PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ, ಸೆ.೧೫ (ಕ ವಾ) ಜಿಲ್ಲಾದ್ಯಂತ ಮತದಾರರ ಪಟ್ಟಿಗಳ ವಿಶೇಷ ಸಂಕ್ಷಿಪ್ತ ಪರಿಷ್ಕರಣಾ ಕಾರ್ಯಕ್ರಮ ಸೆ.೧೫ ರಿಂದ ಆರಂಭಗೊಂಡಿದ್ದು, ೨೦೧೬ ರ ಜನವರಿ ೦೧ ಅರ್ಹತೆ ಆಧಾರದ ಮೇಲೆ ಈ ಪರಿಷ್ಕರಣೆ ಕಾರ್ಯಕ್ರಮ ನಡೆಯಲಿದೆ.
              ಕೊಪ್ಪಳ ಜಿಲ್ಲೆಯ ಕುಷ್ಟಗಿ-೬೦, ಕನಕಗಿರಿ-೬೧, ಗಂಗಾವತಿ-೬೨, ಯಲಬುರ್ಗಾ-೬೩ ಮತ್ತು ಕೊಪ್ಪಳ-೬೪ ವಿಧಾನಸಭಾ ಕ್ಷೇತ್ರಗಳ ಕರಡು ಮತದಾರರ ಪಟ್ಟಿಗಳನ್ನು ಸೆ.೧೫ ರಂದು ಪ್ರಕಟಿಸಲಾಗಿದ್ದು, ಈ ಕರಡು ಮತದಾರರ ಪಟ್ಟಿಗಳನ್ನು ಸಂಬಂಧಪಟ್ಟ ಮತದಾನ ಕೇಂದ್ರಗಳಲ್ಲಿ, ತಹಶೀಲ್ದಾರರ ಕಾರ್ಯಾಲಯದಲ್ಲಿ ಸಾರ್ವಜನಿಕರ ವೀಕ್ಷಣೆಗೆ ಇರಿಸಲಾಗಿದೆ.
ಮತದಾರರ ಪಟ್ಟಿಗಳ ಪರಿಷ್ಕರಣಾ ಕಾರ್ಯಕ್ರಮದ ವೇಳಾಪಟ್ಟಿ ಈ ಕೆಳಗಿನಂತಿದೆ :
              ಕರಡು ಮತದಾರರ ಪಟ್ಟಿಗಳನ್ನು ಸೆ.೧೫ ರಂದು ಪ್ರಕಟಿಸಲಾಗಿದ್ದು, ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಸೆ.೧೫ ರಿಂದ ಅಕ್ಟೋಬರ್.೧೪ ರವರೆಗೆ ಅವಧಿ ನಿಗದಿಪಡಿಸಲಾಗಿದೆ. ಸೆ.೧೬ ಮತ್ತು ಸೆ.೩೦ ರಂದು ಸಂಬಂಧಪಟ್ಟ ಭಾವಚಿತ್ರವಿರುವ ಮತದಾರರ ಪಟ್ಟಿಗಳ ಭಾಗಗಳನ್ನು ಗ್ರಾಮ ಸಭೆ, ಸ್ಥಳೀಯ ಸಂಸ್ಥೆ ಮುಂತಾದ ಸ್ಥಳಗಳಲ್ಲಿ ಓದುವುದು ಮತ್ತು ಹೆಸರುಗಳು ಇರುವ ಬಗ್ಗೆ ಪರಿಶೀಲಿಸಲಾಗುವುದು. ಸೆ.೨೦ ಮತ್ತು ಅಕ್ಟೋಬರ್.೦೪ ಬೂತ್ ಮಟ್ಟದ ಏಜೆಂಟರುಗಳಿಂದ ಅರ್ಜಿಗಳನ್ನು ಸ್ವೀಕರಿಸಲು ವಿಶೇಷ ಆಂದೋಲನದ ದಿನಗಳಾಗಿವೆ. ನವೆಂಬರ್೧೬ ರವರೆಗೆ ಹಕ್ಕು ಮತ್ತು ಆಕ್ಷೇಪಣಾ ಅರ್ಜಿಗಳನ್ನು ವಿಲೇವಾರಿ ಗೊಳಿಸಲಾಗುವುದು ಮತ್ತು ೨೦೧೬ ರ ಜನವರಿ.೧೧ ರಂದು ಅಂತಿಮ ಮತದಾರರ ಪಟ್ಟಿಗಳನ್ನು ಪ್ರಕಟಿಸಲಾಗುವುದು.
             ಜಿಲ್ಲೆಯ ವಿವಿಧ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಸಾರ್ವಜನಿಕರು, ಮತದಾರರ ಪಟ್ಟಿಗಳಲ್ಲಿ ಹೆಸರು ನೊಂದಾಯಿಸಿಕೊಳ್ಳಲು ಹಾಗೂ ಬದಲಾವಣೆಗಳು ಇದ್ದಲ್ಲಿ ಹಕ್ಕು ಮತ್ತು ಆಕ್ಷೇಪಣೆಗಳನ್ನು  ಸಲ್ಲಿಸಲು ನಿಗದಿಪಡಿಸಿದ ಅವಧಿಯಲ್ಲಿ ಬೂತ್ ಮಟ್ಟದ ಅಧಿಕಾರಿಗಳಿಗೆ, ಮತದಾನ ಕೇಂದ್ರಗಳಲ್ಲಿ, ತಹಶೀಲ್ದಾರರ ಕಾರ್ಯಾಲಯಗಳಲ್ಲಿ, ಸಹಾಯಕ ಆಯುಕ್ತರು, ಕೊಪ್ಪಳ ಇವರ ಕಾರ್ಯಾಲಯಗಳಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ರಮಣದೀಪ್ ಚೌದರಿ ತಿಳಿಸಿದ್ದಾರೆ. 

Advertisement

0 comments:

Post a Comment

 
Top