ಮಳೆಯಾಶ್ರಿತ ರೈತ ಸಮುದಾಯದ ಜೀವನೋಪಾಯವನ್ನು ಉತ್ತಮಪಡಿಸುವ ನಿಟ್ಟಿನಲ್ಲಿ ರೈತರಿಗೆ ಹಲವು ಸೌಲಭ್ಯಗಳನ್ನು ಕಲ್ಪಿಸಲು ಸರ್ಕಾರ ಕೃಷಿಭಾಗ್ಯ ಯೋಜನೆಯನ್ನು ಜಾರಿಗೊಳಿಸಿ, ರೈತರಿಂದ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಲು ಅಕ್ಟೋಬರ್ ೧೫ ಕೊನೆಯ ದಿನವಾಗಿರುತ್ತದೆ.
ಮಳೆಯಾಶ್ರಿತ ರೈತರಿಗೆ ಹಲವು ಸೌಲಭ್ಯಗಳನ್ನು ಕಲ್ಪಿಸಲು ಕೃಷಿ ಭಾಗ್ಯ ಯೋಜನೆ ಜಾರಿಗೊಳಿಸಲಾಗಿದೆ. ಕೊಪ್ಪಳ ಜಿಲ್ಲೆಯ ನಾಲ್ಕು ತಾಲೂಕುಗಳ ಸುಮಾರು ೨. ೫ ಲಕ್ಷ ಹೆಕ್ಟೇರ್ ಒಣಭೂಮಿ ವಿಸ್ತೀರ್ಣದಲ್ಲಿ ಹಂತ ಹಂತವಾಗಿ ಯೋಜನೆ ಜಾರಿಗೊಳಿಸಲಾಗುವುದು. ಈ ಯೋಜನೆಯಡಿ ಮಳೆನೀರಿನ ಸಂಗ್ರಹಣೆ, ಸಂರಕ್ಷಣೆ ಹಾಗೂ ಉಪಯುಕ್ತ ಬಳಕೆ, ಲಾಭದಾಯಕ ಬೆಳೆ ಪದ್ಧತಿ ಅಳವಡಿಕೆ, ಉತ್ತಮ ಆದಾಯ ತರುವ ತೋಟಗಾರಿಕೆ ಬೆಳೆಗಳು, ಪಶುಸಂಗೋಪನಾ ಚಟುವಟಿಕೆಗಳು, ಕೃಷಿ ವಲಯಕ್ಕೆ ಸಂಬಂಧಿಸಿದ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಪ್ರೋತ್ಸಾಹ ನೀಡಲು ಉದ್ದೇಶಿಸಲಾಗಿದ್ದು, ಯೋಜನೆಯನ್ನು ಜಿಲ್ಲೆಯಲ್ಲಿ ಎಲ್ಲ ರೈತರಿಗೆ ತಲುಪಿಸುವ ನಿಟ್ಟಿನಲ್ಲಿ ಅಭಿಯಾನದ ಮಾದರಿಯಲ್ಲಿ ಅನುಷ್ಠಾನಗೊಳಿಸಲು ಯೋಜಿಸಲಾಗಿದೆ. ಈ ಯೋಜನೆಯ ಲಾಭವನ್ನು ಎಲ್ಲ ವರ್ಗದ ರೈತರು ಪಡೆಯಲು ಅವಕಾಶವಿದೆ.
ಮಳೆ ನೀರು ಸಂಗ್ರಹಣೆ ಮತ್ತು ಸಂರಕ್ಷಿತ ನೀರಾವರಿಗೆ ವಿಶೇಷ ಪ್ಯಾಕೇಜ್ ವ್ಯವಸ್ಥೆಯಿದ್ದು, ಇದರಲ್ಲಿ ಸ್ಥಳದಲ್ಲಿಯೇ ಮಣ್ಣಿನ ತೇವಾಂಶ ರಕ್ಷಣೆ ಕ್ರಮಗಳು, ನೀರು ಸಂಗ್ರಹಣಾ ರಚನೆಗಳು ಅಂದರೆ ಕೃಷಿ ಹೊಂಡ (ಪಾಲಿಥೀನ್/ಟಾರ್ಪಲಿನ್ ಸಹಿತ), ನೀರು ಎತ್ತಲು ಡೀಸಲ್ ಅಥವಾ ಸೋಲಾರ್ ಪಂಪ್‌ಸೆಟ್, ನೀರು ಹಾಯಿಸಲು ಲಘು ನೀರಾವರಿ ಘಟಕ, ಪರಿವರ್ತಿತ ಬಳೆ ಪದ್ಧತಿಯ ಪ್ರಾತ್ಯಕ್ಷತೆ ಅಂದರೆ ಪಾಲಿಹೌಸ್ ಒಳಗೊಂಡ ತೋಟಗಾರಿಕೆ ಬೆಳೆ ಪದ್ಧತಿ ಅಥವಾ ಪಾಲಿಹೌಸ್ ರಹಿತ ಕೃಷಿ/ತೋಟಗಾರಿಕೆ ಬೆಳೆ ಪದ್ಧತಿ, ಪಶು ಸಂಗೋಪನಾ ಚಟುವಟಿಕೆಗಳು (ಐಚ್ಛಿಕ) ಈ ಯೋಜನೆಯ ಪ್ಯಾಕೇಜ್‌ನಲ್ಲಿ ಇವೆ. ಈ ಪ್ಯಾಕೇಜ್‌ನ ಎಲ್ಲ ಘಟಕಗಳ ಪೈಕಿ ಪಶುಸಂಗೋಪನಾ ಚಟುವಟಿಕೆಗಳನ್ನು ಹೊರತುಪಡಿಸಿ ಉಳಿದವು ಕಡ್ಡಾಯವಾಗಿದೆ. ರೈತರಿಗೆ ವಿವಿಧ ಕೃಷಿ/ತೋಟಗಾರಿಕೆ ಬೆಳೆ ಪದ್ಧತಿಗಳನ್ನು ಮತ್ತು ನೀರು ಸಂಗ್ರಹಣಾ ರಚನೆಗಳನ್ನು (ಕೃಷಿ ಹೊಂಡ) ತಮ್ಮ ಕ್ಷೇತ್ರದ ಅನುಕೂಲತೆಗೆ ಅನುಗುಣವಾಗಿ ಆಯ್ಕೆ ಮಾಡಲು ಅವಕಾಶವಿದೆ. ಈ ಪ್ಯಾಕೇಜ್ ಘಟಕಗಳಿಗೆ ಸಾಮಾನ್ಯ ವರ್ಗದ ರೈತರಿಗೆ ಶೇ. ೮೦ ರಷ್ಟು ಸಹಾಯಾನುದಾನ ಹಾಗೂ ಪ.ಜಾತಿ ಮತ್ತು ಪ.ಪಂಗಡದ ರೈತರಿಗೆ ಶೇ. ೯೦ ರಷ್ಟು ಸಹಾಯಾನುದಾನ ನೀಡಲಾಗುವುದು. ಪಾಲಿಹೌಸ್ ಒಳಗೊಂಡ ತೋಟಗಾರಿಕೆ ಬೆಳೆ ಪದ್ಧತಿಗೆ ಶೇ. ೫೦ ರಷ್ಟು ಸಹಾಯಾನುದಾನ ನೀಡಲಾಗುವುದು. ಪಾಲಿಹೌಸ್ ಸಹಿತ ಪ್ಯಾಕೇಜ್‌ಗೆ ಪ್ರತಿ ತಾಲೂಕಿಗೆ ೧೦ ಫಲಾನುಭವಿಗಳ ಗುರಿ ನಿಗದಿಪಡಿಸಲಾಗಿದೆ. ಮತ್ತು ಪಾಲಿಹೌಸ್ ರಹಿತ ಪ್ಯಾಕೇಜ್‌ಗೆ ಪ್ರತಿ ತಾಲೂಕಿಗೆ ೨೦೦ ಫಲಾನುಭವಿಗಳ ಗುರಿ ಇದೆ.
ರೈತರು ನಿಗದಿತ ಅರ್ಜಿ ನಮೂನೆಗಳನ್ನು ರೈತ ಸಂಪರ್ಕ ಕೇಂದ್ರಗಳಿಂದ ಪಡೆದು, ಭರ್ತಿ ಮಾಡಿದ ಅರ್ಜಿಗಳನ್ನು ಆಯಾ ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಅಕ್ಟೋಬರ್ ೧೫ ರ ಒಳಗಾಗಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ರಾಜ್ಯ ಕೃಷಿ ಇಲಾಖೆ ವೆಬ್‌ಸೈಟ್ ತಿತಿತಿ.ಡಿಚಿiಣಚಿmiಣಡಿಚಿ.ಞಚಿಡಿ.ಟಿiಛಿ.iಟಿ ಅಥವಾ ಉಚಿತ ಸಹಾಯವಾಣಿ ಸಂಖ್ಯೆ ೧೮೦೦-೪೨೫-೩೫೫೩ ಅಥವಾ ೧೮೦೦-೧೮೦-೧೫೫೧ ರಿಂದ ಪಡೆಯಬಹುದಾಗಿದೆ. ಅಥವಾ ಆಯಾ ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿ, ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಜಂಟಿಕೃಷಿ ನಿರ್ದೇಶಕ ಪದ್ಮಯನಾಯಕ್ ತಿಳಿಸಿದ್ದಾರೆ.
0 comments:
Post a Comment
Click to see the code!
To insert emoticon you must added at least one space before the code.