PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ, ಸೆ.೧೬ (ಕ ವಾ)  ಏಡ್ಸ್ ಹಾಗೂ ಕ್ಷಯ ರೋಗಗಳು ಸೇರಿದಂತೆ ಆರೋಗ್ಯ ವಿಷಯಕ್ಕೆ ಸಂಬಂಧಪಟ್ಟ ಕ್ಷೇತ್ರಗಳಲ್ಲಿ ನಿಷ್ಕಾಳಜಿಯ ಸೇವೆ ಸಲ್ಲದು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಡಿ.ಉದಪುಡಿ ಸಂಬಂಧಪಟ್ಟ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
          ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳ ಸಭಾಂಗಣದಲ್ಲಿ   ಏರ್ಪಡಿಸಲಾಗಿದ್ದ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಸೇರಿದಂತೆ ಜಿಲ್ಲಾ ಏಡ್ಸ್ ನಿಯಂತ್ರಣ ಸಮನ್ವಯ ಸಮಿತಿ ಸಭೆ ಮತ್ತು ಹೆಚ್.ಐ.ವಿ, ಕ್ಷಯ ರೋಗ ಸಮನ್ವಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
         ಕೊಪ್ಪಳ ಜಿಲ್ಲೆಯನ್ನು ವಿಷ್ಲೇಶಿಸಿದಾಗ ಆರೋಗ್ಯ ಸಂಬಂಧಿ ವಿಷಯದಲ್ಲಿ ತುಂಬ ಹಿಂದಿರುವುದು ಕಂಡು ಬರುತ್ತದೆ. ಜಿಲ್ಲೆಯ ಎಲ್ಲೆಡೆ ಒಣ ಪ್ರದೇಶ ಕಂಡು ಬಂದರೂ ಸಹ ಸಾಂಕ್ರಾಮಿಕ ರೋಗಗಳು ಸಾಮಾನ್ಯವಾಗಿ ಹೆಚ್ಚು ಕಂಡು ಬರುತ್ತವೆ. ಏಡ್ಸ್ ಹಾಗೂ ಕ್ಷಯ ರೋಗ ಹರಡುವಿಕೆಯಲ್ಲಿ ಒಂದಕ್ಕೊಂದು ಸಂಬಂಧವಿದ್ದು,  ಹೆಚ್‌ಐವಿ ಪಾಸಿಟಿವ್ ಇರುವ ರೋಗಿಗಳಿಗೆ ಕ್ಷಯ ರೋಗ ಬಹುಬೇಗ ತಗಲುವುದರಿಂದ.  ಕ್ಷಯ ರೋಗಿಗಳ ತಪಾಸಣೆ ಮಾಡುವ ಸಂದರ್ಭದಲ್ಲಿ ಹೆಚ್‌ಐವಿ ಕುರಿತ ಪರೀಕ್ಷೆ ಸಮರ್ಪಕವಾಗಿ ನಡೆಸಬೇಕು.  ಜಿಲ್ಲೆಯಲ್ಲಿ ಇದಕ್ಕೆ ಉತ್ತಮ ಸೌಲಭ್ಯವಿದ್ದು, ವೈದ್ಯಾಧಿಕಾರಿಗಳು ಇದರ ಸಮರ್ಪಕ ನಿರ್ವಹಣೆ ಕೈಗೊಳ್ಳಬೇಕಿದೆ.  ಕೊಪ್ಪಳ ಮತ್ತು ಗಂಗಾವತಿಯಲ್ಲಿ ಆಪ್ತ ಸಮಾಲೋಚನಾ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ.  ಆದರೆ ಇಲ್ಲಿ ರೋಗಿಗಳಿಗೆ ಸಮರ್ಪಕ ಸೌಲಭ್ಯ ದೊರಕಬೇಕು ಎನ್ನುವುದು ಸರ್ಕಾರದ ಆಶಯವಾಗಿದೆ.  ಕೊಪ್ಪಳ ಜಿಲ್ಲೆಯಲ್ಲಿ ಅನಕ್ಷರತೆ ಹೆಚ್ಚಾಗಿರುವುದರಿಂದ ಜಿಲ್ಲೆಯ ಜನರಲ್ಲಿ ಹೆಚ್.ಐ.ವಿ, ಕ್ಷಯ ರೋಗದಂತಹ ಮಾರಣಾಂತಿಕ ರೋಗಗಳ ಬಗ್ಗೆ ಜಾಗೃತಿಯ ಕೊರತೆಯೂ ಇದೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಜಿಲ್ಲೆಯಲ್ಲಿ ಹೆಚ್ಚಾಗಿ ಗ್ರಾಮೀಣ ಪ್ರದೇಶದಲ್ಲಿ ಹೆಚ್‌ಐವಿ, ಕುಷ್ಠರೋಗ ರೋಗಗಳ ಬಗ್ಗೆ ಮಾಹಿತಿ ನೀಡುವುದು ಅವಶ್ಯವಾಗಿದೆ.  ವೈದ್ಯಾಧಿಕಾರಿಗಳು ಹೆಚ್‌ಐವಿ ಮತ್ತು ಕ್ಷಯ ರೋಗಿಗಳನ್ನು ನೇರವಾಗಿ ಭೇಟಿಯಾಗಿ, ಚಿಕಿತ್ಸೆ ನೀಡುವಂತಾಗಬೇಕು. ಯಾವುದೇ ಕಾರಣಕ್ಕೂ ತಡಮಾಡದೇ ರೋಗಿಗಳಿಗೆ ಚಿಕಿತ್ಸೆ ನೀಡಬೇಕು.  ಜಿಲ್ಲೆಯಲ್ಲಿರುವ ಹೆಚ್.ಐ.ವಿ ಮತ್ತು ಕ್ಷಯ ರೋಗ ಪೀಡಿತರು ನೆಮ್ಮದಿಯಿಂದ ಬದುಕು ರೂಪಿಸಿಕೊಳ್ಳಲು ಸೂಕ್ತ ತರಬೇತಿ ನೀಡಿ, ಸಾಲ ಸೌಲಭ್ಯ, ವೈದ್ಯಕೀಯ ನೆರವು ಒದಗಿಸಬೇಕು. ಆರೋಗ್ಯ ಕ್ಷೇತ್ರಕ್ಕೆ ಸಂಬಂಧಪಟ್ಟ ಎಲ್ಲಾ ಸರ್ಕಾರಿ, ಸರ್ಕಾರೇತರ ಸಂಘ ಸಂಸ್ಥೆಗಳು ಜಿಲ್ಲೆಯನ್ನು ಹೆಚ್‌ಐವಿ ಮತ್ತು ಕ್ಷಯ ರೋಗ ನಿಯಂತ್ರಣಕ್ಕೆ ಪ್ರಾಮಾಣಿಕ ಯತ್ನ ಮಾಡಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ ಅವರು ಮನವಿ ಮಾಡಿದರು.     
       ಕೊಪ್ಪಳ ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ|| ವಿರುಪಾಕ್ಷರೆಡ್ಡಿ ಮಾದಿನೂರ ಮಾತನಾಡಿ,  ಕೊಪ್ಪಳ ಜಿಲ್ಲೆಯಲ್ಲಿ ಈವರೆಗೆ ೧೧೫೨೬ ಜನ ಹೆಚ್‌ಐವಿ ಸೋಂಕಿತರು  ಪತ್ತೆಯಾಗಿದ್ದು, ಈ ಪೈಕಿ ಕಳೆದ ೨೦೦೭ ರಿಂದ   ೨೦೧೫ ರ ಜೂನ್ ವರೆಗೆ ೨೦೨೬ ಜನರು ಏಡ್ಸ್‌ನಿಂದ ಮರಣ ಹೊಂದಿದ್ದಾರೆ.  ಪ್ರಸಕ್ತ ವರ್ಷದ ಏಪ್ರಿಲ್ ನಿಂದ ಜೂನ್ ಮಾಹೆ ಅವಧಿಯಲ್ಲಿ ಜಿಲ್ಲೆಯಲ್ಲಿ ೮೩೫೧ ಜನರಿಗೆ ಹೆಚ್‌ಐವಿ ಪತ್ತೆ ಪರೀಕ್ಷೆ ಮಾಡಲಾಗಿದ್ದು ಈ ಪೈಕಿ ೧೫೮ ಜನರಲ್ಲಿ ಹೆಚ್‌ಐವಿ ಪಾಸಿಟಿವ್ ಕಂಡುಬಂದಿದ್ದು, ಪಾಸಿಟಿವ್ ಪ್ರಮಾಣ ಶೇ. ೧. ೮೯ ರಷ್ಟಿದೆ ಎಂದು ಸಭೆಗೆ ಮಾಹಿತಿ ನೀಡಿದರು.
     ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ||ಶ್ರೀಕಾಂತ ಬಾಸೂರು, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ||ಎಂ.ಎಂ. ಕಟ್ಟಿಮನಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ||ಲೋಕೇಶ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ವೈ.ಹೆಚ್. ಲಂಬು, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶಿವಮೂರ್ತಿ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ಪ್ರಭುದೇವ ಸೇರಿದಂತೆ ಆರೋಗ್ಯ ಇಲಾಖೆಯ ವಿವಿಧ ತಾಲೂಕಾ ಮಟ್ಟ
ದ ಅಧಿಕಾರಿಗಳು,  ಆರೋಗ್ಯ ಕ್ಷೇತ್ರಕ್ಕೆ ಸಂಬಂಧಪಟ್ಟ ವಿವಿಧ ಎನ್‌ಜಿಒಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

Advertisement

0 comments:

Post a Comment

 
Top