PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ, ಸೆ.೧೬ (ಕ ವಾ) ಕೊಪ್ಪಳ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ರೈಲ್ವೆ ನಿಲ್ದಾಣಗಳ ಅಭಿವೃದ್ಧಿ, ಹೊಸದಾಗಿ ಕೈಗೊಂಡಿರುವ ರೈಲ್ವೆ ಕಾಮಗಾರಿಗಳನ್ನು ತೀವ್ರಗೊಳಿಸಲು ಹಾಗೂ ಇತರೆ ರೈಲ್ವೆ ಸಮಸ್ಯೆಗಳ ಕುರಿತು ಸಂಸದ ಸಂಗಣ್ಣ ಕರಡಿ ಅವರು ನೈಋತ್ಯ ರೈಲ್ವೆ ಹುಬ್ಬಳ್ಳಿಯ ಪ್ರಧಾನ ಪ್ರಬಂಧಕರೊಂದಿಗೆ ಇತ್ತೀಚೆಗೆ ಸಭೆ ನಡೆಸಿ ಚರ್ಚಿಸಿದರು.
      ಸಂಸದ ಸಂಗಣ್ಣ ಕರಡಿ ಅವರು ಕೊಪ್ಪಳ ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ಮುಂಗಡ ಟಿಕೆಟ್ ಕಾಯ್ದಿರಿಸುವಿಕೆ ಕೌಂಟರ್ ಒಂದೇ ಇದ್ದು, ಬೆಳಗಿನ ಅವಧಿಯಲ್ಲಿ ತತ್ಕಾಲ್ ಟಿಕೇಟ್ ಹಾಗೂ ಇತರೆ ಮುಂಗಡ ಕಾಯ್ದಿರಿಸುವಿಕೆಗೆ ಒಂದೇ ಕೌಂಟರ್ ಇರುವುದರಿಂದ, ಹೆಚ್ಚಿನ ಪ್ರಯಾಣಿಕರು ತತ್ಕಾಲ್ ಟಿಕೆಟ್ ಸೌಲಭ್ಯ ಪಡೆಯುವಲ್ಲಿ ವಂಚಿತರಾಗುತ್ತಿದ್ದಾರೆ ಎಂದರು.  ಅಲ್ಲದೆ ಸಭೆಯಲ್ಲಿ ಚರ್ಚಿಸಿದ ಹಲವು ಸಮಸ್ಯೆಗಳಿಗೆ ಸ್ಪಂದಿಸಿದ ನೈಋತ್ಯ ರೈಲ್ವೆ ಪ್ರಧಾನ ಪ್ರಬಂಧಕ ಪಿ.ಕೆ. ಸಕ್ಸೇನ ಅವರು,  ತತ್ಕಾಲ ಟಿಕೇಟ್‌ಗಾಗಿ ಪ್ರತ್ಯೇಕ ಕೌಂಟರ್‌ಗಳನ್ನು ತೆರೆಯುವ ಬಗ್ಗೆ ಹಾಗೂ ತತ್ಕಾಲ್ ಕೌಂಟರ್‌ಗಳಿಗೆ ಅನುಭವಿ ನೌಕರರನ್ನು ಮತ್ತು ಹೊಸ ಕಂಪ್ಯೂಟರ್‌ಗಳನ್ನು ಒದಗಿಸಲು. ಹುಬ್ಬಳ್ಳಿ-ತಿರುಪತಿ ಪ್ಯಾಸೆಂಜರ್ ರೈಲನ್ನು ಬನ್ನಿಕೊಪ್ಪ ನಿಲ್ದಾಣದಲ್ಲಿ ಹಾಗೂ ಹಂಪಿ ಎಕ್ಸ್‌ಪ್ರೆಸ್ ರೈಲನ್ನು ಗಿಣಿಗೇರಾ ನಿಲ್ದಾಣದಲ್ಲಿ ನಿಲುಗಡೆಗೊಳಿಸುವ ಕುರಿತು. ಹುಬ್ಬಳ್ಳಿ-ಚೆನ್ನೈ ಎಕ್ಸ್‌ಪ್ರೆಸ್ ರೈಲನ್ನು ಮುಂದುವರೆಸಲು ಹಾಗೂ ಕೊಪ್ಪಳ ರೈಲ್ವೆ ನಿಲ್ದಾಣದಲ್ಲಿನ ಪೇ ಆಂಡ್ ಯೂಸ್ ಶೌಚಾಲಯದ ನಿರ್ವಹಣೆ ಸೇರಿದಂತೆ ನಿಲ್ದಾಣದಲ್ಲಿನ ವಿಐಪಿ ಕೊಠಡಿಯ ಉನ್ನತೀಕರಣಗೊಳಿಸುವುದು ಅಲ್ಲದೆ   ಹೊಸ ರೈಲುಗಳನ್ನು ಪ್ರಾರಂಭಿಸಲು ನವದೆಹಲಿಯ ರೈಲ್ವೆ ಬೋರ್ಡ್ ಇವರಿಗೆ ಅಗತ್ಯ ಶಿಫಾರಸ್ಸು ಮಾಡಲಾಗುವುದು ಎಂದು ಸಂಸದರಿಗೆ ಭರವಸೆ ನೀಡಿದ್ದಾರೆ ಎಂದು ಕೊಪ್ಪಳ ಸಂಸದರ ಕಚೇರಿ ತಿಳಿಸಿದೆ.

ವಿವಿಧ ತರಬೇತಿ : ಅರ್ಜಿ ಆಹ್ವಾನ
ಕೊಪ್ಪಳ, ಸೆ.೧೬ (ಕ ವಾ) ಉತ್ತರ ಕನ್ನಡ ಜಿಲ್ಲೆ ಹಳಿಯಾಳದ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟ್ ಸಂಸ್ಥೆ(ರಿ) ವತಿಯಿಂದ ಸೆಪ್ಟಂಬರ್ ತಿಂಗಳಿನಲ್ಲಿ ಆರಂಭವಾಗುವ ೧೫ ದಿನಗಳ ಬೇಕರಿ ಮತ್ತು ಗೃಹ ಉಪಯೋಗಿ ಉತ್ಪನ್ನಗಳ ತರಬೇತಿ ಹಾಗೂ ಮಹಿಳೆಯರಿಗಾಗಿ ೩೦ ದಿನಗಳ ಬ್ಯೂಟಿ ಪಾರ್ಲರ್ ನಿರ್ವಹಣೆ ತರಬೇತಿಗೆ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ತರಬೇತಿಯು ಊಟ ಮತ್ತು ವಸತಿಯೊಂದಿಗೆ ಸಂಪೂರ್ಣವಾಗಿ ಉಚಿತವಾಗಿದ್ದು, ಆಸಕ್ತ ೧೮ ರಿಂದ ೪೫ ವರ್ಷದೊಳಗಿನ ನಿರುದ್ಯೋಗಿ ಯುವಜನತೆ ತರಬೇತಿಗಳಲ್ಲಿ ಭಾಗವಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟ್ ಸಂಸ್ಥೆ(ರಿ), ಉದ್ಯೋಗ ವಿದ್ಯಾನಗರ, ದಾಂಡೇಲಿ ರಸ್ತೆ, ಹಳಿಯಾಳ, ಜಿ :ಉತ್ತರ ಕನ್ನಡ, ದೂರವಾಣಿ ಸಂಖ್ಯೆ : ೦೮೨೮೪-೨೨೦೮೦೭, ಮೊಬೈಲ್ : ೯೪೮೩೪೮೫೪೮೯, ೯೪೮೨೧೮೮೭೮೦ ನ್ನು ಸಂಪರ್ಕಿಸಬಹುದಾಗಿದೆ.
 
ಪಶುಭಾಗ್ಯ ಯೋಜನೆ ಅರ್ಜಿ ಸಲ್ಲಿಸಲು ಸೆ. ೩೦ ಕೊನೆಯ ದಿನ.

ಕೊಪ್ಪಳ, ಸೆ.೧೬ (ಕ ವಾ) ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಕೊಪ್ಪಳ ಇವರಿಂದ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ಪಶುಭಾಗ್ಯ ಯೋಜನೆಯಡಿ ಹೈನುಗಾರಿಕೆ, ಕುರಿ ಅಥವಾ ಮೇಕೆ ಸಾಕಾಣಿಕೆಗಾಗಿ ಘಟಕ ವೆಚ್ಚ ನೀಡಲಾಗುತ್ತಿದ್ದು, ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
     ಯೋಜನೆಯನ್ನು ಫಲಾನುಭವಿಗಳ ಘಟಕ ವೆಚ್ಚಕ್ಕನುಗುಣವಾಗಿ ಸೇವಾ ವ್ಯಾಪ್ತಿಯ ವಾಣಿಜ್ಯ ಬ್ಯಾಂಕುಗಳಿಂದ ಸಾಲ ಪಡೆದು ಬೇಡಿಕೆ ಆಧಾರಿತವಾಗಿ ಹಾಗೂ ಮೊದಲು ಬಂದವರಿಗೆ ಆದ್ಯತೆ ಆಧಾರದ ಮೇಲೆ ಅನುಷ್ಟಾನಗೊಳಿಸಲಾಗುವುದು. ಕೃಷಿಭಾಗ್ಯ ಯೋಜನೆಗೆ ಅರ್ಹರಾಗಿರದ ಫಲಾನುಭವಿಗಳಿಗೂ ಕೂಡಾ ಪಶು ಭಾಗ್ಯ ಯೋಜನೆಯಡಿ ಸಹಾಯಧನ ನೀಡಲಾಗುವುದು. ಅಲ್ಲದೆ, ಕೃಷಿಭಾಗ್ಯ ಯೋಜನೆಯಡಿಯಲ್ಲಿ ನಿಗದಿಪಡಿಸಿದ ಅನುದಾನವು ಯಾವುದೇ ಒಂದು ಸಾಲಿನಲ್ಲಿ ಪೂರ್ಣವಾಗಿ ಬಳಕೆಯಾಗದಿದ್ದಲ್ಲಿ, ಪಶುಭಾಗ್ಯ ಯೋಜನೆಯಡಿ ಅನುದಾನ ಲಭ್ಯವಿದ್ದಲ್ಲಿ ಭೂಹಿಡುವಳಿದಾರರನ್ನು ಕೂಡಾ ಈ ಯೋಜನೆಯಡಿ ಪರಿಗಣಿಸಲಾಗುವುದು. ಯೋಜನೆಯಡಿ ಎರಡು ಹಾಲು ಹಿಂಡುವ ಎಮ್ಮೆ ಅಥವಾ ಹಸುವಿನ ಹೈನುಗಾರಿಕೆ ನಡೆಸಲು ಘಟಕ ವೆಚ್ಚವಾಗಿ ೧,೨೦,೦೦೦ ರೂ., ಕುರಿ ಅಥವಾ ಮೇಕೆ ಸಾಕಾಣಿಕೆಗೆ (೧೦+೦೧) ಘಟಕ ವೆಚ್ಚವಾಗಿ ೬೭,೪೪೦ ರೂ. ಸಹಾಯಧನ ನಿಗದಿಪಡಿಸಲಾಗಿದ್ದು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಶೇಕಡಾ ೫೦ ರಷ್ಟು ಹಾಗೂ ಇತರೆ ಫಲಾನುಭವಿಗಳಿಗೆ ಶೇಕಡಾ ೨೫ ರಷ್ಟು ಸಹಾಯಧನವನ್ನು ನೀಡಲಾಗುವುದು. ಮಹಿಳೆಯರು, ಅಲ್ಪಸಂಖ್ಯಾತರು, ವಿಕಲಚೇತನ ಹಾಗೂ ಇತರೆ ಫಲಾನುಭವಿಗಳನ್ನು ಸರ್ಕಾರದ ನಿಯಮಾನುಸಾರ ಆಯ್ಕೆ ಮಾಡಲಾಗುವುದು. ಮಹಿಳೆಯರಿಗಾಗಿ ಹೈನುಗಾರಿಕೆ ಯೋಜನೆಯಡಿ ವಿಧವೆಯರು, ದೇವದಾಸಿಯರು ಮತ್ತು ಸಂಕಷ್ಟಕ್ಕೆ ಒಳಗಾದ ಮಹಿಳೆಯರಿಗೆ ಆದ್ಯತೆ ನೀಡಲಾಗುವುದು. ಆಯ್ಕೆಯಾದ ಫಲಾನುಭವಿಗಳು ತರಬೇತಿ ಪಡೆಯುವುದು ಕಡ್ಡಾಯವಾಗಿದೆ.
     ಅರ್ಜಿ ಸಲ್ಲಿಸಲು ಸೆ.೩೦ ಕೊನೆ ದಿನಾಂಕವಾಗಿದ್ದು, ಭರ್ತಿ ಮಾಡಿದ ನಿಗದಿತ ಅರ್ಜಿ ನಮೂನೆಯನ್ನು ಅಗತ್ಯ ದಾಖಲೆಗಳೊಂದಿಗೆ ಆಯಾ ತಾಲೂಕಾ ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕರಿಗೆ ಸಲ್ಲಿಸಬಹುದಾಗಿದ್ದು, ಹೆಚ್ಚಿನ ಮಾಹಿತಿ ಹಾಗೂ ಅರ್ಜಿ ನಮೂನೆಗಳಿಗಾಗಿ ಹತ್ತಿರದ ಪಶುವೈದ್ಯ ಸಂಸ್ಥೆಯ ಅಧಿಕಾರಿಗಳನ್ನು ಕಛೇರಿ ವೇಳೆಯಲ್ಲಿ ಸಂಪರ್ಕಿಸಿ ಪಡೆಯಬಹುದಾಗಿದ.

Advertisement

0 comments:

Post a Comment

 
Top