PLEASE LOGIN TO KANNADANET.COM FOR REGULAR NEWS-UPDATES

  ಆಧುನಿಕ ಹಾಗೂ ದುಬಾರಿ ವೆಚ್ಚದ ಕೃಷಿ ಯಂತ್ರೋಪಕರಣಗಳನ್ನು ಖರೀದಿಸುವ ಸಾಮಥ್ರ್ಯ ಇಲ್ಲದ ರೈತರಿಗೆ ಕಡಿಮೆ ಬಾಡಿಗೆ ದರದಲ್ಲಿ ಯಂತ್ರೋಪಕರಣಗಳು ಲಭ್ಯವಾಗುವಂತೆ ಮಾಡಲು ಸರ್ಕಾರ 75 ಕೋಟಿ ಅನುದಾನವನ್ನು ಒದಗಿಸಲು ಕ್ರಮ ಕೈಗೊಂಡಿದೆ ಎಂದು ಕೃಷಿ ಸಚಿವ ಕೃಷ್ಣ ಭೈರೇಗೌಡ ಅವರು ಹೇಳಿದರು.
  ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ಕೃಷಿ ಹಾಗೂ ಜಲಾನಯನ ಅಭಿವೃದ್ಧಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೂಲಿಕಾರರ ಸಮಸ್ಯೆ, ಅಧಿಕ ಖರ್ಚಿನ ತೊಂದರೆ ಎದುರಿಸುತ್ತಿರುವ ರೈತರು ಹಾಗೂ ಆಧುನಿಕ ಹಾಗೂ ದುಬಾರಿ ವೆಚ್ಚದ ಕೃಷಿ ಯಂತ್ರೋಪಕರಣಗಳನ್ನು ಖರೀದಿಸುವ ಸಾಮಥ್ರ್ಯ ಹೊಂದಿಲ್ಲದಿರುವ ರೈತರಿಗೆ ಅತ್ಯಂಡ ಕಡಿಮೆ ದರದಲ್ಲಿ ಬಾಡಿಗೆ ಆಧಾರದ ಮೇಲೆ ಕೃಷಿ ಯಂತ್ರೋಪಕರಣಗಳನ್ನು ಒದಗಿಸಲು ಸರ್ಕಾರ ಈಗಾಗಲೆ ನಿರ್ಧರಿಸಿದ್ದು, ಇದನ್ನು ಪ್ರಾಯೋಗಿಕವಾಗಿ ಹೋಬಳಿ ಮಟ್ಟದಲ್ಲಿ ಕಾರ್ಯಗತಗೊಳಿಸಲಾಗುತ್ತಿದೆ.  ಕೊಪ್ಪಳ ಜಿಲ್ಲೆಯ 04 ಹೋಬಳಿಗಳಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಲಾಗುತ್ತಿದ್ದು, ಪ್ರತಿ ಕೇಂದ್ರಕ್ಕೆ ಸುಮಾರು 75 ಲಕ್ಷ ರೂ. ಮೌಲ್ಯದ ಕೃಷಿ ಯಂತ್ರೋಪಕರಣಗಳನ್ನು ಇರಿಸಿ, ಕಡಿಮೆ ದರದಲ್ಲಿ ರೈತರ ಕೃಷಿ ಚಟುವಟಿಕೆಗೆ ಬಾಡಿಗೆ ಆಧಾರದಲ್ಲಿ ಒದಗಿಸಲಾಗುವುದು.  ಈ ಪ್ರಯತ್ನ ಯಶಸ್ವಿಗೊಂಡಲ್ಲಿ, ಉಳಿದ ಎಲ್ಲೆಡೆ ಇಂತಹ ಯೋಜನೆಯನ್ನು ಕಾರ್ಯಗತಗೊಳಿಸಲು ಸರ್ಕಾರ ಯೋಜಿಸಿದೆ.  ಮುಂಗಾರು ಪೂರ್ವದಲ್ಲಿ ಬಿತ್ತನೆಯಾದ ಹೆಸರು ಹಾಗೂ ಎಳ್ಳು ಬೆಳೆಗಳು ಸಕಾಲದಲ್ಲಿ ಮಳೆ ಬಾರದೆ ಅಥವಾ ರೋಗಬಾಧೆಯಿಂದ ಹಾನಿಗೊಳಗಾಗಿರುವ ಬಗ್ಗೆ ವರದಿ ಬಂದಿದ್ದು, ಇದರಿಂದ ಬಹಳಷ್ಟು ರೈತರು ನಷ್ಟ ಅನುಭವಿಸಿದ್ದಾರೆ.  ಬೆಳೆ ಹಾನಿ ಅನುಭವಿಸಿರುವ ರೈತರಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕಂದಾಯ ಇಲಾಖೆ ಹಾಗೂ ಕೃಷಿ ಇಲಾಖೆಯು ಜಂಟಿಯಾಗಿ ಶೇ. 50 ಕ್ಕಿಂತ ಹೆಚ್ಚು ಬೆಳೆ ಹಾನಿ ಅನುಭವಿಸಿರುವ ರೈತರ ಹೊಲಗಳ ಬಗ್ಗೆ ಸಮೀಕ್ಷೆ ನಡೆಸಿ ಹತ್ತು ದಿನಗಳ ಒಳಗಾಗಿ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.  ಈ ವರದಿ ಬಂದ ನಂತರ, ಸಂಬಂಧಪಟ್ಟ ರೈತರಿಗೆ ಪರಿಹಾರಧನ ಒದಗಿಸಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು.  ಪ್ರಸಕ್ತ ವರ್ಷದಲ್ಲಿ ಕೃಷಿ ಇಲಾಖೆಯ ಚಟುವಟಿಕೆಯನ್ನು ಸಮರ್ಪವಾಗಿ ರೈತರಿಗೆ ತಲುಪಿಸಲು, ರಾಜ್ಯದಲ್ಲಿ ಆತ್ಮ ಯೋಜನೆಗಾಗಿ 1100 ಸಿಬ್ಬಂದಿಗಳನ್ನು, ರೈತ ಸಂಪರ್ಕ ಕೇಂದ್ರಗಳಿಗೆ ಸುಮಾರು 700 ಜನ ಆಡಳಿತ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ.  ಅಲ್ಲದೆ ರೇಷ್ಮೆ ಇಲಾಖೆಯಲ್ಲಿನ ಹೆಚ್ಚುವರಿ ಸಿಬ್ಬಂದಿಗಳ ಪೈಕಿ 280 ಸಿಬ್ಬಂದಿಗಳ ಸೇವೆಯನ್ನು ಕೃಷಿ ಇಲಾಖೆಗೆ ಪಡೆಯಲಾಗಿದೆ.  ಜಿಲ್ಲೆಯಲ್ಲಿ ಹಲವೆಡೆ ಜಿಂಕೆ ಹಾವಳಿಯಿಂದ ಬೆಳೆ ನಷ್ಟ ಅನುಭವಿಸುತ್ತಿರುವ ಬಗ್ಗೆ ರೈತರು ತಮ್ಮ ಗಮನಕ್ಕೆ ತಂದಿದ್ದು, ಈ ಕುರಿತಂತೆ ಅರಣ್ಯ ಖಾತೆ ಸಚಿವರೊಂದಿಗೆ ಸಮಾಲೋಚಿಸಲಾಗುವುದು.  ಆಲಿಕಲ್ಲು ಮಳೆಯಿಂದ ನಷ್ಟ ಅನುಭವಿಸಿದ ಸಣ್ಣ ರೈತರಿಗಷ್ಟೇ ಪರಿಹಾರ ನೀಡುತ್ತಿರುವ ಬಗ್ಗೆ ರೈತರು ತಮ್ಮ ಗಮನಕ್ಕೆ ತಂದಿದ್ದು, ದೊಡ್ಡ ರೈತರೂ ಸಹ ನಷ್ಟ ಅನುಭವಿಸಿದ್ದು, ಅವರಿಗೂ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕಂದಾಯ ಇಲಾಖೆ ಸಚಿವರೊಂದಿಗೆ ಚರ್ಚಿಸಿ, ಕ್ರಮ ಕೈಗೊಳ್ಳಲಾಗುವುದು.  ರಾಜ್ಯದಲ್ಲಿ ಪದೇ ಪದೇ ಕೊಳವೆ ಬಾವಿ ದುರಂತಗಳು ಸಂಭವಿಸುತ್ತಿದ್ದು, ಕಳೆದ ಜೂ. 30 ರಂದು ಕೊಳವೆ ಬಾವಿ ಕೊರೆಯಿಸುವ ಬಗ್ಗೆ ಮಾರ್ಗಸೂಚಿಯನ್ನು ಹೊರಡಿಸಲಾಗಿದ್ದು, ಇದೀಗ ಇನ್ನಷ್ಟು ಬಿಗಿ ಕ್ರಮ ವಹಿಸಲು ಹಾಗೂ ದುರಂತ ಸಂಭವಿಸಿದಲ್ಲಿ ಯಾರನ್ನು ಹೊಣೆಗಾರರನ್ನಾಗಿಸುವ ಬಗ್ಗೆ ಪರಿಶೀಲಿಸಿ, ಶೀಘ್ರವೇ ಪರಿಷ್ಕøತ ಮಾರ್ಗಸೂಚಿ ಆದೇಶವನ್ನು ಹೊರಡಿಸಲಾಗುವುದು ಎಂದು ಕೃಷಿ ಸಚಿವ ಕೃಷ್ಣ ಭೈರೇಗೌಡ ಅವರು ತಿಳಿಸಿದರು.
  ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್, ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ, ಜಿಲ್ಲಾಪಂಚಾಯತಿ ಅಧ್ಯಕ್ಷ ಅಮರೇಶ್ ಕುಳಗಿ, ಉಪಾಧ್ಯಕ್ಷ ವಿನಯಕುಮಾರ ಮೇಲಿನಮನಿ, ಜಿಲ್ಲಾಧಿಕಾರಿ ಆರ್.ಆರ್. ಜನ್ನು, ಕೃಷಿ ಇಲಾಖೆ ನಿರ್ದೇಶಕ ಧರ್ಮರಾಜು, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


Advertisement

0 comments:

Post a Comment

 
Top