PLEASE LOGIN TO KANNADANET.COM FOR REGULAR NEWS-UPDATES


ಮನುಷ್ಯರಿಗೆ ಸೊಳ್ಳೆಗಳಿಂದ ಮಾರಣಾಂತಿಕ ರೋಗ ಹರಡುವ ಸಾಧ್ಯತೆ ಹೆಚ್ಚಾಗಿರುವುದರಿಂದ, ಸೊಳ್ಳೆಯ ಕಡಿತ ಸಣ್ಣದಾದರೂ, ಅದರ ಪರಿಣಾಮ ಹೆಚ್ಚು ಕೆಟ್ಟದ್ದಾಗಿರುತ್ತದೆ.  ಸೊಳ್ಳೆವಾಹಕ ರೋಗಗಳ ನಿಯಂತ್ರಣಕ್ಕೆ ವಿವಿಧ ಇಲಾಖೆಗಳ ಸಮನ್ವಯತೆ ಪ್ರಮುಖವಾಗಿದೆ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ ಅವರು ಹೇಳಿದರು.
  ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಡೆಂಗ್ಯು ವಿರೋಧಿ ಮಾಸಾಚರಣೆ ಅಂಗವಾಗಿ ಗುರುವಾರ ಏರ್ಪಡಿಸಲಾಗಿದ್ದ ಜಿಲ್ಲೆಯಲ್ಲಿನ ರೋಗವಾಹಕ ಆಶ್ರಿತ ರೋಗಗಳಾದ ಡೆಂಗ್ಯೂ ಮತ್ತು ಚಿಕುನ್ ಗುನ್ಯಾ ರೋಗಗಳ ಪರಿಸ್ಥಿತಿ ಪರಾಮರ್ಶೆ, ರೋಗ ಹರಡುವಿಕೆ ಹಾಗೂ ನಿಯಂತ್ರಣಕ್ಕಾಗಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತ ಅಂತರ ಇಲಾಖಾ ಸಮನ್ವಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
  ಸೊಳ್ಳೆಗಳಿಂದ ಹರಡುವ ಚಿಕುನ್‍ಗುನ್ಯಾ ಮತ್ತು ಡೆಂಗ್ಯು ಜ್ವರ ರೋಗಗಳು ಎರಡೂ ಮನುಷ್ಯರಿಗೆ ತೀವ್ರ ಸಂಕಷ್ಟಕ್ಕೆ ಸಿಲುಕಿಸುವ ರೋಗಗಳಾಗಿದ್ದು, ಈ ರೋಗಗಳಿಗೆ ನಿರ್ದಿಷ್ಟ ಚಿಕಿತ್ಸೆ ಇಲ್ಲದಿರುವುದರಿಂದ, ಮುಂಜಾಗ್ರತಾ ಕ್ರಮವೊಂದೇ ಇದಕ್ಕೆ ಪರಿಹಾರವಾಗಿದೆ.  ಡೆಂಗ್ಯು ವಿರೋಧಿ ಮಾಸಾಚರಣೆ ಅಂಗವಾಗಿ ಜಿಲ್ಲೆಯ ಎಲ್ಲ ಗ್ರಾಮೀಣ ಪ್ರದೇಶಗಳಲ್ಲಿ ಸೊಳ್ಳೆಗಳ ನಿಯಂತ್ರಣ ಕ್ರಮ ಕುರಿತಂತೆ ಜನಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಸೊಳ್ಳೆಗಳನ್ನು ಗಂಬೂಸಿಯಾ ಹಾಗೂ ಗಪ್ಪಿ ಮೀನು ಮರಿಗಳು ಸೊಳ್ಳೆಗಳ ಲಾರ್ವ ತಿನ್ನುವುದರಿಂದ, ಜೈವಿಕವಾಗಿ ನಿಯಂತ್ರಣ ಮಾಡುವುದು ಸಹ ಉತ್ತಮ ಮಾರ್ಗವಾಗಿದ್ದು,  ಜಿಲ್ಲೆಯ ಗ್ರಾಮೀಣ ಪ್ರದೇಶಗಳ ಕೆರೆ ಅಥವಾ ಬಾವಿಗಳಲ್ಲಿ ಇಂತಹ ಮೀನು ಮರಿಗಳನ್ನು ಬಿಡುವುದರಿಂದ ಸೊಳ್ಳೆಗಳ ನಿಯಂತ್ರಣ ಸಾಧ್ಯವಿದೆ.  ಇಂತಹ ಕೆರೆ ಮತ್ತು ಬಾವಿಗಳನ್ನು ಗುರುತಿಸಿ, ಕೂಡಲೆ ಮೀನು ಮರಿಗಳನ್ನು ಈ ಮಾಸಾಂತ್ಯದೊಳಗೆ ಬಿಡಲು ಅಗತ್ಯ ಕ್ರಮ ಕೈಗೊಳ್ಳಬೇಕು.  ಗ್ರಾಮೀಣ ಪ್ರದೇಶಗಳಲ್ಲಿ ಸೊಳ್ಳೆ ಉತ್ಪತ್ತಿ ತಾಣಗಳ ಸಮೀಕ್ಷೆ ಮತ್ತು ನಿರ್ಮೂಲನೆ ನಿಯಮಿತವಾಗಿ ನಡೆಯಬೇಕು.  ಅಲ್ಲದೆ ನೀರು ನಿಲ್ಲುವಂತಹ ತೆಗ್ಗು ಪ್ರದೇಶಗಳನ್ನು ಸಮತಟ್ಟುಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು.  ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯತಿಗಳ ಕಸ ವಿಲೇವಾರಿ ವಾಹನಗಳಲ್ಲಿ ಧ್ವನಿವರ್ಧಕ ವ್ಯವಸ್ಥೆ ಲಭ್ಯವಿದ್ದು, ಇಂತಹ ವಾಹನಗಳ ಮೂಲಕ ಸೊಳ್ಳೆಗಳ ನಿಯಂತ್ರಣಕ್ಕೆ ಜನಜಾಗೃತಿ ಸಂದೇಶ ಅಥವಾ ಗೀತೆಗಳ ಮೂಲಕ  ಅರಿವು ಮೂಡಿಸುವ ಕಾರ್ಯಕ್ರಮವನ್ನು ಶೀಘ್ರ ಪ್ರಾರಂಭಿಸಬೇಕು.  ಜನಸಾಮಾನ್ಯರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸಲು ಇಲಾಖೆ ಮುಂದಾಗಬೇಕು.  ಜನಸಮುದಾಯದ ಸಹಕಾರವಿಲ್ಲದೆ ಯಾವುದೇ ಕಾರ್ಯಕ್ರಮಗಳು ಯಶಸ್ವಿಗೊಳ್ಳಲು ಸಾಧ್ಯವಿಲ್ಲದಿರುವುದರಿಂದ, ಸಂಘ ಸಂಸ್ಥೆಗಳನ್ನು ಸಕ್ರಿಯವಾಗಿ ಇದರಲ್ಲಿ ತೊಡಗಿಸಿಕೊಳ್ಳುವಂತೆ ಮಾಡಬೇಕು.  ಒಟ್ಟಾರೆ ಸೊಳ್ಳೆವಾಹಕ ರೋಗಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯು ವಿವಿಧ ಇಲಾಖೆಗಳೊಂದಿಗೆ ಸಮನ್ವಯತೆ ಸಾಧಿಸಿ, ಕಾರ್ಯಕ್ರಮ ರೂಪಿಸಬೇಕು.  ಇದಕ್ಕಾಗಿ ಅಗತ್ಯವಿರುವ ಅನುದಾನವನ್ನು ಒದಗಿಸಲು ಜಿಲ್ಲಾ ಪಂಚಾಯತಿ ಸಿದ್ಧವಿದೆ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ ಅವರು ಅಧಿಕಾರಿಗಳಿಗೆ ತಿಳಿಸಿದರು.
  ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಎನ್.ಎಂ. ಕಟ್ಟಿಮನಿ ಅವರು ಮಾತನಾಡಿ, ದೇಶದಲ್ಲಿ ಅನಾಫಿಲಿಸ್, ಈಡಿಸ್, ಕ್ಯುಲೆಕ್ಸ್ ಸೇರಿದಂತೆ ಸುಮಾರು 235 ಬಗೆಯ ಸೊಳ್ಳೆಗಳ ಪ್ರಬೇಧವಿದ್ದು, ಈ ಪೈಕಿ ಈಡೀಸ್ ಸೊಳ್ಳೆಯಿಂದ ಹರಡುವ ಡೆಂಗ್ಯು ಮತ್ತು ಚಿಕುನ್‍ಗುನ್ಯಾ ಅತ್ಯಂತ ಮಾರಕವಾಗಿವೆ. ನೀರಿನಲ್ಲಿ ಕಂಡು ಬರುವ ಹುಳಗಳನ್ನು ಬಾಲದ ಹುಳು ಎಂದು ತಪ್ಪಾಗಿ ಭಾವಿಸುವುದು ಕಂಡುಬಂದಿದ್ದು, ವಾಸ್ತವವಾಗಿ ಅವು ಸೊಳ್ಳೆ ಮರಿಗಳೇ ಆಗಿರುತ್ತವೆ.  ಜಿಲ್ಲೆಯಲ್ಲಿ ಕುಷ್ಟಗಿ ತಾಲೂಕನ್ನು ಹೈರಿಸ್ಕ್ ವಲಯ ಎಂದು ಗುರುತಿಸಲಾಗಿದ್ದು, ಇಲ್ಲಿ ಸೊಳ್ಳೆಗಳಿಂದ ಹರಡುವ ರೋಗ ಪ್ರಕರಣಗಳ ಸಂಖ್ಯೆ ಪ್ರತಿ ವರ್ಷ ಹೆಚ್ಚಾಗಿರುತ್ತದೆ.  ಗ್ರಾಮೀಣ ಪ್ರದೇಶಗಳಲ್ಲಿ ಪ್ರತಿ ಸೋಮವಾರ ಡ್ರೈ ಡೇ ಆಚರಿಸುವುದರಿಂದ, ಅಂದರೆ ನೀರು ಶೇಖರಣೆ ಸಲಕರಣೆಗಳನ್ನು ಸ್ವಚ್ಛವಾಗಿ ತೊಳೆದು, ಒಣಗಿಸಿ, ಪುನಃ ನೀರು ಶೇಖರಣೆ ಮಾಡುವ ಕ್ರಮ ವಹಿಸಲು ಸಾರ್ವಜನಿಕರು ಸಹಕರಿಸಬೇಕು ಎಂದರು.
  ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶ್ರೀಕಾಂತ್ ಬಾಸೂರ, ಸೇರಿದಂತೆ ಎಲ್ಲ ತಾಲೂಕುಗಳ ವೈದ್ಯಾಧಿಕಾರಿಗಳು, ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

Advertisement

0 comments:

Post a Comment

 
Top