ಶ್ರೀಗವಿಮಠದ ಅಂಗಳವು ಬಹಳ ವಿಭಿನ್ನ ನೆಲೆಯಲ್ಲಿ ನಿಲ್ಲುತ್ತದೆ. ಶ್ರೀಗವಿಮಠದ ಬೆಟ್ಟ-ಗುಡ್ಡಗಳ ನಯನ ಮನೋಹರ ಪರಿಸರ, ಇಲ್ಲಿನ ಕಲ್ಲು-ಕಲ್ಲುಗಳಲ್ಲೂ ಇರುವ ಜೀವ ಚೈತನ್ಯ, ಸೂಸುವ ತಂಗಾಳಿ, ಆಹ್ಲಾದಕರ ವಾತಾವರಣ, ಸೃಷ್ಟಿಯ ನೈಜ ಕಾವ್ಯವೆಂದು ಹೇಳಬಹುದು. ಇಲ್ಲಿನ ಪ್ರತಿಯೊಂದು ಕಲ್ಲು-ಗುಡ್ಡ-ಕಟ್ಟೆ ಯಾವುದೂ ಜಡವಸ್ತುವಾಗಿ ಕಾಣುವುದಿಲ್ಲ. ಪ್ರತಿಯೊಂದರಲ್ಲೂ ಜೀವಸೆಲೆ ಉಕ್ಕಿಸುವ ಪಾಠವಿದೆ.ಇಂತಹ ಇತಿಹಾಸವಿರುವ ಕೊಪ್ಪಳ ಶ್ರೀ ಗವಿಮಠದ ಪರಂಪರೆ ೧೦ ನೇ ಶತಮಾನದಷ್ಟು ಪ್ರಾಚೀನ ಹಾಗೂ ಪವಿತ್ರವಾದದ್ದು. ಇಲ್ಲಿಯವರೆಗಿನ ೧೮ ಶ್ರೀಗಳು ಶ್ರೀಗವಿಮಠದ ಭವ್ಯ ಐತಿಹ್ಯದ ಘನಸಾಕ್ಷಿಯಾಗಿದ್ದಾರೆ. ೧೧ ನೇ ಶ್ರೀಗಳಾದ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳ ಕರ್ತೃ ಗದ್ದುಗೆಯೇ ಶ್ರೀ ಗವಿಮಠದ ಆರಾಧ್ಯ ದೈವ. ಈ ಶತಮಾನದ ಆರಂಭದಲ್ಲಿ ಗವಿಮಠದ ೧೫ ನೇ ಶ್ರೀಗಳಾದ ಶ್ರೀಶಿವಶಾಂತವೀರ ಮಹಾಸ್ವಾಮಿಗಳು (ಗಡ್ಡದಜ್ಜನವರು) ೧೬ ನೇ ಪೀಠಾಧಿಪತಿಗಳಾದ ಶ್ರೀ ಮರಿಶಾಂತವೀರ ಮಹಾಸ್ವಾಮಿಗಳ ಗುರುಗಳಾಗಿದ್ದರು. ಅವರು ಹಾಕಿಕೊಟ್ಟ ಘನ ಮಾರ್ಗದಲ್ಲಿ ಸ್ವಾತಂತ್ರ್ಯಾನಂತರ ಭಾರತದಲ್ಲಿ, ಕತ್ತಲ ನಾಡಾಗಿದ್ದ ಕೊಪ್ಪಳದಲ್ಲಿ ಅಕ್ಷಯ ಜ್ಯೋತಿಯಾಗಿ ಬೆಳಗಿ ಗವಿಮಠವನ್ನು ಸಾಮಾಜಿಕ, ಜನಪರ, ಶೈಕ್ಷಣಿಕ, ಸಾಹಿತ್ಯಕ, ಸಾಂಸ್ಕೃತಿಕ ಕೇಂದ್ರವಾಗಿ ಪರಿವರ್ತಿಸಿ ಕ್ರಾಂತಿಯನ್ನೇ ಉಂಟು ಮಾಡಿದರು. ಅಂದಿನಿಂದ ಶಿಕ್ಷಣದ ಅರಿವಿನ ಹರವು ವಿಸ್ತರಿಸಿತು, ಸಾಂಸ್ಕೃತಿಕ ಕೇಂದ್ರವಾಗಿ, ಸಾಹಿತ್ಯದ ನೆಲೆಬೀಡಾಗಿ ಕೊಪ್ಪಳ ಬದಲಾಗತೊಡಗಿತು. ಶ್ರೀ ಮರಿಶಾಂತ ವೀರ ಮಹಾಸ್ವಾಮಿಗಳು ಆಯುರ್ವೇದ ಪಂಡಿತರೂ, ಸ್ವತಃ ಸಾಹಿತ್ಯ ಪ್ರೇಮಿಗಳೂ ಆಗಿದ್ದರು. ಅವರ ಮುಂದುವರಿದ ಹೆಜ್ಜೆಗಳು ೧೭ ನೇ ಪೀಠಾಧಿಪತಿಗಳಾದ ಶ್ರೀ ಶಿವಶಾಂತವೀರ ಮಹಾಸ್ವಾಮಿಗಳ ಕಾಲದಲ್ಲಿ ಮತ್ತಷ್ಟು ಉಜ್ವಲವಾಗುತ್ತ ಹೋದವು. ಮೂಲತಃ ಶಿಕ್ಷಕರಾಗಿದ್ದ ಇವರು ಆಯುರ್ವೇದ ಪಂಡಿತರೂ, ಸ್ವತಃ ಕವಿಗಳೂ ಆಗಿದ್ದರು. ಆಧ್ಯಾತ್ಮದ ಸಂಪೂರ್ಣ ತಳಹದಿ ತಲುಪಿದ ಆಧ್ಯಾತ್ಮವೀರರಾಗಿದ್ದವರು. ನಡೆದಾಡುವ ದೇವರೆಂದು ಹೆಸರು ಪಡೆದವರು. ಶ್ರೀಗವಿಮಠದ ನೆರಳು ಇವರ ಕಾಲದಲ್ಲಿ ಇನ್ನಷ್ಟು ಚಾಚಿ ಈ ನೆಲದ ಎಲ್ಲ ಕ್ಷೇತ್ರಗಳು ಗಟ್ಟಿಯಾಗುವತ್ತ ಸಾಗಿದವು. ಇವರ ಕವಿಹೃದಯ ಅಪದಮನಿಯಾಗಿ ಜ್ಞಾನದ ಹರವಾಗಿ ಹರಿದು ಈ ನೆಲದ ಸಾಹಿತ್ಯ ಕ್ಷೇತ್ರ ಗಟ್ಟಿಯಾಗುತ್ತ ಸಾಗಿತು. ಇಷ್ಟೊಂದುಇತಿಹಾಸವಿರುವ ಗವಿಮಠಕ್ಕೆ
ಜನನ ಹಾಗೂ ಸಾಧನೆ: ಶ್ರೀ.ಮ.ನಿ.ಪ್ರ.ಜ.ಲಿಂ. ಶಿವಶಾಂತವೀರ ಮಹಾಸ್ವಾಮಿಗಳು ದಿನಾಂಕ ೧೭-೦೫-೧೯೩೧ ರಲ್ಲಿ ಸೂಡಿ ಗ್ರಾಮದಲ್ಲಿ ಜನಿಸಿದರು. ತಂದೆ ಜಗದೀಶ್ವರಯ್ಯ ಜುಕ್ತಿಹಿರೇಮಠ, ತಾಯಿ ಬಸಮ್ಮ. ಸಾಕಿ ಬೆಳೆಸಿದ ತಾಯಿ ಶಾವಮ್ಮ. ಇವರು ದಿನಾಂಕ: ೨೭-೦೪-೧೯೬೬ ರಂದು ಗವಿಮಠದ ೧೭ ನೇ ಪೀಠಾಧಿಪತಿಗಳಾದರು. ಇವರ ಮೂಲ ಹೆಸರು ಉಮಾಪತಿದೇವರು. ಇವರ ಗುರುಗಳು ಮತ್ತು ಶ್ರೀ ಗವಿಮಠದ ೧೬ ನೇ ಪೀಠಾಧಿಪತಿಗಳು ಆದ ಶ್ರೀ.ಮ.ನಿ.ಪ್ರ.ಜ.ಲಿಂ. ಮರಿಶಾಂತವೀರ ಮಹಾಸ್ವಾಮಿಗಳು ಇವರಿಗೆ ಶಿವಶಾಂತವೀರ ಮಹಾಸ್ವಾಮಿಗಳೆಂದು ಕರೆದರು. ಸನ್ಯಾಸ ಮಾರ್ಗವು ಎಂತಹ ಕಠಿಣ ಮಾರ್ಗ ಎಂಬುದನ್ನು ತಿಳಿದುಕೊಂಡೇ ನಡುಗುತ್ತಲೇ ಸನ್ಯಾಸ ಸ್ವೀಕರಿಸಿದ್ದರಿಂದ ಅವರು ಯಶಸ್ವಿ ವಿರಕ್ತ ಸ್ವಾಮಿಗಳಾಗಿ ನಿರ್ಮಲ ಚರಿತ್ರೆ ಕಟ್ಟಿಕೊಂಡಿದ್ದರು. ಆ ಮೂಲಕ ನಾಡಿನಲ್ಲಿಯೇ ಗವಿಮಠಕ್ಕೆ ಕೀರ್ತಿ ತಂದಿದ್ದಾರೆ. ಇವರ ಕಾಲದಲ್ಲಿ ಮಹಾದ್ವಾರ ನಿರ್ಮಾಣ, ತೇರು ನಿರ್ಮಾಣ, ಶ್ರೀಗವಿಸಿದ್ಧೇಶ್ವರ ಕಲ್ಯಾಣ ಮಂಟಪ, ಪಕ್ಕದಲ್ಲಿ ಅತಿಥಿಗಳಿಗಾಗಿ ವಸತಿಗೃಹಗಳ ನಿರ್ಮಾಣ, ಹೊಸದಾಗಿ ಟ್ರಸ್ಟ ಆಫೀಸ್, ಆಯುರ್ವೇದ ಮೆಡಿಕಲ್ ಕಾಲೇಜು ಇವರ ಕಾಲಕ್ಕೆ ಆರಂಭಗೊಂಡಿತ್ತು. ಶಿಕ್ಷಕರಾಗಿ ಕೆಲಸ ಮಾಡಿದ್ದರಿಂದಲೇ ಅವರು ಗುರು ಮರಿಶಾಂತರು ಹೊತ್ತಿಸಿದ ಅಕ್ಷರ ಜ್ಯೋತಿಯನ್ನು ಈ ಪ್ರದೇಶದ ಎಲ್ಲ್ಲೆಡೆಗೆ ಬೆಳಗಿದರು. ಇನ್ನಿತರ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬೆಳೆಸಲು ಮುಂದಾದರು. ಇವರ ಚರಿತ್ರೆ ತೆರೆದ ಪುಟ. ಲಿಂಗಪೂಜೆ, ಜಪ-ತಪ, ಶಿವಯೋಗ, ಪವಾಡ ಸದೃಶ್ಯ ಘಟನೆಗಳಿಗೆ ಗವಿಮಠವು ಸಾಕ್ಷಿಯಾಗಲು ಶಿವಶಾಂತವೀರ ಮಹಾಸ್ವಾಮಿಗಳ ಪಾತ್ರ ದೊಡ್ಡದು. ದಿ. ೨೬-೦೩-೨೦೦೩ ರಂದು ಲಿಂಗೈಕ್ಯರದರು. ತಮ್ಮ ಗುರುಗಳಾದ ಶ್ರೀ.ಮ.ನಿ.ಪ್ರ.ಜ.ಲಿಂ. ಮರಿಶಾಂತವೀರ ಮಹಾಸ್ವಾಮಿಗಳು ಪ್ರಾರಂಭಿಸಿದ ಅನ್ನ, ಅರಿವು, ಆಧ್ಯಾತ್ಮ, ಆರೋಗ್ಯ ಈ ಎಲ್ಲ ರೀತಿಯ ದಾಸೋಹ ಪರಂಪರೆಗಳ ಸಂಕಲ್ಪಗಳನ್ನು ನಿರಂತರವಾಗಿ ಮುಂದುವರೆಸಿ ಗವಿಮಠದ ಸರ್ವತೋಮುಖ ಅಭಿವೃದ್ಧಿಗೆ ಮುಂದಾದರು. ಅಂತೆಯೇ ಜನಮಾನಸದಲ್ಲಿ ’ನಡೆದಾಡುವ ಗವಿಸಿದ್ಧೇಶ್ವರ’ರೆಂದು ಶಾಶ್ವತವಾಗಿದ್ದರು.
ಶ್ರೀಗವಿಸಿದ್ಧೇಶ್ವರ ಆಯುರ್ವೇದ ಮಹಾವಿದ್ಯಾಲಯ ಲಿಂ.ಶ್ರೀ ಶಿವಶಾಂತವೀರ ಮಹಾಸ್ವಾಮಿಗಳ ಕನಸು
೧೯೯೩ರಲ್ಲಿ ಶ್ರೀ.ಮ.ನಿ.ಪ್ರ.ಜ.ಲಿಂ. ಶಿವಶಾಂತವೀರ ಮಹಾಸ್ವಾಮಿಗಳವರ ಷಷ್ಟ್ಯಬ್ದಿಪೂರ್ತಿ ಸಮಾರಂಭವನ್ನು ನಡೆಸಲು ಭಕ್ತರು ಹಾಗೂ ಶ್ರೀ ಗವಿಸಿದ್ಧೇಶ್ವರ ಕೃಪಾ ಫೋಷಿತ ವಿದ್ಯಾರ್ಥಿಬಳಗದವರು ಕೇಳಿಕೊಂಡಾಗ ಪೂಜ್ಯರು ಕೊಪ್ಪಳ ಗವಿಮಠವು ಆಯುರ್ವೇದದ ಚಿಕಿತ್ಸೆಗೆ ಪ್ರಸಿದ್ಧವಾಗಿದೆ. ಕರ್ತೃ ಶ್ರೀ ಗವಿಸಿದ್ಧೇಶ್ವರ ಸ್ವಾಮಿಗಳು ಹೈದರಾಬಾದನ ಮೀರಾಲಂನ ಕುಷ್ಟರೋಗ ಕಳೆದದ್ದರಿಂದ ೧೮೦೧ ರಲ್ಲಿ ಹಿರೇಬಗನಾಳ ಜಹಗೀರ ಗ್ರಾಮವಾಗಿ ಬಂದಿದೆ. ನಮ್ಮ ಗುರುಗಳಾದ ಶ್ರೀ.ಮ.ನಿ.ಪ್ರ.ಜ.ಲಿಂ. ಮರಿಶಾಂತವೀರ ಮಹಾಸ್ವಾಮಿಗಳು ಆಯುರ್ವೇದದಲ್ಲಿ ಪರಿಣಿತಿಯನ್ನು ಪಡೆದವರಾಗಿದ್ದರು. ನಾವು ಕೂಡಾ ಅವರ ಗರಡಿಯಲ್ಲಿ ಬೆಳೆದವರಾದ್ದರಿಂದ ನಮಗೂ ಆಯುರ್ವೇದದ ಚಿಕಿತ್ಸೆಯಲ್ಲಿ ಆಸಕ್ತಿ ಇದೆ. ಆಯುರ್ವೇದದಲ್ಲಿ ಚಿಕಿತ್ಸೆಗಾಗಿ ಆಸ್ಪತ್ರೆ ಮಾಡುವದಾದರೆ ನಾವು ಒಪ್ಪುತ್ತೇವೆ ಎಂದು ಅಪ್ಪಣೆ ಮಾಡಿದ್ದರಿಂದ ಅವರ ಷಷ್ಟ್ಯಬ್ದಪೂರ್ತಿ ಸಮಾರಂಭದ ವರ್ಷದಿಂದಲೇ ಕಟ್ಟಡಕ್ಕೆ ಶಂಕು ಸ್ಥಾಪನೆ ಮಾಡಿದರು. ಮುಂದೆ ಸುಸಜ್ಜಿತವಾಗಿ ಕಾರ್ಯೋನ್ಮುಖವಾಗಿ ೧೯೯೬ ರಲ್ಲಿ ಶ್ರೀ ಗವಿಸಿದ್ಧೇಶ್ವರ ಆಯುರ್ವೇದ ಮಹಾವಿದ್ಯಾಲಯ ಆರಂಭಗೊಂಡಿದೆ. ಉತ್ತಮ ಪ್ರಾಧ್ಯಾಪಕ ಹಾಗೂ ಸಿಬ್ಭಂದಿಯವರನ್ನು ಪಡೆದಿದೆ. ಆಯುರ್ವೇದಿಯ ಗಿಡಮೂಲಿಕೆಗಳ ಉದ್ಯಾನವನ್ನು ಈಗಿನ ಪೀಠಾಧಿಪತಿಗಳಾದ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳವರು ಸ್ಥಾಪಿಸಿದ್ದಾರೆ. ಈ ಆಯುರ್ವೆದ ಕಾಲೇಜು ಮತ್ತು ಆಸ್ಪತ್ರೆ ಈ ಭಾಗದ ಬಹು ದೊಡ್ಡ ಆಯುರ್ವೇದ ಕೇಂದ್ರವಾಗಿ ಹೊರ ಹೊಮ್ಮಿದೆ. ಶ್ರೀ ಗವಿಮಠದ ೧೬ ನೇ ಪೀಠಾಧಿಪತಿಗಳಾದ ಶ್ರೀ ಮ.ನಿ.ಪ್ರ.ಜ.ಲಿಂ. ಮರಿಶಾಂತವೀರ ಮಹಾಸ್ವಾಮಿಗಳ ಆಯುರ್ವೇದ ಚಿಕಿತ್ಸೆಯ ಆಸಕ್ತಿ ಮತ್ತು ಪಾಂಡಿತ್ಯ ಹಾಗೂ ಶ್ರೀ ಗವಿಮಠದ ೧೭ ನೇ ಪೀಠಾಧಿಪತಿಗಳಾದ ಶ್ರೀ ಮ.ನಿ.ಪ್ರ.ಜ.ಲಿಂ. ಶಿವಶಾಂತವೀರ ಮಹಾಸ್ವಾಮಿಗಳ ಆಯುರ್ವೇದ ಚಿಕಿತ್ಸೆಯ ಸಾಫಲ್ಯತೆಯ ಕನಸು, ಶ್ರೀ ಮ.ನಿ.ಪ್ರ.ಜ. ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳ ಸತತ ಪರಿಶ್ರಮ ಮತ್ತು ತಪಶಕ್ತಿಯಿಂದ ಖ್ಯಾತಿ ಪಡೆದು ಕರ್ನಾಟಕದಲ್ಲಿಯೇ ಪ್ರಸಿದ್ದವಾಗಿದೆ.
ಲೇಖನ: ಡಾ.ಪ್ರಕಾಶಬಳ್ಳಾರಿ ಉಪನ್ಯಾಸಕರು
0 comments:
Post a Comment
Click to see the code!
To insert emoticon you must added at least one space before the code.