೆ, ಕೊಡಗು, ಕುಶಾಲನಗರದಲ್ಲಿ ಸಂದಾಯವಾಗುವಂತೆ ಇವರಿಗೆ ಡಿಮ್ಯಾಂಡ್ ಡ್ರಾಫ್ಟ್ ಪಡೆದು, ತಾವೇ ಖುದ್ದಾಗಿ ಅಥವಾ ಅಂಚೆಯ ಮೂಲಕ ಕಳುಹಿಸಬೇಕು. ಅರ್ಜಿ ಹಾಗೂ ಮಾಹಿತಿ ಪುಸ್ತಕದ ಬೇಡಿಕೆಯನ್ನು ಸಲ್ಲಿಸುವಾಗ ದಾಖಲಾತಿ ಬಯಸುವ ತರಗತಿ, ವರ್ಗ ಮತ್ತು ಯಾವ ಭಾಷೆಯಲ್ಲಿ ಪರೀಕ್ಷೆಯನ್ನು ಬರೆಯುತ್ತೀರಿ ಎಂದು ನಮೂದಿಸಬೇಕು.  ಅರ್ಜಿಗಳನ್ನು ಅಕ್ಟೋಬರ್.೧೨ ರಿಂದ ನವೆಂಬರ್.೨೧ ರವರೆಗೆ ವಿತರಿಸಲಾಗುವುದು ಹಾಗೂ ಅರ್ಜಿ ಸಲ್ಲಿಸಲು ನವೆಂಬರ್.೩೦ ಕೊನೆ ದಿನಾಂಕವಾಗಿದೆ. ದೂರವಾಣಿ ಸಂಖ್ಯೆ : ೦೮೨೭೬-೨೭೮೯೬೩ ಅನ್ನು ಸಂಪರ್ಕಿಸಬಹುದಾಗಿದೆ.

Advertisement

0 comments:

Post a Comment

 
Top