PLEASE LOGIN TO KANNADANET.COM FOR REGULAR NEWS-UPDATES

 ಕೊಪ್ಪಳ ತಾಲೂಕು ಕೂಕನಪಳ್ಳಿ ಹಾಗೂ ಬೂದಗುಂಪಾ ಕ್ರಾಸ್ ಸೇರಿದಂತೆ ಎರಡೂ ಕಡೆಗಳಲ್ಲಿ ಕುರಿ ಸಂತೆ ನಡೆಸಲು ನಿರ್ಧರಿಸಲಾಗಿದ್ದು, ಎರಡೂ ಸಂತೆಗಳನ್ನು ಯಾವ ವಾರದಂದು ನಡೆಸಬೇಕು ಎನ್ನುವ ಬಗ್ಗೆ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಎರಡು ದಿನಗಳ ಒಳಗೆ ನಿರ್ಧಾರ ಪ್ರಕಟಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಹಾಗೂ ರಾಜ್ಯ ಸಣ್ಣ ನೀರಾವರಿ ಸಚಿವ ಶಿವರಾಜ್ ಎಸ್ ತಂಗಡಗಿ ಅವರು ಹೇಳಿದರು.
  ಕೂಕನಪಳ್ಳಿ ಗ್ರಾಮದಲ್ಲಿ ಪ್ರತಿ ಶುಕ್ರವಾರ ನಡೆಯುವ ಕುರಿ ಹಾಗೂ ದನದ ಸಂತೆ ನಿಷೇಧ ನಂತರದ ಪರಿಸ್ಥಿತಿ ಅವಲೋಕಿಸಿ ಸಂತೆ ನಡೆಸುವ ಕುರಿತು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಲಾದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 
  ಕಳೆದ ಲೋಕಸಭೆ ಸಾರ್ವತ್ರಿಕ ಚುನಾವಣೆಯ ಫಲಿತಾಂಶದ ನಂತರ ವಿಜಯೋತ್ಸವ ಆಚರಿಸುವ ಸಂದರ್ಭದಲ್ಲಿ   ಕೂಕನಪಳ್ಳಿ ಹಾಗೂ ವಣಬಳ್ಳಾರಿ ಗ್ರಾಮಸ್ಥರ ನಡುವೆ ನಡೆದ ಗಲಭೆಯ ನಂತರ, ಉಭಯ ಗ್ರಾಮಗಳ ನಡುವೆ ದ್ವೇಷಮಯ ವಾತಾವರಣ ನಿರ್ಮಾಣವಾಗಿತ್ತು.  ಗಲಭೆ ನಡೆದಿದ್ದು ಅತ್ಯಂತ ದುರದೃಷ್ಟಕರ ಸಂಗತಿಯಾಗಿದ್ದು, ಉಭಯ ಗ್ರಾಮಸ್ಥರ ನಡುವೆ ಸೌಹಾರ್ದ ವಾತಾವರಣ ನಿರ್ಮಾಣವಾಗಬೇಕು. ಪರಿಸ್ಥಿತಿ ತಿಳಿಗೊಳ್ಳುವವರೆಗೂ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಕೂಕನಪಳ್ಳಿಯಲ್ಲಿ ಸಂತೆ ನಡೆಸುವುದು ಸೂಕ್ತವಲ್ಲ ಎಂಬ ಅಧಿಕಾರಿಗಳ ವರದಿಯ ಹಿನ್ನೆಲೆಯಲ್ಲಿ, ಪ್ರತಿ ಶುಕ್ರವಾರ ನಡೆಯುತ್ತಿದ್ದ ಕುರಿ ಮತ್ತು ದನದ ಸಂತೆಯನ್ನು ನಿಷೇಧಿಸಲಾಗಿತ್ತು.  ಇದೀಗ ಸಂತೆಯನ್ನು ಮುಂದುವರೆಸುವ ಕುರಿತಂತೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳೊಂದಿಗೆ ಚರ್ಚಿಸಲಾಗಿದ್ದು, ಗ್ರಾಮಸ್ಥರು, ರೈತರು, ಕುರಿಗಾರರು ಹಾಗೂ ಖರೀದಿದಾರರ ಹಿತದೃಷ್ಠಿಯನ್ನು ಗಮನದಲ್ಲಿರಿಸಿಕೊಂಡು, ಕೂಕನಪಳ್ಳಿ ಮತ್ತು ಬೂದಗುಂಪಾ ಕ್ರಾಸ್ ನಲ್ಲಿ ಎರಡೂ ಕಡೆ ಸಂತೆ ನಡೆಸಲು ನಿರ್ಧರಿಸಲಾಗಿದೆ.  ಬೂದಗುಂಪಾ ಕ್ರಾಸ್ ಬಳಿ ಸಂತೆಗಾಗಿ ಸೂಕ್ತ ಸ್ಥಳ ಗುರುತಿಸಿ, ಎರಡೂ ಕಡೆ ವ್ಯವಸ್ಥಿತವಾಗಿ ಸಂತೆ ನಡೆಯುವಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.  ಕೂಕನಪಳ್ಳಿಯಲ್ಲಿ ಸದ್ಯ ಪ್ರತಿ ಶುಕ್ರವಾರ ನಡೆಸಲಾಗುತ್ತಿದ್ದು, ಬೂದಗುಂಪಾ ಕ್ರಾಸ್‍ನಲ್ಲಿಯೂ ಶುಕ್ರವಾರದಂದೇ ನಡೆಸಬೇಕೆ? ಅಥವಾ ಬೇರೆ ವಾರದಂದು ನಡೆಸಬೇಕೆ ಎನ್ನುವ ಕುರಿತು ಒಮ್ಮತಕ್ಕೆ ಬರಲು ಸಭೆಯಲ್ಲಿ ಸಾಧ್ಯವಾಗದೇ ಇರುವುದರಿಂದ, ಅಧಿಕಾರಿಗಳೊಂದಿಗೆ ಚರ್ಚಿಸಿ ಎರಡು ದಿನಗಳ ಒಳಗೆ ಈ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಅವರು ಹೇಳಿದರು.
  ಸಭೆಯಲ್ಲಿ ಪಾಲ್ಗೊಂಡಿದ್ದ ಗಂಗಾವತಿ ವಿಧಾನಸಭಾ ಕ್ಷೇತ್ರದ ಶಾಸಕ ಇಕ್ಬಾಲ್ ಅನ್ಸಾರಿ ಹಾಗೂ ಕೊಪ್ಪಳ ವಿಧಾನಸಭಾ ಕ್ಷೇತ್ರದ ಶಾಸಕ ರಾಘವೇಂದ್ರ ಹಿಟ್ನಾಳ್ ಅವರು ಕೂಕನಪಳ್ಳಿ ಮತ್ತು ಬೂದಗುಂಪಾ ಕ್ರಾಸ್ ಬಳಿ ಎರಡೂ ಕಡೆ ಶುಕ್ರವಾರದಂದೇ ಸಂತೆ ನಡೆಸುವುದು ಸೂಕ್ತ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
  ಸಭೆಯಲ್ಲಿ ಭಾಗವಹಿಸಿದ್ದ ಸಂಸದ ಸಂಗಣ್ಣ ಕರಡಿ ಅವರು ಮಾತನಾಡಿ, ಕೂಕನಪಳ್ಳಿಯಲ್ಲಿ ಕಳೆದ 35 ವರ್ಷದಿಂದಲೂ ಪ್ರತಿ ಶುಕ್ರವಾರ ಕುರಿ ಮತ್ತು ದನಗಳ ಸಂತೆ ನಡೆಯುತ್ತಿದ್ದು, ಯಾವುದೇ ಅಹಿತಕರ ಘಟನೆ ಜರುಗಿರಲಿಲ್ಲ.  ಆದರೆ ಚುನಾವಣೆ ಸಂದರ್ಭದಲ್ಲಿ ಅಹಿತಕರ ಘಟನೆ ಜರುಗಿದ್ದು ದುರದೃಷ್ಟಕರ.  ಈಗಲೂ ಉಭಯ ಗ್ರಾಮಸ್ಥರ ನಡುವೆ ಶಾಂತಿ ಹಾಗೂ ಸಾಮರಸ್ಯವಿದ್ದು, ಸೌಹಾರ್ದ ವಾತಾವರಣವನ್ನು ಪುನರ್ ಸ್ಥಾಪಿಸಬೇಕಿದೆ.  ರೈತರು ಆರ್ಥಿಕವಾಗಿ ಸಬಲರಾಗಬೇಕು ಎನ್ನುವುದು ತಮ್ಮ ಆಶಯವಾಗಿದ್ದು, ಕೂಕನಪಳ್ಳಿ ಹಾಗೂ ಬೂದಗುಂಪಾ ಕ್ರಾಸ್ ಬಳಿ ಎರಡೂ ಕಡೆ ಸಂತೆ ನಡೆಸಲು ಯಾವುದೇ ವಿರೋಧವಿಲ್ಲ.  ಕೂ


ಕನಪಳ್ಳಿಯಲ್ಲಿ ಹಿಂದಿನಿಂದಲೂ ಶುಕ್ರವಾರದಂದೇ ಸಂತೆ ನಡೆಯುತ್ತಿದ್ದು, ಬೂದಗುಂಪಾ ಕ್ರಾಸ್‍ನಲ್ಲಿ ಬೇರೆ ವಾರದಂದು ಸಂತೆ ನಡೆಸುವುದು ಸೂಕ್ತ.  ಆದರೆ ಎರಡೂ ಕಡೆ ಶುಕ್ರವಾರದಂದೇ ಸಂತೆ ನಡೆಸಲು ತಮ್ಮ ವಿರೋಧವಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.  ವಿಧಾನಪರಿಷತ್ ಸದಸ್ಯ ಹಾಲಪ್ಪ ಆಚಾರ್, ಮಾಜಿ ಶಾಸಕ ಪರಣ್ಣ ಮುನವಳ್ಳಿ ಅವರು ಸಂಸದ ಸಂಗಣ್ಣ ಕರಡಿ ಅವರ ಅಭಿಪ್ರಾಯಕ್ಕೆ ತಮ್ಮ ಸಮ್ಮತಿ ವ್ಯಕ್ತಪಡಿಸಿದರು.
  ಸಭೆಯಲ್ಲಿ ಭಾಗವಹಿಸಿದ್ದ ಜಿಲ್ಲಾಧಿಕಾರಿ ಕೆ.ಪಿ. ಮೋಹನ್‍ರಾಜ್ ಅವರು ಮಾತನಾಡಿ, ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು ಹಾಗೂ ನಿಯಮಗಳ ಅನುಸಾರ ಉಭಯ ಗ್ರಾಮಗಳಲ್ಲಿ ಸಂತೆ ನಡೆಸುವ ಕುರಿತು ಪರಿಶೀಲಿಸಲಾಗುವುದು ಎಂದರು.  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರೋಹಿಣಿ ಕಟೋಚ್ ಸೆಪಟ್, ಡಿವೈಎಸ್‍ಪಿ ರಾಜಿವ್ ಹಾಗೂ ಸಹಾಯಕ ಆಯುಕ್ತ ಪಿ.ಎಸ್. ಮಂಜುನಾಥ್ ಅವರು ಕೂಕನಪಳ್ಳಿ ಗ್ರಾಮದಲ್ಲಿ ನಡೆದ ಗಲಭೆ ಹಾಗೂ ನಂತರದ ಸ್ಥಿತಿ ಗತಿಗಳ ಕುರಿತು ಸಭೆಗೆ ಮಾಹಿತಿ ನೀಡಿದರು. 
  ಸಭೆಯಲ್ಲಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ಅಮರೇಶ್ ಕುಳಗಿ, ಉಪಾಧ್ಯಕ್ಷ ವಿನಯಕುಮಾರ್ ಮೇಲಿನಮನಿ, ಕೊಪ್ಪಳ ತಹಸಿಲ್ದಾರ್ ಪುಟ್ಟರಾಮಯ್ಯ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಮೂರ್ತಿ ಸೇರಿದಂತೆ ಪೊಲೀಸ್ ಇಲಾಖೆಯ ವಿವಿಧ ಅಧಿಕಾರಿಗಳು ಭಾಗವಹಿಸಿದ್ದರು.

Advertisement

0 comments:

Post a Comment

 
Top