PLEASE LOGIN TO KANNADANET.COM FOR REGULAR NEWS-UPDATES

 ಮುಂಗಾರುಪೂರ್ವ ಬೆಳೆ ಹಾನಿ ಸಮೀಕ್ಷೆಗೆ ಕೃಷಿ ಸಚಿವ ಕೃಷ್ಣ ಭೈರೇಗೌಡ ಸೂಚನೆ



 ಕೊಪ್ಪಳ ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಪೂರ್ವದಲ್ಲಿ ಅಂದರೆ ಮೇ ಹಾಗೂ ಜೂನ್ ತಿಂಗಳಿನಲ್ಲಿ ಬಿತ್ತನೆಯಾದ ಹೆಸರು ಹಾಗೂ ಎಳ್ಳು ಬೆಳೆಗಳ ಪೈಕಿ ಶೇ. 50 ಕ್ಕಿಂತ ಹೆಚ್ಚು ಹಾನಿ ಅನುಭವಿಸಿದ ರೈತರ ಹೊಲಗಳ ಬಗ್ಗೆ ಕಂದಾಯ ಹಾಗೂ ಕೃಷಿ ಇಲಾಖೆ ಜಂಟಿ ಸಮೀಕ್ಷೆ ನಡೆಸಿ ಹತ್ತು ದಿನಗಳ ಒಳಗೆ ವರದಿ ಸಲ್ಲಿಸುವಂತೆ ರಾಜ್ಯ ಕೃಷಿ ಸಚಿವ ಕೃಷ್ಣ ಭೈರೇಗೌಡ ಅಧಿಕಾರಿಗಳಿಗೆ ಸೂಚನೆ ನೀಡಿದರು.
  ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ಕೃಷಿ ಹಾಗೂ ಜಲಾನಯನ ಅಭಿವೃದ್ಧಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
  ಜಿಲ್ಲೆಯಲ್ಲಿ ಕಳೆದ ಮೇ ಹಾಗೂ ಜೂನ್ ತಿಂಗಳಿನಲ್ಲಿ ಮುಂಗಾರು ಪೂರ್ವದಲ್ಲಿ ಬಿತ್ತನೆಯಾದ ಹೆಸರು ಹಾಗೂ ಎಳ್ಳು ಬೆಳೆಗಳು ಸಕಾಲದಲ್ಲಿ ಮಳೆ ಬಾರದೆ ಅಥವಾ ರೋಗಬಾಧೆಯಿಂದ ಹಾನಿಗೊಳಗಾಗಿರುವ ಬಗ್ಗೆ ವರದಿ ಬಂದಿದ್ದು, ಇದರಿಂದ ಬಹಳಷ್ಟು ರೈತರು ನಷ್ಟ ಅನುಭವಿಸಿದ್ದಾರೆ.  ಬೆಳೆ ಹಾನಿ ಅನುಭವಿಸಿರುವ ರೈತರಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕಂದಾಯ ಇಲಾಖೆ ಹಾಗೂ ಕೃಷಿ ಇಲಾಖೆಯು ಜಂಟಿಯಾಗಿ ಶೇ. 50 ಕ್ಕಿಂತ ಹೆಚ್ಚು ಬೆಳೆ ಹಾನಿ ಅನುಭವಿಸಿರುವ ರೈತರ ಹೊಲಗಳ ಬಗ್ಗೆ ಸಮೀಕ್ಷೆ ನಡೆಸಿ, ಹತ್ತು ದಿನಗಳ ಒಳಗಾಗಿ ಜಿಲ್ಲಾಧಿಕಾರಿಗಳ ಮೂಲಕ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕು.  ಈ ವರದಿಯ ಆಧಾರದ ಮೇಲೆ ಪರಿಹಾರ ಧನ ಬಿಡುಗಡೆ ಕುರಿತಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.
ರೈತರಿಗೆ ತಂತ್ರಜ್ಞಾನ ತಲುಪಿಸಿ : ನೂತನ ತಂತ್ರಜ್ಞಾನವನ್ನು ಅಳವಡಿಸಿ, ರೈತರು ಖರ್ಚು ಕಡಿಮೆ, ಆದಾಯ ಹೆಚ್ಚಿಸಿಕೊಳ್ಳಲು ವಿಪುಲ ಅವಕಾಶಗಳಿದ್ದು, ಇಂತಹ ನೂತನ ತಂತ್ರಜ್ಞಾನಗಳನ್ನು ರೈತರಿಗೆ ಪರಿಚಯಿಸುವಂತಹ ಕಾರ್ಯವನ್ನು ಕೃಷಿ ಇಲಾಖೆಯ ಅಧಿಕಾರಿಗಳು ಕೈಗೊಳ್ಳಬೇಕು.  ನೀರಾವರಿ ಟೇಲೆಂಡ್ ರೈತರಿಗೆ ಸಹಜವಾಗಿ ನೀರಿನ ಕೊರತೆಯಾಗುವ ಸಾಧ್ಯತೆಗಳಿರುವುದರಿಂದ, ಇಂತಹ ಪ್ರದೇಶಗಳ ರೈತರಿಗೆ ಮಿತ ನೀರು ಬಳಕೆ ಮಾಡಿಕೊಂಡು ಉತ್ತಮ ಬೆಳೆ ಹಾಗೂ ಇಳುವರಿಯನ್ನು ಪಡೆಯುವ ವಿಧಾನಗಳ ಬಗ್ಗೆ ಪ್ರಾತ್ಯಾಕ್ಷಿಕೆಗಳನ್ನು ನೀಡಬೇಕು. ಕೃಷಿ ಇಲಾಖೆ ಅಧಿಕಾರಿಗಳು ಕಚೇರಿಗಳಲ್ಲಿ ಕೂಡದೆ, ಹೊಲಗಳತ್ತ ತೆರಳಬೇಕು, ರೈತರೊಂದಿಗೆ ಸಮಾಲೋಚಿಸಿ, ಅವರಿಗೆ ಅಗತ್ಯವಿರುವ ತಂತ್ರಜ್ಞಾನಗಳನ್ನು ಒದಗಿಸಲು ಆದ್ಯತೆ ನೀಡಬೇಕು.  ಕೃಷಿ ಇಲಾಖೆಯಲ್ಲಿ ಸಾಕಷ್ಟು ಆವಿಷ್ಕಾರಗಳಾಗಿದ್ದು, ನೂತನ ಬೇಸಾಯ ಪದ್ಧತಿ ಹಾಗೂ ನೂತನ ಯಂತ್ರೋಪಕರಣಗಳನ್ನು ರೈತರಿಗೆ ಪರಿಚಯಿಸಲು, ರೈತರ ಹೊಲಗಳಲ್ಲಿಯೇ ಪ್ರಾಯೋಗಿಕ ಪ್ರಾತ್ಯಕ್ಷಿಕೆಗಳನ್ನು ಹಮ್ಮಿಕೊಳ್ಳಲು ಹೆಚ್ಚು ಆದ್ಯತೆ ನೀಡಬೇಕು.  ಮುಂಗಾರು ಪೂರ್ವದಲ್ಲಿ ರೈತರ ಹೊಲಗಳ ಮಣ್ಣು ಪರೀಕ್ಷೆ ಮಾಡಿಸುವುದು ಸೂಕ್ತವಾಗಿದ್ದು, ರಸಗೊಬ್ಬರಗಳ ಬಳಕೆಗಿಂತ ಸಾವಯವ ಗೊಬ್ಬರ ಬಳಕೆ ಹಾಗೂ ಲಘು ಪೋಷಕಾಂಶಗಳನ್ನು ಭೂಮಿಗೆ ಒದಗಿಸುವ ಕುರಿತಂತೆ ರೈತರಿಗೆ ಸೂಕ್ತ ಮಾಹಿತಿ ನೀಡಬೇಕು. ಕ್ಷೇತ್ರೋತ್ಸವಗಳು ಕೇವಲ ಬ್ಯಾನರ್ ಕಟ್ಟಿ ಫೋಟೋ ತೆಗೆಸುವುದಕ್ಕೆ ಮಾತ್ರ ಸೀಮಿತಗೊಳಿಸದೆ, ಹೆಚ್ಚು ಹೆಚ್ಚು ರೈತರಿಗೆ ಉಪಯುಕ್ತತೆಗೊಳಿಸಲು ಕ್ಷೇತ್ರೋತ್ಸವಗಳನ್ನು ಪರಿಣಾಮಕಾರಿಯಾಗಿ ಹಮ್ಮಿಕೊಳ್ಳಬೇಕು.  ಕೃಷಿ ಇಲಾಖೆ ಅಧಿಕಾರಿಗಳಿಗೆ ಕೇವಲ ಕೃಷಿ ಸಾಮಗ್ರಿಗಳನ್ನು ರೈತರಿಗೆ ವಿತರಿಸುವಂತಹ ಕಾರ್ಯದಿಂದ ಮುಕ್ತಗೊಳಿಸಿ, ಪ್ರತಿ ರೈತ ಸಂಪರ್ಕ ಕೇಂದ್ರಕ್ಕೆ ಆಡಳಿತ ಸಿಬ್ಬಂದಿಯನ್ನು ನೇಮಿಸಲಾಗಿದೆ.  ರಾಜ್ಯದಲ್ಲಿ ಈ ವರ್ಷ ಸುಮಾರು 1700 ಕೃಷಿ ಇಲಾಖೆ ಸಿಬ್ಬಂದಿ ಹಾಗೂ 6500 ರೈತ ಅನುವುಗಾರರನ್ನು ನೇಮಿಸಿಕೊಳ್ಳಲಾಗಿದೆ.  ಆದರೂ ಕೃಷಿ ಇಲಾಖೆ ಅಧಿಕಾರಿಗಳು ಸಿಬ್ಬಂದಿ ಕೊರತೆಯ ನೆಪವೊಡ್ಡಿ, ಇಲಾಖೆಯ ಯೋಜನೆಗಳನ್ನು ರೈತರಿಗೆ ಸಮರ್ಪಕವಾಗಿ ತಲುಪಿಸಲು ಸಾಧ್ಯವಾಗದೇ ಇರುವುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ.  ಸದ್ಯ ಇರುವ ಸಿಬ್ಬಂದಿಗಳೇ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ.  ಯೋಜನೆಗಳನ್ನು ಅನುಷ್ಠಾನಗೊಳಿಸಲು, ತಂತ್ರಜ್ಞಾನದ ಸದುಪಯೋಗವನ್ನು ರೈತರಿಗೆ ತಲುಪಿಸುತ್ತಿಲ್ಲ. ಎಂದು ಸಚಿವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ರೈತ ಸಂಪರ್ಕ ಕೇಂದ್ರಗಳಿಗೆ ಸೂಕ್ತ ಕಟ್ಟಡ : ಜಿಲ್ಲೆಯ ಹಲವೆಡೆ ಸದ್ಯ ಇರುವ ರೈತ ಸಂಪರ್ಕ ಕೇಂದ್ರಗಳಿಗೆ ಸೂಕ್ತ ಕಟ್ಟಡಗಳು ಇಲ್ಲ, ಕೆಲವೆಡೆ ಸಮರ್ಪಕ ಸ್ಥಳಾವಕಾಶದ ಕೊರತೆ ಇರುವ ಕಟ್ಟಡಗಳಲ್ಲಿ ರೈತ ಸಂಪರ್ಕ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿದ್ದು, ಇದರಿಂದ ರೈತರಿಗೆ ಕೃಷಿ ಸಾಮಗ್ರಿ ಹಾಗೂ ಪರಿಕರಗಳ ವಿತರಣೆ ಹಾಗೂ ದಾಸ್ತಾನಿಗೆ ತೀವ್ರ ತೊಂದರೆ ಇದೆ.  ಎಲ್ಲ ರೈತ ಸಂಪರ್ಕ ಕೇಂದ್ರಗಳಿಗೆ ಸೂಕ್ತ ಕಟ್ಟಡ ಕಲ್ಪಿಸಿಕೊಳ್ಳಲು ಕೃಷಿ ಇಲಾಖೆಯ ಅಧಿಕಾರಿಗಳು ಕಂದಾಯ ಇಲಾಖೆಯ ಅಧಿಕಾರಿಗಳೊಂದಿಗೆ ಸಮನ್ವಯತೆ ಸಾಧಿಸಿ, ಕಟ್ಟಡಕ್ಕೆ ವ್ಯವಸ್ಥೆಗೊಳಿಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
  ಸಭೆಯಲ್ಲಿ ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ, ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ, ಜಿಲ್ಲಾಪಂಚಾಯತಿ ಅಧ್ಯಕ್ಷ ಅಮರೇಶ್ ಕುಳಗಿ, ಉಪಾಧ್ಯಕ್ಷ ವಿನಯಕುಮಾರ ಮೇಲಿನಮನಿ, ಜಿಲ್ಲಾಧಿಕಾರಿ ಆರ್.ಆರ್. ಜನ್ನು, ಕೃಷಿ ಇಲಾಖೆ ನಿರ್ದೇಶಕ ಧರ್ಮರಾಜು, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ, ಜಿ.ಪಂ. ಸದಸ್ಯರುಗಳಾದ ಈರಪ್ಪ ಕುಡಗುಂಟಿ, ವಿಜಯಲಕ್ಷ್ಮಿ ರಾಮಕೃಷ್ಣ, ಅಶೋಕ್ ತೋಟದ ಸೇರಿದಂತೆ ಕೃಷಿ ಮತ್ತು ಜಲಾನಯನ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

Advertisement

0 comments:

Post a Comment

 
Top